ರೈತರ ಜೀವಕ್ಕೆ ಕುತ್ತು ತರ್ತಿರೋ ಕ್ರಿಮಿನಾಶಕ; ಸಿಂಪಡಣೆ ಸಮಯದಲ್ಲಿ ಇರಲಿ ಜಾಗೃತಿ
ರೈತರು ಯಾವುದೇ ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡುವಾಗ, ಸಾಕಷ್ಟು ಜಾಗೃತಿ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸೂಕ್ತ ಕ್ರಮಗಳನ್ನು ಕೈಗೊಂಡೇ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದ್ರು ,ಜೀವಕ್ಕೆ ಅಪಾಯ ಗ್ಯಾರಂಟಿ ಎಂದು ವೈದ್ಯರು ಮತ್ತು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಕಲಬುರಗಿ, ಅ.08: ರೈತರು ತಮ್ಮ ಬೆಳೆಗಳನ್ನು ಅನೇಕ ರೋಗಗಳಿಂದ ಮತ್ತು ಕ್ರಿಮಿ-ಕೀಟಗಳಿಂದ ರಕ್ಷಿಸಿಕೊಳ್ಳಲು ಕ್ರಿಮಿನಾಶಕ(Sterilization)ದ ಮೊರೆಹೋಗಿ ಅನೇಕ ವರ್ಷಗಳೇ ಕಳೆದಿವೆ. ಇತ್ತೀಚೆಗೆ ಕ್ರಿಮಿನಾಶಕ, ಕಳೆನಾಶಕಗಳ ಬಳಕೆ ವಿಪರೀತವಾಗಿ ಹೆಚ್ಚಾಗಿದೆ. ಆದರೆ, ಕ್ರಿಮಿನಾಶಕದ ಬಳಕೆ ಸಮಯದಲ್ಲಿ ರೈತರು ಸರಿಯಾಗಿ ಜಾಗೃತಿ ವಹಿಸದೇ ಇರುವುದರಿಂದ ಅನೇಕ ರೈತರ ಜೀವಕ್ಕೆ ಕುತ್ತು ತರುತ್ತಿದೆ. ಅದರಲ್ಲೂ ಕಲಬುರಗಿ(Kalaburagi) ಜಿಲ್ಲೆಯಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದ ಓರ್ವ ರೈತ ವಾರದ ಹಿಂದೆ ಮೃತಪಟ್ಟಿದ್ದರೆ, ಇದೀಗ ಮತ್ತೆ ನಾಲ್ವರು ರೈತರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.
ರೈತನ ಜೀವ ತೆಗೆದ ಕ್ರಿಮಿನಾಶಕ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತರ್ಕಸಪೇಟ್ ಗ್ರಾಮದ ಅಂಬರೀಶ್ ಎನ್ನುವ 26 ವರ್ಷದ ಯುವ ರೈತ, ಕಳೆದ ವಾರ ತನ್ನ ಜಮೀನಿನಲ್ಲಿ ಬೆಳದಿದ್ದ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದ. ಬಳಿಕ ಮನೆಗೆ ಬಂದ ನಂತರ ವಾಂತಿಭೇದಿ ಆರಂಭವಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ರೈತ ಅಂಬರೀಶ್ ಮೃತಪಟ್ಟಿದ್ದ. ಮದುವೆಯಾಗಿ ಒಂದು ವರ್ಷ ಮಾತ್ರವಾಗಿತ್ತು. ಆದರೆ, ಹತ್ತಿ ಬೆಳೆ ರಕ್ಷಿಸಿಕೊಳ್ಳಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದ.
ಇದನ್ನೂ ಓದಿ:ಆಟವಾಡ್ತಾ ಕ್ರಿಮಿನಾಶಕ ಸೇವಿಸಿ ಮಕ್ಕಳ ಸಾವು: ಗಂಡ ಬೈತಾನೆ ಅಂತಾ ತಾಯಿ ಆತ್ಮಹತ್ಯೆ ಯತ್ನ!
