ನಿಲ್ದಾಣದಿಂದ ಕಳ್ಳತನವಾಗಿದ್ದ ಸರ್ಕಾರಿ ಬಸ್: 13 ಗಂಟೆಯಲ್ಲೇ ಪತ್ತೆ ಹಚ್ಚಿದ ಪೊಲೀಸರು
ಇಂದು(ಫೆ.21) ಬೆಳಿಗ್ಗೆ 3.30ರ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಕೆಆರ್ಟಿಸಿಗೆ ಸೇರಿದ್ದ ಬಸನ್ನು ಕಳ್ಳರು ಕದ್ದೊಯ್ದಿದ್ದರು, ಈ ಘಟನೆ ನಡೆದ ಹದಿಮೂರು ಗಂಟೆಯಲ್ಲಿ ಚಿಂಚೋಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಲಬುರಗಿ: ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಕೆಆರ್ಟಿಸಿಗೆ(Kalyana Karnataka Road Transport Corporation) ಸೇರಿದ್ದ ಬಸನ್ನು ಇಂದು(ಫೆ.21) ನಸುಕಿನ ಜಾವ 3.30ರ ಸಮಯದಲ್ಲಿ ಕಳ್ಳರು ಕದ್ದೊಯ್ದಿದ್ದರು. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆ ಕೈಗೊಂಡ ಪೊಲೀಸರು ಘಟನೆ ನಡೆದು ಹದಿಮೂರು ಗಂಟೆಯಲ್ಲಿ ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂ ಕೈಲಾಸ ತಾಂಡಾದಲ್ಲಿ ಬಸ್ನ್ನ ಪತ್ತೆ ಹಚ್ಚಿದ್ದಾರೆ. ಸದ್ಯ ಬಸ್ನ್ನು ಪತ್ತೆ ಮಾಡಿರುವ ಚಿಂಚೋಳಿ ಪೊಲೀಸರು, ಇದೀಗ ಕಳ್ಳತನ ಮಾಡಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಬೀದರ್ ಡಿಪೋ ನಂಬರ್ 2 ಕ್ಕೆ ಸೇರಿದ್ದ ಕೆಎ 38 ಎಫ್ 971 ನಂಬರ್ನ ಬಸ್, ನಿನ್ನೆ(ಫೆ.20) ಬೀದರ್ನಿಂದ ಚಿಂಚೋಳಿಗೆ ಬಂದಿತ್ತು. ಪ್ರತಿನಿತ್ಯ ಚಿಂಚೋಳಿಯಿಂದ ಮನ್ನಾಎಖ್ಖೆಳ್ಳಿ ಮಾರ್ಗವಾಗಿ ಬೀದರ್ ಮಾರ್ಗದಲ್ಲಿ ಈ ಬಸ್ ಸಂಚರಿಸುತ್ತಿತ್ತು. ಪ್ರತಿನಿತ್ಯ ಚಿಂಚೋಳಿಯಲ್ಲಿ ಹಾಲ್ಟ್ ಮಾಡಿ, ಮುಂಜಾನೆ ಬಸ್ನ್ನು ಚಾಲಕ ಮತ್ತು ನಿರ್ವಾಹಕರು ತೆಗೆದುಕೊಂಡು ಹೋಗುತ್ತಾರೆ. ನಿನ್ನೆ ರಾತ್ರಿ ಬೀದರ್ನಿಂದ ತಂದಿದ್ದ ಬಸ್ನ್ನು ಚಾಲಕ ಅಯ್ಯುಬ್ ಖಾನ್ ಮತ್ತು ಈರಪ್ಪ, ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಡಿಪೋದಲ್ಲಿ ಮಲಗಿದ್ದರು. ಇಂದು ಮುಂಜಾನೆ ಎಂದಿನಂತೆ, ಬಸ್ನ್ನು ತಗೆದುಕೊಂಡು ಮತ್ತೆ ಬೀದರ್ಗೆ ಹೋಗಲು ಮುಂದಾದಾಗ ಚಾಲಕ ಮತ್ತು ನಿರ್ವಾಹಕನಿಗೆ ಶಾಕ್ ಆಗಿದೆ. ನಿಲ್ದಾಣದಲ್ಲಿದ್ದ ಬಸ್ ನಾಪತ್ತೆಯಾಗಿತ್ತು. ಕೂಡಲೇ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳ್ಳರು ಕದ್ದೊಯ್ದಿರುವುದು ಪತ್ತೆಯಾಗಿತ್ತು.
ಇದನ್ನೂ ಓದಿ:ಕಲಬುರಗಿಯಲ್ಲಿ ಕಂಡಕ್ಟರ್ ಆಗಲು ಅಕ್ರಮ, ಮತ್ತೊಬ್ಬ ಅಭ್ಯರ್ಥಿಯ ಕಳ್ಳಾಟ ಪತ್ತೆ: ಗೋಧಿಹಿಟ್ಟನ್ನು ಹೀಗೂ ಬಳಸಬಹುದು
ನಕಲಿ ಕೀ ಬಳಸಿ ಬಸ್ ಕಳ್ಳತನ
ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಸಾವಿರಾರು ಜನರು ಬರ್ತಾರೆ. ಸಾಮಾನ್ಯವಾಗಿ ಸರ್ಕಾರಿ ಬಸ್ ನಿಲ್ದಾಣಕ್ಕೆ ಗೇಟ್ಗಳು ಕೂಡಾ ಕಡಿಮೆ. ಹಗಲು ರಾತ್ರಿ ಬಸ್ ಬರುವುದರಿಂದ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದನ್ನು ಗಮನಿಸೋದಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಕಿಲಾಡಿಗಳು, ನಕಲಿ ಕೀ ಬಳಸಿ, ಬಸನ್ನು ಕದ್ದೋಯ್ದಿದ್ದರು. ಚಿಂಚೋಳಿಯಿಂದ ತಾಂಡೂರ ಮಾರ್ಗವಾಗಿ ತೆಲೆಂಗಾಣ ರಾಜ್ಯದ ಕಡೆ ತಗೆದುಕೊಂಡು ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು, ಇದೀಗ ಘಟನೆ ನಡೆದ 13 ಗಂಟೆಯೊಳಗೆ ಬಸ್ನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ, ಇನ್ನು ಬಸ್ನ್ನು ಕದ್ದೊಯ್ದ ಖದೀಮರಿಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