ವಿವಾಹಿತ ಕಂಪ್ಯೂಟರ್ ಆಪರೇಟರ್ ಮೇಲೆ ರೇಪ್; ಆನ್ಲೈನ್ ಮೂಲಕ ದೂರು, ಸಿನಿಮಾ ಶೈಲಿಯಲ್ಲಿ ಆರೋಪಿ ಪತ್ತೆ
ಮಹಿಳೆ ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ ಆತಂಕಕ್ಕೊಳಗಾಗಿದ್ದಳು. ಹೀಗಾಗಿ ಎರಡು ತಿಂಗಳ ನಂತರ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆನ್ಲೈನ್ ಮೂಲಕ ದೂರು ನೀಡಿದ್ದಳು. ತನ್ನ ಬಗ್ಗೆ ಯಾರಿಗೂ ಗೊತ್ತಾಗಬಾರದು. ಆದರೂ ಆರೋಪಿಯನ್ನು ಪತ್ತೆ ಮಾಡಿ ಶಿಕ್ಷೆ ಕೊಡಿಸಬೇಕು ಅಂತ ಮನವಿ ಮಾಡಿದ್ದಳು.
ಕಲಬುರಗಿ: ಡ್ರಾಪ್ ಕೊಡೋ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಯನ್ನು ಮೂರು ತಿಂಗಳ ನಂತರ ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿರೋ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಆ ಮೂಲಕ ಆರೋಪಿ ಎಷ್ಟೇ ಚಾಲಾಕಿ ಇದ್ದರು ಕೂಡಾ ಒಂದಿಲ್ಲೊಂದು ದಿನ ಪೊಲೀಸರ ಕೈಯಲ್ಲಿ ಸಿಕ್ಕಿ ಬೀಳುತ್ತಾನೆ ಅನ್ನೋದನ್ನು ಪೊಲೀಸರು ಸಾಬೀತು ಮಾಡಿದ್ದಾರೆ.
ಘಟನೆಯ ವಿವರ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕುರಕುಂಟಾ ಗ್ರಾಮದ ವಿವಾಹಿತ ಮಹಿಳೆ ಮೇಲೆ ಕಳೆದ ಮೇ ತಿಂಗಳಲ್ಲಿ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ್ದ. ಸೇಡಂ ಪಟ್ಟಣದಲ್ಲಿ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿದ್ದ ಮಹಿಳೆ, ವ್ಯಕ್ತಿಯೋರ್ವನಿಗೆ ಡ್ರಾಪ್ ಕೇಳಿದ್ದಳು. ಮೇ ತಿಂಗಳಲ್ಲಿ ಲಾಕ್ ಡೌನ್ ಇದ್ದಿದ್ದರಿಂದ ವಾಹನಗಳ ಓಡಾಟ ಇರಲಿಲ್ಲಾ. ಹೀಗಾಗಿ ತನ್ನೂರಿಗೆ ಹೋಗಲು ವ್ಯಕ್ತಿಯೋರ್ವನಿಗೆ ಡ್ರಾಪ್ ಕೇಳಿದ್ದಳು.
ಇದನ್ನೇ ದುರುಪಯೋಗ ಪಡಿಸಿಕೊಂಡಿದ್ದ ವ್ಯಕ್ತಿ, ಮಹಿಳೆಯನ್ನು ತನ್ನ ಬೈಕ್ ಮೇಲೆ ಕೂರಿಸಿಕೊಂಡು ಹೊರಟಿದ್ದ. ಆದರೆ ಗ್ರಾಮಕ್ಕೆ ಮಹಿಳೆಯನ್ನು ತಲುಪಿಸುವ ಮೊದಲು ನಿರ್ಜನ ಪ್ರದೇಶದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ಮಹಿಳೆ ಮರ್ಯಾದೆಗೆ ಅಂಜಿ ಘಟನೆ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿರಲಿಲ್ಲ. ಮತ್ತೊಂದೆಡೆ ಅತ್ಯಾಚಾರ ಮಾಡಿದ ವ್ಯಕ್ತಿಯ ಬಗ್ಗೆ ಕೂಡಾ ಮಹಿಳೆಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಒಂದು ತಿಂಗಳ ಕಾಲ ಮಹಿಳೆ ಸುಮ್ಮನಾಗಿದ್ದಳು.
ಕೊನೆಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ ಮಹಿಳೆ
ತನ್ನ ಮೇಲೆ ಅತ್ಯಾಚಾರ ನಡೆದರು ಕೂಡಾ ಮಹಿಳೆ ಎರಡು ತಿಂಗಳವರಗೆ ಮನೆಯವರಿಗಾಗಲಿ, ಪೊಲೀಸರಿಗೆ ಆಗಲಿ ಮಾಹಿತಿ ನೀಡಿರಲಿಲ್ಲಾ. ಆದರೆ ಮಹಿಳೆ ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ ಆತಂಕಕ್ಕೊಳಗಾಗಿದ್ದಳು. ಹೀಗಾಗಿ ಎರಡು ತಿಂಗಳ ನಂತರ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆನ್ಲೈನ್ ಮೂಲಕ ದೂರು ನೀಡಿದ್ದಳು. ತನ್ನ ಬಗ್ಗೆ ಯಾರಿಗೂ ಗೊತ್ತಾಗಬಾರದು. ಆದರೂ ಆರೋಪಿಯನ್ನು ಪತ್ತೆ ಮಾಡಿ ಶಿಕ್ಷೆ ಕೊಡಿಸಬೇಕು ಅಂತ ಮನವಿ ಮಾಡಿದ್ದಳು.
ದೂರು ದಾಖಲಾದ ನಂತರ ರಾಷ್ಟ್ರೀಯ ಮಹಿಳಾ ಆಯೋಗದವರು ಕುರಕುಂಟಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಪೊಲೀಸರ ದೂರು ನೀಡಿದ ಮಹಿಳೆಯನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಆದರೂ ಮಹಿಳೆ ದೂರು ದಾಖಲಿಸಲು ಹಿಂದೇಟು ಹಾಕಿದ್ದಳು. ಆಗ ಪೊಲೀಸರು ಕುಟುಂಬದವರನ್ನು ವಿಶ್ವಾಸಕ್ಕೆ ತಗೆದುಕೊಂಡು ದೂರು ದಾಖಲಿಸಲು ಹೇಳಿದ್ದರು. ನಂತರ ಮಹಿಳೆ ದೂರು ದಾಖಲಿಸಿದ್ದಳು.
ಸಿನಿಮಾ ಶೈಲಿಯಲ್ಲಿ ಆರೋಪಿ ಪತ್ತೆ ಮಾಡಿದ ಪೊಲೀಸರು
ಇನ್ನು ಎರಡು ತಿಂಗಳ ನಂತರ ಅಂದರೆ ಜುಲೈ ತಿಂಗಳಲ್ಲಿ ಮಹಿಳೆ ಅತ್ಯಾಚಾರವಾಗಿದ್ದ ಘಟನೆ ಬಗ್ಗೆ ದೂರು ದಾಖಲಿಸಿದ್ದಳು. ದೂರು ದಾಖಲಾದ ನಂತರ ಪೊಲೀಸರು ಆರೋಪಿ ಪತ್ತೆಗಾಗಿ ಹುಡುಕಾಟ ಪ್ರಾರಂಭಿಸಿದ್ದರು. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಅತ್ಯಾಚಾರ ನಡೆಸಿದ ವ್ಯಕ್ತಿ ಅಪರಿಚಿತ ವ್ಯಕ್ತಿಯಾಗಿದ್ದ. ಆದರೆ ಆತನ ಬೈಕ್ ಮೇಲೆ ಕಡಚರಲಾ ಅನ್ನೋ ಬರಹವನ್ನು ನೋಡಿದ್ದಳು. ಈ ವಿಷಯವನ್ನು ಮಹಿಳೆ ಪೊಲೀಸರಿಗೆ ತಿಳಿಸಿದ್ದಳು.
ಇದೊಂದೇ ಮಾಹಿತಿ ಮೇರೆಗೆ ಸೇಡಂ ಠಾಣೆಯ ಸಿಪಿಐ ರಾಜಶೇಖರ ಹಳಗೋದಿ, ತನಿಖೆ ಪ್ರಾರಂಭಿಸಿದ್ದರು. ಕಡಚರಲಾ ಅನ್ನೋದು ಕುಟುಂಬದ ಸರ್ ನೇಮ್ ಆಗಿತ್ತು. ಸುತ್ತಮುತ್ತಲಿನ ಅನೇಕ ಗ್ರಾಮದಲ್ಲಿ ಕಡಚರಲಾ ಅನ್ನೋ ಹೆಸರು ಯಾವ ಕುಟುಂಬದವರದು ಇದೆ ಅನ್ನೋದನ್ನು ಪತ್ತೆ ಮಾಡಿದ್ದರು.
