AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರ ಹೇಡಿ ಕೃತ್ಯ: ಕನ್ನಡದ ನಟರು ಹೇಳಿದ್ದೇನು?

Pahalgam terror attack: ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಇಡೀ ದೇಶವೇ ಖಂಡಿಸಿದೆ. ಕನ್ನಡದ ಕೆಲ ಸ್ಟಾರ್ ನಟ, ನಟಿಯರು ಸಹ ಈ ಹೇಯ ಕೃತ್ಯದ ಬಗ್ಗೆ ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ನಟರಾದ ಶಿವರಾಜ್ ಕುಮಾರ್, ಸುದೀಪ್, ಯಶ್, ಧ್ರುವ ಸರ್ಜಾ ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಉಗ್ರರ ಹೇಡಿ ಕೃತ್ಯ: ಕನ್ನಡದ ನಟರು ಹೇಳಿದ್ದೇನು?
Sandalwood Stars
Follow us
ಮಂಜುನಾಥ ಸಿ.
|

Updated on: Apr 23, 2025 | 5:50 PM

ಜಮ್ಮು ಕಾಶ್ಮೀರದ ಪಹೆಲ್ಗಾಮ್​ನಲ್ಲಿ (Pahelgam) ಪ್ರವಾಸಿಗರ ಮೇಲೆ ಭಯೋತ್ಪಾದಕರು ನಿನ್ನೆ ನಡೆಸಿದ ದಾಳಿಯಲ್ಲಿ 28 ಮಂದಿ ನಿಧನ ಹೊಂದಿದ್ದಾರೆ. ಇಡೀ ದೇಶವೇ ಈ ದಾಳಿಯನ್ನು ಕಟು ಶಬ್ದಗಳಲ್ಲಿ ಖಂಡಿಸಿದೆ. ರಾಷ್ಟ್ರ, ವಿದೇಶದ ಕೆಲವು ಪ್ರಮುಖರು ಸಹ ಭಾರತದ ನಾಗರೀಕರ ಮೇಲೆ ನಡೆದಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳು, ಕ್ರಿಕೆಟಿಗರು ಸಹ ಪಹೆಲ್ಗಾಮ್​ ದಾಳಿಯನ್ನು ಕಟು ಶಬ್ದಗಳನ್ನು ಖಂಡಿಸಿದ್ದು, ಸಂತ್ರಸ್ತರ ಕುಟುಂಬದಕ್ಕೆ ಸ್ತೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಇದೀಗ ಕನ್ನಡದ ಕೆಲ ನಟ-ನಟಿಯರು ಸಹ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವು ಹಂಚಿಕೊಂಡಿದ್ದಾರೆ.

ನಟ ಶಿವರಾಜ್ ಕುಮಾರ್ ಟ್ವೀಟ್ ಮಾಡಿ, ‘ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್‌ನಲ್ಲಿ ನಡೆದ ಅಟ್ಯಾಕ್ ಕ್ಷಮಿಸಲಾರದ ಅಪರಾಧ, ಭಯೋತ್ಪಾದನೆ ಮಾಡುವ ಯಾರೇ ಆಗಿರಲಿ, ಅವರು ಬದುಕಲು ಅನರ್ಹ. ದಾಳಿಯಲ್ಲಿ ಮೃತರಾದವರಿಗೆ ನನ್ನ ಅಂತಿಮ ನಮನ, ಮೃತರ ಕುಟುಂಬಸ್ಥರಿಗೆ ನನ್ನ ಸಾಂತ್ವನ’ ಎಂದಿದ್ದಾರೆ.

ನಟ ಸುದೀಪ್ ಟ್ವೀಟ್ ಮಾಡಿ, ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ಹೃದಯ ವಿದ್ರಾವಕ. ಇದು ಕೇವಲ ವ್ಯಕ್ತಿಗಳ ಮೇಲೆ ನಡೆದಿರುವ ದಾಳಿ ಮಾತ್ರವಲ್ಲ, ಬದಲಾಗಿ ನಮ್ಮ ರಾಷ್ಟ್ರದ ಚೈತನ್ಯದ ಮೇಲೆ ನಡೆಸಲಾಗಿರುವ ದಾಳಿ. ಇದು ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆಯ ಸಮಯ ಎಂದಿರುವ ಅವರು, ‘ಈ ಹೇಯ ಕೃತ್ಯದಲ್ಲಿ ಭಾಗಿ ಆಗಿರುವವರನ್ನು ಶೀಘ್ರವೇ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಬಳಿ ಮನವಿ ಮಾಡಿದ್ದಾರೆ.

