ಕಲಬುರಗಿ: ಕಡಿಮೆ ಬೆಂಬಲ ಬೆಲೆಗೆ ಕೇಂದ್ರ ಸರ್ಕಾರ ವಿರುದ್ಧ ತೊಗರಿ ಬೆಳೆಗಾರರ ಆಕ್ರೋಶ

ಕೇಂದ್ರ ಸರ್ಕಾರ ಮೂರು ದಿನದ ಹಿಂದಷ್ಟೇ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದೆ. ಅದರಲ್ಲಿ ತೊಗರಿಗೆ ಕೂಡಾ ಬೆಂಬಲ ಬೆಲೆಯನ್ನು ನಿಗದಿ ಮಾಡಿದೆ. ಕಳೆದ ವರ್ಷ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ಆರು ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿತ್ತು.

ಕಲಬುರಗಿ: ಕಡಿಮೆ ಬೆಂಬಲ ಬೆಲೆಗೆ ಕೇಂದ್ರ ಸರ್ಕಾರ ವಿರುದ್ಧ ತೊಗರಿ ಬೆಳೆಗಾರರ ಆಕ್ರೋಶ
ತೊಗರಿ ಬೆಳೆ
Follow us
TV9 Web
| Updated By: sandhya thejappa

Updated on: Jun 17, 2021 | 12:24 PM

ಕಲಬುರಗಿ: ರಾಜ್ಯದ ತೊಗರಿ ಕಣಜ ಅಂತ ಖ್ಯಾತಿ ಪಡೆದಿರುವ ಜಿಲ್ಲೆ ಕಲಬುರಗಿ. ನೆರೆಯ ಯಾದಗಿರಿ, ಬೀದರ್, ವಿಜಯಪುರ ಜಿಲ್ಲೆಯಲ್ಲೂ ಹೆಚ್ಚಿನ ರೈತರು ತೊಗರಿ ಬೆಳೆಯುತ್ತಾರೆ. ಈ ಭಾಗದಲ್ಲಿ ಬೆಳೆಯುವ ತೊಗರಿ, ರಾಜ್ಯವಲ್ಲದೆ, ದೇಶದ ವಿವಿಧ ಭಾಗಗಳಿಗೆ ಪೂರೈಕೆಯಾಗುತ್ತದೆ. ಇಲ್ಲಿ ಬೆಳೆಯುವ ತೊಗರಿಯಲ್ಲಿ ಪ್ರೋಟಿನ್ ಹೆಚ್ಚು ಇರುವುದರಿಂದ ಕಲಬುರಗಿ ತೊಗರಿಗೆ ಜಿಐ ಟ್ಯಾಗ್ ಸ್ಥಾನಮಾನ ಕೂಡಾ ಸಿಕ್ಕಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆ ತೊಗರಿ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕೇಂದ್ರ ಸರ್ಕಾರ ತೊಗರಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದೆ. ಆದರೆ ಅದು ಯಾವುದಕ್ಕೂ ಸಾಕಾವುದಿಲ್ಲ ಅನ್ನೋದು ತೊಗರಿ ಬೆಳೆಗಾರರ ವಾದವಾಗಿದೆ. ತೊಂಬತ್ತು ದಿನದಲ್ಲಿ ಬರುವ ಹೆಸರಿಗಿಂತ, ಆರು ತಿಂಗಳಲ್ಲಿ ಬರುವ ತೊಗರಿಗೆ ಕಡಿಮೆ ಬೆಂಬಲ ಬೆಲೆ ನಿಗದಿ ಮಾಡಿರುವುದು ರೈತರ ಆಕ್ರೋಶವನ್ನು ಹೆಚ್ಚಿಸಿದೆ.

