₹ 26 ಲಕ್ಷಕ್ಕೆ ನಾಲ್ಕು ಗ್ರಾ.ಪಂ. ಕ್ಷೇತ್ರಗಳು ಸೇಲ್
ಕಲಬುರ್ಗಿಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಗ್ರಾ. ಪಂ ಕ್ಷೇತ್ರಗಳನ್ನು ಹರಾಜು ಹಾಕಲಾಗಿದೆ. ಗ್ರಾಮದಲ್ಲಿ ಶಾಂತಿ ಕಾಪಾಡಲು ಮತ್ತು ದೇವಸ್ಥಾನದ ಜೀರ್ಣೋದ್ಧಾರ ಕೈಗೊಳ್ಳಲು ಹರಾಜು ಹಾಕಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಕಲಬುರಗಿ: ಗ್ರಾಮ ಪಂಚಾಯತಿ ಚುನಾವಣೆ ನಿಧಾನವಾಗಿ ರಂಗೇರುತ್ತಿದೆ. ಹತ್ತಾರು ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಬೇಕು. ಒಬ್ಬ ಗೆಲ್ಲಬೇಕು. ಇದು ಚುನಾವಣೆಯ ನಿಯಮ. ಆದರೆ ಕಲಬುರ್ಗಿಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಗ್ರಾ.ಪಂ ಕ್ಷೇತ್ರಗಳನ್ನು ಹರಾಜು ಹಾಕಿದ ಘಟನೆ ನಡೆದಿದೆ.
ಬಿಳವಾರದ ವಾರ್ಡ್ ನಂಬರ್ 1 ರಲ್ಲಿ 4 ಸ್ಥಾನಗಳಿವೆ. ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮಹಿಳೆ, ಪರಿಶಿಷ್ಟ ಜಾತಿ ಪುರುಷ, ಪರಿಶಿಷ್ಟ ಪಂಗಡದ ಮಹಿಳೆಗೆ ಒಂದು ಸ್ಥಾನ ಮೀಸಲಿಡಲಾಗಿದೆ. ಈ ಎಲ್ಲ ಸ್ಥಾನಗಳನ್ನೂ ಹರಾಜು ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಹೆಚ್ಚು ಹಣ ನೀಡಿದವರಿಗೆ ಸ್ಥಾನಗಳನ್ನು ನೀಡಲು ತೀರ್ಮಾನಿಸಿದ್ದಾರೆ. ಹೆಚ್ಚು ಹಣ ನೀಡಿದವರ ವಿರುದ್ಧ ಯಾರೂ ಸ್ಪರ್ಧಿಸಬಾರದು ಎಂದು ಗ್ರಾಮಸ್ಥರು ಡಂಗುರ ಬಾರಿಸಿ ಘೋಷಿಸಿದ್ದಾರೆ.
ಯಾವ ಸ್ಥಾನಕ್ಕೆ ಎಷ್ಟು ಹಣ? ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನವನ್ನು ₹ 8.55 ಲಕ್ಷ, ಪರಿಶಿಷ್ಟ ಜಾತಿ ಮಹಿಳೆ ಸ್ಥಾನವನ್ನು ₹ 7.25 ಲಕ್ಷ, ಪರಿಶಿಷ್ಟ ಜಾತಿ ಪುರುಷ ಸ್ಥಾನವನ್ನು ₹ 5.50 ಲಕ್ಷ, ಪರಿಶಿಷ್ಟ ಪಂಗಡ ಪುರುಷ ಸ್ಥಾನವನ್ನು ₹ 5.25 ಲಕ್ಷಕ್ಕೆ ಹರಾಜು ಹಾಕಲಾಗಿದೆ. ಹಣ ನೀಡಲು ನಾಲ್ಕೈದು ದಿನಗಳ ಕಾಲಾವಕಾಶ ನೀಡಲಾಗಿದೆ.
ಏಕೆ ಈ ನಿರ್ಧಾರ? ಸಂಗ್ರಹವಾದ ಹಣದಿಂದ ಗ್ರಾಮದ ಹಣಮಂತ ದೇವಸ್ಥಾನದ ಜೀರ್ಣೋದ್ದಾರ ಮಾಡುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಅಲ್ಲದೇ ಹಿಂದಿನ ಚುನಾವಣೆಗಳು ಗ್ರಾಮಸ್ಥರಲ್ಲಿ ವೈಷಮ್ಯ ಮೂಡಿಸಿವೆ. ಈ ಬಾರಿ ಅವಿರೋಧ ಆಯ್ಕೆ ಮಾಡಿದರೆ ಶಾಂತಿ ನೆಲೆಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣದ ಅಗತ್ಯವೂ ಇದ್ದ ಕಾರಣ ಗ್ರಾ ಪಂ ಸ್ಥಾನಗಳ ಹರಾಜು ಹಾಕಿದ್ದೇವೆ ಎಂದು ಗ್ರಾಮಸ್ಥರು ವಿವರಿಸಿದರು.
Published On - 7:46 pm, Sun, 6 December 20