ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್ ಗ್ರೀನ್ ಸಿಗ್ನಲ್: ಆಂದೋಲಾ ಶ್ರೀಗಿಲ್ಲ ಭಾಗ್ಯ
ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ (Ladle Mashak Dargah Aland) ಶಿವಲಿಂಗ ಪೂಜೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ನಿಮಿತ್ತ ಪೂಜೆಗೆ ನ್ಯಾಯಾಲಯ ಅನುಮತಿ ನೀಡಿದೆ. ಆದ್ರೆ, ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತು ಪಡಿಸಿ ಪೂಜೆಗೆ ಅವಕಾಶ ನೀಡಿರುವುದು ಕುತೂಲಕ್ಕೆ ಕಾರಣವಾಗಿದೆ.

ಕಲಬುರಗಿ, (ಫೆಬ್ರವರಿ 25): ಜಿಲ್ಲೆಯ ಆಳಂದ ಬಳಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವಚೈತನ್ಯ ಶಿವಲಿಂಗದ ಪೂಜೆ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು, ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್ ಅನುಮತಿ ನೀಡಿದೆ. ಶಿವಲಿಂಗ ಪೂಜೆಗೆ ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಕೋರ್ಟ್, ನಾಳೆ (ಫೆಬ್ರವರಿ 26) ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಗ್ರೀನ್ ಸಿಗ್ನಲ್ ನೀಡಿ ಆದೇಶ ಹೊರಡಿಸಿದೆ. ಆದ್ರೆ, ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತು ಪಡಿಸಿ ಪೂಜೆಗೆ ಅವಕಾಶ ನೀಡಿದೆ.
ಶಿವರಾತ್ರಿ ಹಿನ್ನೆಲೆಯಲ್ಲಿ ಶಿವಲಿಂಗಾ ಪೂಜೆಗೆ ಅನುಮತಿ ನೀಡುವಂತೆ ಹಿಂದೂ ಮುಖಂಡರು ಹೈಕೋರ್ಟ್ಗೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ಕೋರ್ಟ್, ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತುಪಡಿಸಿ 15 ಹಿಂದೂ ಮುಖಂಡರಿಗೆ ಮಾತ್ರ ಶಿವಲಿಂಗ ಪೂಜೆ ನೆರವೇರಿಸಲು ಅವಕಾಶ ನೀಡಿದೆ. ಆರ್ಜಿದಾರ ಸಿದ್ರಾಮಯ್ಯ ಹಿರೇಮಠ ಸೇರಿ 15 ಜನರಿಗೆ ಅವಕಾಶ ನೀಡಲಾಗಿದ್ದು, 15 ಜನರ ಆಧಾರ್ ಕಾರ್ಡ್ ನೀಡಬೇಕು. ಜಿಲ್ಲಾಡಳಿತಕ್ಕೆ ಮೊದಲೇ ಹದಿನೈದು ಜನರ ಲಿಸ್ಟ್ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.
ಇದನ್ನೂ ಓದಿ: ಕಲಬುರಗಿ: ಮಹಾಶಿವರಾತ್ರಿ ಹಿನ್ನೆಲೆ ಮತ್ತೆ ಮುನ್ನಲೆಗೆ ಬಂದ ಲಾಡ್ಲೆ ಮಶಾಕ್ ದರ್ಗಾ ರಾಘವಚೈತನ್ಯ ಶಿವಲಿಂಗ ಪೂಜೆ
ಕಳೆದ ವರ್ಷ ಶಿವರಾತ್ರಿ ಹಬ್ಬದಂದೇ ಉರಸ್ ಬಂದಿತ್ತು. ಆದರೂ ಕೋರ್ಟ್, ಹಿಂದೂ ಹಾಗೂ ಮುಸ್ಲಿಮರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು. ಬೆಳಗ್ಗೆ 8 ಗಂಟೆಯಿಂದ 2 ಗಂಟೆಯವರೆಗೆ ಮುಸ್ಲಿಂರಿಗೆ ಪೂಜೆಗೆ ಅವಕಾಶ ನೀಡಿದ್ದರೆ, ಮಧ್ಯಾಹ್ನ 2 ರಿಂದ ಸಂಜೆ 6 ವರೆಗೆ ಹಿಂದುಗಳಿಗೆ ಶಿವನ ಪೂಜೆಗೆ ಅವಕಾಶ ನೀಡಿತ್ತು. ಅಲ್ಲದೇ ಪೂಜೆಗೆ 15 ಜನ ಹಿಂದುಗಳು ಮಾತ್ರೆ ತೆರಳಿ ಪೂಜೆ ನೆರವೇರಿಸುವಂತೆ ಆದೇಶ ಹೊರಡಿಸಿತ್ತು.
