ಕಲಬುರಗಿ: ರಾಜ್ಯದ ತೊಗರಿ ಕಣಜ ಅಂತ ಖ್ಯಾತಿ ಪಡೆದಿರೋದು ಕಲಬುರಗಿ. ಜಿಲ್ಲೆಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುತ್ತಾರೆ. ಮತ್ತು ಅತಿ ಹೆಚ್ಚು ತೊಗರಿ ಬೇಳೆ (tur dal) ಬಳಕೆ ಮಾಡುತ್ತಾರೆ. ಆದರೆ ಇದೀಗ ತೊಗರಿ ಬೇಳೆ ಬೆಲೆ ದುಬಾರಿಯಾಗಿದ್ದು, ಸ್ವತ ಕಲಬುರಗಿ ಜನರಿಗೆ ತೊಗರಿ ಬೇಳೆ ಬಳಸಲು ಹಿಂದುಟು ಹಾಕುವಂತಾಗಿದೆ. ಇನ್ನು ತೊಗರಿ ಬೇಳೆ ಬೆಲೆ ಹೆಚ್ಚಾದ್ದರೂ ಕೂಡ ಅದರ ಲಾಭ ಮಾತ್ರ ರೈತರಿಗೆ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಸರಿಸುಮಾರು ಎಂಟು ಲಕ್ಷ ಹೆಕ್ಟೇರ್ ನಷ್ಟು ಭೂಮಿಯಲ್ಲಿ ತೊಗರಿ ಬೆಳೆಯಲಾಗುತ್ತದೆ.
ಜೊತೆಗೆ ಕಲಬುರಗಿ ನಗರ ಸೇರಿ ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ದಾಲ್ ಮಿಲ್ಗಳಿವೆ. ರಾಜ್ಯ ಮತ್ತು ನೆರೆಯ ರಾಜ್ಯಗಳಿಗೆ ಹೆಚ್ಚಿನ ತೊಗರಿ ಬೇಳೆ ಹೋಗುವದೇ ಕಲಬುರಗಿಯಿಂದ. ಆದರೆ ಕಳೆದ ಒಂದು ವಾರದಿಂದ ತೊಗರಿ ಬೇಳೆ ಬೆಲೆ ಹೆಚ್ಚಾಗಿದೆ. ಇದು ತೊಗರಿ ಕಣಜ ಕಲಬುರಗಿ ಜನರಿಗೆ ಬೇಳೆ ಬಿಸಿ ತಟ್ಟಿದೆ. ಹೌದು ಹದಿನೈದು ದಿನದ ಹಿಂದಷ್ಟೇ ಪ್ರತಿ ಕಿಲೋ ತೊಗರಿ ಬೇಳೆ, ನೂರರಿಂದ ನೂರಾ ಹತ್ತು ರೂಪಾಯಿಗೆ ಸಿಗುತ್ತಿತ್ತು. ಆದರೆ ಇದೀಗ ಪ್ರತಿ ಕಿಲೋ ತೊಗರಿ ಬೇಳೆ ಬೆಲೆ ನೂರಾ ಐವತ್ತು ರೂಪಾಯಿ ಆಗಿದೆ. ರಾಜ್ಯದ ಬೇರೆ ಬಾಗದಲ್ಲಿನ ದರದಂತೆ ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಬೇಳೆ ಬೆಲೆ ಹೆಚ್ಚಾಗಿದೆ.
