ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 13 ತಿಂಗಳ ನಂತರ ಸ್ವತಂತ್ರ ಪಡೆದ ರಾಜ್ಯದ ಈ ಜಿಲ್ಲೆಗಳು; ಯಾಕೆ ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 16, 2023 | 6:04 PM

ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವತಂತ್ರ ಸಿಕ್ಕು ಈ ವರ್ಷಕ್ಕೆ 75 ನೇ ವರ್ಷದ ಸಂಭ್ರಮ. ಹೀಗಾಗಿ ಸ್ವತಂತ್ರ ಸಿಕ್ಕ ಅಮೃತ ಮಹೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕಲಬುರಗಿ ನಗರದ ಡಿ ಆರ್ ಪರೇಡ್ ಮೈದಾನದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 13 ತಿಂಗಳ ನಂತರ ಸ್ವತಂತ್ರ ಪಡೆದ ರಾಜ್ಯದ ಈ ಜಿಲ್ಲೆಗಳು; ಯಾಕೆ ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us on

ಕಲಬುರಗಿ, ಸೆ.16: ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 1947, ಆಗಸ್ಟ್ 15ರಂದು. ಆದರೆ, ನಮ್ಮದೇ ದೇಶದ ನಾಲ್ಕು ರಾಜ್ಯಗಳ ಕೆಲ ಭಾಗದ ಜನರಿಗೆ ಮಾತ್ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಸಿಕ್ಕಿಲ್ಲ. ಹೌದು, ಇದು ಅಚ್ಚರಿಯಾದರೂ ಸತ್ಯ. ಹೈದ್ರಾಬಾದ್ ನಿಜಮಾನ ಆಳ್ವಿಕೆಗೆ ಒಳಪಟ್ಟಿದ್ದ ರಾಜ್ಯದ ಕಲ್ಯಾಣ ಕರ್ನಾಟಕ(Kalyana Karnataka), ಮಹರಾಷ್ಟ್ರದ ಕೆಲವು ಭಾಗ ಮತ್ತು ಆಂಧ್ರ ಪ್ರದೇಶಕ್ಕೆ ಸ್ವತಂತ್ರ ಸಿಕ್ಕಿದ್ದು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು, ಬರೋಬ್ಬರಿ ಹದಿಮೂರು ತಿಂಗಳ ನಂತರ. ಅಂದರೆ ಸೆಪ್ಟಂಬರ್ 17, 1948 ರಂದು.

ಹೈದ್ರಾಬಾದ್ ನಿಜಾಮನ ಆಳ್ವಿಕೆ, ಸ್ವಾತಂತ್ರ್ಯದ ಹೋರಾಟ

ರಾಜ್ಯದ ಕಲಬುರಗಿ, ಬೀದರ್, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯ ಜನರಿಗೆ, ದೇಶಕ್ಕೆ ಸ್ವತಂತ್ರ ಸಿಕ್ಕು ಹದಿಮೂರು ತಿಂಗಳುಗಳ ನಂತರ ಸ್ವತಂತ್ರ ಸಿಕ್ಕಿದೆ. ಇದಕ್ಕೆ ಕಾರಣ ಹೈದ್ರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿ. ಹೌದು, ಸ್ವಾತಂತ್ರ್ಯಾ ನಂತರ ಬಹುತೇಕ ಸಣ್ಣಪುಟ್ಟ ಸಂಸ್ಥಾನಗಳು ದೇಶದಲ್ಲಿ ವಿಲೀನವಾದವು. ಆದರೆ, ಹೈದ್ರಾಬಾದ್, ಜುನಾಗಡ, ಕಾಶ್ಮೀರ ಸೇರಿದಂತೆ ಕೆಲ ರಾಜರು ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದರು. ಇದಕ್ಕೆ ಕಾರಣ, ದೇಶಕ್ಕೆ ಸ್ವತಂತ್ರ ನೀಡುವಾಗ ಮೌಂಟ್ ಬ್ಯಾಟನ್ ನೀಡಿದ ಅವಕಾಶ. ದೇಶಕ್ಕೆ ಸ್ವತಂತ್ರ ಸಿಕ್ಕಾಗ ದೇಸಿಯ ರಾಜರು ಸ್ವತಂತ್ರ ಭಾರತದಲ್ಲಿ ಸೇರಬಹುದು, ಇಲ್ಲವೇ ಸ್ವತಂತ್ರವಾಗಿ ಇರಬಹುದು ಎಂದು ಹೇಳಲಾಗಿತ್ತು. ಇದನ್ನೇ ದುರುಪಯೋಗ ಮಾಡಿಕೊಂಡಿದ್ದ ಹೈದ್ರಾಬಾದ್ ನಿಜಾಮ, ಹೈದ್ರಾಬಾದ್ ಸಂಸ್ಥಾನವನ್ನು ದೇಶದಲ್ಲಿ ವಿಲೀನಗೊಳಿಸದೇ ಸ್ವತಂತ್ರವಾಗಿ ಇರಲು ನಿರ್ಧಾರ ಮಾಡಿದ್ದ.

