ಮರಿಯುಪೋಲ್ ಉಕ್ಕಿನ ಸ್ಥಾವರದಲ್ಲಿ ಆಶ್ರಯ ಪಡೆದಿರುವ ನೂರಾರು ಜನರಿಂದ ಹೊರಬರಲು ಹತಾಶ ಪ್ರಯತ್ನ
ರಷ್ಯಾ ಸೇನೆಯು ಅಜೋವ್ಸ್ಟಾಲ್ ಸಂಕೀರ್ಣದ ಮೇಲೆ ದಾಳಿ ಮಾಡಿ ಅದನ್ನು ನಾಶಪಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಉಕ್ರೇನ್ ಆತಂಕ ವ್ಯಕ್ತಪಡಿಸಿದೆ.
ಉಕ್ರೆನ್ ದಕ್ಷಿಣಬಾಗದ ಬಂದರು ನಗರ ಮರಿಯುಪೋಲ್ನ (Mariupol) ಬೃಹತ್ ಉಕ್ಕಿನ ಸ್ಥಾವರವೊಂದರಲ್ಲಿ (steel plant) ಆಶ್ರಯ ಪಡೆದಿದರುವ ಮಹಿಳೆಯರು ಮತ್ತು ಮಕ್ಕಳು ಅಲ್ಲಿಂದ ಹೊರಬೀಳಲು ಹಪಹಪಿಸುತ್ತಿದ್ದಾರೆ. ಸದರಿ ಸ್ಥಾವರದಿಂದ ಶನಿವಾರ ಹೊರಬಂದಿರುವ ವಿಡಿಯೋನಲ್ಲಿ ಅವರು ದೀನ ಮತ್ತು ಹತಾಷೆಯ ಭಾವದಲ್ಲಿ ಹೊರಗೆ ಬರಲು ತವಕಿಸುತ್ತಿರುವ ಬಗ್ಗೆ ಹೇಳಿದ್ದಾರೆ. ಉಕ್ರೇನ್ ಪರ ರಾಷ್ಟ್ರವಾದಿಗಳಿಂದ 2014 ರಲ್ಲಿ ಸ್ಥಾಪಿಸಲ್ಪಟ್ಟ ಬಳಿಕ ಉಕ್ರೇನ್ನ ನ್ಯಾಶನಲ್ ಗಾರ್ಡ್ ನಲ್ಲಿ (national guard) ಸೇರ್ಪಡೆಗೊಂಡು ಮರಿಯುಪೋಲ್ ರಕ್ಷಣೆ ಹಾಗೂ ಭದ್ರತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಅಜೋವ್ ಬೆಟಾಲಿಯನ್ ಈ ವಿಡಿಯೋವನ್ನು ಬಿಡುಗಡೆ ಮಾಡಿದೆ.
ವಿಡಿಯೋ ಎಲ್ಲಿ ಮತ್ತು ಯಾವಾಗ ಚಿತ್ರೀಕರಿಸಲಾಗಿದೆ ಅನ್ನೋದನ್ನು ಕಂಡುಕೊಳ್ಳುವುದು ರಾಯಿಟರ್ ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ. ಅದರೆ, ವಿಡಿಯೋನಲ್ಲಿ ಮಾತಾಡಿರುವರೊಬ್ಬರು ಏಪ್ರಿಲ್ 21 ಅಂತ ಹೇಳಿರುವುದು ರೆಕಾರ್ಡ್ ಆಗಿದೆ.
ಅಜೋವ್ಸ್ಟಾಲ್ ಸಂಕೀರ್ಣದಲ್ಲಿ ಆಶ್ರಯ ಪಡೆದಿರುವ ನಾಗರಿಕರಿಗೆ ಉಕ್ರೇನ್ ಸೈನಿಕರು ಆಹಾರದ ಪೊಟ್ಟಣಗಳನ್ನು ತಂದುಕೊಡುತ್ತಿರುವುದು ವಿಡಿಯೋನಲ್ಲಿ ಗೋಚರವಾಗುತ್ತದೆ. ತನ್ನ ಪುಟ್ಟಕಂದನನ್ನು ಬಗಲಲ್ಲಿ ಎತ್ತಿಕೊಂಡಿರುವ ಮಹಿಳೆಯೊಬ್ಬರು, ಇಲ್ಲಿ ಆಹಾರ ಮುಗಿಯುವ ಹಂತದಲ್ಲಿದೆ, ‘ಆದಷ್ಟು ಬೇಗ ನಾವು ಇಲ್ಲಿಂದ ಹೊರಬಿದ್ದು ನಮ್ಮ ಮನಗಳಿಗೆ ಹೋಗಬಯಸುತ್ತೇವೆ,’ ಎಂದು ಗದ್ಗದಿತರಾಗಿ ಹೇಳಿದ್ದಾರೆ.
ಶನಿವಾರದಂದು ಹೇಳಿಕೆಯೊಂದನ್ನು ನೀಡಿರುವ ಅಧ್ಯಕ್ಷೀಯ ಸಲಹೆಗಾರ ಒಲೆಕ್ಸಿ ಅರಿಸ್ಟೋವಿಚ್ ಅವರು, ರಷ್ಯನ್ ಸೇನೆಯ ವಾಯುದಳವು ಅಜೋವ್ಸ್ಟಾಲ್ ಸಂಕೀರ್ಣದ ಮೇಲೆ ದಾಳಿ ಮಾಡಿ ಅದನ್ನು ನಾಶಪಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ವಾರದಲ್ಲಿ ಸ್ಥಾವರಕ್ಕೆ ಮುತ್ತಿಗೆ ಹಾಕುಲಾಗುವುದು ಎಂದಿರುವ ಮಾಸ್ಕೋ ಅದನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವೇನೂ ಮಾಡುವುದಿಲ್ಲ ಅಂತ ಹೇಳಿದೆ. ಉಕ್ರೇನ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಸ್ಥಾವರದಲ್ಲಿ 1,000 ಕ್ಕಿಂತ ಹೆಚ್ಚು ನಾಗರಿಕರು ಆಶ್ರಯ ಪಡೆದಿದ್ದಾರೆ ಮತ್ತು ಸೇನೆ ಅದರ ರಕ್ಷಣೆಗೆ ನಿಂತಿದೆ.
