AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shakti Yojana: ರಶ್​ ಆದ ಸರ್ಕಾರಿ ಬಸ್​​ನಲ್ಲಿ ತಳ್ಳಾಟ-ನೂಕಾಟ, ವಿದ್ಯಾರ್ಥಿನಿ ಅಸ್ವಸ್ಥ

ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್​ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಬಸ್​ಗಳು ರಶ್​​ ಆಗಿವೆ. ಸೀಟ್​​ಗಾಗಿ ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಹಾಗೆ ನಿರ್ವಾಹಕ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ಸೇರಿದಂತೆ ದಿನನಿತ್ಯದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ವಿವೇಕ ಬಿರಾದಾರ
|

Updated on:Jun 26, 2023 | 1:10 PM

Share

ಕಲಬುರಗಿ: ಕಾಂಗ್ರೆಸ್ (Congress) ನೇತೃತ್ವ ಸರ್ಕಾರದ ‘ಶಕ್ತಿ’ ಯೋಜನೆ (Shakti Yojana) ಅಡಿ ರಾಜ್ಯದಲ್ಲಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್​​ಗಳಲ್ಲಿ (Government Bus) ಪ್ರಯಾಣ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ (Women Travel) ಸಂಖ್ಯೆ ಹೆಚ್ಚುತ್ತಿದ್ದು, ಬಸ್​ಗಳು ರಶ್​​ ಆಗಿವೆ. ಇದರಿಂದ ಸೀಟ್​​ಗಾಗಿ ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಹಾಗೆ ನಿರ್ವಾಹಕ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ಸೇರಿದಂತೆ ದಿನನಿತ್ಯದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹೀಗೆ ಸರ್ಕಾರಿ ಬಸ್​ನಲ್ಲಿ ತಳ್ಳಾಟ-ನೂಕಾಟದಿಂದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದ ಬಳಿ ನಡೆದಿದೆ.

ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಜೇವರ್ಗಿ ಬಸ್​ ಭರ್ತಿಯಾಗಿತ್ತು. ವಸ್ತಾರಿ ಗ್ರಾಮದ ಪ್ರಥಮ ಪಿಯು ವಿದ್ಯಾರ್ಥಿನಿ ಶರಣಮ್ಮ ಇದೇ ಬಸ್​ನಲ್ಲಿ ವಸ್ತಾರಿಯಿಂದ ಜೇವರ್ಗಿಗೆ ಕಾಲೇಜಿಗೆ ಹೊರಟಿದ್ದಳು. ಬಸ್​​ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ತಳ್ಳಾಟ-ನೂಕಾಟ ಸಂಭವಿಸಿದೆ. ಇದರಿಂದ ಮಧ್ಯೆದಲ್ಲಿ ಸಿಲುಕಿದ್ದ ವಿದ್ಯಾರ್ಥಿನಿ ಶರಣಮ್ಮ ಅಸ್ವಸ್ಥಳಾಗಿದ್ದಾಳೆ.

ಇದನ್ನೂ ಓದಿ: ಫ್ರೀ ಪ್ರಯಾಣಕ್ಕಾಗಿ ಬಸ್ ಮೇಲೆ ‘ಶಕ್ತಿ’ ತೋರಿಸಿ ಬರೋಬ್ಬರಿ 5000 ರೂ. ದಂಡ ತೆತ್ತ ಮಹಿಳೆ

ನಂತರ ವಿದ್ಯಾರ್ಥಿನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಕುಮ್ಮನಸಿರಸಗಿ ಗ್ರಾಮದ ಬಳಿ ​ ವಿದ್ಯಾರ್ಥಿಗಳು ಬಸ್​​ ತಡೆದು ಗ್ರಾಮಕ್ಕೆ ಹೆಚ್ಚಿನ ಬಸ್​​ಗಳನ್ನು ಬಿಡುವಂತೆ ಆಗ್ರಹಿಸಿದ್ದಾರೆ.

ತರಗತಿ ಬಹಿಷ್ಕರಿಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಕೊಪ್ಪಳ: ತರಗತಿ ಬಹಿಷ್ಕರಿಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಧಿಡೀರ್ ಪ್ರತಿಭಟನೆ ಮಾಡಿರುವ ಘಟನೆ ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೊಪ್ಪಳ ತಾಲ್ಲೂಕಿನ ಹೊಸಳ್ಳಿ, ಹ್ಯಾಟಿ, ಬಹದ್ದುರಬಂಡಿ, ಮುಂಡರಗಿ ಗ್ರಾಮಗಳಿಗೆ ಸರಿಯಾಗಿ ಬಸ್ ಬರುತ್ತಿಲ್ಲವೆಂದು ಬಸ್ ಸಿಬ್ಬಂದಿಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿತ್ಯವೂ ಕೂಡ ಇದೇ ತೊಂದರೆಯಾಗುತ್ತಿದೆ. ಇದರಿಂದ ತರಗತಿಗಳು ತಪ್ಪುತ್ತಿವೆ. ಸುಮಾರು ವರ್ಷಗಳಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Mon, 26 June 23