ಹಿಜಾಬ್ ಧರಿಸಿ ಹೋಳಿಯಾಡಿದ ಯುವಕರಿಗೆ ಸಂಕಷ್ಟ! ಐವರ ವಿರುದ್ದ ದೂರು ದಾಖಲು

ಕಲಬುರಗಿ ನಿಂಬರ್ಗಾದಲ್ಲಿ ಹೋಳಿ ಹಬ್ಬದಂದು ಹಿಜಾಬ್/ಬುರ್ಖಾ ಧರಿಸಿ ಬಣ್ಣದಾಟ ಆಡಿದ ಪ್ರಕರಣದಲ್ಲಿ ಐವರು ಯುವಕರ ವಿರುದ್ಧ ದೂರು ದಾಖಲಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ತನಿಖೆ ನಡೆಸುತ್ತಿದ್ದು, ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದೆ.

ಹಿಜಾಬ್ ಧರಿಸಿ ಹೋಳಿಯಾಡಿದ ಯುವಕರಿಗೆ ಸಂಕಷ್ಟ! ಐವರ ವಿರುದ್ದ ದೂರು ದಾಖಲು
ಹಿಜಾಬ್ ಧರಿಸಿ ಹೋಳಿಯಾಡಿದ ಯುವಕರಿಗೆ ಸಂಕಷ್ಟ! ಐವರ ವಿರುದ್ದ ದೂರು ದಾಖಲು
Edited By:

Updated on: Mar 06, 2026 | 9:38 AM

ಕಲಬುರಗಿ, ಮಾರ್ಚ್​ 06: ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ವೇಳೆ ಹಿಜಾಬ್ (ಬುರ್ಖಾ) ಧರಿಸಿ ಹೋಳಿ (Holi Wearing Hijab) ಆಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಯುವಕರನ್ನು ಬಂಧಿಸಿರುವ ಘಟನೆ ನಡೆದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬುರ್ಖಾ ಹಾಕಿ ಗರ್ಭಿಣಿಯಂತೆ ಪೋಸ್ ಕೊಟ್ಟ ಯುವಕ!

ಹೋಳಿ ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿನ ಯುವಕರು ಒಟ್ಟಾಗಿ ಸೇರಿ ಬಣ್ಣದಾಟ ಆಡುತ್ತಾ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದರು. ಇದೇ ವೇಳೆ ಕೆಲವರು ತಮ್ಮ ಸ್ನೇಹಿತನಿಗೆ ಬುರ್ಖಾ ಮತ್ತು ಹಿಜಾಬ್ ಧರಿಸಿ ಬಣ್ಣದಾಟ ಆಡಲು ಹೇಳಿ, ವಿವಿಧ ರೀತಿಯಲ್ಲಿ ಡ್ಯಾನ್ಸ್ ಮಾಡಿಸಿ ಅದರ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಆ ಯುವಕ ಗರ್ಭಿಣಿಯಂತೆ ಫೋಟೋ ತೆಗೆದುಕೊಂಡಿರುವುದು ಕೂಡ ವೈರಲ್ ಆಗಿದೆ.

ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮುಸ್ಲಿಂ ಸಮುದಾಯದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಜಾಬ್ ಹಾಗೂ ಬುರ್ಖಾ ಧರಿಸಿ ಈ ರೀತಿಯಾಗಿ ವಿಡಿಯೋ ಮಾಡಿ ಹರಿಬಿಟ್ಟಿರುವುದು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ ಎಂದು ಆರೋಪಿಸಿ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನೆಯಲ್ಲಿ ಭಾಗಿಯಾಗಿದ್ದ ಐವರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಗ್ರಾಮದಲ್ಲಿ ಯಾವುದೇ ಉದ್ವಿಗ್ನತೆ ಉಂಟಾಗದಂತೆ ಎರಡು ಸಮುದಾಯದ ಮುಖಂಡರನ್ನು ಕರೆದು ಶಾಂತಿ ಸಭೆ ನಡೆಸಲಾಗಿದೆ.

ಇದನ್ನೂ ಓದಿ ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

ಹೋಳಿ ಹಬ್ಬದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಣ್ಣದಾಟದ ನಂತರ ಅಣಕು ಶವಯಾತ್ರೆ ಮಾಡುವ ಪದ್ಧತಿಯೂ ಕೆಲ ಕಡೆಗಳಲ್ಲಿ ಇದ್ದು, ಅದರ ಭಾಗವಾಗಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಬುರ್ಖಾ ಧರಿಸಿ ಈ ರೀತಿಯ ವರ್ತನೆ ಯಾಕೆ ಮಾಡಿದ್ದಾರೆ ಎಂಬುದು ತನಿಖೆಯ ನಂತರವೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us