
ಬೆಂಗಳೂರು, (ನವೆಂಬರ್ 01): ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಸರ್ಕಾರಿ ಕಚೇರಿಗಳ ಮೇಲೆ ಬಾವುಟವನ್ನ ಹರಿಸುವುದು ಕಡ್ಡಾಯ ಮಾಡಲಾಗುವುದು. ಖಾಸಗಿ ಕಂಪನಿಗಳಲ್ಲೂ ಕನ್ನಡದ ಬಾವುಟವನ್ನು ಹಾರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಧಾನಸೌಧದ ಮೇಲೆಯೂ ಈ ಧ್ವಜ ಹಾರಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡಿದ ಬಳಿಕ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಕರ್ನಾಟಕದ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದರು. ಈ ಭಾಷೆಗೆ ಯಾವುದೇ ಗಡಿ ಇಲ್ಲ. ಬ್ರಿಟೀಷರಿಗೆ ನಮ್ಮಮಾತೃಭಾಷೆ ಯಾವುದು ನಮೂದು ಮಾಡಿ ಅಂತಾ ಬಿಟ್ಟು ಹೋದ ಇತಿಹಾಸ ಇದೆ. ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ , ಖಾಸಗಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸಲು ಆದೇಶ ಹೊರಡಿಸಲು ಸಿದ್ಧತೆ ಮಾಡ್ಕೊಂಡಿದೇವೆ. ನಿನ್ನೆ ಮೊನ್ನೆ ಕೂಡ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ಈ ಅಧಿವೇಶನದಲ್ಲಿ ಕೆಲವು ವಿಚಾರಗಳನ್ನ ಮಂಡನೆ ಮಾಡುತ್ತೇವೆ. ನಮ್ಮ ಧ್ವಜವನ್ನು ನಾವು ಎಲ್ಲಾ ಕಡೆ ಬಳಸಲು ಬದ್ಧರಾಗಿರಬೇಕು. ಬೇರೆ ಯಾವ ರಾಜ್ಯದಲ್ಲೂ ಹೀಗೆ ಧ್ವಜ ಬಳಕೆ ಇಲ್ಲ. ಸಾರ್ವಜನಿಕ ಚರ್ಚೆ, ಶಾಸಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತೇವೆ. ಜೊತೆಗೆ ಕೇಂದ್ರಕ್ಕೆ ನಿರ್ಣಯ ಕಳಿಸಿಕೊಡ್ತೇವೆ ಎಂದರು.
ಕನ್ನಡ ನಾಡಿನ ಸಾಂಪ್ರದಾಯಿಕ ಹಳದಿ ಮತ್ತು ಕೆಂಪು ಬಣ್ಣದ ಧ್ವಜದಲ್ಲಿ ಮತ್ತೊಂದು ಬಣ್ಣವನ್ನು ಹಾಗೂ ಮಧ್ಯ ಭಾಗದಲ್ಲಿ ಕರ್ನಾಟಕದ ರಾಜ್ಯ ಲಾಂಛನವನ್ನು ಅಳವಡಿಸಲು ನಿರ್ಧರಿಸಲಾಗಿದೆ. ಧ್ವಜ 71-72 ರ ಚೌಕಟ್ಟಿನಲ್ಲಿ ವಿವಿಧ ರೀತಿಯಲ್ಲಿ ಸಂಭ್ರಮಿಸಲು ಮತ್ತು ಆಚರಿಸಲು ಸೂಕ್ತ ಮಾರ್ಗದರ್ಶನಗಳೊಂದಿಗೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿ ನಂತರ ಅನುಮತಿಗಾಗಿ ಕೇಂದ್ರಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.

‘ಭುವನೇಶ್ವರಿ ತಾಯಿ ಕನ್ನಡವನ್ನು ಕಾಪಾಡುವ ದೇವತೆ. ನಾವಿಂದು ತಾಯಿಗೆ ಪೂಜೆ ಸಲ್ಲಿಸಿದ್ದೇವೆ. ಕನ್ನಡ ಭಾಷೆಗೆ ಯಾವುದೇ ಗಡಿಗಳಿಲ್ಲ. ಬ್ರಿಟಿಷರ ಆಡಳಿತ ಕಾಲದಲ್ಲೂ ಮಕ್ಕಳಿಗೆ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಇತಿಹಾಸವಿತ್ತು. ಸಾಂಸ್ಕೃತಿಕವಾಗಿ ಈ ಭಾಷೆಗೆ ಸುದೀರ್ಘ ಇತಿಹಾಸವಿದೆ. ಇಂತಹ ಧ್ವಜ ಮಾದರಿ ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲ. ನಮ್ಮ ಉಸಿರು, ನಮ್ಮ ಭಾಷೆ, ನೆಲ ಹಾಗೂ ಧ್ವಜವನ್ನು ರಕ್ಷಿಸಲು ನಾವು ಸದಾ ಬದ್ಧರಾಗಿದ್ದೇವೆ. ದೇಶ-ವಿದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತಿರುವ ಎಲ್ಲಾ ಕನ್ನಡಿಗರಿಗೂ ಹೆಮ್ಮೆಯಿಂದ ಧನ್ಯವಾದಗಳನ್ನು ಅರ್ಪಿಸುವುದಾಗಿ’ ಅವರು ಹೇಳಿದರು.
Published On - 10:23 am, Sun, 1 November 26