ಉತ್ತರ ಕನ್ನಡ: ಸಿದ್ದಾಪುರ ತಾಲೂಕಿನ ರಾಮದುಘಾ ಟ್ರಸ್ಟ್ ಆಶ್ರಯದಲ್ಲಿ ತಾಲೂಕಿನ ಬಾನ್ಕುಳಿ ಮಠದ ಗೋ ಸ್ವರ್ಗದಲ್ಲಿ ಗೋದಿನ ಮತ್ತು ಆಲೆಮನೆ ಹಬ್ಬವನ್ನು ಜನವರಿ 14ರಿಂದ 17ರ ವರೆಗೆ ನಡೆಸಲಾಗುತ್ತಿದೆ ಎಂದು ಬಾನ್ಕುಳಿ ಮಠದ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಬಾನ್ಕುಳಿ ಮಠದಲ್ಲಿ ಪ್ರತಿ ಸಂಕ್ರಾಂತಿಯಂದು ಗೋದಿನ ಆಚರಿಸಲಾಗುತ್ತಿದೆ. ಈ ಬಾರಿ ವಿಷೇಶವಾಗಿ ನಾಲ್ಕು ದಿನಗಳ ಆಲೆಮನೆ ಹಬ್ಬ ಕೂಡ ನಡೆಯಲಿದೆ ಜನರಿಗೆ ಗೋವುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಾನ್ಕುಳಿ ಗೋ ಸ್ವರ್ಗದಲ್ಲಿ 700 ಗೋವುಗಳ ಸಂರಕ್ಷಣೆ ಮಾಡುತ್ತಿದ್ದೇವೆ. ಈಗ ನಾವು ಗೋವುಗಳನ್ನು ಸಾಕುತ್ತಿದ್ದು ಮುಂದಿನ ಕೆಲವೇ ದಿನಗಳಲ್ಲಿ ಗೋವುಗಳೇ ನಮ್ಮನ್ನ ಸಾಕುತ್ತವೆ. ಇಲ್ಲಿ ಗೋವುಗಳ ಸಂಶೋಧನಾ ಕೇಂದ್ರ ಕೂಡ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು ಈಗಾಗಲೇ ಆ ಬಗ್ಗೆ ಸಿದ್ಥತೆಗಳಾಗುತ್ತಿವೆ ಎಂದು Tv9 ಡಿಜಿಟಲ್ ಜೊತೆ ಸಮಿತಿಯ ಗೌರವಾಧ್ಯಕ್ಷ ಆರ್.ಎಸ್ ಹೆಗಡೆ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮಗಳ ವಿವರ:
ಗೋದಿನ ಮತ್ತು ಆಲೆಮನೆ ಹಬ್ಬ ಉದ್ಘಾಟನೆ ಜನವರಿ 14 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ವಿಚಾರಗೋಷ್ಠಿ ಇರಲಿದೆ. ಜನವರಿ 15ರ ಮಧ್ಯಾಹ್ನ 12ಗಂಟೆಗೆ ಗೋ ಸೇವೆ, ಗೋಪೂಜೆ, ಗೋ ಸಂತರ್ಪಣೆ, 2.30ಕ್ಕೆ ವಿಚಾರಸಂಕೀರ್ಣ ಕಾರ್ಯಕ್ರಮಗಳು ನಡೆಯಲಿದೆ. ಜನವರಿ 16 ರ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಅಂತರ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 12 ಗಂಟೆಗೆ ಗೋ ಸೇವೆ, ಗೋ ಸಂತರ್ಪಣೆ, 3.30ಕ್ಕೆ ಹರಿಕಥೆ, ಸಂಜೆ 4 ಕ್ಕೆ ರಾಘವೇಶ್ವರ ಭಾರತೀ ಸ್ವಾಮೀಜಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ 5ಕ್ಕೆ ಸಾಲಂಕೃತ ಗೋದಾನ ನಡೆಯಲಿದೆ. ಅಂತೆಯೇ, ಜನವರಿ 17 ರಂದು ಬೆಳಿಗ್ಗೆ 5ಕ್ಕೆ ಸ್ವರ್ಗ ಸಂಗೀತ, 7ಕ್ಕೆ ದಾಸ ಸಂಕೀರ್ತನೆ, 10.30ಕ್ಕೆ ವಿಚಾರಗೋಷ್ಠಿ, 12ಕ್ಕೆ ಗೋ ಸೇವೆ ಮತ್ತು ಗೋ ಪೂಜೆ, ಗೋ ಸಂತರ್ಪಣೆಗಳು ನಡೆಯಲಿಲಿದ್ದು, 2.30ಕ್ಕೆ ಸಾಲಂಕೃತ ಗೋದಾನ, 3ಕ್ಕೆ ಮಾತೃತ್ವಮ್ ಸಮಾವೇಶ ನಡೆಯಲಿದ್ದು ರಾಘವೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಸಾವಯವ ಕಬ್ಬಿನ ಹಾಲಿನ ವಿತರಣೆ:
ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಮಠದಲ್ಲೇ ಬೆಳೆದ ಸಾವಯವ ಕಬ್ಬಿನಿಂದ ತಯಾರಿಸಿದ್ದ ಕಬ್ಬಿನ ಹಾಲನ್ನು ಜನರಿಗೆ ನೀಡಲಾಗುತ್ತದೆ. ಮಠದಲ್ಲೇ ಕೆಲ ಎಕೆರೆ ಜಾಗದಲ್ಲಿ ಕಬ್ಬಿನ ಬೆಳೆ ಬೆಳೆಯಲಾಗಿದ್ದು ಅದಕ್ಕೆ ಯಾವುದೇ ರೀತಿಯ ಸರ್ಕಾರಿ ಗೊಬ್ಬರ ಬಳಸದೇ ಕೇವಲ ದನದ ಕೊಟ್ಟಿಗೆ ಗೊಬ್ಬರ ಮತ್ತು ಗೋಮೂತ್ರದಿಂದ ತಯಾರಿಯಾದ ಇಷ್ಟಾಮೃತವನ್ನೇ ಹಾಕಿ ಬೆಳೆಸಿದ ಸಾವಯವ ಕಬ್ಬಿನ ಹಾಲನ್ನು ಮಠದ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲಾಗುತ್ತದೆ.