
ಬೆಂಗಳೂರು, ಜನವರಿ 28: ರಾಜ್ಯಪಾಲರಿಗೆ ಕೇಶವ ಕೃಪಾದಿಂದ ಫೋನ್ ಬರುತ್ತೆ ಎಂಬ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹೇಳಿಕೆ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿಂದು (Assembly Session) ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆರ್ಎಸ್ಎಸ್ ಕಚೇರಿಯ ಫೋನ್ ಟ್ಯಾಪಿಂಗ್ (phone tapping) ಮಾಡ್ತಿದ್ದೀರಿ. ರಾಜ್ಯಪಾಲರ ಕಚೇರಿಯ ಫೋನ್ ಟ್ಯಾಪಿಂಗ್ ಪ್ರೂವ್ ಮಾಡಿದ್ದಾರೆ. ಹಾಗಾದರೆ ಇದು ಫೋನ್ ಟ್ಯಾಪಿಂಗ್ ಸರ್ಕಾರನಾ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಅಲ್ಲದೇ ಹೆಚ್ಕೆ ಪಾಟೀಲ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ರಾಜ್ಯಪಾಲರಿಗೆ ಕೇಂದ್ರ ಗೃಹಸಚಿವ ಕರೆ ಮಾಡಿರುವ ಆರೋಪದ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಆರ್ ಅಶೋಕ್, ನಮ್ಮ ಫೋನ್ಗಳನ್ನು ಕೂಡ ಟ್ಯಾಪಿಂಗ್ ಮಾಡುತ್ತಿದ್ದಾರೆ. ಹಿಂದೆ ಫೋನ್ ಟ್ಯಾಪಿಂಗ್ ಮಾಡಿದ್ದ ಸರ್ಕಾರಗಳು ಬಿದ್ದು ಹೋಗಿವೆ. ಕಾನೂನು ಸಚಿವರಾಗಿದ್ದೀರಿ, ರಾಜ್ಯಪಾಲ ಓಡಿ ಹೋದರು ಎಂದರೆ ನೀವು ಕಾನೂನು ಸಚಿವ ಆಗಿರೋದೆ ಸದನಕ್ಕೆ ಅಗೌರವ. ಸದನದಲ್ಲಿ ಸುಳ್ಳು ಹೇಳಿ, ಈಗ ಸಮರ್ಥನೆ ಮಾಡಲು ಮತ್ತಷ್ಟು ಸುಳ್ಳು ಹೇಳುತ್ತಿದ್ದೀರಿ. ಕಡತದಿಂದ ಹೆಚ್. ಪಾಟೀಲ್ ಹೇಳಿಕೆಯನ್ನು ತೆಗೆದುಹಾಕಲಿ, ಇಲ್ಲ ಅಂದರೆ ಕರೆ ಮಾಡಿರುವುದಕ್ಕೆ ದಾಖಲೆ ಕೊಡಿ. ಹೆಚ್.ಕೆ ಪಾಟೀಲ್ ಕ್ಷಮೆ ಕೇಳಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಈ ಕುರಿತು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದ್ದು, ನಾನು ಆಪಾದನೆ ಮಾಡುತ್ತಿದ್ದೇನೆ. ನಾನು ಮಾಡಿರುವ ಆಪಾದನೆಗೆ ಇಂದಿನ ಸನ್ನಿವೇಶದಲ್ಲಿ ಸಂಜಸವಾಗಿದೆ. ಇಲ್ಲದಿದ್ದರೆ ರಾಜ್ಯಪಾಲರು ಸಂವಿಧಾನವನ್ನು ಉಲ್ಲಂಘಿಸಲು ಸಾಧ್ಯವಾಗಿದೆ. ನನ್ನ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ನಿಮ್ಮ ಗೃಹ ಸಚಿವರನ್ನೇ ಕೇಳಿ, ನಮ್ಮನ್ನೇಕೆ ಕೇಳುತ್ತೀರಿ. ರಾಜ್ಯಪಾಲರ ನಡೆ ಬಗ್ಗೆ ದಕ್ಷಿಣ ಭಾರತದಲ್ಲಿ ಚರ್ಚೆಯಾಗುತ್ತಿದೆ. ಅವರ ನಡೆಯಿಂದ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಆ ಬಗ್ಗೆ ತನಿಖೆ ಮಾಡಿ ನಾವು ಸಾಬೀತು ಮಾಡುತ್ತೇವೆ ಎಂದರು.
ನನ್ನ ಹೇಳಿಕೆ ತಪ್ಪು, ಹೇಳಿಕೆ ಹಿಂಪಡೆಯಿರಿ ಅಂತಾ ಹೇಳ್ತಿದ್ದಾರೆ. ಲೋಕಭವನ ಅಥವಾ ಗೃಹ ಸಚಿವಾಲಯ ಏಕೆ ಸ್ಪಷ್ಟನೆ ಕೊಟ್ಟಿಲ್ಲ. ನಾವು ಎರಡು ಕಡೆಯಿಂದ ಸ್ಪಷ್ಟನೆ ಬರುವುದನ್ನು ಕಾಯುತ್ತಿದ್ದೇನೆ. ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಸ್ಪಷ್ಟನೆ ಕೊಡಲಿ. ರಾಷ್ಟ್ರಗೀತೆಗೂ ನಿಲ್ಲದೆ ಹೋಗಿರುವ ಬಗ್ಗೆಯೂ ಸ್ಪಷ್ಟನೆ ಕೇಳುತ್ತಿದ್ದೇವೆ. ಈ ಬಗ್ಗೆ ಲೋಕಭವನ ಮತ್ತು ಗೃಹ ಸಚಿವಾಲಯಕ್ಕೂ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.
ಫೋನ್ ಟ್ಯಾಪಿಂಗ್ ವಿಚಾರವಾಗಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ನಮ್ಮ ಸರ್ಕಾರ ಯಾವುದೇ ದೂರವಾಣಿ ಕದ್ದಾಲಿಸುವುದಿಲ್ಲ. ನಾವು ವಿರೋಧ ಪಕ್ಷಗಳ ನಾಯಕರ ಫೋನ್ ಟ್ಯಾಪ್ ಮಾಡಿಲ್ಲ. ಕೇಂದ್ರದಿಂದ ಕರೆ ಬಂದಿರಬಹುದು ಎಂದು ಹೇಳಿದ್ದಾರೆ ಅಷ್ಟೇ ಎಂದರು.
ಇದನ್ನೂ ಓದಿ: ಅಧಿವೇಶನ ಭಾಷಣ, ಗದ್ದಲ ಬಗ್ಗೆ ರಾಷ್ಟ್ರಪತಿಗೆ ರಾಜ್ಯಪಾಲ ವರದಿ: ಏನೆಲ್ಲಾ ಅಂಶಗಳಿವೆ?
ಗವರ್ನರ್ ಭಾಷಣದ ಮೇಲೆ ಮಾತಾಡಬೇಕು ಅಂದರೆ ಮಾತಾಡಿ, ಸುಮ್ಮನೆ ಕಾಲಹರಣ ಮಾಡಲು ಚರ್ಚೆ ಮಾಡಬೇಡಿ. ಬೇಕು ಎಂದರೆ ತನಿಖೆ ಮಾಡಿಸೋಣ. ನಾವೇ ರಾಜ್ಯಪಾಲರ ಹ್ಯಾಂಡ್ಶೇಕ್ ಮಾಡಿ ಕಳಿಸಿಕೊಟ್ಟಿದ್ದೇವೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ರಿಗೆ ಅಗೌರವ ತೋರಿಲ್ಲ. ರಾಜ್ಯಪಾಲರು ರಾಷ್ಟ್ರಗೀತೆ ಹಾಡದೇ ಹೊರಟುಹೋಗಿದ್ದು ಸರಿನಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.