AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment Scam: ದಿವ್ಯಾ ಹಾಗರಗಿ ಮಾತು ಕೇಳಿ ಜೈಲು ಪಾಲಾದ ಶಿಕ್ಷಕಿರು, ಕಣ್ಣೀರಿಟ್ಟರೂ ಜಾಮೀನು ಕೊಡುವವರಿಲ್ಲ

ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮಾತು ನಂಬಿ ಅಕ್ರಮಕ್ಕೆ ನೆರವಾಗಿದ್ದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಶಿಕ್ಷಕಿಯರು ಪ್ರಸ್ತುತ ಕಲಬುರ್ಗಿ ಜಿಲ್ಲಾ ಕಾರಾಗೃಹದಲ್ಲಿ ಪರದಾಡುತ್ತಿದ್ದಾರೆ

PSI Recruitment Scam: ದಿವ್ಯಾ ಹಾಗರಗಿ ಮಾತು ಕೇಳಿ ಜೈಲು ಪಾಲಾದ ಶಿಕ್ಷಕಿರು, ಕಣ್ಣೀರಿಟ್ಟರೂ ಜಾಮೀನು ಕೊಡುವವರಿಲ್ಲ
ಸಾಂದರ್ಭಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: May 13, 2022 | 3:13 PM

Share

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಕುಣಿಕೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಕಿಂಗ್​ಪಿನ್ ಕಾಶಿನಾಥ ಮತ್ತು ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮಾತು ನಂಬಿ ಅಕ್ರಮಕ್ಕೆ ನೆರವಾಗಿದ್ದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಶಿಕ್ಷಕಿಯರು ಪ್ರಸ್ತುತ ಕಲಬುರ್ಗಿ ಜಿಲ್ಲಾ ಕಾರಾಗೃಹದಲ್ಲಿ ಪರದಾಡುತ್ತಿದ್ದಾರೆ. ಪಿಎಸ್ಐ ಪರೀಕ್ಷೆ ದಿನ ಕೊಠಡಿ ಮೇಲ್ವಿಚಾರಕಿಯರರಾಗಿ ಕೆಲಸ ಮಾಡಿದ್ದ ಸುಮಾ, ಸಿದ್ದಮ್ಮ, ಅರ್ಚನಾ, ಸುನಿತಾ ಅವರನ್ನು ಬಂಧಿಸಲಾಗಿದೆ. ತಿಂಗಳಿಗೆ ಐದರಿಂದ ಎಂಟು ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದರು. ಸಿಬ್ಬಂದಿ ಮೂಲಕವೇ ಒಎಂಆರ್ ಶೀಟ್​ನಲ್ಲಿ ಕಾಶಿನಾಥ ಉತ್ತರ ತುಂಬಿಸಿದ್ದ. ಇವರ ಮಾತು ಕೇಳಿ ಅಕ್ರಮಕ್ಕೆ ನೆರವಾಗಿದ್ದ ಶಿಕ್ಷಕಕಿಯರು ಇದೀಗ ಜೈಲು ಪಾಲಾಗಿದ್ದಾರೆ.

ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಅಕ್ರಮದಲ್ಲಿ ಸಿಕ್ಕು ಬಿದ್ದು ಜೈಲು ಸೇರಿದ ಕಾರಣಕ್ಕೆ ಒಬ್ಬ ಶಿಕ್ಷಕಿಯ ಮದುವೆಯೇ ಮುರಿದು ಬಿದ್ದಿದೆ. ನಿಶ್ಚಿತಾರ್ಥದ ನಂತರ ಜೈಲು ಸೇರಿದ ಕಾರಣ ವರ ಮದುವೆ ರದ್ದುಪಡಿಸಿದ್ದಾನೆ. ಗಂಡನಿಂದ ದೂರವಾಗಿ 13 ವರ್ಷದ ಮಗನೊಂದಿಗೆ ಜೀವಿಸುತ್ತಿದ್ದ ಇನ್ನೊಬ್ಬ ಶಿಕ್ಷಕಿ ಪರದಾಡುತ್ತಿದ್ದಾರೆ. ಬಂಧಿತರಾದವರಲ್ಲಿ ಬಹುತೇಕರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಶಿಕ್ಷಕಿ ಸಿದ್ದಮ್ಮಗೆ ಜಾಮೀನು ಸಲ್ಲಿಸುವವರು ಯಾರೂ ಇಲ್ಲ. ಸ್ಕೂಲ್​ಗೆ ಹೋಗಿ ಸಂಜೆ ಬರ್ತಿನಿ ಎಂದು ಮಗನಿಗೆ ಹೇಳಿ ಬಂದ ಸಿದ್ದಮ್ಮ ಜೈಲು ಸೇರಿ ಒಂದು ತಿಂಗಳಾಗಿದೆ. ನಿತ್ಯವೂ ಮಗನ ನೆನೆದು ಜೈಲಿನಲ್ಲಿ ಶಿಕ್ಷಕಿ‌ ಕಣ್ಣೀರಿಡುತ್ತಿದ್ದಾರೆ. ಇವರಿಗೆ ಕಾನೂನು ನೆರವು ಒದಗಿಸಲು, ಜಾಮೀನು ಕೊಡಿಸಲೂ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಸರ್ಕಾರ ಅನ್ಯಾಯ ಮಾಡಬಾರದು

ದಾವಣಗೆರೆ: ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಿದವರನ್ನು ಪತ್ತೆಹಚ್ಚಿ ಶಿಕ್ಷೆ ಕೊಡಬೇಕೆ ವಿನಃ ನಮ್ಮಂಥ ಬಡವರ ಮಕ್ಕಳಿಗೆ ಅನ್ಯಾಯ ಮಾಡಬಾರದು ಎಂದು ಪಿಎಸ್​ಐ ಹುದ್ದೆಯಿಂದ ವಂಚಿತರಾದ ದಾವಣಗೆರೆಯ ರಚನಾ ಅವರ ತಾಯಿ ವನಜಾಕ್ಷಮ್ಮ ಸರ್ಕಾರವನ್ನು ಆಗ್ರಹಿಸಿದ್ದಾರೆ. ನಾನು ತಾಯಿ ಮುಖವನ್ನೇ ನೋಡದವಳು. ಎಷ್ಟೋ ದಿನ ಉಪವಾಸ ಇದ್ದು ಬದುಕಿದೆ. ಕಷ್ಟಪಟ್ಟು ಮಕ್ಕಳನ್ನು ಓದಿಸಿದ್ದೆ. ನನ್ನ ಮಗಳು ರಚನಾ ಪ್ರತಿಭಾವಂತೆ. ಪಿಎಸ್​ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನಮ್ಮಂಥವರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು. ಭ್ರಷ್ಟರನ್ನು ಪತ್ತೆ ಹಚ್ಚಿ, ಕಷ್ಟದಲ್ಲಿ ಇರುವಂತಹ ನಮ್ಮಂಥವರ ಮಕ್ಕಳಿಗೆ ನೇಮಕಾತಿ ಆದೇಶ ಕೊಡಬೇಕು ಎಂದು ಅವರು ಮನವಿ ಮಾಡಿದರು.

ಇಎನ್​ಟಿ ತಜ್ಞರ ಮೊರೆ ಹೋದ ಜಿಲ್ಲಾಧಿಕಾರಿ

ದಾವಣಗೆರೆ: ಮೇ 21-22ರಂದು ದಾವಣಗೆರೆಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇಎನ್​ಟಿ ತಜ್ಞರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಮೈಕ್ರೊಪೋನ್ ಸೇರಿದಂತೆ ಹತ್ತಾರು ಪ್ರಕಾರದ ಸಾಧನ ಬಳಸಿ ಪರೀಕ್ಷೆ ಅಕ್ರಮ ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಡಿಸಿ ಮುಂದಾಗಿದ್ದಾರೆ.

ದಾವಣಗೆರೆ ಜಿಲ್ಲೆಯ 600 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮೂರು ಪರೀಕ್ಷಾ ಕೇಂದ್ರಗಳಿದ್ದು, ಪ್ರತಿ ಕೋಠಡಿಯಲ್ಲಿ 20 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದೆ.