ಕೊರೊನಾ ಕಾಲದಲ್ಲಿ ಅಡವಿ ಮಕ್ಕಳ ಕಲಿಕೆಗೆ ವನಬೆಳಕಿನ ನೆರವು

ನಗರ ಪ್ರದೇಶದ ಮಕ್ಕಳಿಗೆ ವರ್ಚುವಲ್ ಕ್ಲಾಸುಗಳ ಮೂಲಕ ಪಾಠ, ಹೊಸ ವಿಷಯಗಳನ್ನು ಕಲಿಯುವ ಅವಕಾಶಗಳಿವೆ. ಆದರೆ ಕಾಡಿನ ಮಕ್ಕಳ ಕಥೆಯೇನು?

ಕೊರೊನಾ ಕಾಲದಲ್ಲಿ ಅಡವಿ ಮಕ್ಕಳ ಕಲಿಕೆಗೆ ವನಬೆಳಕಿನ ನೆರವು
ಅಡವಿ ಮಕ್ಕಳ ವನಬೆಳಕು..
guruganesh bhat

| Edited By: Ayesha Banu

Dec 07, 2020 | 6:28 AM

ಕಾರವಾರ: ಮಕ್ಕಳು ಶಾಲೆಗಳಿಂದ ದೂರವುಳಿದು ವರ್ಷ ಸಮೀಪಿಸುತ್ತಿದೆ. ನಗರ ಪ್ರದೇಶದ ಮಕ್ಕಳಿಗೆ ವರ್ಚುವಲ್ ಕ್ಲಾಸುಗಳ ಮೂಲಕ ಪಾಠ, ಹೊಸ ವಿಷಯಗಳನ್ನು ಕಲಿಯುವ ಅವಕಾಶಗಳಿವೆ. ಆದರೆ ಕಾಡಿನ ಮಕ್ಕಳ ಕಥೆಯೇನು?

ಶಾಲೆಗೆ ಬರುವ ಶಿಕ್ಷಕರೇ ಅವರ ಪಾಲಿಗೆ ಹೊಸ ವಿಷಯಗಳನ್ನು ಅರಿಯುವ ಕಿಟಕಿ. ಪಾಲಕರು ದಿನ ಬೆಳಗಾದರೆ ಕೆಲಸಕ್ಕೆ ಹೋದರೆ, ಬರುವುದು ಇರುಳು ಅರಳಿದ ನಂತರವೇ. ಅದರಲ್ಲೂ ಮಲೆನಾಡು ಉತ್ತರ ಕನ್ನಡದ ಗಾಢ ಕಾನಿನ ನಡುವೆ ಮಕ್ಕಳಷ್ಟೇ ಹಗಲಿಡೀ ಕಳೆಯುತ್ತಾರೆ. ಚಿಕ್ಕ ಪುಟ್ಟ ಕೆಲಸ ಮಾಡುತ್ತಾ, ಗೆಳೆಯರ ಜೊತೆ ಆಡುತ್ತಾ, ಮನೆ ಸುತ್ತಲಿನ ಕಾಡು ತೋಟ ಸುತ್ತುತ್ತಾ ಕಾಲ ಕಳೆಯುತ್ತಾರೆ.

ಇನ್ನಷ್ಟು ಕಾಲ ಶಾಲೆಗಳಿಂದ ಅಡವಿ ಮಕ್ಕಳು ದೂರವುಳಿದರೆ ಶಾಲೆ ತೊರೆಯುವ ಸಾಧ್ಯತೆಗಳು ಹೆಚ್ಚಾಗಲಿದೆ. ಇದನ್ನರಿತ ಮಂಗಳೂರಿನ ಸಂಸ್ಥೆಯೊಂದು ಮಕ್ಕಳನ್ನು ಮತ್ತೆ ಶಾಲೆಗಳತ್ತ ಸೆಳೆಯಲು ಯೋಜನೆ ಹಮ್ಮಿಕೊಂಡಿದೆ.

ಹಾಲಕ್ಕಿ ಸಮುದಾಯದ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಮಕ್ಕಳಿಗಾಗಿ ಚಿತ್ರ ಬಿಡಿಸಿದರು.

ಎಲ್ಲೆಲ್ಲಿ? ಮಂಗಳೂರಿನ ಸಹ್ಯಾದ್ರಿ ಸಂಚಯ ಸಂಸ್ಥೆ ಉತ್ತರ ಕನ್ನಡದ ಅಂಕೋಲಾ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯ್ಡಾ ಮತ್ತು ದಾಂಡೇಲಿಗಳಲ್ಲಿ ‘ವನಬೆಳಕು-ಅಡವಿ ಮಕ್ಕಳ ಸೃಜನ ವಿಕಸನ‘ ಕಾರ್ಯಕ್ರಮ ಹಮ್ಮಿಕೊಂಡಿದೆ. ಪರಿಸರವಾದಿ ದಿನೇಶ ಹೊಳ್ಳ ನೇತೃತ್ವದ ಸಂಸ್ಥೆ ಸಿದ್ದಿ, ಹಾಲಕ್ಕಿ ಸಮುದಾಯಗಳ ಹಾಡಿಗಳಲ್ಲಿ ಎರಡು ತಿಂಗಳುಗಳ ಕಾಲ ಪಠ್ಯ, ನೃತ್ಯ, ಸಂಗೀತ, ಜಾನಪದ ಕಲೆ, ಚಿತ್ರಕಲೆ, ಕ್ರಾಫ್ಟ್ ಸೇರಿ ವೈವಿಧ್ಯಮಯ ತರಬೇತಿ ನೀಡಲಿದೆ. 1ರಿಂದ 10ನೇ ತರಗತಿಯ 600ಕ್ಕೂ ಹೆಚ್ಚು ಮಕ್ಕಳು ಈ ತರಬೇತಿಯ ಪ್ರಯೋಜನ ಪಡೆಯಲಿದ್ದಾರೆ. ಕಲಾವಿದ ಅರವಿಂದ ಕುಡ್ಲ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳನ್ನು ಕಲಿಸಲಿದ್ದಾರೆ.

ಶಾಲೆಯಿಂದ ಹೆಚ್ಚು ಸಮಯ ದೂರವಿದ್ದರೆ ಮಕ್ಕಳು ಬಾಲ ಕಾರ್ಮಿಕರಾಗುವ ಸಾಧ್ಯತೆಯಿದೆ. ಕೆಲವೆಡೆ ಆನ್​ಲೈನ್ ಕ್ಲಾಸ್ ಸಹ ದೊರೆಯದ ಕಾರಣ ಮಕ್ಕಳ ಮನಸ್ಸನ್ನು ಕ್ರಿಯಾಶೀಲವಾಗಿಡಲು ವನಬೆಳಕು ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ದಿನೇಶ ಹೊಳ್ಳ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada