ಬೆಟ್ಟಿಂಗ್ ಚಟಕ್ಕೆ ಬಿದ್ದು ತಂದೆ ಆಸ್ತಿ ಮಾರಿಸಿದ ಮಗ: ಆದರೂ ಬುದ್ಧಿ ಕಲಿಯದ ಇಂಜಿನಿಯರ್ ಕಳ್ಳನಾದ!
ಅಪ್ಪ ಅಮ್ಮ ಮಕ್ಕಳು ಚೆನಾಗಿ ಇರಬೇಕೆಂದು ಆಸ್ತಿ ಸಂಪಾದನೆ ಮಾಡುತ್ತಾರೆ. ಚೆನ್ನಾಗಿ ಓದಿಸಿ ಇಂಜಿನಿಯರ್,ಡಾಕ್ಟರ್ ಮಾಡಿಸಬೇಕೆಂಬ ಕನಸು ಕಂಡಿರುತ್ತಾರೆ. ಆದ್ರೆ ಇಲ್ಲೊಬ್ಬ ಮಗ ಅಪ್ಪನ ಮರ್ಯಾದೆ ತೆಗೆದು, ಮಾಡಿಟ್ಟ ಆಸ್ತಿಯನ್ನೂ ಮಾರಿಸಿ ಇದೀಗ ಜೈಲುಸೇರಿದ್ದಾನೆ. ತಾನು ಹಾಳಾಗಿ ತನ್ನ ಮನೆಯ ಮಾನ ಹರಾಜು ಹಾಕುವ ಮೂಲಕ ಇದೀಗ ಪೊಲೀಸರಿಗೆ ಅತಿಥಿಯಾಗಿದ್ದು, ಸಾಫ್ಟ್ ವೇರ್ ಇಂಜಿನಿಯರ್ ಕಳ್ಳನಾದ ಕಥೆಯನೊಮ್ಮೆ ಓದಿ..

ಬೆಂಗಳೂರು, (ಜುಲೈ 08): ಆನ್‌ಲೈನ್ ಬೆಟ್ಟಿಂಗ್ (Online betting) ಚಟ ಮನಷ್ಯನನ್ನು ಯಾವ ತಂದಿಡುತ್ತೆ ಎನ್ನುವುದಕ್ಕೆ ಸಾಫ್ಟ್ ವೇರ್ ಇಂಜಿನಿಯರ್ (software engineer) ಆಗಿರುವ ಶಿವಮೊಗ್ಗ (Shivamogga) ಮೂಲದ ಮೂರ್ತಿ ದೊಡ್ಡ ಉದಾಹರಣೆ. ಬೆಂಗಳೂರಿನಲ್ಲಿ (Bengaluru) ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮೂರ್ತಿ, ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ಕೊನೆಗೆ ತನ್ನ ತಂದೆಯ ಆಸ್ತಿಯನ್ನು ಮಾರಿಸಲು ಕಾರಣನಾದಿದ್ದಾನೆ. ಅಲ್ಲದೇ ಹಣ ಹಣ ಆಸೆ ಬಿದ್ದು ಕೊನೆ ಕಳ್ಳತನಕ್ಕೂ ಇಳಿದು ಇದೀಗ ಜೈಲು ಪಾಲಾಗಿದ್ದಾನೆ. ಅತ್ತ ಅಪ್ಪನ ಆಸ್ತಿಯೂ ಉಳಿಯಲಿಲ್ಲ, ಇತ್ತ ಕುಟುಂಬ ಮರ್ಯಾದೆ ಸಹ ಹೋಗಿದೆ.
ಮೂರ್ತಿ ಮೂಲತಃ ಶಿವಮೊಗ್ಗದವನು. ಚೆನ್ನಾಗಿ ಓದಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ. ಆದ್ರೆ, ಇವನಿಗೆ ಬೆಟ್ಟಿಂಗ್ ಚಟ ಸೆಳೆದಿತ್ತು. ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಲ್ಲಿ ಸೋತು ಖಾಲಿಯಾಗಿ ಕೊನೆಗೆ ದಿಕ್ಕಿಲ್ಲದೇ ಬೆಂಗಳೂರು ತೊರೆದು ಊರು ಸೇರಿಕೊಂಡಿದ್ದ. ಆದ್ರೆ, ಬೆಟ್ಟಿಂಗ್ ಬುಕ್ಕಿಗಳು ಮನೆ ಬಳಿ ಬಂದಾಗ ಕುಟುಂಬದವರಿಗೆ ಮಗನ ಘನಂದಾರಿ ಕೆಲಸ ಗೊತ್ತಾಗಿದೆ. ಕೊನೆಗೆ ಮರ್ಯಾದೆಗೆ ಅಂಜಿ, ಮೂರ್ತಿಯ ಅಪ್ಪ ಇರೋ ಬರೋ ಆಸ್ತಿನೆಲ್ಲ ಮಾರಿ ದುಡಿಯಲೆಂದು ಬೆಂಗಳೂರಿಗೆ ಮಗನ ಜೊತೆ ಬಂದಿದ್ದಾರೆ.
ಇದನ್ನೂ ಓದಿ: ಅವಾಜ್ ಹಾಕುತ್ತಾ ಓಡಾಡುತ್ತಿದ್ದವ ಅರೆಸ್ಟ್: ಫೀಲ್ಡ್ ಆಫೀಸರ್ ಏಕಾಏಕಿ ಪೊಲೀಸ್ ಆದ ಕಥೆ!
ಮರ್ಯಾದೆ ಅಂಜಿ ತನ್ನಪ್ಪ ಆಸ್ತಿಯನೆಲ್ಲಾ ಮಾರಿ ಕೆಲಸಕ್ಕೆಂದು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾನೆ ಎನ್ನುವ ಸ್ವಲ್ಪವೂ ಸಹ ಮೂರ್ತಿಗೆ ಬೇಜಾರಿಲ್ಲ. ಆಸ್ತಿ ಹೋಯ್ತು ಮರ್ಯಾದೆ ಕಳೆದುಕೊಂಡಾಯ್ತು. ಇಷ್ಟಾದರೂ ಬುದ್ದಿ ಕಲಿಯದ ಮೂರ್ತಿ, ಮತ್ತೆ ಬೆಟ್ಟಿಂಗ್ ದಂಧೆಗೆ ಇಳಿದಿದ್ದಾನೆ. ಇದಕ್ಕೆ ಹಣ ಹೊಂದಿಸಲು ಸೈಡ್ ಬ್ಯುಸಿನೆಸ್ ರೀತಿ ಕಳ್ಳತನ ಮಾಡಲಾಂಭಿಸಿದ್ದ. ಆದ್ರೆ, ಮಹಿಳೆಯ ಸರ ಕಿತ್ತುಕೊಂಡು ಎಸ್ಕೇಪ್ ಆಗಿದ್ದ ಪ್ರಕರಣದಲ್ಲಿ ಸಿಕ್ಕಿಬಿದಿದ್ದಾನೆ. ಬಳಿಕ ಮೂರ್ತಿಯ ಕಳ್ಳಾಟ ಬಯಲಾಗಿದೆ.
