ಹುಲಿ ಉಗುರಿನ ಲಾಕೆಟ್ ಧರಿಸಿದವರ ಫೋಟೋ ವೈರಲ್: ಖಡಕ್ ಎಚ್ಚರಿಕೆ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ

ಕಳೆದ ಎರಡು ದಿನಗಳು ದಸರಾ ಹಬ್ಬದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ರಜಾ ಇದ್ದುದರಿಂದ ಇಂದು ಬೆಳಗ್ಗೆ ಹುಲಿ ಉಗುರು ಧರಿಸಿದ್ದ ಹಲವು ನಾಯಕರ ವಿರುದ್ಧ ದೂರು ದಾಖಲಾಗುತ್ತಿವೆ. ಇನ್ನು ಇದೀಗ ಈ ಬಗ್ಗೆ ಸ್ವತಃ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು, ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಹುಲಿ ಉಗುರಿನ ಲಾಕೆಟ್ ಧರಿಸಿದವರ ಫೋಟೋ ವೈರಲ್: ಖಡಕ್ ಎಚ್ಚರಿಕೆ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ಅರಣ್ಯ ಸಚಿವ ಈಶ್ವರ್ ಖಂಡ್ರೆ
Follow us
| Updated By: Digi Tech Desk

Updated on:Oct 26, 2023 | 12:40 PM

ಕಲಬುರಗಿ, (ಅಕ್ಟೋಬರ್ 25): ಬಿಗ್​​ಬಾಸ್ ಸ್ಪರ್ಧಿ ವರ್ತೂರ್​ ಸಂತೋಷ್ ಬಂಧನದ ಬೆನ್ನಲ್ಲೇ ಕರ್ನಾಟಕದಲ್ಲಿ ಹುಲಿ ಉಗುರಿನ ಲಾಕೆಟ್ (tiger claw pendant )​ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಹಲವರ ಕೊರಳಲ್ಲಿ ನೇತಾಡುತ್ತಿರುವ ಹುಲಿ ಉಗುರಿನ ಲಾಕೆಟ್ ಫೋಟೋಗಳು​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಇವರ ವಿರುದ್ಧ ಕ್ರಮ ಏನು ಎಂದು ಪ್ರಶ್ನಿಸಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು, ನಟ ದರ್ಶನ್, ಜಗ್ಗೇಶ್ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಯಾರೇ ದೂರು ನೀಡಿದರೂ ಇಲಾಖೆ ಕ್ರಮ ಕೈಗೊಳ್ಳಲಿದೆ. ಪ್ರಭಾವಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂದು ಖಡಕ್​ ಆಗಿಯೇ ಹೇಳಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವನ್ಯಜೀವಿ ಸಂರಕ್ಷಣಾ ಕಾಯ್ದೆ 2022ರಲ್ಲಿ ತಿದ್ದುಪಡಿ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಯಾವುದೇ ವನ್ಯಪ್ರಾಣಿಗಳ ಚರ್ಮ ಅಂದರೆ ಆನೆ ದಂತ, ಜಿಂಕೆ ಚರ್ಮ, ಕೊಂಬು ಬಳಕೆ ಮಾಡುವುದು ಅಥವಾ ಸಂಗ್ರಹ ಮಾಡುವುದಕ್ಕೆ ಯಾವುದೇ ಅವಕಾಶ ಇರುವುದಿಲ್ಲ. ಹುಲಿ ಉಗುರು ಕೊರಳಲ್ಲಿ ಹಾಕಿಕೊಂಡಿರುವ ಬಗ್ಗೆ ದೂರು ಬರುತ್ತಿವೆ. ಯಾವುದೇ ದೂರು ಬಂದ್ರೆ ತನಿಖೆ ನಡೆಸಿ ಇಲಾಖೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

ವನ್ಯಜೀವಿ ಉತ್ಪನ್ನ ಮಾರಾಟ ತಡೆ: ಉನ್ನತಾಧಿಕಾರ ಸಮಿತಿ ರಚನೆ-ಈಶ್ವರ ಖಂಡ್ರೆ

ಹುಲಿ ಉಗುರು, ಹುಲಿ ಹಲ್ಲು ಸೇರಿದಂತೆ ವನ್ಯಜೀವಿಗಳ ಯಾವುದೇ ಅಂಗಾಂಗದಿಂದ ಮಾಡಿದ ಉತ್ಪನ್ನ ಮತ್ತು ವಸ್ತುಗಳ ಮಾರಾಟ ತಡೆಗೆ ಜನ ಜಾಗೃತಿ ಮೂಡಿಸಲು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸ್ಪಷ್ಟ ಸೂಚನೆ ನೀಡಿದ್ದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ-ಎಪಿಸಿಸಿಎಫ್ (ವನ್ಯಜೀವಿ) ಇವರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಅರಣ್ಯಾಧಿಕಾರಿ ಖಡಕ್ ಮಾತು: ಹುಲಿ ಉಗುರು ಲಾಕೆಟ್​ ಧರಿಸಿದವರಿಗೆ ಶುರುವಾಯ್ತು ಸಂಕಷ್ಟ!

ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಾಗಿನಿಂದ ದಾಖಲಾಗಿರುವ (ದೂರು) ಪ್ರಕರಣಗಳು, ಕಾನೂನಿನಡಿಯಲ್ಲಿ ಕೈಗೊಂಡಿರುವ ಕ್ರಮ ಹಾಗೂ ಹಾಲಿ ದಾಖಲಾಗಿರುವ ಮತ್ತು ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಒಂದು ವಾರದೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಿದ್ದಾರೆ.

ಕಾನೂನಿನ ಮುಂದೆ ಎಲ್ಲರೂ ಸಮಾನರು

ಈ ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು. ವನ್ಯ ಜೀವಿಯ ಯಾವುದೇ ಅಂಗಾಂಗದ ಉತ್ಪನ್ನಗಳನ್ನು ಅಕ್ರಮವಾಗಿ ಹೊಂದುವುದು ಅಪರಾಧವಾಗುತ್ತದೆ. ಈ ಬಗ್ಗೆ ದೂರು ಬಂದರೆ ಇಲಾಖೆ, ಪರಿಶೀಲನೆ ನಡೆಸಿ ಕ್ರಮ ಜರುಗಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಸದಸ್ಯ ಜಗ್ಗೇಶ್ ಯಾಕೆ ಹುಲಿ ಉಗುರು ಧರಿಸಿದ್ದರು ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರ ಕೊರಳಿನಲ್ಲಿರುವ ಹುಲಿ ಉಗುರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನು ಈ ಹುಲಿ ಉಗುರಿನ ಲಾಕೆಟ್​ ಧರಿಸಿ ಫೋಟೋಗಳು ವೈರಲ್ ಆಗುತ್ತಿರುವ ಬಗ್ಗೆ ಡಿಸಿಎಫ್​ಓ ರವೀಂದ್ರ ಅವರು ಪ್ರತಿಕ್ರಿಯಿಸಿ, ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಆಗಿಯೇ ಹೇಳಿದ್ದಾರೆ. ಇದರಿಂದ ಯಾರೆಲ್ಲ ಹುಲಿ ಉಗುರಿನ ಪೆಂಡೆಟ್ ಧರಿಸಿದವರಿಗೆ ಢವ ಢವ ಶುರುವಾಗಿದೆ.

ಇನ್ನು ಹುಲಿ ಉಗುರು ಲಾಕೆಟ್ ಧರಿಸಿರುವವರ ವಿರುದ್ಧ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ‌ಶಿವಕುಮಾರ್ ಅವರು ದೂರು ನೀಡಿದ್ದಾರೆ. ಸಾಮಾನ್ಯ ವ್ಯಕ್ತಿಯನ್ನ ಬಂಧನ ಮಾಡಿ ಜೈಲಿಗೆ ಕಳಿಸಿದ್ರಿ. ಅವಧೂತ ವಿನಯ್ ಗುರೂಜಿ, ದರ್ಶನ್, ಜಗ್ಗೇಶ್ ಹಾಕಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಆದರೂ ಇಲ್ಲಿಯವರೆಗೂ ಕ್ರಮ ಜರುಗಿಸದೇ ಇರುವುದನ್ನು ನೋಡಿದ್ರೆ ಬೇಜಾವಾಬ್ದಾರಿ ತೋರುತ್ತಿದೆ ಎಂದು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕೂಡಲೇ ಕ್ರಮ ಜರುಗಿಸಬೇಕು. ನೋಟಿಸ್ ಕೊಟ್ಟು ಕರೆಯಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದು ಇವತ್ತು ನಿಖಿಲ್ ಕುಮಾರಸ್ವಾಮಿ ಹಾಗು ರಾಕ್ ಲೈನ್ ಮೇಲು ದೂರು ಕೊಡುತ್ತೇವೆ. 1972 ವನ್ಯಜೀವಿ ಸಂರಕ್ಷಣಾ ಕಾಯ್ದೆ ತಂದಿದ್ದಾರೆ ಅದನ್ನ ಎತ್ತಿ ಹಿಡಿಯೋ ಕೆಲಸ ಮಾಡುತ್ತೇವೆ. ಅವರ ಮೇಲೆ ಕ್ರಮ ಜರುಗಿಸಬೇಕು ಎನ್ನುವುದು ನಮ್ಮ ಒತ್ತಾಯ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Wed, 25 October 23