ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ ಬಸವರಾಜ​ ಹೊರಟ್ಟಿ

| Updated By: ವಿವೇಕ ಬಿರಾದಾರ

Updated on: Mar 01, 2025 | 2:29 PM

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾರ್ಚ್ 3 ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದ ಕುರಿತು ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್​ನಲ್ಲಿ ಮಾದಕ ವ್ಯಸನ, ಹದಿಹರೆಯದ ಸಮಸ್ಯೆಗಳ ಚರ್ಚೆಗೆ ಒತ್ತು ನೀಡಲಾಗುವುದು ಎಂದಿದ್ದಾರೆ. ಬೆಂಗಳೂರು ಅಭಿವೃದ್ಧಿ ಕುರಿತು ವಿಚಾರ ಸಂಕೀರ್ಣದ ಯೋಜನೆಯನ್ನೂ ಅವರು ತಿಳಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿ.ಟಿ. ರವಿ ನಡುವಿನ ಘಟನೆ ಈಗಾಗಲೇ ಪರಿಹಾರವಾಗಿದೆ ಎಂದೂ ಹೇಳಿದ್ದಾರೆ.

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ ಬಸವರಾಜ​ ಹೊರಟ್ಟಿ
ಸಭಾಪತಿ ಬಸವರಾಜ ಹೊರಟ್ಟಿ
Follow us on

ಬೆಂಗಳೂರು, ಮಾರ್ಚ್​ 01: ಸೋಮವಾರ (ಮಾರ್ಚ್​ 03) ರಿಂದ ವಿಧಾನಮಂಡಲ ಅಧಿವೇಶನ (Legislative Session) ನಡೆಯಲಿದೆ. ಕಾಂಗ್ರೆಸ್​ನವರ (Congress) ಬಹುಮತವಿದ್ದು, ಅವರಿಗೆ ಸ್ವಾತಂತ್ರ್ಯವಿದೆ. ಅವರಿಗೆ ಅಧಿಕಾರ ಇದೆ. ನಾನು‌ ಸಾಮಾನ್ಯ ಶಿಕ್ಷಕನಾಗಿ ಈ ಹುದ್ದೆಗೆ ಬಂದವನು. ಅವರು ಏನಾದರೂ ನೋಟೀಸ್ ಕೊಟ್ಟರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಪರಿಷತ್​ನಲ್ಲಿ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತೇವೆ. ರಾಜ್ಯದಲ್ಲಿ ಮಾದಕವಸ್ತುಗಳಿಗೆ ಮಕ್ಕಳು ಬಲಿಯಾಗುತ್ತಿರುವ ಬಗ್ಗೆ ಮತ್ತು ಹದಿಹರೆಯದ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಎಂದರು.

ವಿಧಾನಮಂಡಲ ಜಂಟಿ ಸಲಹಾ ಸಮಿತಿ ಸಭೆ ಕರೆಯಲು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಮಿತಿಯ ಸಭೆ ನಡೆಯಲಿದೆ. ಬೆಂಗಳೂರು ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ವಿಧಾನಪರಿಷತ್ ಸದಸ್ಯ ಹೆಚ್​.ವಿಶ್ವನಾಥ್​​ ಪ್ರಸ್ತಾವ ಕೊಟ್ಟಿದ್ದಾರೆ. ಆ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸುವ ಬಗ್ಗೆ ಯೋಚನೆ ಬಂದಿದೆ. ಚರ್ಚೆಗಳು ಉತ್ತಮ ಮಟ್ಟದಲ್ಲಿ ತಲುಪುತ್ತಿಲ್ಲ ಎಂಬ ಬೇಸರವೂ ಇದೆ. ನಮ್ಮಲ್ಲಿ ನಡೆಯುವ ಚರ್ಚೆಗಳು ಇನ್ನೂ ಉತ್ತಮ ಮಟ್ಟದಲ್ಲಿ ತಲುಪುತ್ತಿಲ್ಲ. ಕಲಾಪವನ್ನು ಸುಸೂತ್ರವಾಗಿ ನಡೆಸುವ ಬಗ್ಗೆ ವಿಪಕ್ಷದವರ ಜೊತೆಗೂ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಹೆಬ್ಬಾಳ್ಕರ್​ ವಿರುದ್ಧ ಅಶ್ಲೀಲ ಪದ ಬಳಕೆ: ಸಭಾಪತಿ ಹೊರಟ್ಟಿ ಹೇಳಿದ್ದಿಷ್ಟು
ವಿಧಾನ ಪರಿಷತ್ ಎಂದರೆ ಮುನ್ಸಿಪಾಲಿಟಿ ಆಗಿದೆ; ಬಸವರಾಜ ಹೊರಟ್ಟಿ ಬೇಸರ

ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಎಂಎಲ್ಸಿ ಸಿ.ಟಿ. ರವಿ ನಡುವೆ ನಡೆದ ಘಟನೆ ಈಗಾಗಲೇ ಅಂತ್ಯಗೊಂಡಿದೆ. ಡಿಸೆಂಬರ್ 19 ರಂದೇ ಅದನ್ನು ನಾನು ಅಂತ್ಯಗೊಳಿಸಿದ್ದೇನೆ. ಅದು ಈಗ ಪರಿಷತ್ ನ‌ ಎಥಿಕ್ಸ್ ಸಮಿತಿ ಮುಂದೆ ಇದೆ. ಎಥಿಕ್ಸ್ ಸಮಿತಿ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ಶಾಸಕರಿಗೆ ವಿಶ್ರಾಂತಿಗೆ ಆರಾಮ ಕುರ್ಚಿ ವ್ಯವಸ್ಥೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಪರಿಷತ್​ನಲ್ಲಿ ಆಸಕ್ತಿಯಿಂದ ಸದಸ್ಯರು ಕೂರುತ್ತಾರೆ. ಮಧ್ಯಾಹ್ನ ಊಟವಾದ ಮೇಲೂ ಸದಸ್ಯರು ಇರುತ್ತಾರೆ. ನಮ್ಮಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ. ಇನ್ನೊಂದು ಸದನದ ಬಗ್ಗೆ ನಾನು ಮಾತಾಡುವುದು ಸೂಕ್ತ ಅಲ್ಲ ಎಂದರು.

ಉಪಸಭಾಪತಿ ಎಂಕೆ ಪ್ರಾಣೇಶ್ ಎಂಎಲ್ಸಿ ಸ್ಥಾನಕ್ಕೆ ಆಯ್ಕೆ ಕುರಿತು ಮರು ಮತ ಎಣಿಕೆ ನಡೆದ ವಿಚಾರವಾಗಿ ಮಾತನಾಡಿದ ಅವರು, ಮತ ಎಣಿಕೆ ‌ನಡೆದಿದೆ. ಈ ವಿಚಾರ‌ ಈಗ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ತೀರ್ಮಾನ ಮಾಡುತ್ತದೆ. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಸದನದ ಚ್ಯಾನೆಲ್​ಗಳಲ್ಲಿ ಅವಹೇಳನಕಾರಿ ಪದಬಳಕೆ ಸಿಕ್ಕಿಲ್ಲ, ಪರಿಶೀಲನೆ ಜಾರಿಯಲ್ಲಿದೆ: ಬಸವರಾಜ ಹೊರಟ್ಟಿ, ಪರಿಷತ್ ಚೇರ್ಮನ್

ಸಭಾಧ್ಯಕ್ಷರು, ಸಭಾಪತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೇ ಎಲ್ಲವೂ ಗೊತ್ತಿದೆ, ನನ್ನ ಬಾಯಲ್ಲಿ ಯಾಕೆ ಹೇಳಿಸುತ್ತೀರಿ? ಇನ್ನೊಬ್ಬರ ಬಗ್ಗೆ ನಾನು ಮಾತಾಡುವುದು ಸರಿಯಲ್ಲ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:58 pm, Sat, 1 March 25