ಸಾಫ್ಟ್ ವೇರ್ ಆಗಿದ್ದವ ಕಳ್ಳನಾದ

ಇತ್ತೀಚೆಗೆ ಅಂಗಾಳ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಮೂರ್ತಿ, ಮಹಿಳೆಯ ಸರ ಕಿತ್ತು ಎಸ್ಕೇಪ್ ಆಗಿದ್ದ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಾಗಡಿ ರೋಡ್ ಪೊಲೀಸರು ಅರೋಪಿ ಮೂರ್ತಿಯನ್ನ ಬಂಧಿಸಿ ಕರೆತಂದು ವಿಚಾರಣೆ ವೇಳೆ ಮೂರ್ತಿಯ ಇತರೆ ಕಳ್ಳಾಟ ಪ್ರಕರಣಗಳು ಬೆಳಕಿಗೆ ಬಂದಿವೆ. ಕೋಣನಕುಂಟೆ,ಸದ್ದುಗುಂಟೆಪಾಳ್ಯಸೇರಿ ಹಲವೆಡೆ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿರಲಿಲ್ಲ. ಶೂ ಒಳಗೆ, ಫ್ಲವರ್ ಪಾಟ್ ನಲ್ಲಿ ಇಟ್ಟೊಗಿರುವ ಕೀ ಹುಡುಕಿ ಬಳಿಕ ಮನೆಯಲ್ಲಿರುವ ವಸ್ತು, ಹಣ ದೋಚಿತ್ತಿದ್ದ. ಬಳಿಕ ಯಾರಿಗೂ ಅನುಮಾನ ಬರದಂತೆ ಮನೆಯನ್ನು ಲಾಕ್ ಮಾಡಿ ಮತ್ತೆ ಅದೇ ಸ್ಥಳದಲ್ಲಿ ಕೀ ಇಟ್ಟು ಪರಾರಿಯಾಗುತ್ತಿದ್ದ. ಸದ್ಯ ಬಂಧಿತ ಆರೋಪಿ ಮೂರ್ತಿಯಿಂದ 17 ಲಕ್ಷ ರೂಪಾಯಿ ಮೌಲ್ಯದ 245 ಗ್ರಾಂ ಚಿನ್ನಾಭರಣವನ್ನು ಮಾಗಡಿ ರಸ್ತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಟ್ಟಿಂಗ್ ಸೇರಿದಂತೆ ಎಲ್ಲ ಹಳೆಯ ಜೀವನ ಮರೆತು, ಮೂರ್ತಿ ಅವರ ಕುಟುಂಬವು ಕೆಲಸಕ್ಕೆಂದು ಬೆಂಗಳೂರಿಗೆ ಬಂದು ನೆಲೆಯೂರಿತು. ಮಗನ ಬೆಟ್ಟಿಂಗ್ ಚಟ ಅವನನ್ನು ಕೆಲಸ ಮಾಡದಂತಹ ಸೋಂಬೇರಿಯನ್ನಾಗಿ ಮಾಡಿತ್ತು. ಕೆಲಸ ಮಾಡುವುದನ್ನು ಬಿಟ್ಟು ಹಣಕ್ಕಾಗಿ ವಾಮ ಮಾರ್ಗವನ್ನು ಹಿಡಿಯುವಂತೆ ಮಾಡಿತ್ತು. ಬೆಟ್ಟಿಂಗ್ ಚಟವನ್ನು ಬಿಡಲಾಗದೇ ಕೆಲಸ ಮಾಡಿ ತಿಂಗಳುಪೂರ್ತಿ ಹಣಕ್ಕಾಗಿ ಕಾಯಲಾಗದ ಮೂರ್ತಿ, ಬೇಗನೇ ಹಣ ಸಂಪಾದನೆ ಮಾಡುವ ಮಾರ್ಗಗಳನ್ನು ಹುಡುಕಿದ್ದಾನೆ. ಆಗ ಆತನಿಗೆ ಮನೆಯ ಕಳ್ಳತನದ ಐಡಿಯಾ ಬಂದಿದೆ. ಜೊತೆಗೆ, ವಿಶೇಷವಾಗಿ ದೇವಸ್ಥಾನ ಪ್ರದೇಶಗಳಿಗೆ ಬರುತ್ತಿದ್ದ ಒಬ್ಬಂಟಿ ಮಹಿಳೆಯರ ಚಿನ್ನದ ಸರಗಳನ್ನು ಕದಿಯುವುದನ್ನು ಗುರಿಯಾಗಿಸಿಕೊಂಡಿದ್ದನ.
ಒಟ್ಟಾರೆ ಬೆಟ್ಟಿಂಗ್ ಚಟ ಎನ್ನುವುದು ಮಾಡಿಟ್ಟ ಆಸ್ತಿ,ಪೋಷಕರ ಮರ್ಯಾದೆ ಜೊತೆಗೆ ಇಂಜಿನಿಯರ್ ಒಬ್ಬನ್ನನ್ನ ಕಳ್ಳನನ್ನಾಗಿ ಮಾಡಿದೆ.ಇನ್ನಾದರೂ ಬೆಟ್ಟಿಂಗ್ ಭೂತದ ಬೆನ್ನೇರಿ ಹೋಗುವ ಮುನ್ನ ಎಚ್ಚರದಿಂದಿರಿ.
ವರದಿ: ವಿಕಾಸ್ ಗೌಡ, ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:21 pm, Tue, 8 July 25