ಇದನ್ನೂ ಓದಿ:ಅಫ್ಘಾನ್ ಮಹಿಳೆಯರಿಗಿದ್ದ ಮತ್ತೊಂದು ಸ್ವಾತಂತ್ರ್ಯವನ್ನು ಕಿತ್ತುಕೊಂಡ ತಾಲಿಬಾನಿಗಳು

ನಿಜಾಮನ ಇಚ್ಚೆಗೆ ವಿರುದ್ದವಾಗಿದ್ದ ಜನರು

ಇನ್ನು ಹೈದ್ರಾಬಾದ್ ಸಂಸ್ಥಾನ ಸ್ವತಂತ್ರವಾಗಿ ಉಳಿದಿತ್ತು. ಹೀಗಾಗಿ ದೇಶಕ್ಕೆ ಸ್ವತಂತ್ರ ಸಿಕ್ಕರೂ ಕೂಡ ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಪ್ರದೇಶದ ಜನರಿಗೆ ಮಾತ್ರ ಸ್ವತಂತ್ರ ಸಿಕ್ಕಿರಲಿಲ್ಲ. ಆದರೆ, ಹೈದ್ರಾಬಾದ್​ ಸಂಸ್ಥಾನದ ಬಹುತೇಕರು ಸ್ವತಂತ್ರ ಭಾರತದಲ್ಲಿ ವಿಲೀನವಾಗಬೇಕು ಎಂದು ಆಸೆ ಹೊಂದಿದ್ದರು. ಇಲ್ಲಿ ಕೂಡ ಪ್ರಜಾಪ್ರಭುತ್ವ ಜಾರಿಯಾಗಬೇಕು ಎನ್ನುವುದು ಬಹುತೇಕರ ಇಚ್ಚೆಯಾಗಿತ್ತು. ಆದರೆ, ಹೈದ್ರಾಬಾದ್​ ನಿಜಾಮ ಮಾತ್ರ ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿಬಿಟ್ಟಿದ್ದ. ಹೀಗಾಗಿ ಇಲ್ಲಿನ ಅನೇಕ ಜನ ಸ್ವತಂತ್ರಕ್ಕಾಗಿ ಮತ್ತೊಮ್ಮೆ ಹೋರಾಟಕ್ಕಿಳಿದರು. ಕಲಬುರಗಿ, ಬೀದರ್, ರಾಯಚೂರು ಸೇರಿದಂದೆ ಈ ಭಾಗದ ಸಾವಿರಾರು ಜನರು ಹೋರಾಟ ಆರಂಭಿಸಿದರು. ಸ್ವಾಮಿ ರಮಾನಂದ ತೀರ್ಥರು ಸೇರಿದಂತೆ ಅನೇಕರು ಹೋರಾಟದ ಮುಂಚೂಣಿಯಲ್ಲಿ ನಿಂತು, ಹೈದ್ರಾಬಾದ್ ನಿಜಾಮನ ವಿರುದ್ದ ಸ್ವತಂತ್ರ ಹೋರಾಟದ ಕಹಳೆಯನ್ನು ಮೊಳಗಿಸಿದ್ದರು.

ನಿಜಾಮನ ಖಾಸಗಿ ಸೈನ್ಯ ರಜಾಕರ ದಬ್ಬಾಳಿಕೆ

ಇನ್ನು ಹೈದ್ರಾಬಾದ್ ಸಂಸ್ಥಾನವನ್ನು ಭಾರತ ದೇಶದಲ್ಲಿ ಸೇರಿಸಬೇಕು, ನಮಗೂ ಸ್ವತಂತ್ರ ಬೇಕು ಎಂದು ಹೋರಾಟ ಆರಂಭವಾದಾಗ, ಹೈದ್ರಾಬಾದ್ ನಿಜಾಮ ಸ್ವತಂತ್ರ ಹೋರಾಟವನ್ನು ಹತ್ತಿಕಲು ಮುಂದಾಗಿದ್ದ. ತನ್ನ ಪೊಲೀಸ್ ಬಲವನ್ನು ಉಪಯೋಗಿಸಿ, ಸ್ವತಂತ್ರ ಹೋರಾಟಗಾರರ ಮೇಲೆ ದಬ್ಬಾಳಿಕೆ ಮಾಡಿದ. ಜೊತೆಗೆ ಹೋರಾಟವನ್ನು ಹತ್ತಿಕ್ಕಲು ಖಾಸಗಿ ಸೈನ್ಯವಾಗಿದ್ದ ಖಾಸಿಂ ರಜವಿಯು ರಜಾಕರನ್ನು ಛೂ ಬಿಟ್ಟ. ರಜಾಕರ ದೌರ್ಜನ್ಯಕ್ಕೆ ಅನೇಕರು ಪ್ರಾಣ ಬಿಟ್ಟರು. ರಜಾಕರ ದಬ್ಬಾಳಿಕೆಯ ನಡುವಯೂ ಕೂಡ ಹಲವು ಹೋರಾಟಗಾರರು ಪ್ರಾಣದ ಹಂಗು ತೊರೆದು ಹೋರಾಟವನ್ನು ಮಾಡುತ್ತಾರೆ. ಇಷ್ಟಾದರೂ ಹೈದ್ರಾಬಾದ್​ ನಿಜಾಮ ದೇಶದಲ್ಲಿ ವಿಲೀನವಾಗಲಿಕ್ಕೆ ಮುಂದಾಗದೆ ಇದ್ದಾಗ, ಬಲವಂತವಾಗಿ ಹೈದ್ರಾಬಾದ್​ ಸಂಸ್ಥಾನವನ್ನು ದೇಶದಲ್ಲಿ ವಿಲೀನ ಮಾಡಲಿಕ್ಕೆ ಮುಂದಾಗುತ್ತಾರೆ.

ಇದನ್ನೂ ಓದಿ:ಮುಂಬೈ: ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ವಿದ್ಯಾರ್ಥಿಗಳ ಬಂಧನ

ಹೌದು, ಹೋರಾಟಗಳಿಂದ ನಿಜಾಮ ಬಗ್ಗದಿದ್ದಾಗ ಸರ್ಧಾರ್​ ವಲ್ಲಭಬಾಯಿ​ ಪಟೇಲ್​ ಸೆಪ್ಟಂಬರ್ 13,1948 ಆಪರೇಷನ್ ಪೋಲೋ ಎನ್ನುವ ಹೆಸರಿನಲ್ಲಿ ಹೈದ್ರಾಬಾದ್​ ಸಂಸ್ಥಾನವನ್ನು ಭಾರತ ದೇಶದಲ್ಲಿ ವಿಲೀನ ಮಾಡಲಿಕ್ಕೆ ಮುಂದಾದರು. ಹೀಗಾಗಿ ಭಾರತೀಯ ಸೈನ್ಯ ಕಾರ್ಯಚರಣೆಗೆ ಇಳಿಯಿತು. ಆದ್ರೆ ಕಾರ್ಯಚಾರಣೆ ಪ್ರಾರಂಭವಾದ ನಾಲ್ಕೇ ದಿನದಲ್ಲಿ ಯಾವುದೇ ಪ್ರತಿರೋದವಿಲ್ಲದೆ ಹೈದ್ರಾಬಾದ್​ ನಿಜಾಮ, ಭಾರತ ದೇಶದಲ್ಲಿ ಹೈದ್ರಾಬಾದ್ ಸಂಸ್ಥಾನವನ್ನು ವಿಲೀನ ಮಾಡಲಿಕ್ಕೆ ಒಪ್ಪಿಗೆಯನ್ನು ಸೂಚಿಸಿದ. ಹೀಗಾಗಿ ಸೆಪ್ಟಂಬರ್ 17,1948 ರಂದು ರಾಜ್ಯದ ಕಲ್ಯಾಣ ಕರ್ನಾಟಕ, ಮಹಾರಾಷ್ಟ್ರದ ಕೆಲವು ಭಾಗ, ಮತ್ತು ಆಂಧ್ರ ಪ್ರದೇಶದ ಜನರು ಸ್ವತಂತ್ರವಾದರು. ತಮಗೆ ಸ್ವತಂತ್ರ ಸಿಕ್ಕ ದಿನವನ್ನು ಜನ ವಿಮೋಚನಾ ದಿನಾಚಾರಣೆ ಎಂದು ಆಚರಿಸುತ್ತಾ ಬಂದಿದ್ದಾರೆ. 2019 ರಿಂದ ವಿಮೋಚನಾ ದಿನದ ಬದಲಾಗಿ, ಕಲ್ಯಾಣ ಕರ್ನಾಟಕ ಉತ್ಸವ ದಿನವೆಂದು ಆಚರಿಸಲಾಗುತ್ತಿದೆ.

ರಾಷ್ಟ್ರಧ್ವಜಾರೋಹಣ ನೆರವೇರಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಇನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವತಂತ್ರ ಸಿಕ್ಕು ಈ ವರ್ಷಕ್ಕೆ 75 ನೇ ವರ್ಷದ ಸಂಭ್ರಮ. ಹೀಗಾಗಿ ಸ್ವತಂತ್ರ ಸಿಕ್ಕ ಅಮೃತ ಮಹೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕಲಬುರಗಿ ನಗರದ ಡಿ ಆರ್ ಪರೇಡ್ ಮೈದಾನದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ.

ಇದನ್ನೂ ಓದಿ:ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕಮಾರ್ ಒಟ್ಟಿಗೆ ಹೋಟೆಲೊಂದಕ್ಕೆ ಊಟಕ್ಕೆ ಹೊರಟರು!

ಕಲ್ಯಾಣ ಕರ್ನಾಟಕ ಭಾಗ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಒತ್ತಡ

ಇನ್ನು ಕಲ್ಯಾಣ ಕರ್ನಾಟಕ ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದರಿಂದ ಸ್ವತಂತ್ರ ಪೂರ್ವ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಹೊಂದಿರಲಿಲ್ಲ. ಸ್ವತಂತ್ರ ನಂತರ ಕೂಡ ಈ ಭಾಗದ ನಿರೀಕ್ಷಿತ ಅಭಿವೃದ್ದಿಯಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ 2013 ರಲ್ಲಿ ವಿಶೇಷ ಸ್ಥಾನಮಾನ ಕೂಡ ನೀಡಲಾಗಿದೆ. ವಿಶೇಷ ಸ್ಥಾನಮಾನ ಸಿಕ್ಕು ಹತ್ತು ವರ್ಷವಾಗಿದೆ. ಸಾವಿರಾರು ಕೋಟಿ ಅನುಧಾನ ಬಂದರೂ, ನಿರೀಕ್ಷಿತ ಮಟ್ಟದ ಅಭಿವೃದ್ದಿ ಮಾತ್ರ ಸಾಧ್ಯವಾಗಿಲ್ಲ. ಹೀಗಾಗಿ ಈ ಭಾಗದ ಸರ್ವತೋಮುಖ ಅಭಿವೃದ್ದಿಯನ್ನು ಸರ್ಕಾರ ಮಾಡಬೇಕು ಎನ್ನುವ ಆಗ್ರಹವನ್ನು ಈ ಭಾಗದ ಜನರು ಮಾಡುತ್ತಲೇ ಇದ್ದಾರೆ.

ಇನ್ನು ಈ ಕುರಿತು ಮಾತನಾಡಿದ ಹೈದ್ರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ್ ದಸ್ತಿ ‘ಕಲ್ಯಾಣ ಕರ್ನಾಟಕ ಭಾಗಕ್ಕೆ ಹದಿಮೂರು ತಿಂಗಳು ತಡವಾಗಿ ಸ್ವತಂತ್ರ ಸಿಕ್ಕಿದೆ. ಈ ಭಾಗ ಸ್ವತಂತ್ರಕ್ಕಾಗಿ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಅನೇಕ ಹೋರಾಟಗಳು ನಡೆದಿದ್ದವು. ಸರ್ಧಾರ್ ವಲ್ಲಭಬಾಯ್ ಪಟೇಲ್ ಅವರ ಗಟ್ಟಿ ನಿರ್ಧಾರದ ಫಲವಾಗಿ, ನಮಗೆ ಸ್ವತಂತ್ರ ಸಿಕ್ಕಿದೆ. ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಆಗಿರಲಿಲ್ಲ. ಈಗಲೂ ಕೂಡ ಈ ಭಾಗದ ಸರ್ವಾಂಗೀಣ ಅಭಿವೃದ್ದಿಯಾಗಿಲ್ಲ. ಸರ್ಕಾರ ಈ ಭಾಗದ ಅಭಿವೃದ್ದಿಗಾಗಿ ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Sat, 16 September 23