ಕಲಬುರಗಿಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಸಾವು
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲ್ಲಿ ಮದ್ಯವ್ಯಸನಿಗಳು ಔಷಧ ಸೇವಿಸಿ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಾಯಪ್ಪ ಮುತ್ಯಾ ಎಂಬಾತ ಈ ಔಷಧ ನೀಡಿದ್ದಾನೆ ಎಂದು ಆರೋಪ ಕೇಳಿಬಂದಿದೆ. ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಲಬುರಗಿ, ಆಗಸ್ಟ್ 06: ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಮೃತಪಟ್ಟಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲ್ಲಿ ನಡೆದಿದೆ. ಸೇಡಂ ತಾಲೂಕಿನ ಬುರಗಪಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀ ನರಸಿಂಹಲು (45), ಶಹಬಾದ್ ಪಟ್ಟಣದ ನಿವಾಸಿ ಗಣೇಶ್ ರಾಠೋಡ್ (30) ಮೃತಪಟ್ಟವರು. ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತದ ಚಟ ಬಿಡಿಸುತ್ತೇನೆ ಅಂತ ಸಾಯಪ್ಪ ಮುತ್ಯಾ ಮದ್ಯ (Alcohol) ವ್ಯಸನಿಗಳ ಮೂಗಿನಲ್ಲಿ ಔಷಧಿ ಹಾಕಿದ್ದನು. ಸಾಯಪ್ಪ ಮುತ್ಯಾ ನೀಡಿದ ಔಷಧಿಯಿಂದ ಲಕ್ಷ್ಮೀ ಮತ್ತು ಗಣೇಶ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು ಆರೋಪ
ದೊಡ್ಡಬಳ್ಳಾಪುರ: ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸಿಂಗೇನಹಳ್ಳಿ ಗ್ರಾಮದ ಸುಶ್ಮಿತಾ (23) ಮೃತ ದುರ್ದೈವಿ. ಗರ್ಭಿಣಿ ಸುಶ್ಮಿತಾ ಮಂಗಳವಾರ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡು ಹೋಗಿದ್ದರು. ಇಂದು (ಆ.06) ಹೆರಿಗೆ ಮಾಡುತ್ತೇವೆ ಎಂದು ಆಸ್ಪತ್ರೆ ವೈದ್ಯರು ಹೇಳಿ ಕಳುಹಿಸಿದ್ದರು. ಇಂದು ಬೆಳಗ್ಗೆ ಆಸ್ಪತ್ರೆಗೆ ಹೆರಿಗೆಗೆ ಅಂತ ಬಂದ ವೇಳೆ ಗರ್ಭಿಣಿ ಮೃತಪಟ್ಟಿದ್ದಾರೆ.
ಗರ್ಭಿಣಿ ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟಿದ್ದಾರೆಂದು ವೈದ್ಯರು ಹೇಳಿದ್ದಾರೆ. ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕಾಲ್ ಗರ್ಲ್ ಬೇಕೆಂದು ಲಿಂಕ್ ಕ್ಲಿಕ್ ಮಾಡಿ ಪೇಮೆಂಟ್! ಬೆಂಗಳೂರು ಟೆಕ್ಕಿಗೆ ಲಕ್ಷಾಂತರ ರೂ. ಪಂಗನಾಮ
ಶಾಲಾ ಬಸ್ ಹರಿದು ಬಾಲಕಿ ಸಾವು
ಶಾಲಾ ಬಸ್ ಹರಿದು ಸ್ಥಳದಲ್ಲೇ ಬಾಲಕಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಡೆಂಕಣಿಕೋಟೆ ಬಳಿಯಲ್ಲಿರುವ ಪಂಜಪಲ್ಲಿ ಗ್ರಾಮದಲ್ಲಿ ನಡೆದಿದೆ. ಬಾಲಕಿ ಆಶಿಯಾ (3) ಮೃತ ದುರ್ದೈವಿ. ಅಕ್ಕನನ್ನ ಮನೆಗೆ ಕರೆತರಲು ಆಶಿಯಾ ಶಾಲಾ ಬಸ್ ಬಳಿ ಹೋಗಿದ್ದಳು. ರಸ್ತೆಯಲ್ಲಿ ಬಾಲಕಿ ಆಶಿಯಾ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಿದ್ದಾರೆ. ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 pm, Wed, 6 August 25



