ಕೋಲಾರ.ನವದೆಹಲಿ, (ಮಾರ್ಚ್ 22): ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಧರ್ಮದಲ್ಲಿ ಜೆಡಿಎಸ್ ಪಕ್ಷಕ್ಕೆ ಈಗಾಗಲೇ ಬಿಜೆಪಿ ಹೈಕಮಾಂಡ್ 2 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಆದ್ರೆ, ಜೆಡಿಎಸ್ ನಾಲ್ಕೈದು ಕೇಳಿರುವುದರಲ್ಲಿ ಕೇವಲ ಎರಡು ಕೊಟ್ಟರೆ ಹೇಗೆ ಎಂದು ಅಸಮಾಧಾನ ಹೊರಹಾಕಿದ್ದು, ಕೋಲಾರ ಕ್ಷೇತ್ರವನ್ನಾದರೂ (Kolar Loksabha constituency) ಕೊಡಿ ಎಂದು ಬೇಡಿಕೆ ಇಟ್ಟಿತ್ತು, ಈ ಸಂಬಂಧ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಗ್ಗಜಗ್ಗಾಟ ನಡೆದಿದ್ದು, ಇದೀಗ ಅಂತಿಮವಾಗಿ ಕೋಲಾರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಈ ಬಗ್ಗೆ ಹೈಕಮಾಂಡ್ ಕೋಲಾರದ ಹಾಲಿ ಸಂಸದ ಮುನಿಸ್ವಾಮಿಗೆ(Muniswamy )ಅವರಿಗೆ ಮಾಹಿತಿ ನೀಡಿದೆ.
ಈ ಸಂಬಂಧ ಸಂಸದ ಮುನಿಸ್ವಾಮಿ ಅವರು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿ ಕೋಲಾರ ಕ್ಷೇತ್ರದ ಬಗ್ಗೆ ಚರ್ಚಿಸಿದರು. ಈ ವೇಳೆ ಜೆಡಿಎಸ್ ಜೊತೆ ಮೈತ್ರಿಯಿಂದ ನಿಮಗೆ ಟಿಕೆಟ್ ಕೈತಪ್ಪಿದೆ ಎಂದು ನಡ್ಡಾ ಅವರು ಮುನಿಸ್ವಾಮಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ ಸೂಕ್ತ ಸಮಯದಲ್ಲಿ ಪಕ್ಷ ನಿಮಗೆ ಸ್ಥಾನಮಾನ ನೀಡಲಿದೆ ಎಂದು ನಡ್ಡಾ ಭರವಸೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ಮುನಿಸ್ವಾಮಿ ಅವರೇ ಟಿವಿ9ಗೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬಾಕಿ ಉಳಿದಿದ್ದ ಕರ್ನಾಟಕದ 4 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಫೈನಲ್
ಇದೊಂದಿಗೆ ನಿರೀಕ್ಷೆಯಂತೆ ಬಿಜೆಪಿ ಹೈಕಮಾಂಡ್, ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಜೆಡಿಎಸ್ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಶಾಸಕ ಸಮೃದ್ದಿ ಮಂಜುನಾಥ್ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ.
ಮತ್ತೊಂದೆಡೆ ಕಾಂಗ್ರೆಸ್ನಲ್ಲೂ ಸಹ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಉಂಟಾಗಿದೆ. ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವಿನ ಮುಸುಕಿನ ಗುದ್ದಾಟ ನಡೆದಿದೆ. ಹೀಗಾಗಿ ಹೈಕಮಾಂಡ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಕುಟುಂಬದವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ತಮ್ಮ ಮಗಳು ನಂದಿನಿ ಅಥವಾ ಅವರ ಪತಿ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.ಆದರೆ ಚಿಕ್ಕಪೆದ್ದಣ್ಣ ಅವರು ಈವರೆಗೂ ಸಬ್ರಿಜಿಸ್ಟ್ರಾರ್ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನೂ ಸ್ವಯಂ ನಿವೃತ್ತಿ ತೆಗೆದುಕೊಂಡಿಲ್ಲ. ಆದರೂ ಅವರಿಗೆ ಟಿಕೆಟ್ ಕೇಳುತ್ತಿರುವುದಕ್ಕೆ ಜಿಲ್ಲೆಯ ಇತರ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೋಲಾರ ಟಿಕೆಟ್ ವಿಚಾರಕ್ಕೆ ಸಚಿವ ಕೆ.ಹೆಚ್. ಮುನಿಯಪ್ಪನವರು ಡಿಸಿಎಂ ಶಿವಕುಮಾರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ. ನನ್ನ ಅಳಿಯನಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೇನೆ. ಮಾಜಿ ಸಚಿವ ರಮೇಶ್ ಕುಮಾರ್ ಸೇರಿದಂತೆ ಯಾರ ವಿರುದ್ಧವೂ ನಾನು ಮಾತಾಡಿಲ್ಲ. ಭಿನ್ನಾಭಿಪ್ರಾಯ ಸರಿ ಮಾಡ್ಕೊಂಡು ಹೋಗ್ತೇವೆ ಎಂದು ಮುನಿಯಪ್ಪ ಹೇಳಿದ್ದಾರೆ. ಅಂತಿಮವಾಗಿ ಕಾಂಗ್ರೆಸ್ ನಾಯಕರು ಕೋಲಾರಕ್ಕೆ ಎಲ್. ಹನುಮಂತಯ್ಯ ಅವರ ಹೆಸರನ್ನು ಫೈನಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.