ನಟ ಯಶ್, ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ‘ಅಮಾಯಕ ನಾಗರೀಕರ ಮೇಲೆ ನಡೆದ ದಾಳಿ ತೀವ್ರ ದುಃಖ ನೀಡಿದೆ. ಅಮಾಯಕರ ಮೇಲಿನ ಈ ದಾಳಿ ಅತ್ಯಂತ ಹೇಯಕರ. ಇಂಥಹಾ ಕಠಿಣ ಸಮಯದಲ್ಲಿ ಸಂತ್ರಸ್ತರ ಕುಟುಂಬದ ಜೊತೆಗೆ ನಿಲ್ಲುವುದರ ಜೊತೆಗೆ ತೀವ್ರ ದುಃಖದಲ್ಲಿರುವ ದೇಶದ ಪರವಾಗಿ ನಿಲ್ಲುತ್ತಿದ್ದೇನೆ’ ಎಂದಿದ್ದಾರೆ. ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಸಹ ಪೋಸ್ಟ್ ಹಂಚಿಕೊಂಡಿದ್ದು, ‘ಈ ಹೃದಯ ಒಡೆಯುವ ಸುದ್ದಿ ಕೇಳಿ ಸ್ಥಿಮಿತವನ್ನೇ ಕಳೆದುಕೊಂಡಂತಾಗಿದೆ. ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡ ಎಲ್ಲರ ಕುಟುಂಬದ ಬಗ್ಗೆ ಕಾಳಜಿ ಇದೆ. ನಿಮ್ಮ ಜೊತೆ ನಾವೂ ಶೋಕ ಆಚರಿಸುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ:ಸಿನಿಮಾಕ್ಕಷ್ಟೆ ಸೀಮಿತ, ದೇಶದ ನೋವು ನಮ್ಮದಲ್ಲ: ಕನ್ನಡದ ನಟರ ಧೋರಣೆ

ನಟ ಧ್ರುವ ಸರ್ಜಾ ಟ್ವೀಟ್ ಮಾಡಿ, ‘ಭಾರತಾಂಬೆಯ ಕಳಶದಂತಿರೋ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ. ಪಹಲ್ಗಾಮ್ ನಲ್ಲಿ ಉಗ್ರರು, ಅಮಾಯಕರ ಮೇಲೆ ನಡೆಸಿದಂತ ಕೃತ್ಯ ಎಂದಿಗೂ ಯಾರೂ‌ ಕ್ಷಮಿಸಲಾಗದು. ಎಲ್ಲಾ ಧರ್ಮದ ಸಾರ ಪ್ರೀತಿ ಹಾಗೂ ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದ್ದು ಹಿಂಸೆ ಹಾಗೂ ದ್ವೇಷದಿಂದ ಸಾಧಿಸಲು ಸಾಧ್ಯವೇ ಇಲ್ಲ. ಪ್ರಾಣ ಬಿಟ್ಟವರ ಆತ್ಮಕ್ಕೆ ಶಾಂತಿ‌ ಸಿಗಲಿ ಕಳೆದುಕೊಂಡವರ ಕುಟುಂಬಗಳಿಗೆ ದೇವರು ಧೈರ್ಯ ಕರುಣಿಸಲಿ’ ಎಂದಿದ್ದಾರೆ.

ನಟ, ನಿರ್ದೇಶಕ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದು, ‘ಮುಗ್ಧ ಪ್ರವಾಸಿಗರ ಮೇಲೆ ದಾಳಿ ಮಾಡುವುದು ಕೇವಲ ಭಯೋತ್ಪಾದಕ ಕೃತ್ಯವಲ್ಲ, ಇದು ಮಾನವೀಯತೆ ಮತ್ತು ಈ ರಾಷ್ಟ್ರದ ಆತ್ಮದ ಮೇಲಿನ ದಾಳಿ. ಇದಕ್ಕೆ ಉತ್ತರಿಸದೆ ಇರಲು ಸಾಧ್ಯವಿಲ್ಲ. ನಮಗೆ ಸ್ಪಷ್ಟ ಮತ್ತು ಶಕ್ತಿಯುತ ಪ್ರತಿಕ್ರಿಯೆ ಬೇಕು. ಈ ಕೃತ್ಯ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರಧಾನಿ ಮೋದಿ, ಗೃಹ ಸಚಿವ ಹಾಗೂ ಭದ್ರತಾ ಸಚಿವರ ಬಳಿ ಮನವಿ ಮಾಡಿದ್ದಾರೆ. ಜೊತೆಗೆ ಸಂತ್ರಸ್ತರ ಕುಟುಂಬದ ನೋವಿನಲ್ಲಿ ಭಾಗಿ ಆಗುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