ಕನ್ನಡ ರಾಜ್ಯೋತ್ಸವ: ಕಲಾತ್ಮಕ ಬ್ಯಾಟಿಂಗ್ ನಿಂದ ವೀಕ್ಷಕರಲ್ಲಿ ರೋಮಾಂಚನ ಹರಿಸುತ್ತಿದ್ದ ಗುಂಡಪ್ಪ ವಿಶ್ವನಾಥ್ ಗೆ ಇನ್ನೂ ಕರ್ನಾಟಕ ಪ್ರಶಸ್ತಿ ಸಿಗದಿರುವುದು ಆಶ್ಚರ್ಯ ಹುಟ್ಟಿಸುತ್ತದೆ!

ಕನ್ನಡ ರಾಜ್ಯೋತ್ಸವ: ಹಾಗೆ ತಾನಾಡಿದ ಮೊದಲ ಪ್ರಥಮ ದರ್ಜೆ ಪಂದ್ಯದಲ್ಲಿ ದ್ವಿಶತಕ ಮತ್ತು ಚೊಚ್ಚಲು ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿಸ ಮೊದಲ ಭಾರತೀಯನೆಂಬ ಖ್ಯಾತಿಗೆ ಅವರು ಪಾತ್ರರಾದರು. ಕ್ರಿಕೆಟ್ ಪಂಡಿತರು ವಿಶಿಯ ಬ್ಯಾಟಿಂಗ್ ಅನ್ನು ಚಲಿಸುವ ಕಾವ್ಯಕ್ಕೆ (poetry in motion) ಹೋಲಿಸುತ್ತಾರೆ. ಅವರ ಆಟದ ಸೊಬಗು ಹಾಗಿತ್ತು. ರಿಸ್ಟೀ ಎಲಿಗೆನ್ಸ್ ಗೆ ವಿಶಿ ಮತ್ತೊಂದು ಹೆಸರಾಗಿದ್ದರು!

ಕನ್ನಡ ರಾಜ್ಯೋತ್ಸವ: ಕಲಾತ್ಮಕ ಬ್ಯಾಟಿಂಗ್ ನಿಂದ ವೀಕ್ಷಕರಲ್ಲಿ ರೋಮಾಂಚನ ಹರಿಸುತ್ತಿದ್ದ ಗುಂಡಪ್ಪ ವಿಶ್ವನಾಥ್ ಗೆ ಇನ್ನೂ ಕರ್ನಾಟಕ ಪ್ರಶಸ್ತಿ ಸಿಗದಿರುವುದು ಆಶ್ಚರ್ಯ ಹುಟ್ಟಿಸುತ್ತದೆ!
ಗುಂಡಪ್ಪ ವಿಶ್ವನಾಥ್ ಬ್ಯಾಟಿಂಗ್ ಸೊಬಗು!
Follow us
|