ನಂತರ ಮಹಿಳೆಯ ಮಾಹಿತಿ ಮೇರೆಗೆ ಅತ್ಯಾಚಾರ ನಡೆಸಿದ್ದ ವ್ಯಕ್ತಿಯ ರೇಖಾಚಿತ್ರವನ್ನು ತೆಗೆಸಿದ್ದರು. ಮಹಿಳೆ ಹೇಳಿದ್ದ ವಯಸ್ಸಿನ ಕೆಲ ವ್ಯಕ್ತಿಗಳ ಓಟರ್ ಐಡಿ ಸಂಗ್ರಹಿಸಿ, ಮಹಿಳೆಗೆ ತೋರಿಸಿದ್ದರು. ಪೊಲೀಸರು ಸಂಗ್ರಹಿಸಿದ್ದ ಕೆಲ ವ್ಯಕ್ತಿಗಳಲ್ಲಿ ಮಹಿಳೆ ಮೂರ್ನಾಲ್ಕು ಜನರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು. ಮಹಿಳೆ ಅನುಮಾನ ವ್ಯಕ್ತಪಡಿಸಿದ ವ್ಯಕ್ತಿಗಳ ಪೋಟೋಗಳನ್ನು ಸಂಗ್ರಹಿಸಿ, ಪೊಲೀಸರು ಮತ್ತೆ ಮಹಿಳೆಗೆ ತೋರಿಸಿದ್ದರು. ಅದರಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದ ವ್ಯಕ್ತಿಯನ್ನು ಮಹಿಳೆ ಗುರುತಿಸಿದ್ದಳು.
ಮೂರು ತಿಂಗಳ ನಂತರ ಪತ್ತೆಯಾದ ಆರೋಪಿ
ಮಹಿಳೆ ನೀಡಿದ ಮಾಹಿತಿ ಮೇರೆಗೆ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರಾರಂಭದಲ್ಲಿ ಅತ್ಯಾಚಾರ ನಡೆಸಿ, ಅರಾಮಾಗಿದ್ದ ವ್ಯಕ್ತಿ ತಾನು ಸೇಫ್ ಇದ್ದೇನೆ ಅಂತಲೇ ಅಂದುಕೊಂಡಿದ್ದ. ಆದರೆ ಪೊಲೀಸರು ತಮ್ಮದೇ ಆದ ಧಾಟಿಯಲ್ಲಿ ಆರೋಪಿಯನ್ನು ವಿಚಾರಣೆ ನಡೆಸಿದಾಗ ಆರೋಪಿ ಅತ್ಯಾಚಾರ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ. ಮತ್ತೊಂದಡೆ ಮಹಿಳೆ ಕೂಡಾ ತನ್ನ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಗುರುತಿಸಿದ್ದಾಳೆ.
ಸದ್ಯ ಆರೋಪಿಯನ್ನು ಸೇಡಂ ತಾಲೂಕಿನ ಕುರುಕುಂಟಾ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಮೂರು ತಿಂಗಳ ನಂತರ ಆರೋಪಿ ಪತ್ತೆಯಾಗಿದ್ದಾನೆ. ಆರೋಪಿ ಕುರಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರೋ ಹಳ್ಳಿಯೊಂದರ ನಿವಾಸಿಯಾಗಿದ್ದಾನೆ. ಕೂಲಿ ಕೆಲಸ ಮಾಡುವ ಆರೋಪಿ, ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮಾಡಿರೋದಾಗಿ ಹೇಳಿದ್ದಾನಂತೆ. ಇನ್ನು ಅತ್ಯಾಚಾರ ನಡೆಸಿದ ಆರೋಪಿಯ ವಿವಾಹ ಕೂಡಾ ಏಳು ತಿಂಗಳ ಹಿಂದಷ್ಟೇ ಆಗಿದೆ.
ನಮ್ಮ ಪೊಲೀಸ್ ಸಿಬ್ಬಂದಿ ತಮ್ಮ ಕಾರ್ಯದಕ್ಷತೆಯಿಂದ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಸಫಲರಾಗಿದ್ದಾರೆ. ಅನ್ಯಾಯಕ್ಕೊಳಗಾದವರು ಅಂಜದೆ ಧೈರ್ಯದಿಂದ ಬಂದು ದೂರು ನೀಡಬೇಕು. ಪೊಲೀಸರು ಖಂಡಿತವಾಗಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ ಎಂದು ಕಲಬುರಗಿ ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್ ಹೇಳಿದ್ದಾರೆ.
-ಸಂಜಯ್ ಚಿಕ್ಕಮಠ
ಇದನ್ನೂ ಓದಿ:
ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳನ್ನ ಬಂಧಿಸಿದ ಬಾಣಸವಾಡಿ ಪೊಲೀಸರು (rape accused arrested in kalaburagi after 3 months)
Published On - 8:34 am, Sat, 4 September 21