50 ವರ್ಷಗಳ ರಸ್ತೆ ರಾತೋ ರಾತ್ರಿ ಬಂದ್! ರೋಸಿ ಹೋದ ಜನರಿಂದ ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮಸ್ಥರು ಕಳೆದ 50 ವರ್ಷಗಳಿಂದ ಅದೇ ರಸ್ತೆಯನ್ನೆ ಅವಲಂಬಿಸಿಕೊಂಡು ಓಡಾಡುತ್ತಿದ್ದರು. ಆದರೆ, ಏಕಾಏಕಿ ಆ ರಸ್ತೆ ಬಂದ್ ಆಗಿದ್ದು, ಜನರ ಕಂಗಾಲಾಗಿದ್ದಾರೆ. ಇದೇ ಕಾರಣಕ್ಕೆ ಪಕ್ಕದ ಊರಿನ ಕೆಲ ರೈತರು ಇದು ನಮ್ಮ ಜಮೀನು ಎಂದು ರಸ್ತೆ ಮಾಡಿದ್ದು, ರಸ್ತೆ ಮುಕ್ತಗೊಳಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ, ಏ.06: ಜಿಲ್ಲೆಯ ಆಳಂದ(Aland) ತಾಲೂಕಿನ ಶುಕ್ರವಾಡಿ ಗ್ರಾಮದ ಜನರಿಗೆ ರಸ್ತೆಯೊಂದು ಸಮಸ್ಯೆಯಾಗಿ ಕಾಡತೊಡಗಿದೆ. ಹೌದು, ಶುಕ್ರವಾಡಿ ಗ್ರಾಮದಿಂದ ಆಳಂದ ಪಟ್ಟಣಕ್ಕೆ ಹೋಗಬೇಕಾದರೆ ಹೊನ್ನಳ್ಳಿ ಗ್ರಾಮದ ಮಾರ್ಗವಾಗಿ ಆರು ಕಿಲೋಮೀಟರ್ ಆಳಂದ ಪಟ್ಟಣಕ್ಕೆ ಹೋಗಬೇಕಾಗುತ್ತದೆ. ಆದರೆ, ಇದೀಗ ಹೊನ್ನಳ್ಳಿ ಗ್ರಾಮದ ಕೆಲ ರೈತರು ಅಲ್ಲಿ ರಸ್ತೆಯೇ ಇಲ್ಲ. ಅದು ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ವಾದ ಮಾಡಿ ರಸ್ತೆಗೆ ಅಡ್ಡಲಾಗಿ ಮುಳ್ಳುಕಂಟಿಗಳನ್ನ ಹಾಕಿ ರಸ್ತೆಯನ್ನೇ ಬಂದ್ ಮಾಡಿದ್ದಾರೆ. ಇದರಿಂದಾಗಿ ಶುಕರ್ವಾಡಿ ಗ್ರಾಮಸ್ಥರು ತಾಲೂಕ ಕೇಂದ್ರ ಆಳಂದಕ್ಕೆ ಹೋಗಲು 20 ಕಿಲೋಮೀಟರ್ ಸುತ್ತುಹಾಕಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಹೆಣ್ಮಕ್ಕಳು ಶಾಲಾ-ಕಾಲೇಜಿಗೆ ಹೋಗದ ಮನೆಯಲ್ಲಿ ಕುಳಿತಿದ್ದಾರೆ. ಹೀಗೆ ಮುಂದವರೆದರೆ ನಮ್ಮನ್ನ ಬಾಲ್ಯ ವಿವಾಹ ಮಾಡುತ್ತಾರೆ. ನಮಗೆ ರಸ್ತೆ ಒಪನ್ ಮಾಡಿದ್ರೆ ಶಿಕ್ಷಣಕ್ಕೆ ದಾರಿಯಾಗುತ್ತೆ ಎಂದು ವಿದ್ಯಾರ್ಥಿನಿಯೊಬ್ಬಳು ಅಂಗಲಾಚುತಿದ್ದಾಳೆ. ಇನ್ನು ಕಳೆದ ಐವತ್ತು ವರ್ಷಗಳಿಂದ ಇದೇ ರಸ್ತೆಯನ್ನ ಶುಕ್ರವಾಡಿ ಜನ ಬಳಸುತ್ತಿದ್ದಾರೆ. ಆದರೆ, ಹೊನ್ನಳ್ಳಿ ಗ್ರಾಮದ ಕೆಲ ರೈತರು ಆ ರಸ್ತೆಯ ಜಮೀನು ತಮ್ಮದೆಂದು ರಸ್ತೆಗೆ ಮುಳ್ಳು ಕಂಟಿಗಳನ್ನ ಹಾಕಿ ಅಟ್ಟಹಾಸ ಮೆರೆದಿದ್ದು, ಆಳಂದದಿಂದ ಬರುವ ಸಾರಿಗೆ ಸಂಸ್ಥೆ ಬಸ್ ಚಾಲಕರಿಗೂ ಸಹ ಹೊನ್ನಳ್ಳಿ ಗ್ರಾಮದ ಕೆಲವರು ಧಮ್ಕಿ ಹಾಕಿ ಈ ರಸ್ತೆಯಲ್ಲಿ ಓಡಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರಂತೆ.
ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ ಗ್ರಾಮಸ್ಥರು
ಈ ರಸ್ತೆ ಬಂದ್ ಆದ ಪರಿಣಾಮ ಶುಕ್ರವಾಡಿ ಗ್ರಾಮಸ್ಥರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಮತ್ತು ಡಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನ ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ವಾರದೊಳಗೆ ಈ ರಸ್ತೆ ಮೇಲಿನ ಮುಳ್ಳುಕಂಟಿಗಳನ್ನ ತೆರವುಗೊಳಿಸಿ ನಮಗೆ ಸಂಚಾರಕ್ಕೆ ಅವಕಾಶ ಮಾಡಿಕೊಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಶುಕ್ರವಾಡಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಅದೆನೇ ಇರಲಿ, ಕಾನೂನು ಪ್ರಕಾರ ಯಾವುದೇ ರಸ್ತೆಗಳನ್ನ ಬಂದ್ ಮಾಡಿ ಜನರಿಗೆ ತೊಂದರೆ ಕೊಡುವಂತಿಲ್ಲ. ಆದರೆ, ಇಲ್ಲಿ ಮಾತ್ರ ಊರಿನವರಿಗೆ ತೊಂದರೆ ಕೊಡಲೆಂದೆ ಹೊನ್ನಳ್ಳಿ ಗ್ರಾಮದ ಕೆಲ ರೈತರು ರಸ್ತೆಗೆ ಮುಳ್ಳುಕಂಟಿಗಳನ್ನ ಹಾಕಿ ಬಂದ್ ಮಾಡಿದ್ದು ದುರಂತವೇ ಸರಿ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಾರಾ? ಎಂದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Sat, 6 April 24