ವಿಶಾಲ್ಗೆ ಭಾರಿ ಸಂಕಷ್ಟ, ಬಡ್ಡಿ ಸಮೇತ 27.68 ಕೋಟಿ ಹಣ ನೀಡುವಂತೆ ಕೋರ್ಟ್ ಆದೇಶ
Actor Vishal: ತಮಿಳಿನ ಸ್ಟಾರ್ ನಟ ವಿಶಾಲ್ ಒಂದಲ್ಲ ಒಂದು ವಿವಾದಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ನಿರ್ಮಾಣ ಸಂಸ್ಥೆ ಲೈಕಾ ಜೊತೆಗೆ ಕಳೆದ ಐದು ವರ್ಷದಿಂದಲೂ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನಡೆಸುತ್ತಿದ್ದು, ಇದೀಗ ಮದ್ರಾಸ್ ಹೈಕೋರ್ಟ್ ನಟ ವಿಶಾಲ್ಗೆ ದೊಡ್ಡ ಶಾಕ್ ನೀಡಿದೆ. ಭಾರಿ ಮೊತ್ತದ ಹಣವನ್ನು ಮರಳಿಸುವಂತೆ ಹೇಳಿದೆ.

ತಮಿಳಿನ ಸ್ಟಾರ್ ನಟ ಮತ್ತು ನಿರ್ಮಾಪಕ ವಿಶಾಲ್ಗೆ (Vishal) ಭಾರಿ ಸಂಕಷ್ಟ ಎದುರಾಗಿದೆ. ನಿರ್ಮಾಣ ಸಂಸ್ಥೆಗಳು, ವತರಕರು, ಫಿಲಂ ಚೇಂಬರ್, ನಿರ್ದೇಶಕರುಗಳೊಟ್ಟಿಗೆ ಪದೇ ಪದೇ ಕಿರಿಕ್ ಮಾಡಿಕೊಳ್ಳುತ್ತಲೇ ಬರುತ್ತಿರುವ ವಿಶಾಲ್ಗೆ ಈಗ ಕೋರ್ಟ್ನಿಂದ ‘ಶಿಕ್ಷೆ’ ದೊರೆತಿದೆ. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾಗೆ ಬರೋಬ್ಬರಿ 21.29 ಕೋಟಿ ಹಣವನ್ನು 30% ಬಡ್ಡಿ ಜೊತೆಗೆ ಸೇರಿಸಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಲೈಕಾ ಪ್ರೊಡಕ್ಷನ್ ಹೌಸ್ ಹಾಗೂ ವಿಶಾಲ್ ನಡುವೆ ಕಳೆದ ಕೆಲ ವರ್ಷಗಳಿಂದಲೂ ಹಣಕಾಸಿಗೆ ಸಂಬಂಧಿಸಿದಂತೆ ವಿವಾದ ಚಾಲ್ತಿಯಲ್ಲಿದೆ. ಪ್ರಕರಣ ಕುರಿತಂತೆ ಮದ್ರಾಸ್ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು, ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಪಿಟಿ ಆಶಾ ಅವರು ನಟ ವಿಶಾಲ್ ಅವರು 21.29 ಕೋಟಿ ಹಣವನ್ನು 30% ಬಡ್ಡಿ ಜೊತೆ ಸೇರಿಸಿ ನಿರ್ಮಾಣ ಸಂಸ್ಥೆಗೆ ನಿಗದಿತ ಅವಧಿಯ ಒಳಗಾಗಿ ನೀಡಬೇಕು ಎಂದು ಆದೇಶಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಆದೇಶದಲ್ಲಿ ವಿಶಾಲ್ ಅವರು 15 ಕೋಟಿ ಹಣವನ್ನು ಭದ್ರತೆ ರೂಪದಲ್ಲಿ ಇಡಬೇಕಾಗಿ ಆದೇಶಿಸಿದ್ದರು. ಆದರೆ ವಿಶಾಲ್ ಹಣ ನೀಡದೆ ತಮ್ಮ ಆಸ್ತಿಯನ್ನು ಭದ್ರತೆಯಾಗಿ ನೀಡಿದ್ದರು. ಇದೀಗ ಪ್ರಕರಣದ ವಿಚಾರಣೆ ಮುಗಿದು ಆದೇಶ ಹೊರಬಿದ್ದಿದ್ದು, ಭಾರಿ ಮೊತ್ತವನ್ನೇ ವಿಶಾಲ್ ಇದೀಗ ಲೈಕಾ ಸಂಸ್ಥೆಗೆ ನೀಡಬೇಕಿದೆ. 21.29 ಕೋಟಿ ಹಣಕ್ಕೆ 30 % ಬಡ್ಡಿ ಎಂದರೆ ಒಟ್ಟು ಮೊತ್ತ 27.68 ಕೋಟಿ ರೂಪಾಯಿಗಳು ಆಗುತ್ತವೆ. ಒಂದೊಮ್ಮೆ ವಿಶಾಲ್ ಹಣ ಪಾವತಿಸಲು ವಿಫಲರಾದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಇದೆ.
ಇದನ್ನೂ ಓದಿ:‘ಕಲ್ಕಿ 2898 ಎಡಿ’ ಸಿನಿಮಾದಿಂದ ಹೊರಗಾಗುತ್ತಾರೆಯೇ ದೀಪಿಕಾ ಪಡುಕೋಣೆ?
2019 ರಲ್ಲಿ ನಟ ವಿಶಾಲ್ ಅಂಬು ಚೆಳಿಯಾನ್ ಅವರಿಂದ ಭಾರಿ ಮೊತ್ತದ ಸಾಲವನ್ನು ಪಡೆದಿದ್ದರು. ಸಾಲಕ್ಕೆ ಪ್ರತಿಯಾಗಿ ವಿಶಾಲ್ ಮುಂದೆ ನಿರ್ಮಿಸುವ ಎಲ್ಲ ಸಿನಿಮಾಗಳಲ್ಲಿಯೂ ಲಾಭದ ಹಂಚಿಕೆಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಬಳಿಕ ಮಧ್ಯೆ ಪ್ರವೇಶಿಸಿದ್ದ ಲೈಕಾ ಪ್ರೊಡಕ್ಷನ್ಸ್ ವಿಶಾಲ್ ಪರವಾಗಿ ಅವರ ಸಾಲವನ್ನು ತೀರಿಸಿತ್ತು. ಆದರೆ ವಿಶಾಲ್ ಒಪ್ಪಂದದಂತೆ ನಡೆದುಕೊಳ್ಳದೆ ಹಣ ವಾಪಸ್ಸು ನೀಡದೇ ಇದ್ದಿದ್ದು ಮಾತ್ರವಲ್ಲದೆ ಅವರ ನಿರ್ಮಾಣದ ಸಿನಿಮಾಗಳ ಹಕ್ಕುಗಳನ್ನು ಬೇರೊಬ್ಬರಿಗೆ ಅಕ್ರಮವಾಗಿ ವರ್ಗಾವಣೆ ಸಹ ಮಾಡಿದ್ದರು. ಇದೇ ಕಾರಣಕ್ಕೆ ಲೈಕಾ ನಿರ್ಮಾಣ ಸಂಸ್ಥೆಯು ವಿಶಾಲ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಬಡ್ಡಿ ಸಮೇತ ಹಣವನ್ನು ವಸೂಲಿ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