Updated on:Nov 01, 2023 | 10:32 AM

ಕರ್ನಾಟಕ ಸರ್ಕಾರ ರಾಜ್ಯೋತ್ಸವ ಆಚರಣೆಯ (Kannada Rajyotsava) ಸಂದರ್ಭದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna) ಸಾಧಕರಿಗೆ ನೀಡುತ್ತದೆ ಮತ್ತು ಇದುವರೆಗೆ ರಾಜ್ಯದ 9 ಮಹಾನ್ ಸಾಧಕರು ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಯಾರ‍್ಯಾರಿಗೆ ಸಿಕ್ಕಿದೆ ಅಂತ ಒಮ್ಮೆ ನೀವು ಪಟ್ಟಿಯನ್ನು ಅವಲೋಕಿಸಿದರೆ, ಒಬ್ಬ ಸಾಧಕನ ಹೆಸರು ಪಟ್ಟಿಯಲ್ಲಿ ಇಲ್ಲದಿರೋದು ನಿಸ್ಸಂದೇಹವಾಗಿ ಸೋಜಿಗ ಹುಟ್ಟಿಸುತ್ತದೆ. ಗುಂಡಪ್ಪ ರಂಗನಾಥ್ ವಿಶ್ವನಾಥ್ (GR Vishwanath) ಹೆಸರು ಕನ್ನಡಿಗರು ಬಿಡಿ, ಎಲ್ಲ ಭಾರತೀಯರಿಗೆ ಗೊತ್ತು. ಕ್ರಿಕೆಟ್ ಒಂದು ಸದ್ಗೃಹಸ್ಥರ ಕ್ರೀಡೆ ಅನ್ನೋದು ನಿಜವಾದರೆ, ಅದರ ನಿಜವಾದ ಪ್ರತಿನಿಧಿ ಕನ್ನಡಿಗರ ಕಣ್ಮಣಿ ವಿಶಿ.  ಹೌದು, ಕ್ರಿಕೆಟ್ ಲೋಕದಲ್ಲಿ ಈ ಕುಳ್ಳಗಾತ್ರದ ಮಹಾನ್ ಬ್ಯಾಟರ್ ವಿಶಿ ದಿ ಜಂಟಲ್ ಮ್ಯಾನ್ ಅಂತಲೇ ಪರಿಚಿತರು. ವಿಶಿಯ ಬ್ಯಾಟಿಂಗ್ ವೈಖರಿಯನ್ನು ಪದಗಳಲ್ಲಿ ಬಣ್ಣಿಸಲಾಗದು, ಅದನ್ನು ನೋಡಿಯೇ ಆಸ್ವಾದಿಸಬೇಕು. ಕಲಾತ್ಮಕತೆ ಅನ್ನೋ ಪದ ಇವರ ಬ್ಯಾಟಿಂಗ್ ಶೈಲಿ ನೋಡಿಯೇ ಹುಟ್ಟಿರಬಹುದು ಅನಿಸುತ್ತದೆ. 74 ವಸಂತಗಳನ್ನು ಕಂಡು 75ನೇಯದನ್ನು ಎದುರು ನೋಡುತ್ತಿರುವ ವಿಶಿಯನ್ನು ರಾಜ್ಯೋತ್ಸವದ ಸಮಯದಲ್ಲಿ ಮತ್ತು ವಿಶ್ವಕಪ್ ಕ್ರಿಕೆಟ್-2023 ಭಾರತದಲ್ಲಿ ನಡೆಯುತ್ತಿರುವಾಗ ನೆನಪಿಸಿಕೊಳ್ಳುವುದು ಒಂದು ನೋಸ್ಟಾಲ್ಜಿಕ್ ಅನುಭವ.

ಕೌನ್ ಬನೇಗಾ ಕರೋಡಪತಿ ಯಲ್ಲಿ ವಿಶಿ ಬಗ್ಗೆ ರೂ. 7.5 ಕೋಟಿ ಪ್ರಶ್ನೆ!

