
ಕಲಬುರಗಿ, ಜುಲೈ 09: ಮದ್ಯ ಸೇವನೆಗೆ ಹಣ ಕೊಡದಿದ್ದಕ್ಕೆ ಪತ್ನಿಯ (wife) ಮೇಲೆ ಹಲ್ಲೆ ಮಾಡಿ ಪತಿ ಕೊಲೆ (kill) ಮಾಡಿದ್ದ ಘಟನೆ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕುರನಳ್ಳಿ ಗ್ರಾಮದಲ್ಲಿ ನಡೆದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಗೆ ಕಲಬುರಗಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ಈ ಕುರಿತಾಗಿ ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕುರನಳ್ಳಿ ಗ್ರಾಮದ ಮಹಾಂತಪ್ಪ ನಿಂಗಪ್ಪ ದೊಡ್ಡಮನಿ ಎಂಬಾತ ಶಿಕ್ಷೆಗೆ ಒಳಗಾದ ಅಪರಾಧಿ. ಜೇವರ್ಗಿ ತಾಲೂಕಿನ ಕುರನಳ್ಳಿಯ ಮಲ್ಕಪ್ಪ ಕಟ್ಟಿಮನಿ ಎಂಬುವವರ ಮಗಳು ಸಂಗೀತಾ ಅವರನ್ನು 10 ವರ್ಷಗಳ ಹಿಂದೆ ಮಹಾಂತಪ್ಪ ದೊಡ್ಡಮನಿ ವಿವಾಹವಾಗಿದ್ದರು.
ಇದನ್ನೂ ಓದಿ: ವಿಷ ಕುಡಿಯಲು ತಾಯಿ, ತಂಗಿಯರಿಗೆ 2 ಗಂಟೆ ಮನವೊಲಿಸಿದ: ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ, ಮೂವರು ಸಾವು
ಈತ ನಿತ್ಯವೂ ಮದ್ಯ ಸೇವನೆ ಮಾಡುತ್ತಿದ್ದ. ಅದರಂತೆ 2023ರ ಡಿಸೆಂಬರ್ 26 ರಂದು ಸಂಜೆ ಪತ್ನಿ ಸಂಗೀತಾಗೆ ಕುಡಿಯಲು ದುಡ್ಡು ಕೊಡು ಎಂದು ಪೀಡಿಸಿದ್ದಾನೆ. ಆ ಸಂದರ್ಭದಲ್ಲಿ ದುಡ್ಡು ಕೊಡಲು ನಿರಾಕರಿಸಿದ್ದ ಪತ್ನಿಗೆ ಕೊಡಲಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ತೀವ್ರ ಗಾಯಗೊಂಡಿದ್ದ ಸಂಗೀತಾ ಮೃತಪಟ್ಟಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಜಗಳ ಬಿಡಿಸಲು ಬಂದ ಮಗನಿಗೂ ಮಹಾಂತಪ್ಪ ಹಲ್ಲೆ ಮಾಡಿದ್ದ ಎನ್ನಲಾಗಿದೆ.
ಪಿಎಸ್‌ಐ ಜ್ಯೋತಿ ಹಾಗೂ ಸಿಪಿಐ ರಾಜೇಸಾಬ್ ನದಾಫ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಎನ್. ಬಳಬಟ್ಟಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ಕುಚಿಕು ಸ್ನೇಹಿತನ ಪತ್ನಿ ಜೊತೆಯೇ ಅಕ್ರಮ ಸಂಬಂಧ! ಪ್ರಾಣ ಸ್ನೇಹಿತನ ಪ್ರಾಣವನ್ನೇ ತೆಗೆದ ಗೆಳೆಯ
ಪ್ರಕರಣದ ಕುರಿತಾಗಿ ವಾದ-ಪ್ರತಿವಾದ ಆಲಿಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಹ್ಮದ್ ಮುಝೀರ್ ಉಲ್ಲಾ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:55 pm, Wed, 9 July 25