ಏನಿದು ವಿವಾದ?
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಸುಪ್ರಸಿದ್ದ ಸೂಪಿ ಸಂತ ಲಾಡ್ಲೆ ಮಶಾಕ್ ದರ್ಗಾವಿದೆ. 14 ನೇ ಶತಮಾನದಲ್ಲಿಯೇ ತನ್ನ ತತ್ವ ವಿಚಾರಗಳಿಂದ ಲಾಡ್ಲೆ ಮಶಾಕ್ ಸುಪ್ರಸಿದ್ದಿಯನ್ನು ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ, 15ನೇ ಶತಮಾನದಲ್ಲಿ ಆಗಿಹೋಗಿರುವ ಸಂತ, ಶಿವಾಜಿ ಮಹಾರಾಜರ ಗುರು, ಸಮರ್ಥ ರಾಮದಾಸರ ರಾಘವ ಚೈತನ್ಯರ ಸಮಾಧಿಯಿದೆ. ಸಮಾಧಿ ಮೇಲೆ ಶಿವಲಿಂಗವಿದೆ. ದರ್ಗಾಕ್ಕೆ ಹೋಗುತ್ತಿದ್ದ ಅನೇಕ ಹಿಂದೂ ಭಕ್ತರು, ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗಕ್ಕೆ ನಮಸ್ಕರಿಸಿ, ಪೂಜೆ ಮಾಡಿ ಬರುತ್ತಿದ್ದರು. ಜೊತೆಗೆ ಜೋಶಿ ಅನ್ನೋ ಕುಟುಂಬದವರು ಲಿಂಗಕ್ಕೆ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದರು. ಇತ್ತೀಚಿನವರೆಗೆ ಅಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹಿಂದೂ ಮುಸ್ಲಿಂ ನಡುವೆ ಸಾಮರಸ್ಯ ಕೂಡ ಇತ್ತು.
ಆದರೆ ಕಳೆದ ವರ್ಷ ಶಿವಲಿಂಗದ ಮೇಲೆ ಅನ್ಯ ಕೋಮಿನ ಕೆಲವರು ಮಲಮೂತ್ರ ವಿಸರ್ಜನೆ ಮಾಡಿದ್ದರು. ಇದು ಹಿಂದೂ ಧರ್ಮಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿದ್ದನ್ನು, ಆಳಂದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್, 2021ರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗಕ್ಕೆ ರಕ್ಷಣೆ ನೀಡಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದ್ದರು. ಇದು ಮತ್ತೊಂದು ಕೋಮಿನ ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು.
ಹೀಗಾಗಿ ಶಾಸಕ ಸುಭಾಷ್ ಗುತ್ತೇದಾರ್ ವಿರುದ್ಧವೇ ಅವಹೇಳನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಕಳೆದ ವರ್ಷ ನವಂಬರ್ ತಿಂಗಳಲ್ಲಿ, ಆಳಂದದಲ್ಲಿ ಬೃಹತ್ ಪ್ರತಿಭಟನೆ ಕೂಡ ಹಿಂದೂಪರ ಸಂಘಟನೆಗಳ ಮುಖಂಡರು ನಡೆಸಿದ್ದರು. ಆಗ ಶಿವರಾತ್ರಿ ದಿನವೇ, ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗವನ್ನು ಶುಚಿ ಗೊಳಿಸಿ, ಅಲ್ಲಿ ಪೂಜೆ ಮಾಡೋದಾಗಿ ಹೇಳಿದ್ದರು.