‘ಎರಡು ತಿಂಗಳಿಂದ ಇಲ್ಲಿ ಕೊಳೆಯುತ್ತಿದ್ದೇವೆ, ಇಲ್ಲಿಂದ ಯಾವಾಗ ಹೊರಬಂದೇವು ಅಂತ ಗೋಳಾಡುತ್ತಿದ್ದೇವೆ,’ ಎಂದು ಒಬ್ಬ ಬಾಲಕ ಹತಾಷನಾಗಿ ಹೇಳಿರುವುದು ವಿಡಿಯೋನಲ್ಲಿ ರೆಕಾರ್ಡ್ ಆಗಿದೆ.
‘ಹೊರಗಿನಂತೆ ಇಲ್ಲಿ ಬೆಳಕೇ ಇಲ್ಲ, ನನಗೆ ಸೂರ್ಯನನ್ನು ನೋಡಬೇಕಾಗಿದೆ. ನಮ್ಮು ಮನೆಗಳನ್ನು ಮರುನಿರ್ಮಿಸಿದ ಬಳಿಕ ನಾವು ಶಾಂತಿಯಿಂದ ಜೀವಿಸುತ್ತೇವೆ. ಉಕ್ರೇನ್ ನಮ್ಮ ತಾಯ್ನಾಡು ಆಗಿರುವುದರಿಂದ ಈ ಯುದ್ಧದಲ್ಲಿ ಅದೇ ಗೆಲ್ಲಬೇಕು,’ ಎಂದು ಬಾಲಕ ಹೇಳಿದ್ದಾನೆ.
ಅಜೋವ್ಸ್ಟಾಲ್ ವಿನ್ಯಾಸದ ಯೂನಿಫಾರ್ಮ್ಗಳನ್ನು ಮಹಿಳೆಯರು ಧರಿಸಿರುವುದು ವಿಡಿಯೋನಲ್ಲಿ ಕಾಣುತ್ತದೆ. ರಾಯಿಟರ್ ಅದನ್ನು ಫೈಲ್ ಇಮೇಜ್ ಗಳೊಂದಿಗೆ ತಾಳೆ ಮಾಡಿ ಖಚಿತಪಡಿಸಿದೆ.
ರಷ್ಯನ್ ಸೇನೆ ಆಕ್ರಮಣ ಆರಂಭಿಸಿದ ಕೆಲ ದಿನಗಳ ಬಳಿಕ ಫೆಬ್ರುವರಿ 27ರಿಂದ ಉಕ್ಕಿನ ಸ್ಥಾವರನಲ್ಲಿ ತಾನು ತಂಗಿರುವುದಾಗಿ ಒಬ್ಬ ಮಹಿಳೆ ಹೇಳಿದ್ದಾರೆ.
‘ಇಲ್ಲಿ ಕೆಲಸ ಮಾಡುವವರು ನಮ್ಮ ಸಂಬಂಧಿಕರಾಗಿದ್ದಾರೆ. ಆದರೆ ನಮ್ಮ ಮನೆಗಳ ಮೇಲೆ ದಾಳಿ ನಡೆದು, ಅವುಗಳಲ್ಲಿ ವಾಸಮಾಡುವುದು ಸಾಧ್ಯವಿಲ್ಲ ಅಂತ ಗೊತ್ತಾದ ಮೇಲೆ ನಮಗೆ ಇದು ಅತ್ಯಂತ ಸುರಕ್ಷಿತ ಅಂತ ಅನಿಸಿದ್ದರಿಂದ ಇಲ್ಲಿಗೆ ಬಂದಿದ್ದೇವೆ,’ ಎಂದು ಆ ಮಹಿಳೆ ಹೇಳಿದ್ದಾರೆ.
ಯುದ್ಧ ಆರಂಭಿಸಿದ ಮೊದಲ ಕೆಲ ದಿನಗಳಲ್ಲಿ ರಷ್ಯನ್ ಪಡೆಗಳು 4 ಲಕ್ಷಕ್ಕಿಂತ ಹೆಚ್ಚು ಜನ ವಾಸವಾಗಿದ್ದ ಮರಿಯುಪೋಲ್ ಮೇಲೆ ಬಾಂಬ್ ದಾಳಿ ನಡೆಸಿ ಅದನ್ನುನಾಶಗೊಳಿಸಿದ ಬಳಿಕ ಮುತ್ತಿಗೆ ಹಾಕಿದ್ದರು. ಶನಿವಾರದಂದು ಸ್ಥಾವರದಲ್ಲಿ ಆಶ್ರಯ ಪಡೆದಿರುವ ನಾಗರಿಕರನ್ನು ಹೊರಗೆ ತರುವ ಪ್ರಯತ್ನ ವಿಫಲವಾಯಿತು ಎಂದು ಮರಿಯುಪೋಲ್ ಮೇಯರ್ ನ ಸಹಾಯಕರೊಬ್ಬರು ಹೇಳಿದರು.