545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ; ಅಕ್ರಮದಲ್ಲಿ ಕಾಂಗ್ರೆಸ್ ಬಿಜೆಪಿ ಭಾಯಿಭಾಯಿ, ರುದ್ರಗೌಡ ಇಂದು ಕೋರ್ಟ್ಗೆ ಹಾಜರು
ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಾಥ್ ನೀಡಿದ್ದ ಆರೋಪದಡಿ ಮಂಜುನಾಥನನ್ನು ಸೆರೆ ಹಿಡಿಯಲಾಗಿದ್ದು ಜ್ಞಾನಜ್ಯೋತಿ ಶಾಲೆ ಸೇರಿದಂತೆ ಹಲವೆಡೆ ಪರೀಕ್ಷಾ ಅಕ್ರಮ ನಡೆದಿದ್ದ ಸ್ಥಳಗಳಿಗೆ ಮಹಜರು ಮಾಡಲು ಸಿಐಡಿ ಪೊಲೀಸರು ಕರೆದೊಯ್ಯಲಿದ್ದಾರೆ.
ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಪಿಎಸ್ಐ ಪರೀಕ್ಷಾ ಅಕ್ರಮದ ಕಿಂಗ್ಪಿನ್ ಆಗಿರುವ ರುದ್ರಗೌಡ ಪಾಟೀಲ್ನನ್ನು ರಾತ್ರಿ 3 ಗಂಟೆಗೆ ಪೊಲೀಸರು ಕರೆತಂದಿದ್ದಾರೆ. ಪುಣೆಯಿಂದ ಕಲಬುರಗಿ ಸಿಐಡಿ ಕಚೇರಿಗೆ ಕರೆತರಲಾಗಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ರುದ್ರಗೌಡ, ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಪರೀಕ್ಷೆ ಬರೆಸುತ್ತಿದ್ದ. ಸದ್ಯ ರುದ್ರಗೌಡ ಪಾಟೀಲ್ ಜತೆಗಿದ್ದ ಅಫಜಲಪುರ ತಾಲೂಕಿನ ಬಿದನೂರು ನಿವಾಸಿ ಮಂಜುನಾಥನನ್ನೂ ಬಂಧಿಸಲಾಗಿದೆ.
ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಾಥ್ ನೀಡಿದ್ದ ಆರೋಪದಡಿ ಮಂಜುನಾಥನನ್ನು ಸೆರೆ ಹಿಡಿಯಲಾಗಿದ್ದು ಜ್ಞಾನಜ್ಯೋತಿ ಶಾಲೆ ಸೇರಿದಂತೆ ಹಲವೆಡೆ ಪರೀಕ್ಷಾ ಅಕ್ರಮ ನಡೆದಿದ್ದ ಸ್ಥಳಗಳಿಗೆ ಮಹಜರು ಮಾಡಲು ಸಿಐಡಿ ಪೊಲೀಸರು ಕರೆದೊಯ್ಯಲಿದ್ದಾರೆ. ಇನ್ನು ರುದ್ರಗೌಡನನ್ನು ಇಂದು ಕೋರ್ಟ್ಗೆ ಹಾಜರುಪಡಿಸುವ ಸಿಐಡಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಕೋರಲಿದೆ. ಸದ್ಯ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದವರ ಎದೆಯಲ್ಲಿ ನಡುಕ ಶುರುವಾಗಿದೆ. ಪಿಎಸ್ಐ, ಕಾನ್ಸ್ಟೇಬಲ್, ಎಫ್ಡಿಎ, ಎಸ್ಡಿಎ, ಇಂಜಿನಿಯರ್ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿದ್ದ ರುದ್ರಗೌಡ ಪಾಟೀಲ್, ಎಲ್ಲ ಅಕ್ರಮದ ಕಿಂಗ್ಪಿನ್ ಎಂಬ ಅನುಮಾನ ವ್ಯಕ್ತವಾಗಿದೆ. ನೇಮಕಾತಿ ವಿಭಾಗದಿಂದ ಕೆಳಹಂತದವರೆಗೂ ಪಾಟೀಲ್ಗೆ ಲಿಂಕ್ ಇತ್ತು ಎನ್ನಲಾಗಿದೆ.
