ಕಾರಜೋಳರಿಗೆ ಬುದ್ದಿ ಇಲ್ಲವೆಂದರೆ ಹೇಗೆ, ಮೇಕೆದಾಟು ಯೋಜನೆಗೆ ನಾನು ಸರ್ವ ಪ್ರಯತ್ನ ಮಾಡಿದ್ದೆ: ಸಿದ್ದರಾಮಯ್ಯ
ಯೋಜನೆಗೆ 2014ರಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಿದೆವು. ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ನಾನೇ ಮನವಿ ಪತ್ರ ಕೊಟ್ಟಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ನಾವು ಅಧಿಕಾರಕ್ಕೆ ಬಂದಿದ್ದು 2013ರಲ್ಲಿ. ಆಗಲೇ ಬಿಳಿಗುಂಡ್ಲು ಸಮೀಪ ಯೋಜನೆ ಆರಂಭಿಸಿದೆವು. ಕೆಪಿಟಿಟಿ ಕಾಯ್ದೆಯ ಅನ್ವಯ ವಿನಾಯ್ತಿ ಪಡೆದುಕೊಳ್ಳುವ ಪ್ರಯತ್ನಗಳನ್ನು ಮಾಡಿ, ವಿಸ್ತೃತ ಯೋಜನಾ ವರದಿಗೆ ಅನುಮೋದನೆ ಪಡೆದುಕೊಳ್ಳಲು ಯತ್ನಿಸಿದ್ದೆವು. ಯೋಜನೆ ಆರಂಭಿಸಬಹುದೆಂದು ನ್ಯಾಯಾಲಯ ಸಹ ಹೇಳಿತ್ತು. ಯೋಜನೆಗೆ 2014ರಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಿದೆವು. ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ನಾನೇ ಮನವಿ ಪತ್ರ ಕೊಟ್ಟಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನೀರಾವರಿ ಸಚಿವ ಗೋವಿಂದ ಕಾರಜೋಳ ಗುರುವಾರ ಸಂಜೆ ತಮ್ಮ ವಿರುದ್ಧ ಮಾಡಿದ ಆರೋಪಗಳನ್ನು ಮಾಧ್ಯಮಗೋಷ್ಠಿಯಲ್ಲಿ ಅವರು ಸಾರಾಸಗಟಾಗಿ ತಳ್ಳಿಹಾಕಿದರು. ಆಗಸ್ಟ್ 17, 2014ರಲ್ಲಿ ಟೆಕ್ನಿಕಲ್ ಬ್ರಿಡ್ಜ್ ಸಿದ್ಧವಾಗಿತ್ತು. ನಂತರ ಗ್ಲೋಬಲ್ ಟೆಂಡರ್ ಕರೆಯಲಾಗಿತ್ತು. ಹೆಚ್ಚಿನ ಮೊತ್ತಕ್ಕೆ ಟೆಂಡರ್ ಕೋಟ್ ಮಾಡಿದ್ದ ಕಾರಣ ಕರ್ನಾಟಕ ನೀರಾವರಿ ನಿಗಮವು ಟೆಂಡರ್ ರಿಜೆಕ್ಟ್ ಮಾಡಿತ್ತು. 2014ರಲ್ಲಿಯೇ 4ಜಿ ವಿನಾಯ್ತಿಯೂ ಸಿಕ್ಕಿದೆ. ಕಾರಜೋಳರಿಗೆ ಬುದ್ದಿ ಇಲ್ಲವೆಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು.
