Karnataka Budget Session: ಕೇಂದ್ರದ ವಿರುದ್ಧವೇ ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಪ್ರತಿಪಕ್ಷ ಬಿಜೆಪಿಯ ತೀವ್ರ ಆಕ್ಷೇಪ, ಗದ್ದಲಗಳ ನಡುವೆಯೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಮಾಡಿ ಅಂಗೀಕಾರ ಪಡೆದಿದೆ. ಕೇಂದ್ರದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬಾರದು, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಹಾಗೂ ತೆರಿಗೆಯನ್ನು ಸಮನಾಗಿ ಹಂಚಿಕೆ ಮಾಡಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

Karnataka Budget Session: ಕೇಂದ್ರದ ವಿರುದ್ಧವೇ ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ಕರ್ನಾಟಕ ವಿಧಾನಸಭೆ ಕಲಾಪ
Follow us
TV9 Web
| Updated By: Ganapathi Sharma

Updated on: Feb 23, 2024 | 12:19 PM

ಬೆಂಗಳೂರು, ಫೆಬ್ರವರಿ 23: ಕರ್ನಾಟಕದ (Karnataka) ಪಾಲಿನ ತೆರಿಗೆ, ವಿಶೇಷ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಆಗ್ರಹಿಸಿ ರಾಜ್ಯ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ (Central Government) ವಿರುದ್ಧವೇ ನಿರ್ಣಯ (Resolutions) ಅಂಗೀಕರಿಸಲಾಗಿದೆ. ಆರ್ಥಿಕ ಸಂಪನ್ಮೂಲಗಳ ಮತ್ತು ಕನಿಷ್ಠ ಬೆಂಬಲ ಬೆಲೆಯ ಸಮಾನ ಹಂಚಿಕೆ ಮಾಡುವಂತೆ ನಿರ್ಣಯದಲ್ಲಿ ಆಗ್ರಹಿಸಲಾಗಿದೆ. ಈ ನಿರ್ಣಯಕ್ಕೆ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.

ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವ ಕಾನೂನು ರೂಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಈ ಸದನವು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ನಿರ್ಣಯವನ್ನು ಓದಿದರು.

ಕನಿಷ್ಠ ಬೆಂಬಲ ಬೆಲೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದವರು ದೆಹಲಿಯ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲೇ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ ಬೇಡಿಕೆಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಈ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

ಎಚ್.ಕೆ.ಪಾಟೀಲ್ ಮಾತನಾಡಿ, ರೈತರೊಂದಿಗೆ ಸಂಘರ್ಷಕ್ಕೆ ಆಸ್ಪದ ನೀಡದೆ ಅವರ ಅತ್ಯಂತ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಈ ಸದನ ಒತ್ತಾಯಿಸುತ್ತದೆ. ಬೆಳೆದ ಬೆಳೆಗೆ ಲಾಭದಾಯಕ ಬೆಲೆ ನಿಗದಿಯಾಗಬೇಕು ಎಂಬುದು ಪ್ರತಿಯೊಬ್ಬ ಭಾರತೀಯ ರೈತರ ಆಶಯವಾಗಿದೆ. ಎಲ್ಲಾ ಜನಪರ ಪ್ರಜಾಸತ್ತಾತ್ಮಕ ಸರ್ಕಾರಗಳು ಈ ಉತ್ತಮ ಆದರ್ಶವನ್ನು ಜಾರಿಗೆ ತರಲು ಮತ್ತು ಕೃಷಿಯನ್ನು ಲಾಭದಾಯಕವಾಗಿಸಲು ಒತ್ತಾಯಿಸುತ್ತವೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಕೇಂದ್ರದ ಬಿಜೆಪಿ ಸರ್ಕಾರವು ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸುತ್ತಿರುವ ಕೃಷಿ ವಿಜ್ಞಾನಿ, ದಿವಂಗತ ಡಾ ಎಂಎಸ್ ಸ್ವಾಮಿನಾಥನ್ ಅವರ ಹೆಸರನ್ನು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ರೈತನ ಸಾಗುವಳಿ ವೆಚ್ಚದ ಶೇ 50 ರಷ್ಟು ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಮೂಲಕ ‘ಹಸಿರು ಕ್ರಾಂತಿ’ಯನ್ನು ಸಾಧಿಸುವಲ್ಲಿ ಸರಕಾರಗಳು ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಪ್ರಗತಿಯನ್ನು ಮಾಡಿಲ್ಲ ಅಥವಾ ಯಾವುದೇ ಬದಲಾವಣೆಯನ್ನು ತಂದಿಲ್ಲ ಎಂದು ಸ್ವಾಮಿನಾಥನ್ ವರದಿ ಮಾಡಿದ್ದರು.