ಅಮಿತಾಬ್ ಬಚ್ಚನ್ ನಡೆಸುವ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮವನ್ನು ನೀವು ನಿಯಮಿತವಾಗಿ ವೀಕ್ಷಿಸುತ್ತಿದ್ದರೆ ಕಳೆದ ಸೀಸನ್ ನಲ್ಲಿ ಅವರು, ಒಬ್ಬ ಸ್ಪರ್ಧಿಗೆ ಕೇಳಿದ ರೂ. 7.5 ಕೋಟಿಯ ಪ್ರಶ್ನೆ ನೆನಪಿರುತ್ತದೆ. ಆದು ವಿಶ್ವನಾಥ್ ಕುರಿತಾಗಿತ್ತು-ವಿಶ್ವನಾಥ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಯಾವ ತಂಡದ ವಿರುದ್ಧ ತಮ್ಮ ಚೊಚ್ಚಲು ಶತಕ ಬಾರಿಸಿದರು? ಆ ಕಾಂಟೆಸ್ಟಂಟ್ ಹಳಬರಾಗಿದ್ದರೆ ಉತ್ತರಿಸುವ ಪ್ರಯತ್ನಿಸುತ್ತಿದ್ದರೇನೋ? ಆದರೆ ಈ ಸ್ಪರ್ಧಿ ಗೊತ್ತಿಲ್ಲ ಅಂತ ಹೇಳಿ ಹಿಂದೆ ಸರಿದರು. ವಿಶಿ ರಣಜಿ ಟ್ರೋಫಿ 1968-69 ಸಾಲಿನಲ್ಲಿ ಆಂಧ್ರಪ್ರದೇಶದ ವಿರುದ್ಧ ತಾವಾಡಿದ ಮೊದಲ ಪಂದ್ಯದಲ್ಲೇ ಅಮೋಘ ದ್ವಿಶತಕ ಬಾರಿಸಿ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. 1969 ಆಸ್ಟ್ರೇಲಿಯ ಭಾರತ ಪ್ರವಾಸ ಬಂದಾಗ ಆಗ 20ವರ್ಷದವರಾಗಿದ್ದ ವಿಶಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕೇ ಬಿಟ್ಟಿತು. ಕಾನ್ಪುರ್ ಟೆಸ್ಟ್ ನಡೆದ ಟೆಸ್ಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಸೊನ್ನೆಗೆ ಔಟಾಗಿ ಪೆವಿಲಿಯನ್ ಗೆ ಬಂದು ಹತಾಷತೆಯಿಂದ ಒಂದು ಮೂಲೆಯಲ್ಲಿ ಕೂತುಬಿಟ್ಟಿದ್ದರು. ಆಗ ಟೀಮಿನ ಕ್ಯಾಪ್ಟನ್ ಆಗಿದ್ದ ಮನ್ಸೂರ್ ಅಲಿ ಖಾನ್ ಪಟೌಡಿ, ವಿಶಿಯಲ್ಲಿ ಮನಸ್ಥೈರ್ಯ ತುಂಬಿದರು. ‘ಎರಡನೇ ಇನ್ನಿಂಗ್ಸ್ ನಲ್ಲಿ ನೀನು ಸೊನ್ನೆಗೆ ಔಟಾದರೂ ಮುಂದಿನ ಟೆಸ್ಟ್ ಗೆ ಆಡುವ ಎಲೆವೆನ್ ನಲ್ಲಿ ಇರ್ತಿಯಾ,’ ಅಂತ ಹೇಳಿದ್ದು ವಿಶಿಯ ಕ್ರಿಕೆಟ್ ಕರೀಯರ್ ನಲ್ಲಿ ಮ್ಯಾಜಿಕ್ ಮಾಡಿತ್ತು. ಎರಡನೇ ಇನ್ಮಿಂಗ್ಸ್ ನಲ್ಲಿ ಅತ್ಯಾಕರ್ಷಕ 137 ರನ್ ಬಾರಿಸಿದ ವಿಶಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ತಮ್ಮ ಆಗಮನವನ್ನು ಸಾರಿದ್ದರು!

ಹಾಗೆ ತಾನಾಡಿದ ಮೊದಲ ಪ್ರಥಮ ದರ್ಜೆ ಪಂದ್ಯದಲ್ಲಿ ದ್ವಿಶತಕ ಮತ್ತು ಚೊಚ್ಚಲು ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯನೆಂಬ ಖ್ಯಾತಿಗೆ ಅವರು ಪಾತ್ರರಾದರು. ಕ್ರಿಕೆಟ್ ಪಂಡಿತರು ವಿಶಿಯ ಬ್ಯಾಟಿಂಗ್ ಅನ್ನು ಚಲಿಸುವ ಕಾವ್ಯಕ್ಕೆ (poetry in motion) ಹೋಲಿಸುತ್ತಾರೆ. ಅವರ ಆಟದ ಸೊಬಗು ಹಾಗಿತ್ತು. ರಿಸ್ಟೀ ಎಲಿಗೆನ್ಸ್ ಗೆ ವಿಶಿ ಮತ್ತೊಂದು ಹೆಸರಾಗಿದ್ದರು! ಅವರ ಸ್ಕ್ವೇರ್ ಕಟ್, ಲೇಟ್ ಕಟ್, ಕವರ್ ಡ್ರೈವ್ ಮತ್ತು ಫ್ಲಿಕ್ ಗಳು ನೋಡುಗರ ಕಣ್ಣಿಗೆ ರಸದೌತಣ. ಲಿಟ್ಲ್ ಮಾಸ್ಟರ್ ಅಂತ ಮೊದಲು ಕರೆಸಿಕೊಂಡವರು ಇವರೇ ಅಂದರೆ ಉತ್ಪ್ರೇಕ್ಷೆ ಅನಿಸದು.

ನಾ ಕಂಡ ಶ್ರೇಷ್ಠ ಇನ್ನಿಂಗ್ಸ್  ಅಂದರು  ಗಾವಸ್ಕರ್!

1975 ರಲ್ಲಿ ಬಲಾಢ್ಯ ವೆಸ್ಟ್ ಇಂಡೀಸ್ ತಂಡದ ವಿರುದ್ಧ ವಿಶಿ ಆಗಿನ ಮದ್ರಾಸ್ ಚೆಪಾಕ್ ಮೈದಾನದಲ್ಲಿ ಬಾರಿಸಿದ ಅಜೇಯ 97 ರನ್ ಗಳ ಇನ್ನಿಂಗ್ಸ್ ಸರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್ ಗಳಲ್ಲಿ ಒಂದಾಗಿದೆ. ಕೆಲ ವರ್ಷಗಳ ಹಿಂದೆ ವಿಸ್ಡನ್, ಟೆಸ್ಟ್ ಕ್ರಿಕೆಟ್ ಇತಿಹಾಸದ 100 ಸರ್ವಶ್ರೇಷ್ಠ ಇನ್ನಿಂಗ್ಸ್ ಗಳ ಪಟ್ಟಿ ಪ್ರಕಟಿಸಿತ್ತು. ಅದರಲ್ಲಿ ವಿಶಿಯ ಈ ಇನ್ನಿಂಗ್ಸ್ 38ನೇ ಸ್ಥಾನದಲ್ಲಿತ್ತು. ಅವರ ಭಾಮೈದ ಸುನೀಲ್ ಗಾವಸ್ಕರ್ ಈ ಇನ್ನಿಂಗ್ಸ್ ನೋಡಿ ಅದೆಷ್ಟು ಫಿದಾ ಆಗಿದ್ದರೆಂದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ತಾವು ಕಂಡ ಅತಿ ಶ್ರೇಷ್ಠ ಇನ್ನಿಂಗ್ಸ್ ಅಂತ ಈಗಲೂ ಹೇಳುತ್ತಾರೆ. ಖುದ್ದು ವಿಶಿಯೇ, ‘ಅವತ್ತು ನಾನು ಡಿವೈನ್ ಟಚ್ ನಲ್ಲಿದ್ದೆ, ಬ್ಯಾಟ್ ಮಾಡುವಾಗ ನನ್ನಿಂದ ಪ್ರಮಾದ ಜರುಗುವ ಚಾನ್ಸೇ ಇರಲಿಲ್ಲ. ನಾನು ಹೊಡತ ಬಾರಿಸಿದಾಗೆಲ್ಲ ಸ್ಲಿಪ್ಸ್ ನಲ್ಲಿ ನಿಂತಿದ್ದ ಆಲ್ವಿನ್ ಕಾಲಿಚರಣ್, ಕ್ಲೈವ್ ಲಾಯ್ಡ್ ಮತ್ತು ವಿಕೆಟ್ ಕೀಪರ್ ಡೆರಿಕ್ ಮುರ್ರೆ ‘ವೋವ್!’ ಅಂತ ಉದ್ಗರಿಸುತ್ತಾ ಚಪ್ಪಾಳೆ ತಟ್ಟುತ್ತಿದ್ದರು,’ ಎಂದು ತಮ್ಮ ಆತ್ಮಕಥೆ ‘ರಿಸ್ಟ್ ಅಸ್ಸುರ್ಡ್’ ನಲ್ಲಿ ಬರೆದುಕೊಂಡಿದ್ದಾರೆ.

ಮರುವರ್ಷ ವೆಸ್ಟ್ ಇಂಡೀಸ್ ಪ್ರವಾಸ ತೆರಳಿದ್ದ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ದಾಖಲೆ ನಿರ್ಮಿಸಿ ಬಿಟ್ಟಿತ್ತು. ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ನಾಲ್ಕನೇ ಇನ್ನಿಂಗ್ಸ್ ನಲ್ಲಿ 404 ರನ್ ಮೊತ್ತ ಚೇಸ್ ಮಾಡಿ ಅಭೂತಪೂರ್ವ ದಾಖಲೆ ಸ್ಥಾಪಿಸಿತ್ತು. ಭಾರತದ ಐತಿಹಾಸಿಕ ಗೆಲುವಿಗೆ ವಿಶ್ವನಾಥ್ (112), ಗಾವಸ್ಕರ್ (102), ಮೊಹಿಂದರ್ ಅಮರನಾಥ್ (85) ಮತ್ತು ಬ್ರಿಜೇಶ್ ಪಟೇಲ್ (ಅಜೇಯ 49) ರೂವಾರಿಗಳಾಗಿದ್ದರು. ವಿಶಿ ಮತ್ತು ಗಾವಸ್ಕರ್ ನಡುವೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 169 ರನ್ ಬಂದಿದ್ದವು.

ನನ್ನ ಸ್ಥಾನದಲ್ಲಿ ವಿಶಿ ಇರಬೇಕಿತ್ತು!

ಗಾವಸ್ಕರ್ ಅವರ ಸಹೋದರಿ ಕವಿತಾರನ್ನು ಮದುವೆಯಾಗಿರುವ ವಿಶಿಗೆ ದೈವಿಕ್ ಅಂತ ಒಬ್ಬ ಮಗನಿದ್ದಾರೆ. ವಿಶಿಯ ಅತಿ ದೊಡ್ಡ ಅಭಿಮಾನಿ ಗಾವಸ್ಕರ್ ಅಗಿದ್ದರು. ‘ವಿಶಿ ಎತ್ತರದಲ್ಲಿ ನನಗಿಂತ ಅರ್ಧ ಇಂಚು ಕುಳ್ಳ, ಆದರೆ ಅವರ ಬ್ಯಾಟಿಂಗ್ ನನಗಿಂತ ಬಹಳ ಎತ್ತರ. ಅವನು ಬಾರಿಸುವ ಹೊಡೆತಗಳನ್ನು ನಾನು ಕಲ್ಪನೆ ಮಾಡಿಕೊಳ್ಳಲಷ್ಟೇ ಸಾಧ್ಯವಾಗುತಿತ್ತು,’ ಎಂದು ಗಾವಸ್ಕರ್ ಆಗಾಗ ಹೇಳುತ್ತಿರುತ್ತಾರೆ. 80 ರ ದಶಕದ ಆರಂಭದಲ್ಲಿ ಕ್ರಿಕೆಟ್ ಇತಿಹಾಸದ ಸರ್ವಕಾಲಿಕ ಶ್ರೇಷ್ಠ ಅಲ್ ರೌಂಡರ್ ಅನಿಸಿಕೊಂಡಿರುವ ಗ್ಯಾರಿ ಸೋಬರ್ಸ್ ಗೆ ಆಗಿನ ವಿಶ್ವದ 10 ಗ್ರೇಟ್ ಬ್ಯಾಟರ್ ಗಳನ್ನು ಹೆಸರಿಸುವಂತೆ ಕೇಳಲಾಗಿತ್ತು. ಸರ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್ ಮೊದಲ ಸ್ಥಾನದಲ್ಲಿದ್ದ ಸೋಬರ್ಸ್ ಪಟ್ಟಿಯಲ್ಲಿ ಗಾವಸ್ಕರ್ 4ನೇ ಸ್ಥಾನದಲ್ಲಿದ್ದರು. ಬೇರೆ ಭಾರತೀಯ ಬ್ಯಾಟರ್ ಅದರಲ್ಲಿರಲಿಲ್ಲ. ಸೋಬರ್ಸ್ ರೇಟಿಂಗ್ ಅನ್ನು ಗೌರವಪೂರ್ವಕವಾಗಿ ಅಂಗೀಕರಿಸಿದ್ದ ಗಾವಸ್ಕರ್ 4 ನೇ ಸ್ಥಾನದಲ್ಲಿ ತಾವಲ್ಲ ವಿಶ್ವನಾಥ್ ಇರಬೇಕಿತ್ತು ಅಂತ ಹೇಳಿದ್ದರು!

ಕುಡಿತ ಬಿಡಿಸಿದ ಗಾವಸ್ಕರ್!

ಕ್ರಿಕೆಟ್ ಕರೀಯರ್ ಗೆ ವಿದಾಯ ಹೇಳಿದ ವಿಶ್ವನಾಥ್ ಕ್ರಿಕೆಟ್ ಆಡಳಿತ ವ್ಯವಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರಾದರೂ ಕುಡಿತಕ್ಕೆ ದಾಸರಾಗಿಬಿಟ್ಟಿದ್ದರು. ವಿಪರೀತ ಮದ್ಯ ಸೇವನೆಯಿಂದ ಆರೋಗ್ಯ ಹಾಳಾಗಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾದಾಗ ಗವಾಸ್ಕರ್ ಮುಂಬೈಯಿಂದ ಧಾವಿಸಿ ಬಂದಿದ್ದರು. ಕುಡಿತದಿಂದಾಗಿ ಅವರ ಆರೋಗ್ಯ ತುಂಬಾನೇ ಹಾಳಾಗಿರುವುದನ್ನು ಮನಗಂಡ ಸನ್ನಿ, ‘ವಿಶಿ, ಕ್ರಿಕೆಟ್ ಮೈದಾನದಲ್ಲಿ ನೀನು ಹಲವಾರು ಬಾರಿ ಕಠಿಣ ಸವಾಲುಗಳನ್ನು ಎದುರಿಸಿ ಟೀಮನ್ನು ರಕ್ಷಿಸಿದ್ದೆ, ವಿಶ್ವದ ಅಗ್ರಮಾನ್ಯ ಬೌಲರ್ ಗಳನ್ನು ದಂಡಿಸಿ ತಂಡಕ್ಕಾಗಿ ರನ್ ಗಳಿಸಿದ್ದೆ, ಬ್ಯಾಟಿಂಗ್ ಮಾಡುವಾಗ ನೀನು ತೋರುತ್ತಿದ್ದ ಬದ್ಧತೆ, ಶಿಸ್ತು ಬೇರೆಯವರಿಗೂ ಮಾದರಿಯಾಗಿತ್ತು. ನಿನ್ನ ದೃಢಸಂಕಲ್ಪದ ಬ್ಯಾಟಿಂಗ್ ನಿಂದ ನಾನು ಎಷ್ಟು ಪ್ರಭಾವಿತನಾಗಿದ್ದೆ ಅಂತ ನಿನಗೆ ಚೆನ್ನಾಗಿ ಗೊತ್ತು. ನಿನ್ನಂಥ ಚಾಂಪಿಯನ್ ಗೆ ಕುಡಿತ ಬಿಡೋದು ಒಂದು ಸವಾಲೇ?’ ಅಂತ ವಿಶಿಯ ಕೈಯನ್ನು ಹಿಡಿದುಕೊಂಡು ಹೇಳಿದ್ದರು.

ಸನ್ನಿಯ ಮಾತು ವಿಶಿಯ ಮೇಲೆ ಭಾರೀ ಪರಿಣಾಮ ಬೀರಿತು, ಕವಿತಾ ಮತ್ತು ದೈವಿಕ್ ಕುಡಿತ ಬೇಡ ಅಂತ ಗೋಗರೆದಾಗೆಲ್ಲ ಒಂದರೆಡು ದಿನ ಅದರಿಂದ ದೂರವಾಗಿ ಪುನಃ ಕುಡಿತಕ್ಕೆ ಮರಳುತ್ತಿದ್ದ ವಿಶಿ; ಗಾವಸ್ಕರ್ ಆಸ್ಪತ್ರೆಯಲ್ಲಿ ಆಡಿದ ಮಾತುಗಳ ಬಳಿಕ ಇದುವರೆಗೆ ಒಂದೇ ಒಂದ ಹನಿ ಮದ್ಯ ಸೇವಿಸಿಲ್ಲ! ತನ್ನಣ್ಣನ ಮಹದುಪಕಾರವನ್ನು ಕವಿತಾ ಕೃತಜ್ಞತೆಯಿಂದ ನೆನೆಯುತ್ತಾರೆ.

ವಿಶಿ ದಿ ಜಂಟಲ್​ಮ್ಯಾನ್ ಕ್ರಿಕೆಟರ್

ವಿಶಿಯನ್ನು ಜಂಟಲ್ ಮ್ಯಾನ್ ಅಂತ ಯಾಕೆ ಕರೆಯುತ್ತಾರೆ ಗೊತ್ತಾ? 1979ರಲ್ಲಿ ಭಾರತೀಯ ಕ್ರಿಕೆಟ್ ಸುವರ್ಣ ಮಹೋತ್ವವ ಅಂಗವಾಗಿ ಇಂಗ್ಲೆಂಡ್ ವಿರುದ್ಧ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಒಂದು ಟೆಸ್ಟ್ ಪಂದ್ಯ ಆಯೋಜಿಸಲಾಗಿತ್ತು. ಇಂಗ್ಲೆಂಡ್ ಬ್ಯಾಟರ್ ಬಾಬ್ ಟೇಲರ್ ವಿರುದ್ಧ ಕಾಟ್ ಬಿಹೈಂಡ್ ಗೆ ಅಪೀಲ್ ಮಾಡಿದಾಗ ಅಂಪೈರ್ ಅದನ್ನು ಪುರಸ್ಕರಿಸಿದ್ದರು. ಆ ಪಂದ್ಯದಲ್ಲಿ ಭಾರತದ ಕ್ಯಾಪ್ಟನ್ ಆಗಿದ್ದ ವಿಶಿ ಸ್ಲಿಪ್ಸ್ ನಲ್ಲಿ ಫೀಲ್ಡ್ ಮಾಡುತ್ತಿದ್ದರು. ಆವರಿಗೆ ಟೇಲರ್ ನಿಕ್ ಮಾಡಿಲ್ಲ ಅನ್ನೋದು ಖಾತ್ರಿಯಾಗಿತ್ತು. ಹಾಗಾಗೇ ಜೋಲು ಮೋರೆ ಹಾಕ್ಕೊಂಡು ಪೆವಿಲಿಯನ್ ದಾರಿ ಹಿಡಿದಿದ್ದ ಟೇಲರ್ ರನ್ನು ವಾಪಸ್ಸು ಕರೆಸಿ ಬ್ಯಾಟಿಂಗ್ ಮುಂದುವರಿಸುವಂತೆ ಹೇಳಿದ್ದರು. ಅವರು ಪ್ರದರ್ಶಿಸಿದ ಕ್ರೀಡಾಸ್ಪೂರ್ತಿ ಭಾರತ ತಂಡಕ್ಕೆ ಮುಳುವಾಯಿತು. ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡ ಟೇಲರ್ ಮತ್ತು ಇಯಾನ್ ಬೋಥಮ್ ಶತಕದ ಜೊತೆಯಾಟದಿಂದ ಚೇತರಿಸಿಕೊಂಡು ಅಂತಿಮವಾಗಿ ಪಂದ್ಯ ಗೆದ್ದಿತ್ತು! ಆದರೆ, ವಿಶಿಯ ಸ್ವಭಾವ ಹಾಗಿತ್ತು ಮಾರಾಯ್ರೆ, ಅವರು ತೋರಿದ ಕ್ರೀಡಾಸ್ಪೂರ್ತಿ ಕ್ರೀಡೆಯ ಗರಿಮೆಯನ್ನು ಹೆಚ್ಚಿಸಿತ್ತು.

ವಿಶಿ ಕರ್ನಾಟಕ ರತ್ನ ಪ್ರಶಸ್ತಿಗೆ ಯೋಗ್ಯ!

ಮೊದಲೆರಡು ವಿಶ್ವಕಪ್ 1975, 1979- ಭಾರತೀಯ ತಂಡದ ಭಾಗವಾಗಿದ್ದ ವಿಶಿಯ ಬಗ್ಗೆ ಬರೆಯಲು ಬೆಟ್ಟದಷ್ಟಿದೆ. ಅದು ಮುಗಿಯಲಾರದು. ಆಡಿದ 91 ಟೆಸ್ಟ್ ಪಂದ್ಯಗಳಲ್ಲಿ 14 ಶತಕ ಮತ್ತು 42 ರ ಸರಾಸರಿಯೊಂದಿಗೆ 6080 ರನ್ ಗಳಿಸಿದ ಅವರು ಶತಕ ಬಾರಿಸಿದಾಗ ಭಾರತ ಸೋಲುತ್ತಿರಲಿಲ್ಲ! ಈಗ ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರ ತಮ್ಮ ಜಮಾನಾದ ಅತ್ಯಂತ ಕಲಾತ್ಮಕ ಮತ್ತು ವಿಶ್ವಶ್ರೇಷ್ಠರಲ್ಲಿ ಒಬ್ಬ ಬ್ಯಾಟರ್ ಹಾಗೂ ಕ್ರೀಡೆಯ ಅದ್ವಿತೀಯ ರಾಯಭಾರಿ ಅನಿಸಿಕೊಂಡಿರುವ ಗುಂಡಪ್ಪ ವಿಶ್ವನಾಥ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಬಗ್ಗೆ ಯೋಚಿಸಬೇಕು.

Published On - 10:02 am, Wed, 1 November 23

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