ಕಲಬುರಗಿ: ಅಂತರ್ಜಾತಿ ವಿವಾಹ ಪ್ರೋತ್ಸಹಧನ ಹೆಸರಲ್ಲಿ ಭಾರಿ ಗೋಲ್ಮಾಲ್, ನಕಲಿ ಜೋಡಿಗಳ ಸೃಷ್ಟಿಸಿ ಲಕ್ಷಾಂತರ ರೂ. ಲೂಟಿ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಅಂತರ್ಜಾತಿ ವಿವಾಹ ಪ್ರೋತ್ಸಾಹಧನದ ಹೆಸರಿನಲ್ಲಿ ಭಾರಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. ನಕಲಿ ಜೋಡಿಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂಬ ಆರೋಪವಿದ್ದು, 170ಕ್ಕೂ ಹೆಚ್ಚು ವಿವಾಹಗಳ ಸತ್ಯಾಸತ್ಯತೆ ಬಗ್ಗೆ ಅನುಮಾನ ಮೂಡಿದೆ. ಪ್ರಕರಣದ ಕುರಿತು ಸಮಾಜ ಕಲ್ಯಾಣ ಇಲಾಖೆ ತನಿಖೆ ನಡೆಸುತ್ತಿದೆ.

ಮುಖ್ಯಾಂಶಗಳು
- ಅಂತರ್ಜಾತಿ ವಿವಾಹದ ಹೆಸರಿನಲ್ಲಿ ಗೋಲ್ಮಾಲ್ ಆರೋಪ
- ನಕಲಿ ಜೋಡಿಗಳ ಸೃಷ್ಟಿಸಿ ಹಣ ಲೂಟಿ ಆರೋಪ
- ಚಿಂಚೋಳಿಯಲ್ಲಿ 170ಕ್ಕೂ ಹೆಚ್ಚು ವಿವಾಹಗಳ ಪರಿಶೀಲನೆ
ಕಲಬುರಗಿ, ಅಕ್ಟೋಬರ್ 9: ರಾಜ್ಯ ಸರ್ಕಾರ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆರ್ಥಿಕ ನೆರವು ನೀಡುತ್ತದೆ. ಅಂತರ್ಜಾತಿ ವಿವಾಹವಾದ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಇದಕ್ಕಾಗಿ ಜೋಡಿ ಕಡ್ಡಾಯವಾಗಿ ಮದುವೆ ನೋಂದಣಿ ಮಾಡಿಸಿರಬೇಕು. ಅಲ್ಲದೆ, 3 ಲಕ್ಷ ರೂಪಾಯಿಯನ್ನು ಜಂಟಿ ಖಾತೆಯಲ್ಲಿ ಠೇವಣಿ ಇಡಬೇಕೆಂಬ ನಿಯಮವಿದೆ. ಆದರೆ, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಅಂತರ್ಜಾತಿ ವಿವಾಹದ ಹೆಸರಿನಲ್ಲಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ.
ನಕಲಿ ಅಂತರ್ಜಾತಿ ಜೋಡಿಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಚಿಂಚೋಳಿ ತಾಲೂಕಿನಲ್ಲಿ 170ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳು ನಡೆದಿದ್ದು, ಇವುಗಳಲ್ಲಿ ಎಷ್ಟು ನೈಜ ಎಂಬ ಅನುಮಾನ ಮೂಡಿದೆ.
ಪಂಚನಾಮೆ ನಡೆಸದೆ ಹಣ ಬಿಡುಗಡೆ ಆರೋಪ
ಹಲವೆಡೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪಂಚನಾಮೆಯನ್ನೂ ನಡೆಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೆಲವು ಏಜೆಂಟರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯಿಂದ ಬಹಿರಂಗವಾಗಬೇಕಿದೆ ಸತ್ಯಾಂಶ
ಅಂತರ್ಜಾತಿ ವಿವಾಹಗಳಿಗೆ ನೀಡುವ ಪ್ರೋತ್ಸಾಹಧನವನ್ನೇ ದುರುಪಯೋಗಪಡಿಸಿಕೊಂಡಿರುವ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ತನಿಖೆಯಿಂದ ಬಹಿರಂಗವಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




