ಮೇಕೆದಾಟು ಯೋಜನೆ: ಡಿಪಿಆರ್ಗೆ 5 ವರ್ಷ ಬೇಕಿತ್ತಾ? ಕಾಂಗ್ರೆಸ್ ವಿರುದ್ಧ ನೀರಾವರಿ ಸಚಿವ ಗೋವಿಂದ ಕಾರಜೋಳ ಟೀಕೆ
ಅಧಿಕಾರ ಇದ್ದಾಗ ನಿರ್ಲಕ್ಷಿಸಿ ಈಗ ಪಾದಯಾತ್ರೆ ಮಾಡ್ತಿದ್ದಾರೆ. ಈ ಪಾದಯಾತ್ರೆ ರಾಜಕೀಯ ತಂತ್ರ ಹಾಗೂ ಗಿಮಿಕ್. ಮೇಕೆದಾಟು ಯೋಜನೆ ವಿಳಂಬಕ್ಕೆ ಯಾರು ಹೊಣೆ ಅಂತ ಕೇಳಿದ್ದೆ ಎಂದು ಗೋವಿಂದ ಕಾರಜೋಳ ವಿವರಿಸಿದರು.
ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಆಯೋಜಿಸಿರುವ ಪಾದಯಾತ್ರೆಯನ್ನು ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಕಟುವಾಗಿ ಟೀಕಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಸ್ತೃತ ಯೋಜನಾ ವರದಿ (Detailed Project Report – DPR) ಸಿದ್ಧಪಡಿಸುವ ಟೆಂಡರ್ ಕರೆಯಲು 5 ವರ್ಷ ಬೇಕಿತ್ತಾ? ಡಿಪಿಆರ್ ಮಾಡೋದಕ್ಕೆ ಕುಮಾರಸ್ವಾಮಿಯವರೇ ಬರಬೇಕಾಯ್ತು. ನಮ್ಮ ಸರ್ಕಾರ ಬಂದಾಗಿನಿಂದ ಪ್ರಾಮಾಣಿಕ ಪ್ರಯತ್ನ ಆಗುತ್ತಿದೆ. ವಿಳಂಬಕ್ಕೆ ಏನು ಕಾರಣ ಎಂಬುದನ್ನು ನಾನು ಸಾಬೀತು ಮಾಡಿದ್ದೇನೆ ಎಂದು ತಿಳಿಸಿದರು.
ಫೋರ್ ಜಿ ಎಕ್ಸೆಂಪ್ಶನ್ ಕೊಡೋದಕ್ಕೆ ಐದು ವರ್ಷ ಬೇಕಿತ್ತಾ ಎಂದು ಪ್ರಶ್ನಿಸಿದ ಗೋವಿಂದ ಕಾರಜೋಳ, ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅಧಿಕಾರ ಇದ್ದಾಗ ನಿರ್ಲಕ್ಷಿಸಿ ಈಗ ಪಾದಯಾತ್ರೆ ಮಾಡ್ತಿದ್ದಾರೆ. ಈ ಪಾದಯಾತ್ರೆ ರಾಜಕೀಯ ತಂತ್ರ ಹಾಗೂ ಗಿಮಿಕ್. ಮೇಕೆದಾಟು ಯೋಜನೆ ವಿಳಂಬಕ್ಕೆ ಯಾರು ಹೊಣೆ ಅಂತ ಕೇಳಿದ್ದೆ. ಮೊದಲ ಪತ್ರ ಜೂನ್ 19ರಂದು 2010ಕ್ಕೆ ಅಂದಿನ ಸಚಿವರು ಪತ್ರ ಬರೆದಿದ್ದರು ಎಂದು ವಿವರಿಸಿದರು.
ನವೆಂಬರ್ 5, 2013ರಂದು ಕಾವೇರಿ ನೀರಾವರಿ ನಿಗಮವು ಸರ್ಕಾರಕ್ಕೆ ಪತ್ರ ಬರೆದು 4 ಜಿ ರಿಯಾಯ್ತಿ ಕೊಡಬೇಕು ಎಂದು ಕೋರಿತ್ತು. ಏಪ್ರಿಲ್ 4, 2014ರಂದು ಸರ್ಕಾರ ಆ ಪ್ರಸ್ತಾವನೆ ತಿರಸ್ಕರಿಸಿತು. 2019ರ ಜನವರಿಯಲ್ಲಿ ರಿಯಾಯ್ತಿ ಕೊಡುವಂತೆ ಮತ್ತೆ ಕೇಳಲಾಯಿತು. 2019ರ ಫೆಬ್ರುವರಿಯಲ್ಲಿ 4 ಜಿ ರಿಯಾಯ್ತಿಗೆ ಅನುಮತಿ ನೀಡಲಾಯಿತು. ಈ ಬೆಳವಣಿಗೆ ಆದಾಗ ಅಧಿಕಾರದಲ್ಲಿದ್ದುದು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ. 2013ರಿಂದ 2018ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಯಾವುದೇ ಕೆಲಸ ನಡೆಯಲಿಲ್ಲ. ವಿಳಂಬದ ಜವಾಬ್ದಾರಿಯನ್ನು ಅವರೇ ಹೊರಬೇಕು ಎಂದರು.
