ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಕೊನೆಗೂ ಸಿಕ್ಕ ಸರ್ಕಾರದ ನೆರವು
ಕೊನೆಗೂ ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆಯವರ ವೇತನವನ್ನ ಗೃಹ ಇಲಾಖೆ ಬಿಡುಗಡೆ ಮಾಡಿದೆ. ಬಂಡೆ ಮಕ್ಕಳ ಪೋಷಕರಾದ ರಮಾಬಾಯಿ ಅವರ ಖಾತೆಗೆ 11.92 ಲಕ್ಷ ಹಣವನ್ನು ಗೃಹ ಇಲಾಖೆ ಜಮೆ ಮಾಡಿದೆ.
ಕಲಬುರಗಿ: ಕೊನೆಗೂ ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆಯವರ ವೇತನವನ್ನ ಇದೀಗ ಗೃಹ ಇಲಾಖೆ ಜಮೆ ಮಾಡಿದೆ. ನಿನ್ನೆ(ಮಾ.14) ಬಂಡೆ ಮಕ್ಕಳ ಪೋಷಕರಾದ ರಮಾಬಾಯಿ ಅವರ ಖಾತೆಗೆ 11.92 ಲಕ್ಷ ಹಣವನ್ನು ಗೃಹ ಇಲಾಖೆ ಜಮೆ ಮಾಡಿದೆ. ಈ ಬಗ್ಗೆ ಟಿವಿ9 ಮಾರ್ಚ್ 5 ರಂದು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದೀಗ ಸರ್ಕಾರ ಹಣವನ್ನ ಜಮೆ ಮಾಡಿದೆ. 2014 ರ ಜನವರಿ 15 ರಂದು ಪಾತಕಿ ಮುನ್ನಾ ಹಾರಿಸಿದ ಗುಂಡಿನಿಂದ ಮಲ್ಲಿಕಾರ್ಜುನ ಬಂಡೆ ಮೃತಪಟ್ಟಿದ್ದರು. ಬಂಡೆ ಮೃತಪಟ್ಟಾಗ ಅವರ ನಿವೃತ್ತಿವರೆಗಿನ ವೇತನ ನೀಡೋದಾಗಿ ಅಂದಿನ ಸರ್ಕಾರ ಹೇಳಿತ್ತು. ಜೊತೆಗೆ 2019 ರವರಗೆ ವೇತನ ಕೂಡ ನೀಡಿದ್ದ ಸರ್ಕಾರ. 2019 ರ ಅಕ್ಟೋಬರ್ನಿಂದ ವೇತನವನ್ನ ಸರ್ಕಾರ ತಡೆಹಿಡಿದಿತ್ತು. ಈ ಕುರಿತು ಕೂಡಲೇ ಬಾಕಿ ಇರುವ ವೇತನವನ್ನ ಬಿಡುಗಡೆ ಮಾಡಬೇಕು ಎಂದು ಹುತಾತ್ಮ ಬಂಡೆ ಮಕ್ಕಳು ಮತ್ತು ಕುಟುಂಬಸ್ಥರು ಆಗ್ರಹಿಸಿದ್ದರು.
