
ಕಲಬುರಗಿ, ಜನವರಿ 11: ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಮತ್ತು ಮಹಿಳೆಯ ಮೈಮೇಲಿನ ಆಭರಣವನ್ನೂ ರಾಬರಿ ನಡೆಸಿದ್ದ ಕಳ್ಳನಿಗೆ ಬಲೆ ಬೀಸಿದ್ದ ಪೊಲೀಸರೇ ಆರೋಪಿಯ ಹಿಸ್ಟರಿ ಕಂಡು ದಂಗಾಗಿರುವ ಘಟನೆ ನಡೆದಿದೆ. ಕಳವು ಪ್ರಕರಣ ಸಂಬಂಧ ಆರೋಪಿ ಬೆಂಗಳೂರು ಮೂಲದ ಶಿವಕುಮಾರ್ ಅಲಿಯಾಸ್ ದಡಿಯಾ ಶಿವನಿಗಾಗಿ ಪೊಲೀಸರು ಎಲ್ಲೆಡೆ ಹುಡುಕಿದ್ದಾರೆ. ಆದ್ರೆ ಅದಾಗಲೇ ಆತ ಮತ್ತೊಂದು ಕಳ್ಳತನ ಪ್ರಕರಣ ನಡೆಸಿ ಜೈಲು ಸೇರಿರುವ ವಿಚಾರ ಬಯಲಾಗಿದೆ. ಸದ್ಯ ಬಾಡಿ ವಾರೆಂಟ್ ಮೇಲೆ ಆತನನ್ನ ಕರೆತಂದು ಕಲಬುರಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಮೇ ತಿಂಗಳನಲ್ಲಿ ಹೆಂಡತಿ ಊರಾದ ಕಲಬುರಗಿಗೆ ಬಂದಿದ್ದ ದಡಿಯಾ ಶಿವ ಇಲ್ಲೂ ತನ್ನ ಕೈಚಳಕ ತೋರಿಸಿದ್ದ. ಚಂದ್ರಶೇಖರ ನಾಗಲೀಕರ್ ಎಂಬವರ ಮನೆಯ ಸುಮಾರು 9 ಲಕ್ಷ ಮೌಲ್ಯದ ಚಿನ್ನಾಭರಣವ ದೋಚಿದ್ದ. ಹಾಗೆಯೇ ವೈದ್ಯ ಚಂದ್ರಶೇಖರ್ ಅವರ ತಾಯಿ ಮೈಮೇಲಿದ್ದ ಚಿನ್ನವನ್ನೂ ದರೋಡೆ ಮಾಡಿದ್ದ. ಚಂದ್ರಶೇಖರ್ ಪ್ರತಿನಿತ್ಯ ಕ್ಲಿನಿಕ್ಗೆ ಹೋಗೋದನ್ನು ಗಮನಿಸಿದ್ದ ಈತ ಮನೆಯಲ್ಲಿ ಅವರ ತಾಯಿ ಗುರುಬಾಯಿ ಇರೋದನ್ನು ವಾಚ್ ಮಾಡಿದ್ದ. ಅವರ ಕತ್ತಿನಲ್ಲಿದ್ದ ಚಿನ್ನದ ಸರ ಸೇರಿ ಬಂಗಾರ ದೋಚಿದ್ದ. ಸಣ್ಣ ಸುಳಿವನ್ನ ಕೂಡ ಬಿಡದೇ ಏಸ್ಕೇಪ್ ಆಗಿದ್ದ ಈತನನ್ನ ಹಿಡಿಯೋದೇ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಈ ನಡುವೆ ಆರೋಪಿಯ ಪತ್ತೆಗಿಳಿದ ಪೊಲೀಸರಿಗೇ ಶಾಕಿಂಗ್ ಸನ್ನಿವೇಶ ಎದುರಾಗಿದೆ. ಅವರು ಹುಡುಕುತ್ತಿದ್ದ ಆರೋಪಿ ದಡಿಯಾ ಶಿವ ಮತ್ತೊಂದು ಕೇಸ್ನಲ್ಲಿ ಅದಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರೋದು ಗೊತ್ತಾಗಿದೆ.
ಇದನ್ನೂ ಓದಿ: ತನ್ನ 11 ತಿಂಗಳ ಮಗುವಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!
ಸದ್ಯ ಬಾಡಿ ವಾರೆಂಟ್ ಮೇಲೆ ಆತನನ್ನ ವಶಕ್ಕೆ ಪಡೆದಿರೋ ಕಲಬುರಗಿ ಪೊಲೀಸರು, ದಡಿಯಾ ಶಿವನ ಇತಿಹಾಸ ಕಂಡು ದಂಗಾಗಿದ್ದಾರೆ. ಒಂದೆರಡಲ್ಲ ಈತನ ಮೇಲೆ 40ಕ್ಕೂ ಹೆಚ್ಚು ಕೇಸ್ಗಳಿರೋದು ಗೊತ್ತಾಗಿದೆ. ಈ ಹಿಂದೆ ಹೆಂಡತಿ ತವರಲ್ಲಿ ಕದ್ದ ಬಂಗಾರ ಇಡಲು ಹೋಗಿ ಈತ ಸಿಕ್ಕಿಬಿದ್ದಿದ್ದ ಎನ್ನಲಾಗಿದ್ದು, ಈ ಬಾರಿ ಅದೇ ಊರಲ್ಲಿ ಕದ್ದು ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿ ಮೇಲಿರುವ ಪ್ರಕರಣಗಳ ತನಿಖೆಗೆ ಪೊಲೀಸರು ಮುಂದಾಗಿದ್ದು, ಇತರ ಠಾಣೆಗಳಿಗೂ ಈತನ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಜೊತೆಗೇ ಕಣ್ಣಾಮುಚ್ಚಾಲೆ ಆಡ್ತಿದ್ದ ಆರೋಪಿ ಪತ್ತೆಯಿಂದ ಹಲವು ಪ್ರಕರಣಗಳು ಕೊನೆಗೂ ಬಯಲಾಗಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Sun, 11 January 26