ನಮ್ಮ ಸರ್ಕಾರ ಸುಮ್ಮನೆ ಕುಳಿತಿರಲಿಲ್ಲ. ನಿರಂತರವಾಗಿ ಪ್ರಕ್ರಿಯೆಗಳನ್ನು ನಡೆಸಿದ್ದೇವೆ. ಫೆಬ್ರುವರಿ 4, 2016ರಲ್ಲಿ ₹ 5912 ಕೋಟಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿತ್ತು. ಕೇಂದ್ರ ನೀರಾವರಿ ಆಯೋಗವು ಕೆಲ ವಿಚಾರಗಳನ್ನು ಪರಿಶೀಲಿಸಲು ಸೂಚಿಸಿತ್ತು. ಅದನ್ನೂ ಪರಿಗಣಿಸಿ ಜನವರಿ 18, 2018ರಲ್ಲಿ ನಾವೇ ವಿಸ್ತೃತ ಯೋಜನಾ ವರದಿ ಸಲ್ಲಿಸಿದ್ದೆವು. ಫೆಬ್ರುವರಿ 16, 2018ರಂದು ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿ, ಕೆಆರ್ಎಸ್ನಿಂದ ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಲು ಸೂಚಿಸಿತ್ತು. ವಿವಾದ ಪರಿಹಾರವಾಗಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನೂ ರಚಿಸಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆ: ಡಿಪಿಆರ್ಗೆ 5 ವರ್ಷ ಬೇಕಿತ್ತಾ? ಕಾಂಗ್ರೆಸ್ ವಿರುದ್ಧ ನೀರಾವರಿ ಸಚಿವ ಗೋವಿಂದ ಕಾರಜೋಳ ಟೀಕೆ
ಯೋಜನೆಯ ಬಗ್ಗೆ ಈವರೆಗೆ ಸರ್ಕಾರ ಯಾವ ಹೆಜ್ಜೆ ಇರಿಸಿದೆ ಎಂದು ಪ್ರಶ್ನಿಸಿದ ಅವರು, ಇದು ಎರಡು ರಾಜ್ಯಗಳಿಗೆ ಅನ್ವಯವಾಗುವ ಯೋಜನೆ. ಯೋಜನೆಗೆ ಸುಪ್ರೀಂಕೋರ್ಟ್ ಮತ್ತು ಜಲ ಆಯೋಗದಲ್ಲಿಯೂ ತಡೆಯಾಜ್ಞೆ ಇಲ್ಲ. ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿಲ್ಗೆ ಪತ್ರ ಬರೆದಿದ್ದರು. ಇದನ್ನು ಬಿಟ್ಟರೆ ಬೇರೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಯೋಜನೆ ಜಾರಿಗೊಳಿಸಲು ಇವರಿಗೆ ಯಾವ ತಡೆಯಿದೆ. ಅರಣ್ಯದಲ್ಲಿ ಕಾಮಗಾರಿ ನಡೆಯಬೇಕಿರುವುದರಿಂದ ಅದಕ್ಕೂ ಅನುಮೋದನೆ ಬೇಕು. ಅದನ್ನು ಹೊರತುಪಡಿಸಿ ಮಂಡ್ಯದಲ್ಲಿ ಮತ್ತೊಂದು ಕಡೆ ಜಾಗ ಗುರುತಿಸಲಾಗಿದೆ. ಅಲ್ಲಿ ಏಕೆ ಯೋಜನೆ ಜಾರಿಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಜಲ ಆಯೋಗವು ಯಾರ ಅಧೀನದಲ್ಲಿದೆ? ಈಗೇನು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾರಾ? ಪ್ರಧಾನಿ ಸ್ಥಾನದಲ್ಲಿರುವವರು ನರೇಂದ್ರ ಮೋದಿ. ಯೋಜನೆಗೆ ಮೋದಿ ಯಾಕೆ ಅವಕಾಶ ಕೊಡ್ತಿಲ್ಲ. ಅವರ ವ್ಯಾಪ್ತಿಗೆ ಇದು ಬರುತ್ತೆ ಕೊಡಬಹುದಲ್ಲ? ಅಣ್ಣಾಮಲೈ ಧರಣಿ ಕೂರೋದ್ಯಾಕೆ? ರಾಜ್ಯದ 25 ಬಿಜೆಪಿ ಸಂಸದರಿದ್ದರೂ ಯಾಕೆ ಪರಿಸರ ಇಲಾಖೆ ಅನುಮತಿ ಪಡೆದಿಲ್ಲ? ಸರ್ಕಾರ ಯಾರದ್ದು ಇರುತ್ತೆ ಅವರು ಹೆಚ್ಚು ಪ್ರಯತ್ನ ಮಾಡಬೇಕು. ಕೇಂದ್ರ ಸರ್ಕಾರ ಮತ್ತು ಪರಿಸರ ಇಲಾಖೆ ಮೇಲೆ ಒತ್ತಡ ತರಬೇಕು. ಕುಳಿತು ಕೆಲಸ ಮಾಡಿಸಿಕೊಳ್ಳಬೇಕು. ಯಾಕೆ ಸರ್ಕಾರ ಇನ್ನೂ ಮಾಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರವು ಲಾಕ್ಡೌನ್ ವಿಫಲಗೊಳಿಸುವ ಉದ್ದೇಶದಿಂದ ಅಘೋಷಿತ ಬಿಜೆಪಿ ಲಾಕ್ಡೌನ್ ಹೇರಿದೆ. ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಇಂದು ನಿನ್ನೆ ಘೋಷಣೆ ಮಾಡಿದ್ದಲ್ಲ. ಪಾದಯಾತ್ರೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಪಾದಯಾತ್ರೆ ಮುಗಿಯುವವರೆಗೂ ನಿಯಮಗಳನ್ನು ಜಾರಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಇವರಿಗೆ ಏನು ಮಾಡಲು ಆಗಿಲ್ಲ. ನಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನೀರಾವರಿ ಸಚಿವ ಕಾರಜೋಳ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಗೋವಿಂದ ಕಾರಜೋಳ ಸುದ್ದಿಗೋಷ್ಠಿ ಮಾಡಿ, ನಾವು ಕಾಲಹರಣ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ. ಪ್ರೊಸಿಡಿಂಗ್ ನಡೆದಿದ್ದ ಡಾಕ್ಯುಮೆಂಟ್ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಇವರದೇ ಸರ್ಕಾರವಿದೆ. 1 ವರ್ಷದಲ್ಲಿ 190 ಟಿಎಂಸಿ ನೀರು ಬಿಡಬೇಕೆಂದು ಇತ್ತು. ಇದಕ್ಕೆ ನಾವು ಹಾಗೂ ಮಹಾರಾಷ್ಟ್ರದವರು ಅಪೀಲು ಹಾಕಿದ್ದೆವು. ನಾವು ಅಧಿಕಾರಕ್ಕೆ ಬಂದ ಕ್ಷಣದಿಂದ ಪ್ರಕ್ರಿಯೆ ಮುಂದುವರಿಸಿದ್ದೇವೆ. ನಾವು ಬರುವವರೆಗೆ ಮೇಕೆದಾಟು ಬಗ್ಗೆ ಏನೂ ಆಗಿರಲಿಲ್ಲ. ನಾವು ಬಂದ ಮೇಲೆ ಮೇಕೆದಾಟು ಬಗ್ಗೆ ಪ್ರಕ್ರಿಯೆ ಶುರುವಾಯ್ತು. ನಾನೇ ಹೋಗಿ ಪ್ರಧಾನಿಯವರಿಗೆ ಮನವಿ ಸಲ್ಲಿಕೆ ಮಾಡುತ್ತೇನೆ. ಯೋಜನೆ ಮಾಡಿಕೊಡಿ ಎಂದು ಪ್ರಧಾನಿಗೆ ಮನವಿ ಕೊಡ್ತೇನೆ. ಕಾರಜೋಳಗೆ ಬುದ್ಧಿ ಇಲ್ಲ ಅಂದ್ರೆ ನಾವು ಏನು ಹೇಳೋದು ಎಂದು ವಿಷಾದಿಸಿದರು.
ಫೆ.16, 2018ರ ಸುಪ್ರೀಂಕೋರ್ಟ್ ತೀರ್ಪು ಈ ವಿಚಾರದಲ್ಲಿ ಅಂತಿಮವಾದುದು. ಯಾಕೆ ಇವರು ಯೋಜನೆ ಆರಂಭಿಸಲು ಆಸಕ್ತಿ ತೋರುತ್ತಿಲ್ಲ. ತಮಿಳುನಾಡಿನಲ್ಲಿ ಅಣ್ಣಾಮಲೈ ಯಾಕೆ ಧರಣಿಗೆ ಕುಳಿತುಕೊಂಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಾರು? ಬಿಜೆಪಿಯವರೇ ಯೋಜನೆ ವಿರುದ್ಧ ಧರಣಿಗೆ ಕುಳಿತಿದ್ದಾರೆ. ನಮ್ಮ ಅಧಿಕಾರಾವಧಿಯಲ್ಲಿ ಯೋಜನೆಯ ಎಲ್ಲಾ ಪ್ರಕ್ರಿಯೆ ಮುಗಿಸಿದ್ದೇವೆ. ಈ ಸರ್ಕಾರಕ್ಕೆ ಯೋಜನೆ ಜಾರಿಗೊಳಿಸಲು ಏನು ತೊಂದರೆ? ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾರಜೋಳ ನಮ್ಮ ವಿರುದ್ಧ ಆರೋಪಿಸಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡಲಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಏಕೆ ಕ್ಲಿಯರೆನ್ಸ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಮೇಕೆದಾಟು ಯೋಜನೆ ಬಗ್ಗೆ ಗೋವಿಂದ ಕಾರಜೋಳ ಕೆಲವು ದಿನಗಳ ಹಿಂದೆ ದಾಖಲೆ ಬಿಡುಗಡೆ ಮಾಡುತ್ತೇನೆ, ಅದು ಸ್ಪೋಟಕ ಸುದ್ದಿ ಯಾಗುತ್ತೆ ಎಂದಿದ್ದರು. ಇಂದು ಸುದ್ದಿಗೋಷ್ಠಿ ಮಾಡಿ ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಏನೂ ಮಾಡಲಿಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾಗಿದೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ: ಸತ್ತರೂ ಸರಿ, ಮೇಕೆದಾಟು ಪಾದಯಾತ್ರೆ ನಿಲ್ಲದು: ಡಿಕೆ ಶಿವಕುಮಾರ್ ಇದನ್ನೂ ಓದಿ: ರಾಮನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ; ಮೇಕೆದಾಟು ಪಾದಯಾತ್ರೆ ಮೇಲೆ ನೇರ ಕರಿನೆರಳು: ನಾವಿಬ್ಬರೇ ಹೆಜ್ಜೆ ಹಾಕ್ತೀವಿ -ಸಿದ್ಧರಾಮಯ್ಯ