ಸಿನಿಮಾಕ್ಕಷ್ಟೆ ಸೀಮಿತ, ದೇಶದ ನೋವು ನಮ್ಮದಲ್ಲ: ಕನ್ನಡದ ನಟರ ಧೋರಣೆ
Pahalgam Terrorist Attack: ಜಮ್ಮು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಪ್ರವಾಸಿ ತಾಣ ಬೈಸರನ್‌ನಲ್ಲಿ ನಿನ್ನೆ (ಮಂಗಳವಾರ) ಉಗ್ರರು ದಾಳಿ ಮಾಡಿದ್ದಾರೆ. ಈ ಕೃತ್ಯವನ್ನು ಇಡೀ ದೇಶವೇ ಖಂಡಿಸಿದೆ. ಹಲವು ಸಿನಿಮಾ ಸೆಲೆಬ್ರಿಟಿಗಳು ಸಹ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ ಕನ್ನಡದ ನಟರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಾಶ್ಮೀರದ (Kashmir) ಪಹಲ್ಗಾಮ್ನಲ್ಲಿ (Pahalgam) ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಮಾಯಕ ಪ್ರವಾಸಿಗರ ಮೇಲೆ ನಡೆದ ಈ ನೀಚ ಕೃತ್ಯ ದೇಶವಾಸಿಗಳ ರಕ್ತ ಕುದಿಯುವಂತೆ ಮಾಡಿದೆ. ಕೆಲ ಕ್ರಿಕೆಟ್ ತಾರೆಯರು, ಸಿನಿಮಾ ತಾರೆಯರು, ಉದ್ಯಮಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಘಟನೆ ನಡೆದು 20 ಗಂಟೆಗಳ ಬಳಿಕವೂ ಸಹ ಕನ್ನಡದ ಯಾವೊಬ್ಬ ನಟರೂ ಸಹ ಕಾಶ್ಮೀರದ ಬಗ್ಗೆ ಬಹಿರಂಗ ಪ್ರತಿಕ್ರಿಯೆ ಈ ವರೆಗೆ ನೀಡಿಲ್ಲ. ನಾವು ಸಿನಿಮಾಕ್ಕೆ ಸೀಮಿತ, ದೇಶದ ನೋವು ತಮದಲ್ಲ ಎಂಬ ಧೋರಣೆಯಲ್ಲಿ ಇದ್ದಂತಿದ್ದಾರೆ ನಮ್ಮ ‘ಹೆಮ್ಮೆಯ’ ನಟರು.
ಬಾಲಿವುಡ್, ತೆಲುಗು ಚಿತ್ರರಂಗದ ಹಲವು ಸ್ಟಾರ್ ನಟ, ನಟಿಯರುಗಳು ಘಟನೆ ನಡೆದ ಕೂಡಲೇ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದಾರೆ. ತಮ್ಮ ಬೇಸರ, ನೋವು, ಸಿಟ್ಟನ್ನು ಒಬ್ಬೊಬ್ಬರು ಒಂದೊಂದು ರೀತಿ ವ್ಯಕ್ತಪಡಿಸಿದ್ದಾರೆ. ಆ ಮೂಲಕ ದೇಶದ ನೋವಿನಲ್ಲಿ ತಾವೂ ಭಾಗಿ ಆಗಿದ್ದೇವೆ ಎಂಬುದನ್ನು ತೋರ್ಪಿಸಿದ್ದಾರೆ. ಆದರೆ ಕನ್ನಡದ ಯಾವೊಬ್ಬ ಸ್ಟಾರ್ ನಟರೂ ಸಹ ಕಾಶ್ಮೀರದ ಬಗ್ಗೆ ಟ್ವೀಟ್ ಮಾಡುವ ಗೋಜಿಗೆ ಹೋಗಿಲ್ಲ. ಯಶ್, ರಿಷಬ್ ಶೆಟ್ಟಿ, ಶಿವರಾಜ್ ಕುಮಾರ್, ಸುದೀಪ್, ದರ್ಶನ್ ತೂಗುದೀಪ, ದುನಿಯಾ ವಿಜಯ್ ಯಾವೊಬ್ಬ ಸ್ಟಾರ್ ನಟರೂ ಸಹ ಕಾಶ್ಮೀರದ ಬಗ್ಗೆ ಪೋಸ್ಟ್ ಹಂಚಿಕೊಂಡಿಲ್ಲ.
Shocked and saddened by the terror attack in Pahalgam. Such incidents have no place in our society and should be strongly condemned.
My prayers are with the families of those affected.
— Ram Charan (@AlwaysRamCharan) April 22, 2025
ನೆರೆಯ ತೆಲುಗು ಚಿತ್ರರಂಗದ ರಾಮ್ ಚರಣ್, ಜೂ ಎನ್ಟಿಆರ್, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಕೆಲವರು ಕಾಶ್ಮೀರ ದಾಳಿಯ ಬಗ್ಗೆ ತಮ್ಮ ವೇದನೆಯನ್ನು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ನ ಹಲವು ನಟ-ನಟಿಯರು ಸಹ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಆ ಮೂಲಕ ನೋವಿನಲ್ಲಿ ಭಾಗಿ ಆಗಿದ್ದಾರೆ. ಆದರೆ ಕನ್ನಡದ ನಟರ ಟ್ವಿಟ್ಟರ್ ಖಾತೆಗಳಲ್ಲಿ ಅವರ ಸಿನಿಮಾಗಳು, ಅವರ ನಿರ್ಮಾಣದ ಸಿನಿಮಾಗಳು, ಅವರ ಗೆಳೆಯರ ಸಿನಿಮಾಗಳು, ಹುಟ್ಟುಹಬ್ಬದ ಶುಭಾಶಯಗಳು, ಅಭಿಮಾನಿಗಳ ಹುಚ್ಚಾಟ ಮೆಚ್ಚಿ ನೀಡಿದ ಪ್ರತಿಕ್ರಿಯೆಗಳು ಹೊರತುಪಡಿಸಿದರೆ ಇನ್ನೇನೂ ಸಿಗುವುದಿಲ್ಲ.
Heart goes out to the victims of the #Pahalgam attack. My thoughts are with their families. Praying for peace and justice.
— Jr NTR (@tarak9999) April 23, 2025
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ; ಶಿವಮೊಗ್ಗದ ಮಂಜುನಾಥ್ ಪತ್ನಿ ಮಾತು ಕೇಳಿ ರವೀನಾ ಟಂಡನ್ ರಕ್ತ ಕೊತ ಕೊತ
ಜಮ್ಮು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಪ್ರವಾಸಿ ತಾಣ ಬೈಸರನ್‌ನಲ್ಲಿ ನಿನ್ನೆ (ಮಂಗಳವಾರ) ಉಗ್ರರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಸುಮಾರು 27 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದ ಒಬ್ಬರು ಸಹ ನಿನ್ನೆಯ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇಡೀ ದೇಶವೇ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ. ಪಾಕ್ ಕೃಪಾಪೋಷಿತ ಉಗ್ರರ ದಾಳಿ ಇದೆಂದು ಆರಂಭಿಕ ತನಿಖೆಯ ವರದಿಗಳು ಹೇಳುತ್ತಿವೆ. ದಾಳಿಯ ಜವಾಬ್ದಾರಿಯನ್ನು ಟಿಆರ್ಎಫ್ (ದಿ ರೆಸಿಟೆಂಟ್ ಫ್ರಂಟ್) ಹೊತ್ತುಕೊಂಡಿದೆ. ಈಗಾಗಲೇ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರದ ಇನ್ನೂ ಕೆಲವು ಪ್ರಮುಖ ಸಚಿವರು ಸಭೆ ನಡೆಸಿದ್ದು ಸರ್ಕಾರದ ಮುಂದಿನ ಹೆಜ್ಜೆ ಏನಾಗಿರಲಿದೆ ಎಂಬುದು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:15 am, Wed, 23 April 25