ಕ್ರಿಮಿನಾಶಕ ಸಿಂಪಡಣೆ ಮಾಡಿದ್ದ ನಾಲ್ವರು ರೈತರ ಜೀವನ್ಮರಣ ಹೋರಾಟ
ಇದಾದ ಒಂದೇ ವಾರಕ್ಕೆ ಇದೀಗ ಚಿತ್ತಾಪುರ ತಾಲೂಕಿನ ಹಲಕಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಆರ್ ಬಿ ನಗರ ತಾಂಡಾದ ನಾಲ್ವರು ರೈತರ ದೇಹದೊಳಗೆ ಕ್ರಿಮಿನಾಶಕ ಸೇರಿದ್ದರಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸುನೀಲ್ ಜಾಧವ್(34), ಅನೀಲ್ ಜಾಧವ್(22), ಕುಮಾರ್(30) ಮತ್ತು ಖೇಮು ರಾಠೋಡ್(32) ಅಸ್ವಸ್ಥರಾಗಿದ್ದಾರೆ. ನಾಲ್ವರು ಕೂಡ ಒಂದೇ ಕುಟುಂಬದವರಾಗಿದ್ದು, ಕಳೆದ ಗುರುವಾರ ತಮ್ಮ ಜಮೀನಿನಲ್ಲಿ ಬೆಳದಿದ್ದ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಹೋಗಿದ್ದರು. ಹತ್ತಿ ಎಲೆಗಳಿಗೆ ಬರುವ ಎಲೆ ಚುಕ್ಕಿ ರೋಗ ಸೇರಿದಂತೆ ಇನ್ನಿತರ ಸಮಸ್ಯೆಗಳ ನಿವಾರಣೆಗಾಗಿ ಸಿಂಪಡಣೆ ಮಾಡುವ ಮೋನೋಕ್ರೋಟಾಪಸ್ ಸಿಂಪಡಣೆ ಮಾಡಿದ್ದರು.
ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದ್ರೆ, ಮಾರನೇ ದಿನದಿಂದ ನಾಲ್ವರಿಗೂ ಕೂಡ ವಾಂತಿ ಭೇದಿ, ತಲೆಸುತ್ತು ಆರಂಭವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕೂಡಾ, ಚಿಕಿತ್ಸೆ ಪಲಕಾರಿಯಾಗಿಲ್ಲ. ಹೀಗಾಗಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ವರನ್ನೂ ತೀರ್ವ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೌದು, ಸಿಂಪಡಣೆ ಸಮಯದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳದೇ ಇದ್ದಾಗ, ಕ್ರಿಮಿನಾಶಕ ಗಾಳಿ ಮೂಲಕ ಬಾಯಿ ಮತ್ತು ಮೂಗಿನ ಮೂಲಕ ದೇಹದೊಳಗೆ ಹೋಗುತ್ತದೆ. ದೇಹದಲ್ಲಿ ವಿಷ ಸೇರಿದ ನಂತರ ವಾಂತಿಭೇದಿ, ತಲೆಸುತ್ತು, ಹೊಟ್ಟೆ ನೋವಿನಿಂದ ಬಳಲಲು ಆರಂಭಿಸುತ್ತಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಹೋದ್ರೆ, ವಿಷದ ಪ್ರಮಾಣದ ದೇಹದೊಳಗೆ ಹೆಚ್ಚು ಸೇರಿ, ರೈತರ ಜೀವಕ್ಕೆ ಕುತ್ತು ಬರುತ್ತಿದೆ.