ರಾಷ್ಟ್ರದ ಆಹಾರ ಪೂರೈಕೆ ಮತ್ತು ಒಟ್ಟಾರೆ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿರುವ ರೈತರ ಆದಾಯವನ್ನು ಸಂರಕ್ಷಿಸುವ ಮೂಲಕ ಕೃಷಿಯನ್ನು ಲಾಭದಾಯಕವಾಗಿಸುವ ಉದ್ದೇಶದಿಂದ ಇತರ ಕೃಷಿ ಉತ್ಪನ್ನಗಳಿಗೆ, ವಾಣಿಜ್ಯ ಬೆಳೆಗಳಿಗೆ ಬೆಲೆ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕೆಂಬ ಬೇಡಿಕೆಗೆ ಕರ್ನಾಟಕ ಬೆಂಬಲವನ್ನು ಮುಂದುವರೆಸಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕ್ರಮಗಳು ರೈತ ವಿರೋಧಿ ನೀತಿಯಾಗಿ ಪರಿಣಮಿಸಿದ್ದು, ರೈತನಿಗೆ ಕನಿಷ್ಠ ಬೆಂಬಲ ಬೆಲೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಸರ್ಕಾರ ನಿರ್ಣಯದಲ್ಲಿ ಉಲ್ಲೇಖಿಸಿದೆ.

ಅವೈಜ್ಞಾನಿಕ ಜಿಎಸ್‌ಟಿ ವ್ಯವಸ್ಥೆಯಿಂದ ಉಂಟಾದ ಅನ್ಯಾಯ ಮತ್ತು ಹಣದ ಸಮಸ್ಯೆ, ಸೆಸ್ ಮತ್ತು ಸರ್‌ಚಾರ್ಜ್‌ಗಳ ಹೇರಿಕೆಯಿಂದ ತೆರಿಗೆ ಪಾಲು ಕಡಿತ, 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ವಿಶೇಷ ಮತ್ತು ರಾಜ್ಯ ಕೇಂದ್ರಿತ ಅನುದಾನವನ್ನು ವಿತರಿಸದಿರುವುದನ್ನು ರಾಜ್ಯ ಸರಕಾರವು ಬಲವಾಗಿ ಖಂಡಿಸುತ್ತದೆ ಎಂದು ಎರಡನೇ ನಿರ್ಣಯದಲ್ಲಿ ಹೇಳಲಾಗಿದೆ.

ಹಿಂದಿನ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಪಾಲು ಹಂಚಿಕೆಯಲ್ಲಿ ಶೇ 23ರಷ್ಟು ನಷ್ಟ ಸಂಭವಿಸಿದೆ. ಇದರಿಂದಾಗಿ 2017-18ನೇ ಸಾಲಿನಿಂದ ರಾಜ್ಯಕ್ಕೆ 1,78,189 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಬಿಜೆಪಿ ಶಾಕಸರಿಂದ ಗದ್ದಲ

ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಅಂಗೀಕರಿಸಿದ ಎರಡು ನಿರ್ಣಯಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಸೃಷ್ಟಿಸಿದರು. ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಹಾಗೆ ದಪ್ಪ ಇದ್ದಿದ್ರೆ ಖಂಡಿತ ನೀರಾ ಕುಡಿಯುತ್ತಿದ್ದೆ: ಕೋಟ ಶ್ರೀನಿವಾಸ ಪೂಜಾರಿ

ನಾವು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ಅನುದಾನಕ್ಕೆ ಮನವಿ ಮಾಡುತ್ತಿದ್ದೆವು. ಅದು ಸರಿಯಾದ ಕ್ರಮ. ಅದು ಬಿಟ್ಟು ಕೇಂದ್ರದ ವಿರುದ್ಧ ನಿರ್ಣಯ ಮಂಡಿಸುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