ಶಿವಮಾಲೆ ವ್ರತ ಆರಂಭಿಸಿದ್ದ ಹಿಂದೂಪರ ಕಾರ್ಯಕರ್ತರು
ಈ ಹಿನ್ನೆಲೆ ಹಿಂದೂಪರ ಕಾರ್ಯಕರ್ತರು ಶಿವಮಾಲೆ ವ್ರತ ಆರಂಭಿಸಿದ್ದರು. ಈ ವೃತದ ಉದ್ದೇಶ ಆಳಂದನ ದರ್ಗಾದಲ್ಲಿರುವ ರಾಘವ ಚೈತನ್ಯರ ಸಮಾಧಿ ಸ್ಥಳದ ಮೇಲಿರುವ ಶಿವಲಿಂಗವನ್ನು ಶುಚಿಗೊಳಿಸುವುದು ಮತ್ತು ಪೂಜೆ ಮಾಡುವ ಸಲುವಾಗಿ, ಕಳೆದ ವರ್ಷ ಜನವರಿ 25 ರಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕಲಬುರಗಿಯಲ್ಲಿ ಶಿವಮಾಲೆ ವ್ರತವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರಾರಂಭಿಸಿದ್ದರು. ಅಂದು ನೂರಾರು ಜನರು ಶಿವಮಾಲೆ ಧರಿಸಿದ್ದರು. ಮಾರ್ಚ್ 1ರಂದು ಶಿವರಾತ್ರಿ ದಿನ, ರಾಘವ ಚೈತನ್ಯರ ಸಮಾಧಿ ಮೇಲಿರುವ ಶಿವಲಿಂಗವನ್ನು ಶುಚಿಗೊಳಿಸಿ, ಪೂಜೆ ಮಾಡಿ, ನಮ್ಮ ವ್ರತವನ್ನು ಮುಗಿಸೋದಾಗಿ ಹೇಳಿದ್ದರು. ಆದರೆ ಮಾರ್ಚ್ 1 ರಂದೆ ಲಾಡ್ಲೇ ಮಶಾಕ್ ದರ್ಗಾದ ಸಂದಲ್ ಕೂಡ ಇರೋದರಿಂದ ಜಿಲ್ಲಾಡಳಿತ ಮತ್ತು ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದರು. ಮಾರ್ಚ್ 1 ರಂದು ಆಳಂದನಲ್ಲಿ ಬೃಹತ್ ಕಾರ್ಯಕ್ರಮ ಮಾಡಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದವು.
ಕಾರ್ಯಕ್ರಮಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ಆಹ್ವಾನ ನೀಡಿದ್ದರು. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್ ಮತ್ತು ಚೈತ್ರಾ ಕುಂದಾಪುರಗೆ ಮಾರ್ಚ್ 3 2022 ರವರಗೆ ಜಿಲ್ಲೆಗೆ ಪ್ರವೇಶವನ್ನು ನಿರ್ಬಂಧಿಸಿತು. ಶ್ರೀರಾಮ ಸೇನೆ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರಿಗು ಕೂಡ ಆಳಂದ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಇಡೀ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಮಾಡಿತ್ತು. ಮಾ.5ರವರೆಗೆ ಆಳಂದ ತಾಲೂಕಿನಾದ್ಯಂತ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿತ್ತು.
ಆದರೆ ಪೂಜೆಗೆ ಅವಕಾಶ ನೀಡಲೇಬೇಕು ಅಂತ ಆಗ್ರಹಿಸಿದ್ದಾಗ, ಕೇವಲ 10 ಜನರಿಗೆ ಮಾತ್ರ ಪೂಜೆಗೆ ಅವಕಾಶ ನೀಡಲಾಗಿತ್ತು. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಸುಭಾಷ್ ಗುತ್ತೇದಾರ್, ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಮತ್ತಿಮೂಡ್ ಸೇರಿದಂತೆ ಕಡಗಂಚಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಮಾಡಲು ಮುಂದಾಗಿದ್ದರು. ಆದರೆ ಹೆಚ್ಚಿನ ಜನರು ಮೆರವಣಿಗೆ ಮೂಲಕ ದರ್ಗಾದ ಬಳಿ ಹೊರಟಿದ್ದರಿಂದ ಮುಸ್ಲಿಂ ಸಮಾಜದವರ ಕಣ್ಣು ಕಂಪಾಗಿ, ಮೆರವಣಿಗೆ ಮೇಲೆ ಕಲ್ಲು ತೂರಿದ್ದರು. ಅಂದಿನಿಂದ ಇದೀಗ ಪೂಜೆ ಸಲ್ಲಿಸಲು ಹಿಂದೂ ಹಾಗೂ ಮುಸ್ಲಿಮರು ಕೋರ್ಟ್ ಅನುಮತಿ ಕೇಳಿಕೊಂಡು ಬರುತ್ತಿದ್ದಾರೆ.
Published On - 4:25 pm, Tue, 25 February 25