ಅಕ್ರಮದಲ್ಲಿ ಕಾಂಗ್ರೆಸ್ ಬಿಜೆಪಿ ಭಾಯಿಭಾಯಿ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ, ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್, ರುದ್ರಗೌಡ ಪಾಟೀಲ್ ಅಕ್ರಮದ ಮುಖ್ಯ ಕಿಂಗ್ ಪಿನ್ಗಳು. ದಿವ್ಯಾ ಹಾಗರಗಿ ಒಡೆತನದ ಜ್ಞಾನಜೋತಿ ಇಂಗ್ಲಿಷ್ ಶಾಲೆಯಲ್ಲಿ ಅಕ್ರಮ ನಡೆಸಲು ಡೀಲ್ ಪಿಕ್ಸ್ ಆಗಿತ್ತು. ಈ ಶಾಲೆ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಒಡೆತನದ ಶಾಲೆ. ದಿವ್ಯಾ ಹಾಗರಗಿ ಜೊತೆ ಡೀಲ್ ಪಿಕ್ಸ್ ಮಾಡಿಕೊಂಡಿದ್ದ ರುದ್ರಗೌಡ ಪಾಟೀಲ್, ಪರೀಕ್ಷಾ ಅಕ್ರಮಕ್ಕೆ ಸಾಥ್ ನೀಡುವಂತೆ ಡೀಲ್ ಮಾಡಿಕೊಂಡಿದ್ದ. ಡೀಲ್ ಪಿಕ್ಸ್ ಆದ ಮೇಲೆಯೇ ತಮಗೆ ಬೇಕಾದ ಅಭ್ಯರ್ಥಿಗಳ ಹೆಸರು ಅದೇ ಪರೀಕ್ಷಾ ಕೇಂದ್ರಕ್ಕೆ ಬರುವಂತೆ ನೋಡಿಕೊಂಡಿದ್ದ. ಈ ಅಕ್ರಮದಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿದೆ. ರುದ್ರಗೌಡ ಪಾಟೀಲ್ ನಿಂದ ದಿವ್ಯಾ ಹಾಗರಗಿಗೆ ಲಕ್ಷಾಂತರ ರೂಪಾಯಿ ಸಂದಾಯವಾಗಿದೆ.
ಡೀಲ್ ಪಿಕ್ಸ್ ಹಿನ್ನೆಲೆ ಪರೀಕ್ಷಾ ದಿನದ ಒಂದು ದಿನದ ಮೊದಲೇ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಶಾಲೆಯ ರಹಸ್ಯ ಸ್ಥಳದಲ್ಲಿ ಇಟ್ಟಿದ್ದರು. ಪರೀಕ್ಷೆ ದಿನ ಹೊರಗಡೆ ತಪಾಸಣೆ ವೇಳೆ ಯಾವುದೇ ಡಿವೈಸ್ ಪತ್ತೆಯಾಗಿರಲಿಲ್ಲ. ಆದ್ರೆ ಪರೀಕ್ಷೆಗೆ ಮೊದಲೇ ಡಿವೈಸ್ ಗಳನ್ನು ಡೀಲ್ ಮಾಡಿಕೊಂಡಿದ್ದ ಅಭ್ಯರ್ಥಿಗಳಿಗೆ ಶಾಲೆ ಸಿಬ್ಬಂದಿ ನೀಡಿದ್ದರು. ಶಾಲೆಯ ಶೌಚಾಲಯದಲ್ಲಿ ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಬಚ್ಚಿಟ್ಟಿರೋ ಅನುಮಾನ ಕೇಳಿ ಬಂದಿದೆ. ಶೌಚಾಲಯಕ್ಕೆ ಹೋದವರಂತೆ ನಾಟಕವಾಡಿ ಕಿವಿಯೊಳಗೆ ತೀರಾ ಚಿಕ್ಕದಾಗಿರೋ ಡಿವೈಸ್ ಇಟ್ಟುಕೊಂಡು ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಿದ್ದರು.
