ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ: ಸಭಾಪತಿ ಹೊರಟ್ಟಿ ಅಚ್ಚರಿ ಹೇಳಿಕೆ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಸಿಟಿ ರವಿ ಅವರು ಸದನದಲ್ಲಿ ಅಶ್ಲೀಲ ಪದ ಬಳಕೆ ವಿಚಾರವಾಗಿ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.
ಹುಬ್ಬಳ್ಳಿ, ಡಿಸೆಂಬರ್ 20: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಅವರ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ (CT Ravi) ಅವರು ಮಾತನಾಡಿದ್ದ ಬಗ್ಗೆ ಯಾವುದೇ ರೆಕಾರ್ಡ್ ಇಲ್ಲ. ಆದರೆ, ಅಶ್ಲೀಲ ಪದ ಬಳಸಿದ್ದಾರೆ ಎಂದು ನಾಲ್ವರು ಸಾಕ್ಷಿ ಹೇಳಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಟಿವಿ9 ಪ್ರತಿನಿಧಿ ಜೊತೆ ಮಾತನಾಡಿದ ಅವರು, ಆಡಿಯೋ ರೆಕಾರ್ಡ್ ಆಗಿಲ್ಲ ಸಾಕ್ಷಿಗಳು ಮಾತ್ರ ಇವೆ. ರೆಕಾರ್ಡ್ ಹುಡುಕಿದ್ದೇನೆ ನಮಗೆ ಆಡಿಯೋ ಸಿಕ್ಕಿಲ್ಲ. ನಾಲ್ಕು ಜನರು ಸಾಕ್ಷಿ ಹೇಳಿದ್ದಾರೆ. ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರ ದೂರನ್ನೂ ಪಡೆದಿದ್ದೇವೆ ಎಂದು ತಿಳಿಸಿದರು.
ಸದನದಲ್ಲಿ ಪ್ರಶ್ನೋತ್ತರ ವೇಳೆ ಮುಗಿದ ಬಳಿಕ, ಕಾಂಗ್ರೆಸ್ನವರು ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ದ ಪ್ರತಿಭಟನೆಗೆ ಮುಂದಾದರು. ಈ ವೇಳೆ ಗಲಾಟೆ ಆಯ್ತು, ಗಲಾಟೆ ಹಿನ್ನಲೆ ಕಲಾಪ ಮುಂದೂಡಿದ್ವಿ. ಅವಾಗ ಇದೆಲ್ಲ ಗಲಾಟೆ ಆಗಿದೆ. ಸಂಜೆ 6 ಗಂಟೆಗೆ ಸಿಟಿ ರವಿ ಬಂಧನವಾಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದರು.
ಇದನ್ನೂ ಓದಿ: ಸಿಟಿ ರವಿ ಬಂಧನ: ರಕ್ತ ಸೋರುತ್ತಿದ್ದರೂ ರಾತ್ರಿಯೆಲ್ಲ ಕಾರಿನಲ್ಲೇ ಊರೂರು ಸುತ್ತಾಡಿಸಿದ ಪೊಲೀಸರು!
ನಾನು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ಅವರನ್ನು ಕರೆದು ಮಾತನಾಡಿದೆ. ಇದನ್ನು ಇಲ್ಲಿಗೆ ಮುಗಿಸೋಣ ಅಂತ ಸಲಹೆ ನೀಡಿದೆ. ನಾನು ಹತಾಶರಾಗಿದ್ದಾರೆ ಎಂದಿದ್ದೇನೆ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಅಂತ ಸಿಟಿ ರವಿ ಅವರು ಹೇಳಿದರು, ಎಂದು ಸಭಾಪತಿಗಳು ಮಾಹಿತಿ ನೀಡಿದರು.
ಈ ರೀತಿ ಆಗಿರುವುದು ಮೊದಲ ಸಲ. 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಒಂದೊಂದು ಸಲ ಯಾಕಾದರೂ ಅಲ್ಲಿ ಕೂತಿದ್ದೇನೆ ಅನಸತ್ತೆ ಎಂದು ಅಸಮಾಧಾನ ಹೊರಹಾಕಿದರು.
ನಾನು ಯಾರ ಪರವೂ ಇಲ್ಲ, ಎರಡು ಕಡೆ ಯೋಚನೆ ಮಾಡಿದ್ದೇನೆ. ಇದು ಕಡ್ಡಿ ಹೋಗಿ ಗುಡ್ಡ ಆಯ್ತು. ಬೇಲಿಯೇ ಎದ್ದು ಹೊಲ ಮೇಯ್ದರೇ ಏನಾಗತ್ತೆ. ಜನ ನಮ್ಮನ್ನು ನೋಡುತ್ತಾರೆ. ಶಾಸಕರು ನಡುವಳಿಕೆ ತಿದ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭಾಪತಿಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿಯವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಸಿಟಿ ರವಿಯವರು 10 ಬಾರಿ ಅಶ್ಲೀಲ ಪದ ಬಳಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ದೂರಿಗೆ ನಾಗರಾಜ್ ಯಾದವ್, ಉಮಾಶ್ರೀ, ಡಾ.ಯತೀಂದ್ರ ಸಿದ್ದರಾಮಯ್ಯ, ಬಲ್ಕಿಸ್ ಬಾನು ಸಾಕ್ಷಿಯಾಗಿದ್ದಾರೆ.
ದೂರು ಪಡೆದ ತಕ್ಷಣ ಸಭಾಪತಿಗಳು ಕಲಾಪದ ಆಡಿಯೋ, ವಿಡಿಯೋ ಪರಿಶೀಲನೆ ನಡೆಸಿದರು. ಆಡಿಯೋ, ವಿಡಿಯೋ ಪರಿಶೀಲನೆ ವೇಳೆ ಹಾಜರಿದ್ದ ಡಿಸಿಎಂ ಡಿಕೆ ಶಿವಕುಮಾರ್ ಹಾಜರಿದ್ದರು. ಬಳಿಕ, ಡಿಸಿಎಂ ಡಿಕೆ ಶಿವಕುಮಾರ್ ಸಚಿವರಾದ ಹೆಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ ಸೇರಿದಂತೆ ವಿವಿಧ ನಾಯಕರ ಜೊತೆ ಚರ್ಚೆ ನಡೆಸಿ, ಸಿ.ಟಿ.ರವಿ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧಾರ ಕೈಗೊಂಡಿದ್ದರು.
ಇದೇ ವೇಳೆ ಪರಿಷತ್ ಹೊರಗೆ ಸಿ.ಟಿ.ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಲಾಯಿತು. ಸಭಾಪತಿ ಬಸವರಾಜ್ ಹೊರಟ್ಟಿ ಅವರು ಕೂಡಲೇ ಸಿ.ಟಿ.ರವಿ ಅವರನ್ನು ಕರೆಸಿಕೊಂಡರು. ಸಭಾಪತಿ ಮುಂದೆಯೂ ಅಶ್ಲೀಲ ಪದ ಬಳಸಿಲ್ಲವೆಂದು ಸಿ.ಟಿ.ರವಿ ವಾದಿಸಿದರು. ಇಬ್ಬರ ಹೇಳಿಕೆ ದಾಖಲಿಸಿಕೊಂಡು ಸಭಾಪತಿ ಬಸವರಾಜ್ ಹೊರಟ್ಟಿ ಅವರು ರೂಲಿಂಗ್ ನೀಡಿದರು.
ಸಿಟಿ ರವಿ ಪದ ಬಳಕೆ ಬಿಜೆಪಿ ಸಂಸ್ಕೃತಿನಾ: ಡಿಕೆ ಶಿವಕುಮಾರ್
ಕೇಂದ್ರ ಸರ್ಕಾರ ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಎರಡೂ ಸದನದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಅಂಬೇಡ್ಕರ್ ಅವಮಾನಗೆ ಆಗಿರುವ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡುತ್ತಿದ್ದರು. ಸಿ.ಟಿ.ರವಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಳಾರ್ ಗರಂ ಆಗಿದ್ದಾರೆ. ವಾಹನ ಗುದ್ದಿಸಿ ಇಬ್ಬರನ್ನು ಕೊಲೆ ಮಾಡಿದ್ದೀಯಾ, ನೀನು ಕೊಲೆಗಾರ, ನೀನು ಕೊಲೆಗಡುಕ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆದಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಆಗ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆಗೆ ಸಿ.ಟಿ.ರವಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಮಾತನಾಡಿರುವ ಬಗ್ಗೆ ದಾಖಲೆ ಇದೆ. ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡಿದ್ದೇನೆ, ನಿಮಗೆ ಕೊಡುತ್ತೇನೆ. ಸಿಟಿ ರವಿ ಮಾತನಾಡಿದ್ದು ಚಿಕ್ಕಮಗಳೂರು ಜಿಲ್ಲೆಯ ಸಂಸ್ಕೃತಿನಾ? ಭಾರತೀಯ ಸಂಸ್ಕೃತಿನಾ ಅಥವಾ ಬಿಜೆಪಿ ಸಂಸ್ಕೃತಿನಾ ಎಂದು ಪ್ರಶ್ನಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 am, Fri, 20 December 24