ಕೇಂದ್ರ ಸರ್ಕಾರ ಮೂರು ದಿನದ ಹಿಂದಷ್ಟೇ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದೆ. ಅದರಲ್ಲಿ ತೊಗರಿಗೆ ಕೂಡಾ ಬೆಂಬಲ ಬೆಲೆಯನ್ನು ನಿಗದಿ ಮಾಡಿದೆ. ಕಳೆದ ವರ್ಷ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ಆರು ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿತ್ತು. ಈ ಭಾರಿ ಪ್ರತಿ ಕ್ವಿಂಟಲ್ ತೊಗರಿಗೆ ಆರು ಸಾವಿರದ ಮೂನ್ನೂರು ರೂಪಾಯಿ ನಿಗದಿ ಮಾಡಿದೆ. ಆದರೆ ಇದು ಯಾವುದಕ್ಕೂ ಕೂಡಾ ಸಾಲೋದಿಲ್ಲಾ ಅನ್ನೋದು ತೊಗರಿ ಬೆಳೆಗಾರರ ಮಾತಾಗಿದೆ. 2018 ರಲ್ಲಿಯೇ ಕೃಷಿ ಬೆಲೆ ಆಯೋಗದ ಪ್ರಕಾರ ಪ್ರತಿ ಕ್ವಿಂಟಲ್ ತೊಗರಿ ಬೆಳೆ ಬೆಳೆಯಲು ಏಳುವರೆ ಸಾವಿರ ರೂಪಾಯಿ ಖರ್ಚು ತಗಲುತ್ತಿತ್ತು. ಇದೀಗ ಅದು ಕೂಡಾ ಹೆಚ್ಚಾಗಿದೆ. ಹೀಗಿರುವಾಗ ಬೆಳೆ ಬೆಳೆಯಲು ತಗಲುವ ವೆಚ್ಚಕ್ಕಿಂತ ಹೆಚ್ಚಿನ ಬೆಲೆಯನ್ನು ನಿಗದಿ ಮಾಡಬೇಕೆ ವಿನಃ ಕಡಿಮೆ ನಿಗದಿ ಮಾಡಬಾರದು ಅಂತ ತೊಗರಿ ಬೆಳೆಗಾರರ ಆಗ್ರಹವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ನಿಗದಿ ಮಾಡುವಾಗ, ಪ್ರತಿ ಕ್ವಿಂಟಲ್ಗೆ ಎಂಟು ಸಾವಿರಕ್ಕೂ ಮೇಲೆ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಅಂತ ಆಗ್ರಹಿಸಿದ್ದರು. ಆದರೆ ಸರ್ಕಾರ ತೊಗರಿ ಬೆಳೆಗಾರರ ಮಾತಿಗೆ ಮಣೆ ಹಾಕಿಲ್ಲಾ. ಹೀಗಾಗಿ ಪ್ರತಿ ಕ್ವಿಂಟಲ್ ತೊಗರಿಗೆ ಕೇವಲ ಆರು ಸಾವಿರದಾ ಮೂನ್ನೂರು ರೂಪಾಯಿ ಮಾತ್ರ ನಿಗದಿ ಮಾಡಿದೆ.

