ಬೆಂಗಳೂರು: ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಏನು ಮಾಡುತ್ತದೋ ಅದನ್ನು ನಾನು ಮಾಡ್ತೀನಿ. ಸೋತವನನ್ನು ಡಿಸಿಎಂ ಮಾಡಿದ್ದಾರೆ ಅಂದ್ರೆ ನನ್ನ ಭವಿಷ್ಯವನ್ನು ಅವರೇ ನೋಡಿಕೊಳ್ತಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಆಲೋಚನೆ ಮಾಡುವ ಮುಂಚೆಯೇ ವರಿಷ್ಠರು ಆಲೋಚನೆ ಮಾಡಿದ್ದಾರೆ. ಶಾಸಕನಾಗದಿದ್ದರೂ ನನ್ನನ್ನು ಪಕ್ಷದ ಹೈಕಮಾಂಡ್ ಗುರ್ತಿಸಿ ಮಂತ್ರಿ ಮಾಡಿದ್ದಾರೆ. ಮಂತ್ರಿ ಮಾಡುವಾಗಲೇ ಅವರು ಆಲೋಚನೆ ಮಾಡಿಯೇ ನಿರ್ಧಾರ ಮಾಡಿರುತ್ತಾರೆ. ನನ್ನನ್ನು ಸಚಿವ ಸಂಪುಟದಲ್ಲಿ ಮುಂದುವರಿಸಬೇಕು ಎಂದಾದರೆ ಯಾವುದಾದರೂ ರೂಪದಲ್ಲಿ ಮುಂದುವರಿಸುತ್ತಾರೆ, ಇಲ್ಲವಾದರೆ ಇಲ್ಲ ಎಂದರು.
ನಾನು ಪಕ್ಷದ್ರೋಹ ಮಾಡಲ್ಲ:
ರಾಜಕೀಯದಲ್ಲಿ ಏರಿಳಿತಗಳು ಇರುತ್ತವೆ, ಏನೂ ಮಾಡೋದಕ್ಕೆ ಆಗುವುದಿಲ್ಲ. ಅವರು ಯಾವ ನಿರ್ಧಾರ ತೆಗೆದುಕೊಂಡರೂ ನಾನು ಒಪ್ಪುವುದು ಅನಿವಾರ್ಯ. ನಾನು ಯಾವುದೇ ಕಾರಣಕ್ಕೂ ಪಕ್ಷದ್ರೋಹ ಮಾಡುವುದಿಲ್ಲ. ನಮ್ಮ ಕಾರ್ಯಕರ್ತರು 25,000 ಜನರನ್ನು ಸೇರಿಸಿ ಪಾದಯಾತ್ರೆ ಮಾಡಬೇಕೆಂದು ಉದ್ದೇಶಿಸಿದ್ದರು. ಅವರಿಗೆ ಪಾದಯಾತ್ರೆ ಮಾಡುವುದು ಬೇಡ ಎಂದು ನಾನೇ ತಡೆದಿದ್ದೇನೆ.
ಪಕ್ಷದ ಪರ ಕೆಲಸ ಮಾಡ್ತೇನೆ:
ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮಕ್ಕೆ ಅನುಮತಿ ಪಡೆದು ಗೈರಾಗಿದ್ದೆ. ಅಥಣಿ ಮತ್ತು ಕಾಗವಾಡದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತೇನೆ. ಪಕ್ಷದ ಪರವಾಗಿ ನಾನು ಉಪಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ ಎಂದರು.
ನನ್ನ ಕ್ಷೇತ್ರ ಕೈತಪ್ಪಿ ಹೋಗಿದೆ:
ಈಗ ನನ್ನ ಕ್ಷೇತ್ರ ಕೈತಪ್ಪಿ ಹೋಗಿದೆ. ಒಮ್ಮೆ ಕ್ಷೇತ್ರ ಹೋಯ್ತು ಅಂದ್ರೆ ಮುಗೀತು, ಬೇರೆ ಕ್ಷೇತ್ರ ಹುಡುಕಿಕೊಳ್ಳುವುದು ಅನಿವಾರ್ಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published On - 1:49 pm, Fri, 15 November 19