‘ಕಲ್ಕಿ 2898 ಎಡಿ’ ಸಿನಿಮಾದಿಂದ ಹೊರಗಾಗುತ್ತಾರೆಯೇ ದೀಪಿಕಾ ಪಡುಕೋಣೆ?
Deepika Padukone: ದೀಪಿಕಾ ಪಡುಕೋಣೆಯ ಬೇಡಿಕೆಗಳಿಂದ ಬೇಸತ್ತು ಅವರನ್ನು ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಿಂದ ಕೈಬಿಟ್ಟಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಅವರ ಬದಲಿಗೆ ತೃಪ್ತಿ ದಿಮ್ರಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದೀಗ ದೀಪಿಕಾ ಪಡುಕೋಣೆ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಸಹ ಇದೇ ಕಾರಣಕ್ಕೆ ಕಳೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ನಟಿ ದೀಪಿಕಾ ಪಡುಕೋಣೆ (Deepika Padukone) ತಾಯಿ ಆದ ಬಳಿಕ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡುವ ತಯಾರಿಯಲ್ಲಿದ್ದಾರೆ. ಆದರೆ ಕಮ್ ಬ್ಯಾಕ್ಗೆ ಮುನ್ನವೇ ದೀಪಿಕಾ ಪಡುಕೋಣೆ ಇಟ್ಟಿರುವ ಬೇಡಿಕೆಗಳು ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಸಿನಿಮಾನಲ್ಲಿ ದೀಪಿಕಾ ನಟಿಸುವುದು ಖಾತ್ರಿ ಆಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿ, ಪ್ರಭಾಸ್ ನಟಿಸಲಿರುವ ‘ಸ್ಪಿರಿಟ್’ ಸಿನಿಮಾಕ್ಕೂ ದೀಪಿಕಾರನ್ನು ಆಯ್ಕೆ ಮಾಡಲಾಗಿತ್ತು. ಆದರೆ ದೀಪಿಕಾ ಇರಿಸಿದ ಬೇಡಿಕೆಗಳು ಸಂದೀಪ್ಗೆ ಸರಿಬರದ ಕಾರಣ ಅವರ ಬದಲಿಗೆ ತೃಪ್ತಿ ದಿಮ್ರಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ತಾಯಿ ಆಗಿರುವ ದೀಪಿಕಾ ಪಡುಕೋಣೆ ದಿನಕ್ಕೆ ಎಂಟು ಗಂಟೆ ಮಾತ್ರವೇ ಕೆಲಸ ಮಾಡುವುದಾಗಿ ಹೇಳಿದರಂತೆ. ಅಲ್ಲದೆ ಸಂಭಾವನೆಯನ್ನೂ ಸಹ ಹೆಚ್ಚಾಗಿ ಕೇಳಿದರು ಎಂಬ ಕಾರಣಕ್ಕೆ ಸಂದೀಪ್ ರೆಡ್ಡಿ ವಂಗಾ, ದೀಪಿಕಾರನ್ನು ಸಿನಿಮಾದಿಂದ ಕೈಬಿಟ್ಟಿದ್ದಾರೆ. ಅದರ ಬೆನ್ನಲ್ಲೆ ಈಗ ದೀಪಿಕಾ ‘ಕಲ್ಕಿ’ ಸಿನಿಮಾದ ಅವಕಾಶವನ್ನೂ ಕಳೆದುಕೊಳ್ಳಲಿದ್ದಾರೆಯೇ ಎಂಬ ಚರ್ಚೆ ಎದ್ದಿದೆ.
ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಕಲ್ಕಿ 2898 ಎಡಿ’ನಲ್ಲಿ ದೀಪಿಕಾ ಪಡುಕೋಣೆ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಮೊದಲ ಭಾಗ ಈಗಾಗಲೇ ಬಿಡುಗಡೆ ಆಗಿದೆ. ಎರಡನೇ ಭಾಗದ ಪ್ರೀ ಪ್ರೊಡಕ್ಷನ್ ಚಾಲ್ತಿಯಲ್ಲಿದೆ. ಇದರ ನಡುವೆ ದೀಪಿಕಾ ಪಡುಕೋಣೆ, ವರ್ಕ್ ಹವರ್ ಹಾಗೂ ಸಂಭಾವನೆ ವಿಷಯವಾಗಿ ನಿಷ್ಠುರತೆ ತೋರಿದ್ದು, ಇದೇ ಕಾರಣಕ್ಕೆ ‘ಕಲ್ಕಿ 2898 ಎಡಿ’ ಸಿನಿಮಾ ತಂಡವೂ ಸಹ ದೀಪಿಕಾರನ್ನು ಸಿನಿಮಾದಿಂದ ಹೊರಗೆ ಇಡಲಿದೆಯೇ ಎಂಬ ಅನುಮಾನ ಮೂಡಿದೆ. ಆದರೆ ಸಿನಿಮಾದ ಮೊದಲ ಭಾಗ ಈಗಾಗಲೇ ಪ್ರದರ್ಶನವಾಗಿದ್ದು, ಸಿನಿಮಾದ ಎರಡನೇ ಭಾಗದಲ್ಲಿ ದೀಪಿಕಾರನ್ನು ಬದಲಾಯಿಸಿ ಬೇರೊಬ್ಬ ನಟಿಯನ್ನಂತೂ ಹಾಕಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವರ ಪಾತ್ರವನ್ನೇ ಕೊಂದು, ದೀಪಕಾರ ಅವಶ್ಯಕತೆ ಇಲ್ಲದಂತೆ ಮಾಡುವ ಅವಕಾಶ ಅವರಿಗೆ ಇದೆ.
ಇದನ್ನೂ ಓದಿ:ದೀಪಿಕಾ ಪಡುಕೋಣೆ ಮುಂದಿನ ಚಿತ್ರಗಳ ನಿರ್ಮಾಪಕರಿಗೆ ಶುರುವಾಗಿದೆ ಭಯ
ವಿವಾದದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ದೀಪಿಕಾ ಪಡುಕೋಣೆ, ‘ಆ ನಾಯಕನ ಸಿನಿಮಾಗಳಷ್ಟೆ ನನ್ನ ಸಿನಿಮಾಗಳು ಸಹ ಯಶಸ್ವಿಯಾಗಿವೆ’ ಎಂದಿದ್ದರು. ಅಂದರೆ ಪ್ರಭಾಸ್ ಸಿನಿಮಾಗಳಷ್ಟೆ ತಮ್ಮ ಸಿನಿಮಾಗಳು ಹಣ ಮಾಡಿವೆ ಹಾಗಾಗಿ ಹೆಚ್ಚಿನ ಸಂಭಾವನೆಯನ್ನು ತಮಗೆ ನೀಡಬೇಕು ಎಂಬುದು ದೀಪಿಕಾರ ಉದ್ದೇಶವಾಗಿತ್ತು. ಈಗ ‘ಕಲ್ಕಿ’ ಸಿನಿಮಾದ ಎರಡನೇ ಭಾಗಕ್ಕೂ ಅವರು ಹೆಚ್ಚಿನ ಸಂಭಾವನೆ ಕೇಳುವುದು ಈ ಮೂಲಕ ಖಾತ್ರಿ ಆಗಿದೆ. ಆದರೆ ‘ಕಲ್ಕಿ’ ನಿರ್ಮಾಪಕ ಅಶ್ವಿನ್ ದತ್ ಅವರು ದೀಪಿಕಾ ಬೇಡಿಕೆಗೆ ಮಣಿಯುತ್ತಾರೆಯೇ ಇಲ್ಲವೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