13 ದಿನಗಳಿಂದ ತಲೆಮರೆಸಿಕೊಂಡಿರುವ ದಿವ್ಯಾ & ಗ್ಯಾಂಗ್ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯೇ PSI ಅಕ್ರಮದ ಕೇಂದ್ರಸ್ಥಾನವಾಗಿದ್ದು ದಿವ್ಯಾ ಹಾಗರಗಿ & ಗ್ಯಾಂಗ್ ಇನ್ನೂ ಕೂಡ ಪತ್ತೆಯಾಗಿಲ್ಲ. 13 ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಬಿಜೆಪಿ ನಾಯಕಿ ದಿವ್ಯಾ ಸಮ್ಮತಿ ಮೇರೆಗೆ ಶಾಲೆಯಲ್ಲಿ ಅಕ್ರಮ ನಡೆದಿತ್ತು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ದಿವ್ಯಾಗಾಗಿ ಹುಡುಕಾಟ ನಡೆದಿದೆ. ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ದಿವ್ಯಾ ಹಾಗರಗಿ, ಹೆಡ್ ಮಾಸ್ಟರ್ ಕಾಶಿನಾಥ್ಗಾಗಿ ತೀವ್ರ ಶೋಧ ನಡೆಯುತ್ತಿದೆ. ಇಬ್ಬರು ಪತ್ತೆಯಾದರೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ದಿವ್ಯಾ & ಗ್ಯಾಂಗ್ಗೆ ಬಿಜೆಪಿ ನಾಯಕರಿಂದ ರಕ್ಷಣೆ ಬಗ್ಗೆ ಶಂಕೆ ವ್ಯಕ್ತವಾಗಿದೆ. ದಿವ್ಯಾ ಹಾಗರಗಿ ಬಂಧಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದರು. ಕಲಬುರಗಿಯಲ್ಲಿ 2 ದಿನದ ಹಿಂದೆಯೇ ಹೇಳಿಕೆ ನೀಡಿದ್ದರು. ಸದ್ಯ ಬಿಜೆಪಿ ನಾಯಕಿ ದಿವ್ಯಾ & ಗ್ಯಾಂಗ್ ಅಜ್ಞಾತ ಸ್ಥಳದಲ್ಲಿದ್ದಾರೆ.
ರಾಜ್ಯದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಅಕ್ರಮದ ಕೇಂದ್ರ ಸ್ಥಾನವಾಯ್ತಾ ಕಲಬುರಗಿ? 2021ರ ಅಕ್ಟೋಬರ್ ನಲ್ಲಿ ನಡೆದ ಕಾನ್ಸ್ಟೇಬಲ್ ಹುದ್ದೆಯಲ್ಲಿ ಕೂಡಾ ಡೀಲ್ ನಡೆದಿತ್ತು. ಕಲಬುರಗಿ ಪೊಲೀಸರು ಪರೀಕ್ಷೆಗೂ ಮೊದಲೇ ಹನ್ನೊಂದು ಜನರನ್ನು ಬಂಧಿಸಿದ್ದರು. ಬಂಧಿತರ ಪೈಕಿ ಮೂವರು ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳಿದ್ದರು. ತಲಾ ಓರ್ವ ಅಭ್ಯರ್ಥಿಗೆ ಐದು ಲಕ್ಷ ಡೀಲ್ ಮಾಡಿದ್ದ ಕಿಂಗ್ ಪಿನ್ ಗಳು, ಎಲೆಕ್ಟ್ರಾನಿಕ್ ಡಿವೈಸ್ ನೀಡಿ ಪರೀಕ್ಷೆಗೆ ಸಿದ್ದತೆ ನಡೆಸಿದ್ದರು. ಎಲೆಕ್ಟ್ರಾನಿಕ್ ಡಿವೈಸ್ಗಾಗಿಯೇ ವಿಶೇಷ ಬನಿಯನ್ ರೆಡಿ ಮಾಡಿಸಿದ್ದರು. ಕಲಬುರಗಿ ನಗರದ ಲಾಡ್ಜ್ ನಲ್ಲಿದ್ದಾಗಲೇ ಐನಾತಿಗಳು ಸಿಕ್ಕಿಬಿದ್ದಿದ್ದರು. ಈ ಅಕ್ರಮದಲ್ಲಿ ಕೂಡಾ ರುದ್ರಗೌಡ ಪಾಟೀಲ್ ಹೆಸರು ಕೇಳಿ ಬಂದಿತ್ತು. ಆಗ ರುದ್ರಗೌಡ ಪಾಟೀಲ್ ನನ್ನು ವಿಚಾರಣೆ ನಡೆಸಿದ್ದ ಪೊಲೀಸರು ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು.
