ಸಿದ್ದರಾಮಯ್ಯ ಉತ್ತರದ ಬಳಿಕವೂ ಆರದ ವಾಲ್ಮೀಕಿ ಹಗರಣ ಕಿಚ್ಚು: ಸದನದಲ್ಲಿ ಮುಂದುವರಿದ ಬಿಜೆಪಿ ಸದಸ್ಯರ ಧರಣಿ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಕಿಚ್ಚು ವಿಧಾನಸಭೆಯಲ್ಲಿ ಇನ್ನೂ ತಣ್ಣಗಾಗಿಲ್ಲ. ಹಗರಣ ವಿಚಾರವಾಗಿ ಪರಿಷತ್​​ನಲ್ಲಿಯೂ ಸೋಮವಾರ ತೀವ್ರ ಗದ್ದಲ ಸೃಷ್ಟಿಯಾಯಿತು. ಮಂಗಳವಾರದ ಕಲಾಪದಲ್ಲಿ ಮುಡಾ ಹಗರಣ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ಹಳಿಯಲು ಬಿಜೆಪಿ ಸಜ್ಜಾಗಿದೆ.

ಸಿದ್ದರಾಮಯ್ಯ ಉತ್ತರದ ಬಳಿಕವೂ ಆರದ ವಾಲ್ಮೀಕಿ ಹಗರಣ ಕಿಚ್ಚು: ಸದನದಲ್ಲಿ ಮುಂದುವರಿದ ಬಿಜೆಪಿ ಸದಸ್ಯರ ಧರಣಿ
ಬಿಜೆಪಿ ಸದಸ್ಯರ ಧರಣಿImage Credit source: ವಾರ್ತಾ ಇಲಾಖೆ
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on: Jul 22, 2024 | 2:19 PM

ಬೆಂಗಳೂರು, ಜುಲೈ 22: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ವಿಚಾರವನ್ನು ಪ್ರಸ್ತಾಪಿಸಿ ವಿಧಾನಸಭೆಯಲ್ಲಿ ಸೋಮವಾರವೂ ಪ್ರತಿಭಟನೆ ಮುಂದುವರಿಸಿದ ಬಿಜೆಪಿ ನಾಯಕರು, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರು. ಅಕ್ರಮದ ಕುರಿತು ಸಿಎಂ ಸಮರ್ಪಕ ಉತ್ತರ ಕೊಟ್ಟಿಲ್ಲ ಎಂದ ವಿಪಕ್ಷ ನಾಯಕ ಆರ್‌.ಅಶೋಕ್, ಸಚಿವರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಅಶೋಕ್ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಗದ್ದಲ ಉಂಟಾಯಿತು.

ಮಳೆ ಹಾನಿ, ಡೆಂಘೀ, ಮುಡಾ ಹಗರಣದ ಚರ್ಚೆ ಆಗಬೇಕಿದೆ. ಹೀಗಾಗಿ ಧರಣಿ ವಾಪಸ್ ಪಡೆಯುತ್ತೇವೆ ಎಂದು ಅಶೋಕ್ ಹೇಳಿದರು. ಆದರೆ, ವಾಲ್ಮೀಕಿ ನಿಗಮ ಹಗರಣದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತೆ ಅಂದರು. ಧರಣಿ ವಾಪಸ್ ಪಡೆದ ನಂತ್ರ ಬಿಜೆಪಿ ಸದಸ್ಯರೆಲ್ಲಾ ಸಭಾ ತ್ಯಾಗ ಮಾಡಿದರು.

ನಾನ್ಯಾಕೆ ರಾಜೀನಾಮೆ ನೀಡಬೇಕು? ಪರಿಷತ್‌ನಲ್ಲಿ ಸಿಎಂ ಉತ್ತರ

ಗುರುವಾರ ಮತ್ತು ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ನೀಡಿದ್ದ ಸಿಎಂ ಇವತ್ತು ಪರಿಷತ್‌ನಲ್ಲಿ ಉತ್ತರ ಕೊಟ್ಟರು. ನನಗೆ ಕಳಂಕ ತರಬೇಕು, ಮಸಿ ಬಳಿಬೇಕು ಎಂಬುದು ಬಿಜೆಪಿಯವರ ಉದ್ದೇಶ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದರು. ಅಕ್ರಮ ನಡೆದೇ ಇಲ್ಲ ಅಂತಾ ನಾನು ಹೇಳಲ್ಲ. ಆದರೆ, ಅಕ್ರಮಕ್ಕೂ ಸರ್ಕಾರಕ್ಕೂ, ಹಣಕಾಸು ಇಲಾಖೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟರು. ಅಲ್ಲದೇ, ನಾನ್ಯಾಕೆ ರಾಜೀನಾಮೆ ಕೊಡಬೇಕು ಅಂತಾ ಪ್ರಶ್ನಿಸಿದರು.

ಸಿಎಂ ಉತ್ತರಕ್ಕೆ ಬಿಜೆಪಿ ಸದಸ್ಯರು ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದರು. ಬಿಜೆಪಿಯವರು ಸುಳ್ಳನ್ನೇ ನೂರು ಬಾರಿ ಹೇಳೋ ನಿಸ್ಸೀಮರು ಎಂದು ಸಿಎಂ ಗುಡುಗಿದರು. ಈ ವೇಳೆ ಭ್ರಷ್ಟಾಚಾರದಲ್ಲೂ ನಿಸ್ಸೀಮರು ನೀವು ಎಂದು ರವಿ ಕುಮಾರ್ ಹೇಳಿದರು. ಈ ವೇಳೆ ಗದ್ದಲ ಉಂಟಾಯಿತು.

ಸಿಎಂ ಜೈಲಿಗೆ ಹೋಗ್ತಾರೆಂದ ಈಶ್ವರಪ್ಪ

ಅತ್ತ ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಎಲ್ಲಾ ಹಗರಣಗಳನ್ನ ಸಿಬಿಐಗೆ ಕೊಡಿ ಎಂದು ಆಗ್ರಹಿಸಿದರು. ಅಲ್ಲದೇ, ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಎಂದು ಭವಿಷ್ಯ ನುಡಿದರು. ದೆಹಲಿಯಲ್ಲಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ಹಣ ವರ್ಗಾವಣೆಯಾಗಿರೋ ಬಗ್ಗೆ ಸಿಎಂ ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಅಬಕಾರಿ ಉಪ ಆಯುಕ್ತರ ಹುದ್ದೆಗೆ 3.5 ಕೋಟಿ ರೂ! ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್ ಎಂದ ಅಶೋಕ್

ಒಟ್ಟಿನಲ್ಲಿ ವಾಲ್ಮೀಕಿ ಹಗರಣದ ಜೊತೆಗೆ ನಾಳೆ ಮುಡಾ ಸೈಟ್ ಹಂಚಿಕೆ ಪ್ರಕರಣ ಪ್ರಸ್ತಾಪಿಸಲು ಬಿಜೆಪಿ ಸಜ್ಜಾಗಿದೆ. ಮುಡಾ ಕೇಸ್‌ನಲ್ಲೂ ಸಿಎಂ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿಯಲಿದೆ. ಅಲ್ಲದೇ ಸದನದಲ್ಲೇ ಅಹೋರಾತ್ರಿ ಧರಣಿ ನಡೆಸುವುದಕ್ಕೂ ಯೋಜನೆ ರೂಪಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