‘ಥಗ್ ಲೈಫ್’ ರಿಲೀಸ್ ಆಗದಿದ್ದರೂ ದೃಢವಾಗಿ ನಿಂತ ಕರ್ನಾಟಕದ ಥಿಯೇಟರ್ಗಳು
ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದಾಗಿ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲಿಲ್ಲ. ಕನ್ನಡ ಚಿತ್ರರಂಗದ ಒಗ್ಗಟ್ಟಿನಿಂದಾಗಿ ಈ ನಿರ್ಧಾರ ಕೈಗೊಳ್ಳಲಾಯಿತು. ಚಿತ್ರಮಂದಿರಗಳಿಗೆ ಆರ್ಥಿಕ ನಷ್ಟವಾಗುವ ಸಾಧ್ಯತೆಯಿದ್ದರೂ, ಕನ್ನಡದ ಅಸ್ಮಿತೆಗೆ ಆದ್ಯತೆ ನೀಡಲಾಯಿತು. ಈಗ ಹೊಸ ಚಿತ್ರಗಳ ಬಿಡುಗಡೆಯೊಂದಿಗೆ ಚಿತ್ರಮಂದಿರಗಳು ಮತ್ತೆ ಚೇತರಿಸಿಕೊಳ್ಳುತ್ತಿವೆ.

ಕಮಲ್ ಹಾಸನ್ (Kamal Haasan) ಅವರು ಕ್ಷಮೆ ಕೇಳಿ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿದ್ದರೆ ಥಿಯೇಟರ್ಗಳಿಗೆ ಒಂದಷ್ಟು ಬಿಸ್ನೆಸ್ ಆಗುತ್ತಿತ್ತು ಎಂಬುದು ನಿಜ. ಏಕೆಂದರೆ ಸಂಕ್ರಾಂತಿ ಸಂದರ್ಭದಲ್ಲಿ ಕೆಲವು ಸಿನಿಮಾಗಳು ರಿಲೀಸ್ ಆದವು. ಆ ಬಳಿಕ ದೊಡ್ಡ ಸಿನಿಮಾಗಳು ಥಿಯೇಟರ್ಗೆ ಅಪ್ಪಳಿಸಿಲ್ಲ. ಇದರಿಂದ ಚಿತ್ರಮಂದಿರಗಳಿಗೆ ಬಿಸ್ನೆಸ್ ಇಲ್ಲದಂತೆ ಆಗಿದೆ. ಈಗ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗದೇ ಇರಲು ಎಲ್ಲರೂ ಒಟ್ಟಾಗಿ ತೆಗೆದುಕೊಂಡ ಗಟ್ಟಿ ನಿರ್ಧಾರವೇ ಕಾರಣ. ‘ಥಗ್ ಲೈಫ್’ ಇಲ್ಲದೆ ಇದ್ದರೂ ಥಿಯೇಟರ್ಗಳು ದೃಢವಾಗಿ ನಿಂತಿವೆ.
‘ಥಗ್ ಲೈಫ್’ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಲು ಹಲವು ಕಾರಣಗಳು ಇದ್ದವು. ಮಣಿರತ್ನಂ ನಿರ್ದೇಶನ, ಕಮಲ್ ಹಾಸನ್ ಅವರ ಭಿನ್ನ ಗೆಟಪ್, ಸಿನಿಮಾದ ಟ್ರೇಲರ್ ಹೀಗೆ ಹಲವು ವಿಚಾರಗಳು ನಿರೀಕ್ಷೆ ಹುಟ್ಟುಹಾಕಿದ್ದವು. ಆದರೆ, ‘ಥಗ್ ಲೈಫ್’ ಸಿನಿಮಾ ಈವೆಂಟ್ನಲ್ಲಿ ಕಮಲ್ ಹಾಸನ್ ಅವರು ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂಬುದು ಕಮಲ್ ಹಾಸನ್ ಹೇಳಿಕೆ ಆಗಿತ್ತು.
ಇದಾದ ಬಳಿಕ ಕನ್ನಡಿಗರು ಒಂದಾದರು. ಸಿನಿಮಾ ವಿತರಕರು, ಪ್ರದರ್ಶಕರು, ಫಿಲ್ಮ್ ಚೇಂಬರ್ ಸೇರಿದಂತೆ ಎಲ್ಲರೂ ಸಿನಿಮಾನ ಕರ್ನಾಟಕದಲ್ಲಿ ಪ್ರದರ್ಶನ ಮಾಡಬಾರದು ಎನ್ನುವ ನಿರ್ಧಾರಕ್ಕೆ ಬಂದರು. ‘ಥಗ್ ಲೈಫ್’ ಸಿನಿಮಾ ರಿಲೀಸ್ ಆದರೆ ಒಂದಷ್ಟು ಬಿಸ್ನೆಸ್ ಆಗುತ್ತಿತ್ತು ನಿಜ. ಆದರೆ, ಯಾರೊಬ್ಬರೂ ಆ ಬಗ್ಗೆ ಯೋಚಿಸಲೇ ಇಲ್ಲ. ಕನ್ನಡದ ಅಸ್ಮಿತತೆಗಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡರು.
ಈಗ ಬೆಂಗಳೂರಿನ ‘ಊರ್ವಶಿ’ ಥಿಯೇಟರ್ ಸೇರಿದಂತೆ ಕೆಲವು ಥಿಯೇಟರ್ಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಮುಂದಿನ ಸಿನಿಮಾ ಬರುವವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ. ಆದರೆ, ಈ ಬಗ್ಗೆ ಎಲ್ಲಿಯೂ ಅವರು ಬೇಸರ ಹೊರಹಾಕಿಲ್ಲ. ಏಕೆಂದರೆ ಕನ್ನಡಕ್ಕಾಗಿ ಅವರು ಮಾಡಿದ ತ್ಯಾಗ ಇದು. ಇನ್ನು, ಉಳಿದ ಥಿಯೇಟರ್ಗಳು ಹಿಂದಿಯ ‘ಹೌಸ್ಫುಲ್ 5’, ಕನ್ನಡದ ‘ಮಾದೇವ’, ‘ಸಂಜು ವೆಡ್ಸ್ ಗೀತ 2’ ರೀತಿಯ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿಲ್ಲ ಥಗ್ ಲೈಫ್; ಹೀನಾಯ ಗಳಿಕೆಯಿಂದ ಕೈ ಸುಟ್ಟುಕೊಂಡ ಕಮಲ್ ಹಾಸನ್
ಮುಂಬರುವ ದಿನಗಳಲ್ಲಿ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ (ಜೂನ್ 12) ರಿಲೀಸ್ ಆಗಲಿದೆ. ಸಿನಿಮಾ ಉತ್ತಮವಾಗಿದ್ದರೆ ಥಿಯೇಟರ್ಗಳಿಗೆ ಲಾಭ ಆಗಲಿದೆ. ಆ ಬಳಿಕ ‘ಕುಬೇರ’, ‘ವಾರ್ 2’, ‘45’, ‘ಕೆಡಿ’ ರೀತಿಯ ಸಿನಿಮಾಗಳು ರಿಲೀಸ್ ಆಗಲಿದ್ದು, ಬೆಂಗಳೂರಿನ ಥಿಯೇಟರ್ಗಳಿಗೆ ಜೀವನೋತ್ಸಾಹ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








