ರಾಜ್ಯದಲ್ಲಿ ಇದೀಗ ತರಕಾರಿ, ಕಾಳುಗಳ ಬೆಲೆ ಹೆಚ್ಚಾಗಿದ್ದು, ಬೆಲೆ ಏರಿಕೆಯಿಂದ ಗ್ರಾಹಕರಿಗೆ ಎಷ್ಟು ತೊಂದರೆಯಾಗಿದೆಯೋ ಅಷ್ಟೇ ತೊಂದರೆ ತರಕಾರಿ ಮತ್ತು ಕಾಳು ವ್ಯಾಪರಸ್ಥರಿಗೂ ಆಗಿದೆ.
ಬೆಲೆ ಏರಿಕೆಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು, ಪ್ರತಿನಿತ್ಯದ ವ್ಯಾಪಾರ ಕೂಡ ಕಡಿಮೆಯಾಗಿದೆ. ಇದರಿಂದ ಲಾಭದ ಪ್ರಮಾಣ ಕೂಡ ಗಣನೀಯವಾಗಿ ಇಳಿಕೆಯಾಗಿದ್ದು, ವ್ಯಾಪಾರಸ್ಥರು ಕಂಗಾಲಾಗುವಂತೆ ಮಾಡಿದೆ.
ಕಲಬುರಗಿ ನಗರದ ಸುಪ್ರಸಿದ್ದ ಕಣ್ಣಿ ತರಕಾರಿ ಮಾರ್ಕೆಟ್ನಲ್ಲಿ ಮುಂಜಾನೆ 5 ಗಂಟೆಯಿಂದಲೇ ತರಕಾರಿ ವ್ಯಾಪಾರ ಆರಂಭವಾಗುತ್ತದೆ. ನೂರಾರು ವ್ಯಾಪರಸ್ಥರು, ಇಲ್ಲಿ ರೈತರಿಂದ ತರಕಾರಿ ಖರೀದಿಸಿ ಮಾರಾಟ ಮಾಡಿ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ.
ಇದೀಗ ತರಕಾರಿ ಬೆಲೆ ಹೆಚ್ಚಾಗಿದ್ದರಿಂದ, ಮಾರ್ಕೆಟ್ಗೆ ಬರುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ವ್ಯಾಪಾರ ವಹಿವಾಟು ಕೂಡ ಕಡಿಮೆಯಾಗಿದೆ. ಇನ್ನು ಈ ಮೊದಲು ಪ್ರತಿನಿತ್ಯ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ ವ್ಯಾಪಾರವಾಗುತ್ತಿತ್ತು. ಆದರೆ, ಇದೀಗ ನಾಲ್ಕೈದು ಸಾವಿರ ಕೂಡಾ ಆಗುತ್ತಿಲ್ಲವೆಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ತರಕಾರಿ ಬೆಲೆ ಹೆಚ್ಚಾಗಿದ್ದರಿಂದ, ಅನೇಕ ಗ್ರಾಹಕರು ಖರೀದಿಯನ್ನು ಕಡಿಮೆ ಮಾಡಿದ್ದಾರೆ. ಮೊದಲು ಕಿಲೋ ತರಕಾರಿ ಖರೀದಿಸುತ್ತಿದ್ದವರು ಇದೀಗ ಪಾವಕಿಲೋ ಖರೀದಿಸುತ್ತಿದ್ದಾರೆ. ಹೀಗಾಗಿ ವ್ಯಾಪಾರ ಕಡಿಮೆಯಾಗಿದೆಯಂತೆ. ಇನ್ನು ಇದೇ ಮಾರ್ಕೆಟ್ನಲ್ಲಿ ವಿವಿಧ ಮೊಳಕೆಗಳನ್ನು ಮಾರಾಟ ಮಾಡುತ್ತಿದ್ದ ವೃದ್ದೆಯೊಬ್ಬರು ಬೆಲೆ ಏರಿಕೆ ತಮ್ಮ ಜೀವನದ ಮೇಲೆ ಬರೆ ಎಳೆಯುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಮೊದಲು ಕಿಲೋ ಕಾಳು ನೂರರಿಂದ ನೂರಾ ಹತ್ತು ರೂಪಾಯಿಗೆ ಸಿಗುತ್ತಿತ್ತು. ಇದೀಗ ನೂರಾ ಐವತ್ತು ರೂಪಾಯಿ ದಾಟಿದೆ. ಹೀಗಾಗಿ ಮೊಳಕೆ ಕಾಳುಗಳನ್ನು ಯಾರು ಖರೀದಿಸುತ್ತಿಲ್ಲ. ಗ್ರಾಹಕರು ಬರದೇ ಇದ್ದರೆ, ನಮ್ಮ ಹೊಟ್ಟೆ ಮೇಲೆ ತಣ್ಣೀರು ಪಟ್ಟಿ ಹಾಕಿಕೊಂಡು ಮಲಗಬೇಕಾಗುತ್ತದೆ. ಬೆಲೆ ಏರಿಕೆಯಿಂದ ನಮಗೆ ದೊಡ್ಡ ಮಟ್ಟದ ತೊಂದರೆಯಾಗಿದೆ ಅಂತಿದ್ದಾರೆ.
ಇದರಿಂದ ಮುಂಜಾನೆಯಿಂದ ಸಂಜೆವರಗೆ ವ್ಯಾಪಾರ ಮಾಡಿದ್ರು, ಐನೂರು ರೂಪಾಯಿ ಉಳಿಯಲ್ಲ, ಇನ್ನು ಗ್ರಾಹಕರು ಬರದೇ ಇರುವುದರಿಂದ ನಾವು ಖರೀದಿಸಿದ ತರಕಾರಿ ಕೂಡ ಒಮ್ಮೊಮ್ಮೆ ಮಾರಾಟವಾಗುತ್ತಿಲ್ಲ. ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ ತರಕಾರಿ ಮಾರಾಟವಾಗದೇ ಇದ್ದರೆ, ಅದರಿಂದ ನಮಗೆ ನಷ್ಟ ಉಂಟಾಗುತ್ತಿದೆಯೆಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
Published On - 11:38 am, Tue, 27 June 23