
ಬೆಂಗಳೂರು/ಕಲಬುರಗಿ, ಸೆಪ್ಟೆಂಬರ್ 19: ಇತ್ತೀಚೆಗೆ ನಗರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಪ್ರತಿಷ್ಠಾನೆ ಮಾಡಲಾಗಿತ್ತು. ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ತೆರವುಗೊಳಿಸಿದ್ದರು. ಸದ್ಯ ಈ ವಿಚಾರ ಸಿದ್ದರಾಮಯ್ಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಕಲಬುರಗಿ ಚಲೋ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಸಿದ್ದರಾಮಯ್ಯ ಪ್ರತಿಮೆ ತೆರವು ವಿಚಾರವಾಗಿ ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಸಂಘಟನೆ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದು, ‘ಸಿದ್ದರಾಮಯ್ಯ ಅವರು ಸಾಮಾಜಿಕ ಕಳಕಳಿಯಿಂದ ಆಡಳಿತ ಮಾಡಿಕೊಂಡು ಬಂದ ಧಿಮಂತ್ ನಾಯಕ. ಅವರ ಮೂರ್ತಿಯನ್ನ ಅಭಿಮಾನಿಗಳು ಪ್ರತಿಷ್ಠಾಪನೆ ಮಾಡಿದ್ದರು. ಅವತ್ತು ವಿಮೋಚನಾ ದಿನಾಚರಣೆಗೆ ಅಲ್ಲಿಗೆ ಸಿಎಂಗೆ ಹೋಗಿದ್ದರು. ಅವರಿಗೆ ಈ ವಿಚಾರ ಗೊತ್ತಿಲ್ಲ ಅಂತಲ್ಲ, ಅವರ ಬಳಿ ಇಂಟೆಲಿಜೆನ್ಸ್ ಇದೆ’ ಎಂದರು.
ಇದನ್ನೂ ಓದಿ: ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಪ್ರತಿಷ್ಠಾಪನೆ; ನಗರ ಪಾಲಿಕೆಯಿಂದ ತೆರವು
‘ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ನಿರ್ಲಕ್ಷ ತೋರಿದ್ದಾರೆ. ಆ ಭಾಗದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿದ್ದಾರೆ. ಅವರು ಆಕ್ರೋಶಗೊಳ್ಳುವ ಮುಂಚೆ ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಕಲಬುರಗಿ ಚಲೋ ಮಾಡುತ್ತೇವೆ. ಕಲಬುರಗಿ ಚಲೋದಲ್ಲಿ ರಾಜ್ಯದ ಎಲ್ಲಾ ಸಿದ್ದರಾಮಯ್ಯ ಅಭಿಮಾನಿಗಳು ಭಾಗಿ ಆಗುತ್ತಾರೆ’ ಎಂದು ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ಪ್ರತಿಮೆ ತೆರವು ವೇಳೆ ಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಅಲ್ಲೇ ಇದ್ದರು. ಹೀಗಿದ್ರೂ ಸಿದ್ದರಾಮಯ್ಯನವರ ಪ್ರತಿಮೆ ತೆರವು ಮಾಡಿದ್ದಾರೆ. ಅಂದರೆ ಅಧಿಕಾರಿಗಳ ಮೇಲೆ ಒತ್ತಡ ಇದೆ ಎಂದು ಗೊತ್ತಾಗುತ್ತೆ’ ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ಪ್ರತಿಭಟನೆ ನಗರದ ಜಗತ್ ವೃತದಿಂದ ಪಾಲಿಕೆ ಕಚೇರಿವರೆಗೆ ಕುರುಬ ಸಮುದಾಯದಿಂದ ಬೃಹತ್ ಪ್ರತಿಭಟನೆ ಮಾಡಿದರು. ಈ ಕೂಡಲೇ ಸಿದ್ದರಾಮಯ್ಯ ಪ್ರತಿಮೆ ಮರು ಸ್ಥಾಪಿಸುವಂತೆ ಆಗ್ರಹಿಸಿದರು. ಬಳಿಕ ಕುರುಬರ ಸಂಘದ ಪ್ರದಾನ ಕಾರ್ಯದರ್ಶಿ ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ‘2023ರಲ್ಲಿ ಹೈಕೋರ್ಟ್ ಸರ್ಕಲ್ಗೆ ಸಿದ್ದರಾಮಯ್ಯ ವೃತ್ತ ಎಂದು ಘೋಷಣೆ ಮಾಡಿದೆ. ಆ ಘೋಷಣೆ ಆಗಿದ್ದ ಬೋರ್ಡ್ ಅನ್ನು ಸಹ ತೆರವು ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಪ್ರತಿಮೆ ಅನಾವರಣ ಮಾಡದೆ ಹೋದರೆ ಉಗ್ರ ಹೋರಾಟ ಮಾಡುತ್ತೇವೆ. ಕಲಬುರಗಿ ಚಲೋ ಮಾಡುತ್ತೇವೆ. ಇಡೀ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ’ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:47 pm, Sat, 19 September 26