ರುದ್ರಗೌಡ ಪಾಟೀಲ್, ಮಹಾಂತೇಶ್ ಪಾಟೀಲ್ ಸಹೋದರರು ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ವಿಚಾರ ಆರೋಪದ ಮೇಲೆ ಬಂಧಿತರಾಗಿರೋ ರುದ್ರಗೌಡ ಪಾಟೀಲ್, ಮಹಾಂತೇಶ್ ಪಾಟೀಲ್ ಸಹೋದರರು. ಇವರು ಅಫಜಲಪುರ ತಾಲೂಕಿನಲ್ಲಿ ಅನೇಕರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದಾರೆ. ಜಮೀನು ಪತ್ರಗಳನ್ನು ಅಡವಿಟ್ಟುಕೊಂಡು ಬಡ್ಡಿಗಾಗಿ ಹಣ ನೀಡುತ್ತಿದ್ದರು. ತಾಲೂಕಿನ ಅನೇಕ ಹಳ್ಳಿಯ ಜನರಿಗೆ ಸಾಲ ನೀಡಿದ್ದಾರೆ.
ಹಾಲ್ ಟಿಕೆಟ್ಗಳು ಪತ್ತೆ: ಪ್ರಮುಖ ಆರೋಪಿಗಳಾದ ಮಹಾಂತೇಶ್ ಪಾಟೀಲ್, ರುದ್ರಗೌಡ ಪಾಟೀಲ್ ಮನೆಯಲ್ಲಿ ಕೆಲ ಹಾಲ್ ಟಿಕೆಟ್ ಗಳು ಪತ್ತೆಯಾಗಿವೆ. ಎರಡು ದಿನದ ಹಿಂದೆ ಸಿಐಡಿ ಅಧಿಕಾರಿಗಳು ಸಹೋದರರ ಮನೆಯಲ್ಲಿ ಶೋಧ ನಡೆಸಿದ್ದರು. ಲೋಕೋಪಯೋಗಿ ಇಲಾಖೆ, ಸೇರಿದಂತೆ ಕೆಲ ಇಲಾಖೆಯ ಪರೀಕ್ಷೆಯ ಹಾಲ್ ಟಿಕೆಟ್ಗಳು ಸಿಕ್ಕಿವೆ. ಹತ್ತಕ್ಕೂ ಹೆಚ್ಚು ಅಭ್ಯರ್ಥಿಗಳ ಹಾಲ್ ಟಿಕೆಟ್ ಪತ್ತೆಯಾಗಿವೆ. ಜಪ್ತಿ ಮಾಡಿಕೊಂಡಿರುವ ಹಾಲ್ ಟಿಕೆಟ್ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ.
ರಹಸ್ಯ ಸ್ಥಳದಲ್ಲಿ ಕೂತು ಉತ್ತರ ಹೇಳುತ್ತಿದ್ದ ಗ್ಯಾಂಗ್ ರಹಸ್ಯ ಸ್ಥಳದಲ್ಲಿ ಕೂತು ಉತ್ತರ ಹೇಳುತ್ತಿದ್ದ ಗ್ಯಾಂಗ್ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗಿದೆ. ವಿಡಿಯೋದಲ್ಲಿರೋ ವ್ಯಕ್ತಿ ಯಾರು, ಯಾವ ಪರೀಕ್ಷೆಯ ಉತ್ತರ ಹೇಳುತ್ತಿದ್ದ ಅನ್ನೋದು ಗೊತ್ತಾಗಿಲ್ಲಾ. ಬೆಂಗಳೂರಿನಲ್ಲಿ ಕೂತು ಉತ್ತರ ಹೇಳುತ್ತಿದ್ದ ಎಂಬುವುದು ಪತ್ತೆಯಾಗಿದೆ. ಪರೀಕ್ಷಾ ಕೇಂದ್ರದಲ್ಲಿದ್ದ ಅಭ್ಯರ್ಥಿಗೆ ಉತ್ತರ ಹೇಳುತ್ತಿದ್ದ ವಿಡಿಯೋ ವೈರಲ್ ಆಗಿದ್ದು ವಿಡಿಯೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮರಿಯುಪೋಲ್ ಉಕ್ಕಿನ ಸ್ಥಾವರದಲ್ಲಿ ಆಶ್ರಯ ಪಡೆದಿರುವ ನೂರಾರು ಜನರಿಂದ ಹೊರಬರಲು ಹತಾಶ ಪ್ರಯತ್ನ
545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಸಿಐಡಿ ವಶ
Published On - 7:42 am, Sun, 24 April 22