ಇನ್ನು ಈ ಬಾಗದಲ್ಲಿ ಹೆಚ್ಚಾಗಿ ತೊಗರಿ ಬೇಳೆ ಬೆಳೆಯುತ್ತಿದ್ದರಿಂದ, ಜನರು ಹೆಚ್ಚಾಗಿ ತೊಗರಿ ಬೇಳೆಯನ್ನು ಬಳಸುವ ರೂಢಿಯನ್ನು ಹೊಂದಿದ್ದಾರೆ. ರೊಟ್ಟಿ ಜೊತೆ ದಾಲ್ ಇಲ್ಲಿನ ಜನರಿಗೆ ಬೇಕೆ ಬೇಕು. ಜೊತೆಗೆ ಸಾಂಬಾರ್ ಗೆ ಕೂಡಾ ಹೆಚ್ಚಾಗಿ ತೊಗರಿ ಬೇಳೆಯನ್ನೇ ಬಳಸುತ್ತಾರೆ. ಆದ್ರೆ ಇದೀಗ ಬೆಳೆ ಬೆಲೆ ಹೆಚ್ಚಾಗಿದ್ದರಿಂದ, ಬೇಳೆ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ: Kalaburagi: ತರಕಾರಿ ವ್ಯಾಪಾರಸ್ಥರಿಗೆ ಬರೆ ಎಳೆದ ಬೆಲೆ ಏರಿಕೆ; ಕಮ್ಮಿಯಾದ ಖರೀದಿ, ವ್ಯಾಪಾರಿಗಳು ಕಂಗಾಲು
ತೊಗರಿ ಬೇಳೆ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಂತ ತೊಗರಿ ಬೆಳೆಗಾರರಿಗೆ ಅದರಿಂದ ಲಾಭವಾಗುತ್ತಿದೆಯಾ ಅಂದ್ರೆ ಇಲ್ಲಾ. ಕಳೆದ ವರ್ಷ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನಟೆ ರೋಗದಿಂದ ತೊಗರಿ ಬೆಳೆ ಹಾಳಾಗಿ ಹೋಗಿತ್ತು. ಮೂರು ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ ಬೆಳೆ ಸಂಪೂರ್ಣವಾಗಿ ಹಾಳಾಗಿತ್ತು. ಉಳಿದಡೆ ಬೆಳೆ ಬಂದ್ರು ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಕಾಳುಗಳು ಆಗಿರಲಿಲ್ಲಾ.
ರೈತರು ತಾವು ಬೆಳೆದ ತೊಗರಿಯನ್ನು ಮಾರುಕಟ್ಟೆಯಲ್ಲಿ ಏಳರಿಂದ ಎಂಟು ಸಾವಿರಕ್ಕೆ ಪ್ರತಿ ಕ್ವಿಂಟಲ್ನಂತ ಕಳೆದ ಡಿಸೆಂಬರ್ನಲ್ಲಿಯೇ ಮಾರಾಟ ಮಾಡಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿ ಬೆಲೆ ಹತ್ತರಿಂದ ಹನ್ನೊಂದು ಸಾವಿರವಿದೆ. ಇದೀಗ ಬೆಲೆ ಹೆಚ್ಚಾದ್ರು ಕೂಡಾ ರೈತರ ಬಳಿ ತೊಗರಿ ಇಲ್ಲದೇ ಇರೋದರಿಂದ ಬೆಲೆ ಹೆಚ್ಚಳ ಲಾಭ ರೈತರಿಗೆ ಸಿಗದಂತಾಗಿದೆ.ಬೆಲೆ ಹೆಚ್ಚಾದ್ರು ಕೂಡಾ ಅದು ದಾಲ್ ಮಿಲ್ ಮಾಲೀಕರಿಗೆ ಆಗುತ್ತಿದೆ ವಿನ, ರೈತರಿಗೆ ಇಲ್ಲಾ ಅಂತಿದ್ದಾರೆ ರೈತ ಮುಖಂಡ ದಯಾನಂದ್ ಪಾಟೀಲ್.
ಇದನ್ನೂ ಓದಿ: ಮಳಖೇಡ ಜಯತೀರ್ಥರ ಮೂಲ ವೃಂದಾವನ ಎಲ್ಲಿದೆ ಎಂಬುದೂ ವಿವಾದದ ಕೇಂದ್ರವಾಯಿತು!
ಕಳೆದ ವರ್ಷ ತೊಗರಿ ಉತ್ಫಾಧನೆ ಗಣನೀಯವಾಗಿ ಕುಸಿತವಾಗಿದ್ದರಿಂದ, ಇದೀಗ ಬೇಳೆ ಬೆಲೆ ಹೆಚ್ಚಾಗುತ್ತಲೇ ಇದೆ. ಇದು ಇನ್ನು ಹೆಚ್ಚಾಗುವ ಆತಂಕ ಕೂಡಾ ಇದೆ. ಆದ್ರೆ ಕೇಂದ್ರ ಸರ್ಕಾರ ತನ್ನ ಸ್ಟಾಕ್ ನಲ್ಲಿರುವ ತೊಗರಿಯನ್ನು ಮಾರ್ಕೇಟ್ ಗೆ ಬಿಟ್ಟರೆ, ಬೇಳೆ ಬೆಲೆ ಕೂಡಾ ಕಡಿಮೆಯಾಗೋ ಸಾಧ್ಯತೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.