ತಾ.ಪಂ, ಜಿ.ಪಂ ಚುನಾವಣೆಗೆ JDSನಿಂದ ಪಕ್ಷ ಸಂಘಟನೆ, ಇಂದಿನಿಂದ 3 ದಿನಗಳ ಕಾಲ ಸರಣಿ ಸಭೆ
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದಿನಿಂದ ಜುಲೈ 23ರ ವರೆಗೆ ಸಭೆ ನಡೆಯಲಿದ್ದು ಸಭೆಗೆ ಜಿಲ್ಲಾವಾರು ಪಕ್ಷದ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಹಾಲಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ.
ಬೆಂಗಳೂರು: ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ JDSನಿಂದ ಪಕ್ಷ ಸಂಘಟನೆ ತಯಾರಿ ಶುರುವಾಗಿದೆ. JDS ರಾಜ್ಯಾದ್ಯಕ್ಷ H.K.ಕುಮಾರಸ್ವಾಮಿ ನೇತೃತ್ವದಲ್ಲಿ ಇಂದಿನಿಂದ 3 ದಿನಗಳ ಕಾಲ ಜಿಲ್ಲಾವಾರು ಸರಣಿ ಸಭೆ ನಡೆಸಲು ನಾಯಕರು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಜಿಲ್ಲಾವಾರು ಜೆಡಿಎಸ್ ನಾಯಕರ ಸಭೆ ನಡೆಯಲಿದ್ದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಹುಬ್ಬಳ್ಳಿ, ಉತ್ತರ ಕನ್ನಡ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಜೆಡಿಎಸ್ ನಾಯಕರ ಜೊತೆ ಸಭೆ ನಡೆಸಿ ಸಲಹೆ ಸೂಚನೆಗಳನ್ನು ಪಡೆಯಲಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದಿನಿಂದ 3 ದಿನಗಳ ಕಾಲ ಸಭೆ ನಡೆಯಲಿದ್ದು ಸಭೆಗೆ ಜಿಲ್ಲಾವಾರು ಪಕ್ಷದ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಹಾಲಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ತು ಸದಸ್ಯರುಗಳು, ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ವಿಧಾನಸಭೆ ಉಪ ಚುನಾವಣೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ವಿವಿಧ ವಿಭಾಗಗಳ ಅಧ್ಯಕ್ಷರುಗಳನ್ನು ಆಹ್ವಾನಿಸಲಾಗಿದೆ.
ಒಂದು ವಾರಗಳ ಕಾಲ ಪಕ್ಷದ ಜಿಲ್ಲಾವಾರು ಸಂಘಟನೆ ಸಭೆ ಕರೆದಿದ್ದೇನೆ. ಕೊರೊನಾ ಇನ್ನೂ ಇದೆ. ಹಾಗಾಗಿ ನಾನು ಜಿಲ್ಲೆಗಳಿಗೆ ಹೋಗಲಾಗ್ತಿಲ್ಲ. ಮುಂದಿನ ಐದು ದಿನಗಳ ಕಾಲ ಸಂಘಟನೆ ಬಗ್ಗೆ ಚರ್ಚೆ ಆಗುತ್ತೆ. ಆಷಾಡ ಮಾಸದ ನಂತರ ಜಿಲ್ಲಾವಾರು ಪ್ರವಾಸ ಮಾಡಲಿದ್ದೇನೆ. ಮುಂದಿನ ಅಸೆಂಬ್ಲಿ ಚುನಾವಣೆಗೆ ಪಕ್ಷ ಸಂಘಟನೆ ಮಾಡುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ತಿಳಿಸಲಿದ್ದೇವೆ ಎಂದು ಬೆಂಗಳೂರಿನಲ್ಲಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ರು.