ಹೆಸರಿಗಿಂತ ತೊಗರಿಗೆ ಕಡಿಮೆ ಬೆಂಬಲ ಬೆಲೆ ನಿಗದಿ ಕೇವಲ ತೊಂಬತ್ತು ದಿನದಲ್ಲಿ ಬರುವ ಹೆಸರಿಗೆ ಸರ್ಕಾರ ಏಳು ಸಾವಿರದಾ ಏರಡು ನೂರು ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಆದರೆ ಆರು ತಿಂಗಳಿಗೆ ಬರುವ ತೊಗರಿಗೆ ಹೆಸರಿಗಿಂತ ಕಡಿಮೆ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಉತ್ತರ ಪ್ರದೇಶ ಸೇರಿದಂತೆ ದೇಶದ ಕೆಲವಡೆ ಹೆಸರನ್ನು ಹೆಚ್ಚಾಗಿ ಬೆಳೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬರಲಿದೆ. ಹೀಗಾಗಿ ಅಲ್ಲಿನ ರೈತರ ಮನವೊಲಿಸಲು ಕೇಂದ್ರ ಸರ್ಕಾರ ಕೇವಲ ತೊಂಬತ್ತು ದಿನದಲ್ಲಿ ಬರುವ ಹೆಸರಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ತೊಗರಿ ಬೆಳೆಯರು ಆರು ತಿಂಗಳು ಬೇಕು. ಹೆಸರಿಗಿಂತ ತೊಗರಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿ ಮಾಡಬೇಕಿತ್ತು. ಇನ್ನು ಹೆಸರು ಬೆಳೆಯಲು ಕಡಿಮೆ ಖರ್ಚು ತಗಲುತ್ತದೆ. ಅದಕ್ಕೆ ರೋಗ ಬಾದೆ ಕೂಡಾ ಕಡಿಮೆ. ಆದರೆ ತೊಗರಿ ಬೆಳೆಯಲು ಹೆಚ್ಚಿನ ಖರ್ಚು ತಗಲುತ್ತದೆ. ಕ್ರಿಮಿನಾಶಕ ಸಿಂಪಡಣೆ, ಗೊಬ್ಬರಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಆದರು ಕೂಡಾ ಕೇಂದ್ರ ಸರ್ಕಾರ ಹೆಸರಿಗಿಂತ ತೊಗರಿಗೆ ಕಡಿಮೆ ಬೆಂಬಲ ಬೆಲೆ ನಿಗದಿ ಮಾಡಿದೆ ಅಂತ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ನೆರವಿಗೆ ಬಾರದ ರಾಜ್ಯ ಸರ್ಕಾರ ಕಳೆದ ವರ್ಷ ಕೇಂದ್ರ ಸರ್ಕಾರ ಆರು ಸಾವಿರ ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿತ್ತು. ಕೇಂದ್ರ ಸರ್ಕಾರ ನಿಗದಿ ಮಾಡಿದ್ದ ಬೆಂಬಲ ಬೆಲೆಗೆ ಈ ಹಿಂದೆ ರಾಜ್ಯ ಸರ್ಕಾರ ಪ್ರೋತ್ಸಹಧನ ನೀಡುವ ಸಂಪ್ರದಾಯವನ್ನು ಬೆಳಸಿಕೊಂಡಿತ್ತು. ಆದರೆ ಕಳೆದ ವರ್ಷದಿಂದ ರಾಜ್ಯ ಸರ್ಕಾರ ಕೂಡಾ ತೊಗರಿಗೆ ಪ್ರೋತ್ಸಾಹಧನ ನೀಡುವುದನ್ನು ಕೈ ಬಿಟ್ಟಿದೆ. ಹೀಗಾಗಿ ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟ ಕೇಂದ್ರಕ್ಕೆ ರೈತರು ಹೋಗದೆ, ಮಾರುಕಟ್ಟೆಯಲ್ಲಿಯೇ ತೊಗರಿ ಮಾರಾಟ ಮಾಡಿದ್ದರು. ಕಳೆದ ವರ್ಷ ನಿರೀಕ್ಷಿತ ಮಟ್ಟಕ್ಕಿಂತ ತೊಗರಿ ಇಳುವರಿ ಕಡಿಮೆ ಬಂದಿದ್ದರಿಂದ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿಯೇ ಹೆಚ್ಚಿನ ಬೆಲೆಗೆ ಮಾರಾಟವಾಗಿತ್ತು. ಆದರೆ ಈ ಭಾರಿಯಾದರೂ ತೊಗರಿಗೆ ಹೆಚ್ಚಿನ ಪ್ರೋತ್ಸಾಹ ಧನ ನಿಗದಿ ಮಾಡಬೇಕು ಅಂತ ರೈತರು ಆಗ್ರಹಿಸಿದ್ದರು. ರಾಜ್ಯ ಸರ್ಕಾರ ಕೂಡಾ ತನ್ನ ಪಾಲಿನ ಪ್ರೋತ್ಸಾಹ ಧನ ನೀಡಬೇಕು ಅಂತ ಆಗ್ರಹಿಸಿದ್ದರು.

ಕೇಂದ್ರ ಸರ್ಕಾರ ಹೆಸರಿಗಿಂತ ತೊಗರಿಗೆ ಕಡಿಮೆ ಬೆಂಬಲ ಬೆಲೆ ನಿಗದಿ ಮಾಡಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಿದೆ. ಹೀಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು. ಆ ಮೂಲಕ ರೈತರ ನೆರವಿಗೆ ಬರಬೇಕು ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಒತ್ತಾಯಿಸಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಪ್ರೋತ್ಸಾಹಧನ ಯಾವುದಕ್ಕೂ ಸಾಲೋದಿಲ್ಲಾ. ಪ್ರತಿ ಕ್ವಿಂಟಲ್ ತೊಗರಿಗೆ ಕನಿಷ್ಟ ಎಂಟು ಸಾವಿರ ನಿಗದಿ ಮಾಡಬೇಕು. ಜೊತೆಗೆ ರಾಜ್ಯ ಸರ್ಕಾರ ಕೂಡಾ ಪ್ರೋತ್ಸಾಹಧನ ನೀಡಬೇಕು. ಆಗ ಮಾತ್ರ ತೊಗರಿ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ರೈತ ಶರಣಬಸಪ್ಪ ಹೇಳಿದರು.

ಇದನ್ನೂ ಓದಿ

ತೊಗರಿ ಕಣಜ ಖ್ಯಾತಿಯ ಕಲಬುರಗಿಯಲ್ಲೇ ತೊಗರಿ ಬೇಳೆ ದಾಖಲೆಗೆ ಮಾರಾಟ!

ಭತ್ತ ಸೇರಿ ಬೇಸಿಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಶೇ 62ರಷ್ಟು ಹೆಚ್ಚಳ: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

(Kalaburagi Toor Dal growers expressed outrage on central government for setting a low support price)