2019 ರಿಂದ ಬಂಡೆಯವರ ವೇತನವನ್ನ ಸರ್ಕಾರ ತಡೆಹಿಡಿದಿತ್ತು
ಮಲ್ಲಿಕಾರ್ಜುನ ಬಂಡೆ ನಿಧನರಾದ ಕೆಲವೇ ವರ್ಷಗಳಲ್ಲಿ ಅವರ ಪತ್ನಿ ಮಲ್ಲಮ್ಮ ಬಂಡೆ ಕೂಡ 2016 ರಲ್ಲಿ ಮೃತಪಟ್ಟಿದ್ದು, ಬಳಿಕ ಮಲ್ಲಿಕಾರ್ಜುನ ಬಂಡೆ ಅವರ ಇಬ್ಬರು ಅಪ್ರಾಪ್ತ ಮಕ್ಕಳನ್ನು ಅವರ ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ. ಇನ್ನು ಬಂಡೆ ಹುತಾತ್ಮರಾದ ನಂತರ ಸರ್ಕಾರ ತಾನು ಹೇಳಿದಂತೆ ಪ್ರತಿ ತಿಂಗಳು ಅವರ ಮೂಲ ವೇತನವಾಗಿದ್ದ 32,226 ರೂಪಾಯಿ ಹಣವನ್ನು ಅವರ ಕುಟುಂಬದವರಿಗೆ ನೀಡುತ್ತಿತ್ತು. ಹೀಗಾಗಿ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕುಟುಂಬದವರು. ಮಕ್ಕಳ ಹೆಸರಲ್ಲಿ ಸುಕನ್ಯಾ ಸಮೃದ್ದಿ ಯೋಜನೆ, ಜೀವ ವಿಮೆ ಪಾಲಿಸಿಗಳನ್ನು ಮಾಡಿಸಿದ್ದರು. ಸರ್ಕಾರ ನೀಡಿದ ಹಣದಲ್ಲಿ ಪಾಲಿಸಿಗಳ ಕಂತನ್ನು ತುಂಬುತ್ತಿದ್ದರು. 2019 ರ ಅಕ್ಟೋಬರ್ ತಿಂಗಳವರಗೆ ಪ್ರತಿ ತಿಂಗಳು ಚೆಕ್ ಮೂಲಕ ಹಣವನ್ನು ನೀಡಲಾಗುತ್ತಿತ್ತು. ಆದರೆ 2019 ರ ನವಂಬರ್ನಿಂದ ವೇತನವನ್ನ ತಡೆಹಿಡಿದಿದ್ದರು.
ಇದನ್ನೂ ಓದಿ:ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ವೇತನಕ್ಕೆ ಸರ್ಕಾರ ತಡೆ, ಸಂಕಷ್ಟದಲ್ಲಿ ಮಕ್ಕಳು
ವೇತನ ಬಿಡುಗಡೆಗೆ ಅಡ್ಡಿಯಾಗಿದ್ದ ತಂತ್ರಾಶ
2019 ರ ವರಗೆ ಮ್ಯಾನುವಲ್ ಮೂಲಕ ವೇತನ ನೀಡಲಾಗುತ್ತಿತ್ತು. ಆದ್ರೆ ಸರ್ಕಾರ 2019 ರಲ್ಲಿ ರಾಜ್ಯ ಸರ್ಕಾರ ಖಜಾನೆ 2 ತಂತ್ರಾಶವನ್ನು ಜಾರಿಗೆ ತಂದ ನಂತರ ಈ ಸಮಸ್ಯೆ ಉದ್ಭವವಾಗಿತ್ತು. ಎಚ್.ಆರ್.ಎಂ.ಎಸ್ ನ್ನು ತಂತ್ರಾಶ 2 ರಲ್ಲಿ ದಾಖಲಿಸಿದ ನಂತರವೇ ಸರ್ಕಾರಿ ನೌಕರರಿಗೆ ವೇತನ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಹುತಾತ್ಮ ಮಲ್ಲಿಕಾರ್ಜುನ ಬಂಡೆ ಅವರನ್ನ ತಂತ್ರಾಶ 2 ರಲ್ಲಿ ದಾಖಲಿಸೋದು ಹೇಗೆ, ಯಾವ ಹೆಡ್ನಲ್ಲಿ ವೇತನ ಬಿಡುಗಡೆ ಮಾಡಬೇಕು ಅನ್ನೋ ಗೊಂದಲ ಆರಂಭವಾಗಿತ್ತು. ಇದೀಗ ಆ ಗೊಂದಲಕ್ಕೆ ತೆರೆ ಎಳೆದು ವೇತನ ಬಿಡುಗಡೆ ಮಾಡಲಾಗಿದೆ.
ಪಾತಕಿ ಗುಂಡೇಟಿಗೆ ಬಲಿಯಾಗಿದ್ದ ಬಂಡೆ
2014 ರ ಜನವರಿ 8 ರಂದು ಕಲಬುರಗಿ ನಗರದ ರೋಜಾ ಪ್ರದೇಶದಲ್ಲಿದ್ದ ಪಾತಕಿ ಮುನ್ನಾನನ್ನು ಹಿಡಿಯಲು ಹೋದಾಗ, ಮುನ್ನಾ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ತಲೆಗೆ ಗುಂಡು ಹೊಕ್ಕಿತ್ತು. ನಂತರ ಅವರನ್ನು ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಲ್ಲಿಕಾರ್ಜುನ ಬಂಡೆ 2014ರ ಜನವರಿ 15 ರಂದು ಹುತಾತ್ಮರಾಗಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