ಸತ್ತರೂ ಸರಿ, ಮೇಕೆದಾಟು ಪಾದಯಾತ್ರೆ ನಿಲ್ಲದು: ಡಿಕೆ ಶಿವಕುಮಾರ್
ನಾಕಾಬಂದಿ ಹಾಕಿ ಕಾರ್ಯಕರ್ತರನ್ನು ತಡೆದರೂ, ಏನು ಮಾಡಿದರೂ ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ನಿಲ್ಲುವುದಿಲ್ಲ
ಬೆಂಗಳೂರು: ನಾಕಾಬಂದಿ ಹಾಕಿ ಕಾರ್ಯಕರ್ತರನ್ನು ತಡೆದರೂ, ಏನು ಮಾಡಿದರೂ ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ನಿಲ್ಲುವುದಿಲ್ಲ. ಅವರು ಏನು ಬೇಕಾದರೂ ಮಾಡಲಿ, ಕಾರ್ಯಕರ್ತರನ್ನು ಬೇಕಾದರೆ ತಡೆಯಲಿ. ಸಿದ್ದರಾಮಯ್ಯ, ನಮ್ಮ 100 ಜನ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಆಡಳಿತ ಪಕ್ಷದವರೇ ಕೊವಿಡ್ ಕೇಸ್‌ಗಳನ್ನು ಹೆಚ್ಚಿಸಿ ನಿರ್ಬಂಧ ತಂದಿದ್ದಾರೆ. ಚುನಾವಣೆ ಸೋಲಿನ ಭೀತಿಯಿಂದ ಪಾದಯಾತ್ರೆಗೆ ತಡೆಯೊಡ್ಡಲು ಮುಂದಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಸ್ಪೆಷಲ್ ಬಿಜೆಪಿ ಕರ್ಫ್ಯೂ ತಂದು, ವರ್ತಕರು, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಕಾರ್ಯಕ್ರಮ ಮೊಟಕುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರದ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ಹೇರಿದ್ದಾರೆ. ಇದು ಒಮಿಕ್ರಾನ್ ಅಲ್ಲ, ಬಿಜೆಪಿ ಕಾಯಿಲೆ ಎಂದು ಅವರು ಕಿಡಿಕಾರಿದರು. 15 ದಿನಗಳ ಹಿಂದೆಯೇ ಸಂಗಮದಲ್ಲಿ ಹೋಟೆಲ್ ಬುಕ್ ಮಾಡಿದ್ದೆವು. ಆದರೆ ಈಗ ಹೊಟೆಲ್ ಮಾಲೀಕರನ್ನು ಹೆದರಿಸಿ ಹೋಟೆಲ್ ಬಂದ್ ಮಾಡಿಸುತ್ತಿದ್ದಾರೆ. ಹೋಟೆಲ್ನಲ್ಲಿ ನೀವು ರೂಮ್ ನೀಡದಿದ್ದರೆ ಪ್ರಕೃತಿ ಮಡಿಲಲ್ಲೇ ಮಲಗುತ್ತೇವೆ ಎಂದು ಹೇಳಿದರು. ನೀವು ನಮ್ಮನ್ನು ಒಂದು ದಿನ ಬಂಧನದಲ್ಲಿ ಇರಿಸಬಹುದು. ಮರುದಿನ ಬಿಡುಗಡೆ ಮಾಡಲೇ ಬೇಕಾಗುತ್ತದೆ. ಸೋಮವಾರದಿಂದ ಕರ್ಫ್ಯೂ ಇಲ್ಲ. ಹೀಗಾಗಿ ನಮ್ಮನ್ನು ತಡೆಯಲು ಆಗುವುದಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಬ್ಬಿ ವೀರಣ್ಣ ನಾಟಕ ಕಂಪನಿ ನಡೆಸುತ್ತಿದ್ದಾರೆ. ಇವತ್ತು ಪ್ರಮಾಣವಚನ ಕಾರ್ಯಕ್ರಮದಲ್ಲಿ ಏನಾಗಿತ್ತು? ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಚಿವರು ಏಕೆ ಬೇಕಿತ್ತು? ಸಚಿವರು ಭಾಗಿಯಾಗಿದ್ದಕ್ಕೆ ಪ್ರಕರಣ ದಾಖಲಿಸಬೇಕಿತ್ತು ಎಂದು ಆಕ್ಷೇಪಿಸಿದರು. ನಮ್ಮ ಪಾದಯಾತ್ರೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ. ಎಲ್ಲಿ ಬಂಧಿಸುತ್ತೀರೋ ಅಲ್ಲಿಂದಲೇ ನಮ್ಮ ಹೋರಾಟ ಶುರು ಎಂದು ಘೋಷಿಸಿದರು.
ಡಿಕೆಶಿಗೆ ತಮಾಷೆ ಮಾಡಿದ ಖರ್ಗೆ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗಿ ಮಾಸ್ಕ್ ಹಾಕಿಕೊಂಡು ಮಾತನಾಡುತ್ತಿದ್ದರು. ಈ ವೇಳೆ ತಮಾಷೆ ಮಾಡಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಸ್ಕ್ ತೆಗದು ಮಾತನಾಡಿ ಎಂದರು. ಯಾವುದಾದರು ಪ್ರೋಗ್ರಾಂ ಗೆ ಹೋದಾಗ ಮಾಸ್ಕ್ ಹಾಕೋಲ್ಲ. ಇಲ್ಲಿ ಯಾಕೆ ಈಗ ಹಾಕೋತಿಯಾ. ಸ್ವಲ್ಪ ಕೆಳಗೆ ಹಾಕಿಕೊಂಡು ಮಾತಾಡು’ ಎಂದು ಕಾಲೆಳೆದರು. ನಗುತ್ತಲೇ ಮಾಸ್ಕ್ ತೆಗೆದ ಡಿ.ಕೆ.ಶಿವಕುಮಾರ್ ಮಾತು ಮುಂದುವರಿಸಿದರು.
ಇದನ್ನೂ ಓದಿ: ರಾಮನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ; ಮೇಕೆದಾಟು ಪಾದಯಾತ್ರೆ ಮೇಲೆ ನೇರ ಕರಿನೆರಳು: ನಾವಿಬ್ಬರೇ ಹೆಜ್ಜೆ ಹಾಕ್ತೀವಿ -ಸಿದ್ಧರಾಮಯ್ಯ ಇದನ್ನೂ ಓದಿ: ಕೊರೊನಾ ಎಲ್ಲರಿಗೂ ಒಂದೇ ಅಲ್ವಾ: ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಸಿದ್ಧತೆ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