
ಬೆಂಗಳೂರು, (ಫೆಬ್ರವರಿ 14): ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಇನ್ವೆಸ್ಟ್ ಕರ್ನಾಟಕ ಸಮ್ಮಿಟ್ಗೆ ಇಂದು (ಫೆಬ್ರವರಿ 14) ಅದ್ಧೂರಿ ತೆರೆ ಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ಇಡೀ ವಿಶ್ವದ ಗಮನ ಸೆಳೆದಿದೆ. ಕಳೆದ 3 ದಿನಗಳಲ್ಲಿ ಕರ್ನಾಟಕಕ್ಕೆ 10.27 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ. 6 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ ಮೂಡಿಸಿದೆ. ಸಮ್ಮಿಟ್ನಲ್ಲಿ 19 ದೇಶಗಳು ಭಾಗಿಯಾಗಿದ್ವು. ಸಂವಾದ, ಗೋಷ್ಠಿಗಳು ಇನ್ವೆಸ್ಟ್ ಕರ್ನಾಟಕಕ್ಕೆ ಸಾಕ್ಷಿಯಾದ್ದವು. ಎಂದಿನಂತೆ ಈ ಬಾರಿಯೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗಿದೆ. ಇನ್ನು ನವೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದೆ. ಜಾಗತಿಕ ಹೂಡಿಕೆದಾರರ ಚಿತ್ತ ಬೆಂಗಳೂರಿನತ್ತ ಇದ್ದರೂ ಸಹ ಉತ್ತರ ಕರ್ನಾಟಕ ಭಾಗಕ್ಕೆ 45% ಬಂಡವಾಳ ಹರಿದು ಹೋಗಿದೆ. ಹಾಗಾದ್ರೆ ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಹಣದ ಹೊಳೆ ಹರಿದು ಬಂದಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಬಂಡವಾಳ ಹೂಡಿಕೆದಾರರ ಸಮಾವೇಶ ಮುಕ್ತಾಯವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಕೈಗಾರಿಕಾ ಸಚಿವ ಎಂಬಿಪಾಟೀಲ್, ಬಂಡವಾಳ ಹೂಡಿಕೆದಾರರ ಸಮಾವೇಶ ಮುಕ್ತಾಯವಾಗಿದ್ದು, 10,27,378 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ 10 ಲಕ್ಷ ಕೋಟಿ ರೂ. ಹೂಡಿಕೆಯಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಉತ್ತರ ಕರ್ನಾಟಕ ಭಾಗಕ್ಕೆ 45% ಹೂಡಿಕೆಯಾಗಿದೆ. ಸ್ಕ್ರೀನಿಂಗ್ ಮಾಡಿ ಒಡಂಬಡಿಕೆ ಆಗಿದೆ. JWS ಗ್ರೂಪ್ 25 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ. ಹಾಗೇ ವೋಲ್ವೋ ಕಂಪನಿ 1,400 ಕೋಟಿ ರೂ. ಹೂಡಿಕೆ ಮಾಡಿದೆ. ದೇಶಕ್ಕೆ ಮಾತ್ರವಲ್ಲ, ವಿದೇಶಕ್ಕೂ ವೋಲ್ವೊ ರಫ್ತು ಮಾಡಲಿದೆ. ಹೋಂಡಾ ಕಂಪನಿ 600 ಕೋಟಿ ರೂ. ಹೂಡಿಕೆ ಮಾಡಿದೆ. ಶ್ರೀ ಸಿಮೆಂಟ್ ಗ್ರೂಪ್ 2,500 ಕೋಟಿ ಹೂಡಿಕೆ ಮಾಡಿದೆ. ವಿಭಿನ್ನ ಮತ್ತು ಅರ್ಥಪೂರ್ಣವಾದ ಕಾರ್ಯಕ್ರಮ ಇದಾಗಿದೆ ಎಂದರು.
ಕರ್ನಾಟಕ ರಾಜ್ಯದ ಇತಿಹಾಸ ದೇಶಕ್ಕೆ ಒಂದು ಮಾದರಿಯಾಗಿದೆ. 2000ನೇ ಇಸ್ವಿಯಲ್ಲಿ ವಿಧಾನಸೌಧದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿತ್ತು. ಕೆಲವು ಸಮಾವೇಶ ಸಕ್ಸಸ್ ಮತ್ತೆ ಕೆಲವು ಫೇಲ್ಯೂಯರ್ ಆಗಿವೆ. ಇಡೀ ವಿಶ್ವದ ಹೂಡಿಕೆದಾರರ ಕಂಪನಿಗಳು ಇಲ್ಲಿ ಭಾಗಿಯಾಗಿದ್ದರು. ಇಲ್ಲಿನ ಪರಿಸರ, ಪ್ರತಿಭೆ, ಶಿಕ್ಷಣ ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲ. 10 ಲಕ್ಷ ಕೋಟಿ ರೂ. ಹೂಡಿಕೆ ಆಗಿದೆ, 6.3 MOVಗೆ ಸಹಿ ಮಾಡಿದ್ದಾರೆ. ಹೊಸ ಕೈಗಾರಿಕಾ ನೀತಿ ತಂದಿದ್ದೇವೆ. ಬೆಂಗಳೂರಿನಲ್ಲಿ 1.4 ಕೋಟಿ ಜನಸಂಖ್ಯೆ ಇದೆ, 1.10 ಲಕ್ಷ ವಾಹನಗಳಿವೆ. ಬ್ರ್ಯಾಂಡ್ ಬೆಂಗಳೂರು ತೆಗೆದುಕೊಂಡು ಹೋಗುವ ಕಲ್ಪನೆ ಇದೆ. ನಮ್ಮ ರಾಜ್ಯದಲ್ಲಿ ಭೂಮಿಗೆ ಬೆಲೆ ಜಾಸ್ತಿ ಇದೆ. ನಂಜುಂಡಪ್ಪ ವರದಿ ಆಧಾರದ ಮೇಲೆ ಅವಕಾಶ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.
ಒಟ್ಟಾರೆ, ಈ ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಈ ಬಾರೀ ನಿರೀಕ್ಷೆಗೂ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ.