
ಕಲಬುರಗಿ, ಡಿಸೆಂಬರ್ 17: ಕಲಬುರಗಿ (Kalaburagi) ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಮಗೆ ಯಾರು ಹೇಳುವವರು ಕೇಳುವವರಿಲ್ಲ ಎನ್ನುವಂತೆ ದರ್ಬಾರ್ ಮೆರೆದಿದ್ದಾರೆ. ಯಾಕೆಂದರೆ, ರಾಜ್ಯದ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡಿರುವ ಆರೋಪ ಅವರ ವಿರುದ್ಧ ಕೇಳಿಬಂದಿದೆ. ಆಳಂದ ಪಟ್ಟಣದ ಬಸ್ ನಿಲ್ದಾಣ ಎದುರಿಗೆ ಟೆಂಡರ್ ಪ್ರಕ್ರಿಯೆ ಮುಗಿಯುವ ಮುಂಚಯೇ ರಸ್ತೆ ಡಾಂಬರೀಕರಣ ಕಾಮಗಾರಿ ಮುಗಿದು ಹೋಗಿದೆ! ಈ ಸುದ್ದಿ ನೋಡಿದರೆ ಖುದ್ದು ಲೋಕೋಪಯೋಗಿ ಸಚಿವರೇ ಬೆಚ್ಚಿಬಿಳಬಹುದೇನೋ ಅಂದಾಜು 2 ಕೋಟಿ ರೂ. ಮೊತ್ತದ ಡಾಂಬರ್ ರಸ್ತೆ ನಿರ್ಮಾಣಕ್ಕಾಗಿ ಕಳೆದ ಅಕ್ಟೋಬರ್ನಲ್ಲಿ ಲೋಕೋಪಯೋಗಿ ಇಲಾಖೆ ಟೆಂಡರ್ ಅಹ್ವಾನಿಸಿತ್ತು. ಅದರಂತೆ ಹಲವು ಗುತ್ತಿಗೆದಾರರು ಟೆಂಡರ್ನಲ್ಲಿ ಭಾಗವಹಿಸಿದ್ದರು.
ತಮಗೆ ಟೆಂಡರ್ ಸಿಗಬಹುದು ಎಂದು ಗುತ್ತಿಗೆದಾರು ಕಾದಿದ್ದಷ್ಟೇ ಬಂತು. ಆದರೆ, ಅಲ್ಲಿ ಹೊಸದಾಗಿ ರಸ್ತೆ ನಿರ್ಮಾಣವಾಗಿ ಬಿಟ್ಟಿತ್ತು. ಇದನ್ನು ಕಂಡು ಖುದ್ದು ಕೆಲ ಗುತ್ತಿಗೆದಾರರೇ ಶಾಕ್ ಆಗಿದ್ದರು. ಯಾಕೆಂದರೆ, ಟೆಂಡರ್ ಪ್ರಕ್ರಿಯೆ ಮುಗಿಯದೇ ರಸ್ತೆ ಕಾಮಗಾರಿ ಮುಗಿಸಿದ್ದು ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡಿತ್ತು. ಆದರೆ, ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ಮುಗಿಯುವ ಮುನ್ನವೇ ಕಮಿಷನ್ ಆಸಗೆ ಬರೋಬ್ಬರಿ 2 ಕೋಟಿ ರೂ. ಮೊತ್ತದ ಕಾಮಗಾರಿ ಮಾಡಿ ಮುಗಿಸಿರುವ ಆರೋಪ ಈಗ ವ್ಯಕ್ತವಾಗಿದೆ.
ರಸ್ತೆ ಕಾಮಗಾರಿ ವೇಳೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಲ್ಲದೇ, ನಿಯಮ, ಗುಣಮಟ್ಟ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಸರ್ಕಾರದ ಹಣವನ್ನ ಬೇಕಾಬಿಟ್ಟಿಯಾಗಿ ಖಾರ್ಚು ಮಾಡಿದ್ದಾರೆ. ಅಷ್ಟೆ ಅಲ್ಲದೇ ಇನ್ನೊಂದು ಕಡೆ ಕೆಲ ತಿಂಗಳ ಹಿಂದಷ್ಟೆ ನಿರ್ಮಾಣವಾಗಿದ್ದ ಮತ್ತೊಂದು ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದೆ. ಇದು ಸ್ಪಷ್ಟವಾಗಿ ಕಳಪೆ ಕಾಮಗಾರಿ ಎಂಬುದು ಗೊತ್ತಾಗುವಂತಿದ್ದರೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಆಳಂದ ಪಟ್ಟಣದಿಂದ ತೀರ್ಥ ಗ್ರಾಮಕ್ಕೆ ಹೋಗುವ ರಸ್ತೆ ನಿರ್ಮಾಣವಾಗಿ ನಾಲ್ಕೈದು ತಿಂಗಳು ಕಳೆದಿಲ್ಲ. ಅದಾಗಲೇ ಸಂಪೂರ್ಣವಾಗಿ ಕಿತ್ತು ಹೋಗಿದೆ. ಅಲ್ಲಿ ರಸ್ತೆ ಕಾಮಗಾರಿ ಮಾಡಿದ್ದಾರೋ ಎಂಬ ಕುರುಹು ಕೂಡ ಇಲ್ಲದ ರೀತಿಯಾಗಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ದ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಕಾಂಪೌಂಡ್ ಕಟ್ಟುತ್ತೆವೆಂದು ಬೋಗಸ್ ಬಿಲ್, ವಸತಿ ಶಾಲೆ ಕಾಂಪೌಂಡ್ ಹೆಸರಲ್ಲೂ ಬೋಗಸ್ ಬಿಲ್ ಮಾಡಿದ್ದಾರೆ ಎಂಬ ಆರೋಪಗಳೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ. ಇಷ್ಟೆಲ್ಲ ಆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಇದನ್ನೂ ಓದಿ: ಯುವತಿ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ಉಡುಪಿಯಲ್ಲಿ ಸಿಡಿದೆದ್ದ ಬಿಲ್ಲವ ಸಮುದಾಯ, ಏನಿದು ಕೇಸ್?
ರಾಜ್ಯದ ಅನೇಕ ಕಡೆಗಳಲ್ಲಿ ಅನುದಾನ ಸಿಗುತ್ತಿಲ್ಲ ಎಂದು ಶಾಸಕರು ಗೋಳಾಡುತ್ತಿದ್ದಾರೆ. ಆದರೆ ಕಲಬುರಗಿಯಲ್ಲಿ ಬಂದಿರುವ ಅನದಾನವೇ ಮಣ್ಣ ಪಾಲಾಗುತ್ತಿದ್ದರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ.