ವೋಟ್ ಚೋರಿ ಕೇಸ್: ಕಲಬುರಗಿಯ 5 ಮನೆಗಳ ಮೇಲೆ ಎಸ್ಐಟಿ ದಾಳಿ, ಸಾವಿರಾರು ವೋಟರ್ ಐಡಿ ಪತ್ತೆ
ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದ 2023ರ ಮತಗಳ್ಳತನ ಪ್ರಕರಣದ ತನಿಖೆಗಾಗಿ ಎಸ್ಐಟಿ ಅಧಿಕಾರಿಗಳು 5 ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ರಾಶಿ ರಾಶಿ ವೋಟರ್ ಐಡಿಗಳು, ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಪತ್ತೆಯಾಗಿದ್ದು, ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಂದು ಸಹ ಎಸ್ಐಟಿ ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರೆಯಲಿದೆ.

ಕಲಬುರಗಿ, ಅಕ್ಟೋಬರ್ 16: ಕಲಬುರಗಿಯ (Kalaburgi) ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಮತಗಳತನ ಪ್ರಕರಣದ (Vote Chori Case) ತನಿಖೆಗಾಗಿ ನಗರದ ಐದು ಮನೆಗಳ ಮೇಲೆ ಬುಧವಾರ ಎಸ್ಐಟಿ ಅಧಿಕಾರಿಗಳು ದೀಢಿರ್ ದಾಳಿ ಮಾಡಿದರು. ಈ ವೇಳೆ ಆರೋಪಿ ಅಕ್ರಂ ಮನೆಯಲ್ಲಿ ರಾಶಿ ರಾಶಿ ವೋಟರ್ ಐಡಿಗಳು ಪತ್ತೆ ಆಗಿವೆ. ಒಟ್ಟು 15 ಮೊಬೈಲ್ ಫೋನ್, 7 ಲ್ಯಾಪ್ ಟಾಪ್ಗಳನ್ನು ಎಸ್ಐಟಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಇಂದು ಸಹ ಎಸ್ಐಟಿ ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರೆಯಲಿದೆ.
ಕಳೆದೊಂದು ತಿಂಗಳಿಂದ ಸಾಕಷ್ಟು ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದ ಎಸ್ಐಟಿ ಅಧಿಕಾರಿಗಳು ಕೊನೆಗೂ ನಿನ್ನೆ ನಗರದ ಐದು ಕಡೆಗಳಲ್ಲಿ ದಾಳಿ ನಡೆಸಿ ಪರೀಶಿಲನೆ ಮಾಡಿದ್ದಾರೆ. ನಗರದ ರೋಜಾ ಬಡಾವಣೆ ಅಷ್ಪಾಕ್, ಜುಂಜುಂ ಕಾಲೋನಿಯ ನದೀಂ ಹಾಗೂ ಅಕ್ರಂ, ರಾಮನಗರ ಬಡಾವಣೆಯ ಅಸ್ಲಂ ಹಾಗೂ ಯಾದುಲ್ ಕಾಲೋನಿಯ ಮೊಹಮ್ಮದ ಜುನೈದ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದು, ದಾಳಿ ವೇಳೆ ಲ್ಯಾಪ್ ಟಾಪ್ ಸೇರಿದಂತೆ ಕೆಲ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಳಂದ ಮತಗಳ್ಳತನ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ; ಸಿಎಂ ಸಿದ್ದರಾಮಯ್ಯ ಆದೇಶ
2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಸಹ ಕಾಂಗ್ರೆಸ್ಗೆ ಬರಬೇಕಾದ 6038 ಮತಗಳನ್ನೇ ಡಿಲಿಟ್ ಮಾಡಲು ಯತ್ನಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವದಕ್ಕೆ ಬಿಜೆಪಿ ಪ್ಲ್ಯಾನ್ ಮಾಡಿರುವದ್ದಾಗಿ ಆರೋಪ ಬಳಿಕ, ರಾಜ್ಯ ಸರ್ಕಾರ ಕೂಡ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿತ್ತು.
2023ರಲ್ಲಿ ಅಂದು ಚುನಾವಣಾ ಅಧಿಕಾರಿಗಳು ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಪ್ರಕರಣವನ್ನು ಎಸ್ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು. ಅದಾದ ಬಳಿಕ ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆ ಟಾಕ್ ಫೈಟ್ ಸಹ ನಡೆದಿತ್ತು. ಇದರ ಬೆನ್ನಲ್ಲೇ ನಿನ್ನೆ ಕಲಬುರಗಿ ನಗರದಲ್ಲಿ ಎಸ್ಐಟಿ ದಾಳಿ ಮಾಡಿದೆ.
ಇದನ್ನೂ ಓದಿ: ಕಾಂಗ್ರೆಸ್ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ
ಸದ್ಯ ಎಸ್ಐಟಿ ತಂಡ 5 ಮನೆಗಳ ಮೇಲೆ ದಾಳಿ ಮಾಡಿ ವೋಟರ್ ಐಡಿಗಳು ಸೇರಿದಂತೆ ಪ್ರಮುಖ ಕಡತಗಳನ್ನು ವಶಕ್ಕೆ ಪಡೆದುಕೊಂಡಿದೆ. ಆ ಕಡತಗಳ ಪರಿಶೀಲನೆ ಬಳಿಕವೇ ಮುಂದಿನ ತನಿಖೆ ನಡೆಸಲಿದೆ. ಹೀಗಾಗಿ ಎರಡು ರಾಜಕೀಯ ಪಕ್ಷದ ಕಣ್ಣು ಇದೀಗ ಎಸ್ಐಟಿ ತನಿಖೆ ಮೇಲೆ ಮೇಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



