AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಬೆಲ್​​ ನಾಯಕನ ನೇತೃತ್ವ: ಕರ್ನಾಟಕದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ; ಜನವರಿ 24ಕ್ಕೆ ಮುಹೂರ್ತ

ರಾಜ್ಯದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷದ ಉದಯಕ್ಕೆ ಮುಹೂರ್ತ ನಿಗದಿಯಾಗಿದೆ. ರೆಬೆಲ್​​ ನಾಯಕನ ನೇತೃತ್ವದಲ್ಲಿ ಹೊಸ ಪೊಲಿಟಿಕಲ್​​ ಪಾರ್ಟಿ ಅಸ್ತಿತ್ವಕ್ಕೆ ಬರುತ್ತಿದ್ದು, ಪಕ್ಷದ ಲೋಗೋ ಇನ್ನಷ್ಟೇ ಫೈನಲ್​​ ಆಗಬೇಕಿದೆ. ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳ ಆಧಾರದಲ್ಲಿ ಪಕ್ಷ ಸ್ಥಾಪಿಸಲು ಸಮಾನ ಮನಸ್ಕರು ಉದ್ದೇಶಿಸಿದ್ದಾರೆ.

ರೆಬೆಲ್​​ ನಾಯಕನ ನೇತೃತ್ವ: ಕರ್ನಾಟಕದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ; ಜನವರಿ 24ಕ್ಕೆ ಮುಹೂರ್ತ
ಸಾಂದರ್ಭಿಕ ಚಿತ್ರ
ಪ್ರಸನ್ನ ಹೆಗಡೆ
|

Updated on:Dec 15, 2025 | 3:59 PM

Share

ಕಲಬುರಗಿ, ಡಿಸೆಂಬರ್​​ 15: ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಜೆಡಿಎಸ್​​ನಿಂದ ಉಚ್ಛಾಟನೆಗೊಂಡಿದ್ದ ನಾಯಕ ಸಿ.ಎಂ.ಇಬ್ರಾಹಿಂ, ಜನವರಿ 24ರಂದು ರಾಜ್ಯದಲ್ಲಿ ಹೊಸ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ಘೋಷಿಸಿದ್ದಾರೆ. ಕಲಬುರಗಿಯಲ್ಲಿ ನಡೆದ ನವ ಕರ್ನಾಟಕ ಆಂದೋಲನದ ಸಭೆ ಬಳಿಕ ಮಾತನಾಡಿದ ಅವರು, ಸಮಾನ ಮನಸ್ಕರೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲೇ ಪಕ್ಷದ ಚಿಹ್ನೆಯನ್ನು ನಿರ್ಧರಿಸಲಾಗುವುದು. ಹೊಸ ಪಕ್ಷವು ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳ ಅನುಸರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಹೊಸ ಪಕ್ಷ ಕಟ್ಟುವ ಇರಾದೆ ಬಗ್ಗೆ ಮಾತನಾಡಿದ್ದ ಸಿ.ಎಂ. ಇಬ್ರಾಹಿಂ, ಜೆಡಿಎಸ್​​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೆಡಿಎಸ್​ನವರು ಬಿಜೆಪಿಯ ಬಸ್ ಸ್ಟ್ಯಾಂಡ್​ನಲ್ಲಿ‌ ಕುಳಿತಿದ್ದಾರೆ. ಆದರೆ ಜೆಡಿಎಸ್​ನವರಿಗೆ ಬಸ್ ಇಲ್ಲ, ಏನೂ ಇಲ್ಲ ಎಂದು ವ್ಯಂಗ್ಯವಾಡಿದ್ದರು. ಕಾಂಗ್ರೆಸ್​​​ಗೆ ಮತ್ತೆ ಹೋಗ್ತೀರಾ ಸರ್​​ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಅವರು, ನನ್ನ ಮನಸ್ಸಿನಲ್ಲಿ‌ ನಿಶ್ಚಳವಾಗಿದ್ದೇನೆ, ಜನರ ಹಿತ ಮುಖ್ಯ ಎಂದಿದ್ದರು. ಆ ಬೆನ್ನಲ್ಲೇ ಈಗ ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ

ಜೆಡಿಎಸ್​-ಬಿಜೆಪಿ ಮೈತ್ರಿ ಘೋಷಣೆಯಾದ ಬಳಿಕ ಅಂದು ಜೆಡಿಎಸ್​​ ರಾಜ್ಯ ಅಧ್ಯಕ್ಷರಾಗಿದ್ದ ಇಬ್ರಾಹಿಂ ನೀಡಿದ್ದ ಹೇಳಿಕೆಗಳು ಪಕ್ಷಕ್ಕೆ ಇರುಸು-ಮುರುಸು ಉಂಟು ಮಾಡಿದ್ದವು. ತಮ್ಮ ಬೆಂಬಲಿಗರ ಸಭೆಯನ್ನು ನಡೆಸಿ ನಮ್ಮದೇ ಒರಿಜಿನಲ್​ ಜೆಡಿಎಸ್​ ಎಂದಿದ್ದ ಅವರು, ರಾಜ್ಯಾಧ್ಯಕ್ಷನಾಗಿದ್ದರೂ ನನ್ನ ಗಮನಕ್ಕೆ ತರದೇ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಇಂಡಿ ಒಕ್ಕೂಟಕ್ಕೇ ನನ್ನ ಬೆಂಬಲ ಎಂದು ಬಹಿರಂಗವಾಗಿ ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ 77 ವರ್ಷದ ಇಬ್ರಾಹಿಂ ಅವರನ್ನು 2023ರಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಜೆಡಿಎಸ್‌ನಿಂದ ಉಚ್ಛಾಟಿಸಲಾಗಿತ್ತು.

ಕರ್ನಾಟಕ ಮತ್ತು ಪ್ರಾದೇಶಿಕ ಪಕ್ಷಗಳು

ಪಕ್ಷಗಳಿಂದ ಉಚ್ಛಾಟನೆಗೊಂಡು ಅಥವಾ ಮುನಿಸಿಕೊಂಡು ಹೊರ ಬಂದ ನಾಯಕರು ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿದ ಉದಾಹರಣೆಗಳು ಕರ್ನಾಟಕದಲ್ಲಿ ಹಲವಾರಿವೆ. ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿ, ಮಾಜಿ ಸಚಿವ ಶ್ರೀರಾಮುಲು ಅವರ BSR, ಕಳೆದ ವಿಧಾನ ಸಭೆ ಚುನಾವಣೆ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಥಾಪಿಸಿದ್ದ KRPP ಸೇರಿ ಹಲವು ಪಕ್ಷಗಳು ಈಗಾಗಲೇ ಇತಿಹಾಸದ ಪುಟ ಸೇರಿವೆ. ಇನ್ನು ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ, ರವಿ ಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಸೇರಿ ಹಲವು ಅಸ್ತಿತ್ವದಲ್ಲಿ ಇವೆಯಾದರೂ ದೊಡ್ಡ ಮಟ್ಟದ ಜನ ಬೆಂಬಲ ಇವುಗಳಿಗಿನ್ನೂ ಸಿಕ್ಕಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:56 pm, Mon, 15 December 25