ಕರ್ನಾಟಕ ರಾಜ್ಯ ಸಂಪದ್ಭರಿತ ರಾಜ್ಯ. ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಲೂಟಿ ಮಾಡ್ತಿವೆ. ಬೇರೆ ರಾಜ್ಯಗಳ ಚುನಾವಣೆಗೆ ನಮ್ಮ ರಾಜ್ಯದ ಸಂಪತ್ತನ್ನು ರಾಷ್ಟ್ರೀಯ ಪಕ್ಷಗಳು ಕಳಿಸಿಕೊಡ್ತಿವೆ. ಮುಂದಿನ ಚುನಾವಣೆಗೆ ಪ್ರಚಾರವಿಲ್ಲದೇ ಜನರ ವಿಶ್ವಾಸ ಗಳಿಸಬೇಕಿದೆ. ಜಲ ಮಿಷನ್ಗೆ ಸಂಬಂಧಿಸಿದ ಸಭೆಯನ್ನು ರಿವ್ಯೂ ಮಾಡಲು ಕೇಂದ್ರದ ಮಂತ್ರಿಗಳು ಬಂದಿದ್ರು. ಜಲ್ ಮಿಷನ್ ನಮ್ಮ ರಾಜ್ಯದ ಯೋಜನೆ. ಇದಕ್ಕೆ ಸಚಿವರಾದ ಈಶ್ವರಪ್ಪ ಅವರೇ ಹೋಗ್ತಿಲ್ಲ. ಕೇಂದ್ರದ ಮಂತ್ರಿ ಬಂದಿದ್ದು ಮೇಕೆದಾಟು, ಕೃಷ್ಣ ಮೇಲ್ದಂಡೆ ಚರ್ಚೆ ಮಾಡಲು ಬಂದಿಲ್ಲ. ಪ್ರಾದೇಶಿಕ ಪಕ್ಷಕ್ಕೆ ಐದು ವರ್ಷಗಳ ಕಾಲ ಸಂಪೂರ್ಣ ಅಧಿಕಾರ ಕೊಡಬೇಕು ಎಂಬ ಅನಿವಾರ್ಯತೆ ಜನರಿಗೆ ತಿಳಿಸಬೇಕಿದೆ. ಜನವರಿ 15 ನೇ ತಾರೀಖಿನ ಒಳಗೆ ನೂರಾ ಐವತ್ತು ಅಭ್ಯರ್ಥಿ ಗಳನ್ನು ಘೋಷಣೆ ಮಾಡ್ತೀವಿ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುತ್ತೆ. ಈಗಲೇ ನಾವು ಅಭ್ಯರ್ಥಿ ಗಳನ್ನು ಘೋಷಣೆ ಮಾಡ್ತೀವಿ. ಕಾಂಗ್ರೆಸ್ ಈಗಲೇ ಅಧಿಕಾರದ ಬಗ್ಗೆ ಕನಸು ಕಾಣಲು ಶುರು ಮಾಡಿದ್ದಾರೆ. ಒಂದೊಂದು ಸಲ ಒಬ್ಬೊಬ್ಬರು ನಾನೇ ಸಿಎಂ ಅನ್ನುತ್ತಿದ್ದಾರೆ. ನೂರಾ ಮುವ್ವತ್ತು ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್ ಪರಿಸ್ಥಿತಿ ಆಮೇಲೆ ಏನಾಯಿತು? ಎಂದು ಕಾಂಗ್ರೆಸ್ ನಾಯಕರ ವರ್ತನೆಗೆ ಹೆಚ್ಡಿಕೆ ವ್ಯಂಗ ವಾಡಿದ್ದಾರೆ.
ಇದನ್ನೂ ಓದಿ: ಬೇಬಿ ಬೆಟ್ಟದ ಗಣಿಗಾರಿಕೆ ನಿಲ್ಲಬೇಕು, ಜೆಡಿಎಸ್ ಮಾಜಿ ಸಚಿವರೂ ಕೂಡ ಇದಕ್ಕೆ ಸಾಥ್ ಕೊಡ್ತಿದ್ದಾರೆ -ಸಚಿವ ನಾರಾಯಣಗೌಡ
Published On - 10:01 am, Thu, 15 July 21