
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕೊರೊನಾ ಸಂಕಟದ ನಡುವೆಯೂ ಭಾರೀ ಬೆಳವಣಿಗೆಗಳಾಗುತ್ತಿವೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಂತರ ಸಿಎಂ ಕುರ್ಚಿ ಮತ್ತು ಲಿಂಗಾಯತ ನಾಯಕತ್ವದ ರೇಸ್ಗೆ ಭಾರೀ ಪೈಪೂಟಿ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸಿಎಂ ರೇಸ್‌ನಿಂದ ಹಿಂದೆ ಸರಿದರಾ ಅನ್ನೋ ಗುಸುಗುಸು ಮಾತು ಬಿಜೆಪಿಯಲ್ಲಿ ಕೇಳಿ ಬರುತ್ತಿವೆ.
ಹೌದು ಯಡಿಯೂರಪ್ಪ ನಂತರ ನಾನೇ ಲಿಂಗಾಯತ ನಾಯಕ ಅನ್ನುತ್ತಿದ್ದ ಜಗದೀಶ್ ಶೆಟ್ಟರ್ ಲಿಂಗಾಯತ ನಾಯಕತ್ವದಿಂದ ಹಿಂದೆ ಸರಿದರಾ ಎನ್ನೋ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಕೇಂದ್ರ ಸಚಿವ ಸುರೇಶ್ ಅಂಗಡಿ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಣಣ್ ಸವದಿ ಅವರು ಮುಂಚೂಣಿಗೆ ಬರುತ್ತಿರೋದು.
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆ ವೇಳೆ ಸುರೇಶ್ ಅಂಗಡಿ ಪಕ್ಷದಲ್ಲಿ ಫ್ರಂಟ್ ಲೈನ್ ನಲ್ಲಿ ಕಾಣಿಸಿಕೊಂಡಿದ್ದರು. ಈಗ ಲಕ್ಷ್ಮಣ್ ಸವದಿ ಸೈಲೆಂಟಾಗಿ ದೆಹಲಿಗೆ ಹೋಗಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದಾರೆನ್ನಲಾಗ್ತಿದೆ. ಇದೆಲ್ಲ ಪಕ್ಷದ ಬೆಳವಣಿಗೆಗಳ ನಡುವೆ ಜಗದೀಶ್ ಶೆಟ್ಟರ್ ಮಾತ್ರ ಸೈಲೆಂಟ್ ಆಗಿದ್ದಾರೆ. ಸಚಿವ ಸ್ಥಾನ ಹೊರತುಪಡಿಸಿ ಉಳಿದಂತೆ ಪಕ್ಷದ ಯಾವುದೇ ಮಹತ್ವದ ಚಟುವಟಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.
ಮಾಜಿ ಮುಖ್ಯಮಂತ್ರಿ ಕೂಡಾ ಆಗಿರುವ ಶೆಟ್ಟರ್, ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಇದ್ದರೂ ಮತ್ತೊಂದು ಅವಕಾಶ ಸಿಗುವ ದೂರದ ಭರವಸೆ ಇತ್ತು. ಆದರೆ ನಂತರದ ಬೆಳವಣಿಗೆಗಳಲ್ಲಿ ಪಕ್ಷದಲ್ಲಿನ ಸಿಎಂ ಕ್ಯಾಂಡಿಡೇಟ್ ರೇಸ್ ಬೆಳವಣಿಗೆಗಳಿಂದ ದೂರವೇ ಇದ್ದಾರೆ. ಒಬ್ಬ ಸಚಿವನಾಗಿ ಕೇವಲ ಇಲಾಖಾ ಚಟುವಟಿಕೆಗಳಿಗಷ್ಟೇ ಸೀಮಿತವಾಗಿದ್ದಾರೆ.
ಇದೆಲ್ಲವನ್ನ ಗಮನಿಸಿದರೆ, ಜಗದೀಶ್ ಶೆಟ್ಟರ್ ಸಿಎಂ ಮತ್ತು ಲಿಂಗಾಯತ ನಾಯಕತ್ವದ ರೇಸ್‌ನಿಂದ ಹಿಂದೆ ಸರಿದರಾ ಅಥವಾ ಸುರೇಶ್ ಅಂಗಡಿ ಮತ್ತು ಲಕ್ಷ್ಮಣ್ ಸವದಿ ಇವರನ್ನ ಹಿಂದಿಕ್ಕಿ ಮುಂದೆ ಹೋದರಾ ಎನ್ನುವ ಮಾತು ಕೇಳಿಬರುತ್ತಿವೆ.
Published On - 3:51 pm, Tue, 28 July 20