ಈಗ ರಾಜಕೀಯ ಗಿಮಿಕ್ ಮಾಡೊದು ಬಿಟ್ಟು ಯಾಕೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾಂಗ್ರೆಸ್ ವಿಳಂಬ ಮಾಡಿತ್ತು ಅಂತ ಉತ್ತರ ಕೊಡಲಿ. ಏನೂ ಮಾಡದೇ ಐದು ವರ್ಷ ಸುಮ್ಮನಿದ್ದವರು ಇದೀಗ ಕಾವೇರಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಟೀಕಿಸಿದರು.
ಸತ್ತರೂ ಸರಿ, ಮೇಕೆದಾಟು ಪಾದಯಾತ್ರೆ ನಿಲ್ಲದು: ಡಿಕೆ ಶಿವಕುಮಾರ್ ನಾಕಾಬಂದಿ ಹಾಕಿ ಕಾರ್ಯಕರ್ತರನ್ನು ತಡೆದರೂ, ಏನು ಮಾಡಿದರೂ ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ನಿಲ್ಲುವುದಿಲ್ಲ. ಅವರು ಏನು ಬೇಕಾದರೂ ಮಾಡಲಿ, ಕಾರ್ಯಕರ್ತರನ್ನು ಬೇಕಾದರೆ ತಡೆಯಲಿ. ಸಿದ್ದರಾಮಯ್ಯ, ನಮ್ಮ 100 ಜನ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಆಡಳಿತ ಪಕ್ಷದವರೇ ಕೊವಿಡ್ ಕೇಸ್‌ಗಳನ್ನು ಹೆಚ್ಚಿಸಿ ನಿರ್ಬಂಧ ತಂದಿದ್ದಾರೆ. ಚುನಾವಣೆ ಸೋಲಿನ ಭೀತಿಯಿಂದ ಪಾದಯಾತ್ರೆಗೆ ತಡೆಯೊಡ್ಡಲು ಮುಂದಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಸ್ಪೆಷಲ್ ಬಿಜೆಪಿ ಕರ್ಫ್ಯೂ ತಂದು, ವರ್ತಕರು, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಕಾರ್ಯಕ್ರಮ ಮೊಟಕುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರದ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ಹೇರಿದ್ದಾರೆ. ಇದು ಒಮಿಕ್ರಾನ್ ಅಲ್ಲ, ಬಿಜೆಪಿ ಕಾಯಿಲೆ ಎಂದು ಅವರು ಕಿಡಿಕಾರಿದರು. 15 ದಿನಗಳ ಹಿಂದೆಯೇ ಸಂಗಮದಲ್ಲಿ ಹೋಟೆಲ್ ಬುಕ್ ಮಾಡಿದ್ದೆವು. ಆದರೆ ಈಗ ಹೊಟೆಲ್ ಮಾಲೀಕರನ್ನು ಹೆದರಿಸಿ ಹೋಟೆಲ್ ಬಂದ್ ಮಾಡಿಸುತ್ತಿದ್ದಾರೆ. ಹೋಟೆಲ್ನಲ್ಲಿ ನೀವು ರೂಮ್ ನೀಡದಿದ್ದರೆ ಪ್ರಕೃತಿ ಮಡಿಲಲ್ಲೇ ಮಲಗುತ್ತೇವೆ ಎಂದು ಹೇಳಿದರು. ನೀವು ನಮ್ಮನ್ನು ಒಂದು ದಿನ ಬಂಧನದಲ್ಲಿ ಇರಿಸಬಹುದು. ಮರುದಿನ ಬಿಡುಗಡೆ ಮಾಡಲೇ ಬೇಕಾಗುತ್ತದೆ. ಸೋಮವಾರದಿಂದ ಕರ್ಫ್ಯೂ ಇಲ್ಲ. ಹೀಗಾಗಿ ನಮ್ಮನ್ನು ತಡೆಯಲು ಆಗುವುದಿಲ್ಲ ಎಂದರು.
ಇದನ್ನೂ ಓದಿ: ರಾಮನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ; ಮೇಕೆದಾಟು ಪಾದಯಾತ್ರೆ ಮೇಲೆ ನೇರ ಕರಿನೆರಳು: ನಾವಿಬ್ಬರೇ ಹೆಜ್ಜೆ ಹಾಕ್ತೀವಿ -ಸಿದ್ಧರಾಮಯ್ಯ ಇದನ್ನೂ ಓದಿ: ಕೊರೊನಾ ಎಲ್ಲರಿಗೂ ಒಂದೇ ಅಲ್ವಾ: ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಸಿದ್ಧತೆ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