ಇದನ್ನೂ ಓದಿ:ಹುಣಸೂರು ತಾಲೂಕಿನಲ್ಲಿ ಸಾಲಬಾಧೆಯಿಂದ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ
ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ಇರಲಿ ಎಚ್ಚರ
ಇನ್ನು ಈ ಕುರಿತು ‘ರೈತರು ಯಾವುದೇ ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡುವಾಗ, ಸಾಕಷ್ಟು ಜಾಗೃತಿ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸೂಕ್ತ ಕ್ರಮಗಳನ್ನು ಕೈಗೊಂಡೇ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದ್ರು ,ಜೀವಕ್ಕೆ ಅಪಾಯ ಗ್ಯಾರಂಟಿ ಎಂದು ವೈದ್ಯರು ಮತ್ತು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಏನೆಲ್ಲಾ ಜಾಗೃತಿ, ಕ್ರಮಗಳನ್ನು ವಹಿಸಬೇಕು
- ರೈತರು ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ತಮ್ಮ ಮುಖ ಸೇರಿದಂತೆ ಕಣ್ಣು, ದೇಹದ ಎಲ್ಲಾ ಭಾಗಗಳು ಕವರ್ ಆಗುವಂತಹ ಕಿಟ್ ಗಳನ್ನು ಧರಿಸಬೇಕು.
- ಕ್ರಿಮಿನಾಶಕ ಸಿಂಪಡಣೆ ಮಾಡುವಾಗ, ಗಾಳಿ ಮೂಲಕ, ಕಣ್ಣು, ಬಾಯಿ, ಮೂಗಿನ ಮೂಲಕ ದೇಹದೊಳಗೆ ಹೋಗದಂತೆ ಕ್ರಮ ಕೈಗೊಳ್ಳಬೇಕು.
- ಸ್ನಾನ ಮಾಡೋವರಗೆ ಆಹಾರ, ನೀರು ಕುಡಿಯಬಾರದು ಜೊತೆಗೆ ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ಬಾಯಿ, ಕಣ್ಣು, ಮೂಗು ಮುಟ್ಟಿಕೊಳ್ಳಬಾರದು.
- ನಿರಂತರವಾಗಿ ಮುಂಜಾನೆಯಿಂದ ಸಂಜೆವರಗೆ ಕ್ರಿಮಿನಾಶಕ ಸಿಂಪಡಣೆ ಮಾಡಬಾರದು. ಎರಡರಿಂದ ಮೂರು ಗಂಟೆ ಸಿಂಪಡಣೆ ಮಾಡಿದ ನಂತರ ಸ್ನಾನ ಮಾಡಿ ತುಸು ವಿಶ್ರಾಂತಿ ಪಡೆದು ಮತ್ತೆ ಸಿಂಪಡಣೆ ಮಾಡಬೇಕು.
- ರೈತರು ಕ್ರಿಮಿನಾಶಕ ಸಿಂಪಡಣೆ ಸಮಯದಲ್ಲಿ ಕೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳಬೇಕು. ವಿಷ ದೇಹದೊಳಗೆ ಹೋಗದಂತೆ ಸಾಕಷ್ಟು ಜಾಗೃತಿ ವಹಿಸಬೇಕು ಎಂದು ವೈದ್ಯ ಡಾ. ಅಮರ್ ಮಹರಾಜ್ ಹೇಳುತ್ತಾರೆ. ಗ್ರಾಮೀಣ ಭಾಗದಲ್ಲಿ ರೈತರು, ಬೆಳೆ ರಕ್ಷಿಸಿಕೊಳ್ಳಲು ಕ್ರಿಮಿನಾಶಕದ ಮೊರೆ ಹೋಗುತ್ತಿದ್ದಾರೆ.ಆದ್ರೆ, ಅದೇ ಕ್ರಿಮಿನಾಶಕ ರೈತರ ಬದುಕನ್ನೇ ಮೂರಾಬಟ್ಟಿ ಮಾಡುತ್ತಿದೆ. ಹೀಗಾಗಿ ರೈತರು ಕ್ರಿಮಿನಾಶಕ ಬಳಕೆ ಮಾಡುವಾಗ ಸಾಕಷ್ಟು ಜಾಗೃತಿ ವಹಿಸೋದು ಉತ್ತಮ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Sun, 8 October 23