
ಕಲಬುರಗಿ, ಮಾರ್ಚ್ 08: ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಯೇ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಲೇ ಇತ್ತು. ಗ್ಯಾರಂಟಿಗಳಿಂದ ರಾಜ್ಯ ಅಭಿವೃದ್ಧಿ ಆಗುತ್ತಿಲ್ಲ ಎಂದು ಬಿಜೆಪಿ ಆರೋಪಗಳ ಸುರಿ ಮಳೆ ಮಾಡ್ತಿತ್ತು. ಅದಕ್ಕೆ ಅಪವಾದ ಎಂಬಂತೆ ಇಂದು ಸಾವಿರಾರು ಕೋಟಿ ರೂ ಕಾಮಗಾರಿಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಚಾಲನೆ ನೀಡಿದ್ದಾರೆ. ಒಂದೇ ಒಂದು ಕ್ಷೇತ್ರಕ್ಕೆ ಸಾವಿರ ಕೋಟಿ ರೂ ಅನುದಾನ ನೀಡಿದ್ದೇವೆ ಅಂತ ಬಿಜೆಪಿಗೆ ಖಡಕ್ ಉತ್ತರ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ಜಾರಿಗೆ ತಂದಿತ್ತು. ಯಾವಾಗ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದವೋ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎನ್ನೋ ಆರೋಪ ಕೇಳಿಬರುತ್ತಲೇ ಇದ್ದವು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೆಪದಲ್ಲಿ ರಾಜ್ಯ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದೆ ಎಂಬ ಆರೋಪವನ್ನ ಬಿಜೆಪಿ ಮಾಡ್ತಿತ್ತು. ಇದ್ರಿಂದ ರಾಜ್ಯ ಸರ್ಕಾರಕ್ಕೂ ತೀವ್ರ ಮುಜುಗರ ಆಗ್ತಿತ್ತು. ಇಂದು ತೀರುಗೇಟು ಎನ್ನುವಂತೆ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಬರೋಬ್ಬರಿ 1069 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ನಾಯಕರ ಆರೋಪಕ್ಕೆ ಕಾಂಗ್ರೆಸ್ ನಾಯಕರ ತಿರುಗೇಟು ನೀಡಿದ್ದಾರೆ.
ಚಿತ್ತಾಪುರ ಪಟ್ಟಣದ ಬಸ್ ಡಿಪೋ ಪಕ್ಕದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದ ಸರ್ಕಾರ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಿಧ ಕಾರ್ಯಕ್ರಮಗಳನ್ನ ಲೋಕಾರ್ಪಣೆ ಮಾಡಿದರು. ನಂತರ ಮಾತಾನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನಾವು ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯಂತೆ ನಡೆಯುತ್ತಿದ್ದೇವೆ. ರಾಜ್ಯದ ಮಹಿಳೆಯರಿಗೆ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಇದನ್ನೂ ಓದಿ: ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಮಲ್ಲಿಕಾರ್ಜುನ ಖರ್ಗೆ
ಕೇವಲ ಒಂದೇ ಒಂದು ವಿಧಾನಸಭಾ ಕ್ಷೇತ್ರಕ್ಕೆ ಸಾವಿರ ಕೋಟಿ ರೂ ಅನುದಾನವನ್ನ ಸರ್ಕಾರ ನೀಡಿದೆ. ಮಹಿಳೆಯರು ಸ್ವಾಭಿಮಾನದಿಂದ ಬದುಕಬೇಕು ಅಂತ ಪ್ರತಿ ತಿಂಗಳು ಎರಡು ಸಾವಿರ ರೂ ಹಾಗೂ ಉಚಿತ ಬಸ್ ನೀಡಿದ್ದೇವೆ. ಆದರೂ ಬಿಜೆಪಿಯವರು ನಮ್ಮ ಬಗ್ಗೆ ಅಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ ಗ್ಯಾರಂಟಿಗಳನ್ನ ಬಂದ್ ಮಾಡಬೇಕು ಎನ್ನುತ್ತಿದ್ದಾರೆ ಎಂದರು. ನಮ್ಮ ಸರ್ಕಾರ ಜನರ ದುಡ್ಡನ್ನ ಗ್ಯಾರಂಟಿ ಮೂಲಕ ಜನರಿಗೆ ನೀಡ್ತಿದೆ. ಆದರೆ ಬಿಜೆಪಿಯವರು ಜನರ ದುಡ್ಡನ್ನ ಲೂಟಿ ಹೊಡೆಯುತ್ತಿದ್ದರು ಎಂದು ಆರೋಪಿಸಿದರು.
ಇನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನ ಹೆಚ್ಚಾಗಿ ಮಾಡುತ್ತಿದ್ದೇವೆ. ಚಿತ್ತಾಪುರ ಕ್ಷೇತ್ರದ ಜನ ರಾಜ್ಯಕ್ಕೆ ಭವಿಷ್ಯದ ನಾಯಕನನ್ನ ನೀಡಿದ್ದಿರಿ ಎಂದು ಪರೋಕ್ಷವಾಗಿ ಪ್ರಿಯಾಂರ್ ಪರ ಬ್ಯಾಟ್ ಬೀಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಯಾವ ಕೆಲಸ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಆದರೆ ಇಂದು ದೊಡ್ಡಮಟ್ಟದ ಕೆಲಸಗಳು ಆಗ್ತಿವೆ. ಈ ಮೊದಲು ಚಿತ್ತಾಪುರಕ್ಕೆ ಬರಲು ರಸ್ತೆಯೇ ಇರಲಿಲ್ಲ. ಆದರೆ ಪ್ರಿಯಾಂಕ್ ಖರ್ಗೆ ಇಲ್ಲಿ ಶಾಸಕರಾದ ಮೇಲೆ ಹೈವೇ ಮಾಡಿಸಿದ್ದಾರೆ. ಆದರೂ ಬಿಜೆಪಿಯವರಿಗೆ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದರು.
ಪ್ರಿಯಾಂಕ್ ಬಂದ ಮೇಲೆ ಚಿತ್ತಾಪುರದಲ್ಲಿ ಅಭಿವೃದ್ಧಿ ಆಗುತ್ತಿದೆ. ಕೆಲಸ ಮಾಡುವವರಿಗೆ ನೀವು ಬೆಂಬಲ ಕೊಡಿ. ಈ ಭಾಗಕ್ಕೆ ನಾವು 371ಜೆ ಜಾರಿಗೆ ತಂದೆವು. ಅದರಿಂದ ಸಾವಿರಾರು ಕೋಟಿ ರೂ ಅನುದಾನ ಬರುತ್ತಿದೆ. ಅದರ ಲಾಭ ನಾನೊಬ್ಬನೆ ತೆಗೆದುಕೊಳ್ತಿಲ್ಲ, ಇಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಿಗುತ್ತೆ. ಆದರೆ ಕೇಂದ್ರ ಸರ್ಕಾರ ಖರ್ಗೆ ಓಡಾಟ ಮಾಡುತ್ತಾರೆ ಅಂತ ವಿಮಾನ ಬಂದ್ ಮಾಡಿದರು. ಅದಕ್ಕೆ ಇಲ್ಲಿನ ಜನ ಹುಷಾರ್ ಆಗಿ ಇರಬೇಕು ಎಂದು ಕಿವಿ ಮಾತು ಹೇಳಿದರು.
ಇದನ್ನೂ ಓದಿ: ಇವಿಎಂ ಬಗ್ಗೆ ಕರ್ನಾಟಕದ ಬಹುಪಾಲು ಜನರಿಗಿದೆ ವಿಶ್ವಾಸ: ಸಿಂ ಸಿದ್ದರಾಮಯ್ಯ, ಖರ್ಗೆ ತವರಲ್ಲೇ ಹೆಚ್ಚು!
ಒಟ್ಟಿನಲ್ಲಿ ಗ್ಯಾರಂಟಿಗಳ ಮಧ್ಯ ಅಭಿವೃದ್ಧಿಯೂ ನಮ್ಮ ಮೂಲ ಮಂತ್ರ ಅಂತ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸ್ವಾಭಿಮಾನದ ಬದುಕಿನ ಜೊತೆಗೆ ರಾಜ್ಯದ ಅಭಿವೃದ್ಧಿಯೂ ನಮ್ಮ ಸರ್ಕಾರದ ಬದ್ದತೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿದೆ. ಕುರ್ಚಿ ಕಿತ್ತಾಟದ ಮಧ್ಯೆ ಸಿಎಂ ಅನುಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಮತ್ತಷ್ಟು ಉಹಾಪೋಹಕ್ಕೆ ರೆಕ್ಕೆಪುಕ್ಕ ಬಂದಿದ್ದು ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.