Karnataka Assembly Session Live: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 08, 2022 | 9:59 AM

Karnataka Anti Conversion Bill 2021- Assembly Session Live Updates: ಮಂಗಳವಾರ ವಿಧಾನಸಭೆಯಲ್ಲಿ ಮಂಡನೆಯಾದ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021’ದ ಕುರಿತು ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಚರ್ಚೆ ಮುಂದುವರೆಯುತ್ತಿದೆ. ಇದರ ಲೈವ್ ಅಪ್ಡೇಟ್ಸ್​​ಗಳು ಇಲ್ಲಿ ಲಭ್ಯವಿದೆ.

Karnataka Assembly Session Live: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ವಿಧಾನಸಭಾ ಕಲಾಪ

LIVE NEWS & UPDATES

  • 08 Feb 2022 09:59 AM (IST)

    ಹಿಜಾಬ್ ವಿವಾದ ಹಿನ್ನೆಲೆ ರಾಯಚೂರಿನ ಬಸವೇಶ್ವರ ಪದವಿ ಕಾಲೇಜಿಗೆ ರಜೆ ಘೋಷಣೆ

    ಹಿಜಾಬ್ ವಿವಾದ ಹಿನ್ನೆಲೆ ರಾಯಚೂರಿನ ಬಸವೇಶ್ವರ ಪದವಿ ಕಾಲೇಜಿಗೆ ಒಂದು ದಿನದ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಕಾಲೇಜಿನ ಪ್ರಾಂಶುಪಾಲರಾದ ವೀರೇಶ್ ಪವಾರ್ ಟಿವಿ9ಗೆ ಮಾಹಿತಿ ನೀಡಿದ್ದು, ಕಾಲೇಜಿನಲ್ಲಿ ತರಗತಿ ಮುಗಿದ ಬಳಿಕ ಕೇಸರಿ ಶಾಲು ಹಾಕಿಕೊಂಡಿದ್ದ ಫೋಟೋ ತೆಗೆದಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಫೋಟೋ ವೈರಲ್ ಆದ ಹಿನ್ನೆಲೆ ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಇಂದು 7-8 ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಬಂದಿದ್ದರು. ಆಡಳಿತ ಮಂಡಳಿ ಸೂಚನೆ ಮೇರೆಗೆ ಬುರ್ಕಾ ತೆಗೆದಿದ್ದಾರೆ. ಹೀಗಾಗಿ ಪರಿಸ್ಥಿತಿ ಶಾಂತವಾಗಿರಲು  ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

  • 27 Dec 2021 02:21 PM (IST)

    ಮಳೆ ನಿಂತಿದೆ, ಮಧ್ಯಾಹ್ನ 3 ಗಂಟೆಗೆ ಗ್ರೌಂಡ್ ಪರಿಶೀಲನೆ

    ಸೆಂಚುರಿಯನ್ ನಲ್ಲಿ ಸದ್ಯಕ್ಕೆ ಮಳೆ ನಿಂತಿದ್ದು, ಮೈದಾನದ ಸಿಬ್ಬಂದಿ ನೆಲ ಒಣಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ESPN-Cricinfo ಪ್ರಕಾರ, ಮತ್ತೆ ಮಳೆಯಾಗದಿದ್ದರೆ, ಅಂಪೈರ್ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಮೈದಾನವನ್ನು ಪರೀಕ್ಷಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ.

  • 27 Dec 2021 01:59 PM (IST)

    ಮತ್ತೆ ಮಳೆ ಶುರು

    ಸೆಂಚುರಿಯನ್‌ನಲ್ಲಿ ಮತ್ತೊಮ್ಮೆ ಮಳೆ ಆರಂಭವಾಗಿದೆ, ಇದರಿಂದಾಗಿ ನೆಲವನ್ನು ಒಣಗಿಸುವ ಪ್ರಯತ್ನವನ್ನು ನಿಲ್ಲಿಸಲಾಗಿದೆ. ಅಂದರೆ ಪಂದ್ಯ ಆರಂಭವಾಗಲು ಇನ್ನಷ್ಟು ಸಮಯ ಹಿಡಿಯಲಿದ್ದು, ಅಭಿಮಾನಿಗಳ ಕಾಯುವಿಕೆ ಹೆಚ್ಚಾಗಿದೆ.

  • 23 Dec 2021 06:08 PM (IST)

    ಜನರು ಕಾಂಗ್ರೆಸ್ ಪಕ್ಷವನ್ನು ಹರಿದು ಬಿಸಾಕಿದ್ದಾರೆ: ಯಡಿಯೂರಪ್ಪ

    ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದಾರೆ. ಜನರೂ ಕಾಂಗ್ರೆಸ್ ಪಕ್ಷವನ್ನು ಹರಿದು ಬಿಸಾಕಿದ್ದಾರೆ. ದೇಶದ 26 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದೆ. ಕಾಂಗ್ರೆಸ್​ನ ಅಡ್ರೆಸ್ ಇಲ್ಲ. ರಾಜ್ಯದಲ್ಲಿ ಉಸಿರಾಡುತ್ತಿದ್ದ ಕಾಂಗ್ರೆಸ್ ನಾಯಕರು, ಮಸೂದೆ ವಿರೋಧ ಮಾಡಿ ತಪ್ಪು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ. ಕರ್ನಾಟಕ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ, 140 ಹೆಚ್ಚು ಸೀಟು ಗೆಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಯಡಿಯೂರಪ್ಪ ಘೋಷಿಸಿದರು.

  • 23 Dec 2021 06:08 PM (IST)

    ವಿನಾಶ ಕಾಲೇನ ವಿಪರೀತ ಬುದ್ಧಿ, ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಬಿಎಸ್​ ಯಡಿಯೂರಪ್ಪ

    ಬೆಳಗಾವಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಮತಾಂತರ ನಿಷೇಧ ಮಸೂದೆ ಜಾರಿಗೆ ತರಲು ಮುಂದಾಗಿದ್ದರು. ಮಸೂದೆಯನ್ನು ಸಚಿವ ಸಂಪುಟದಲ್ಲಿ ಚರ್ಚೆಗೆ ತರಲೂ ನಿರ್ಧರಿಸಿದ್ದರು. ಆದರೆ ಈಗ ಇತರ ಕಾರಣಗಳಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವೆಲ್ಲರೂ ಒಟ್ಟಾಗಿ ಈ ಬಿಲ್ ಪಾಸ್ ಮಾಡಿದ್ದೇವೆ. ಮತಾಂತರ ನಿಷೇಧ ಮಸೂದೆಗೆ ಅನುಮೋದನೆ ನೀಡಲು ಇವರೇಕೆ ಹಿಂದುಮುಂದು ನೋಡುತ್ತಿದ್ದಾರೆ ಎಂದು ಸಾವಿರಾರು ಜನ ಸಾಧುಸಂತರು ಪ್ರಶ್ನಿಸಿದ್ದರು. ವಿನಾಶ ಕಾಲೇನ ವಿಪರೀತ ಬುದ್ಧಿ. ಕಾಂಗ್ರೆಸ್​ನ ಇಂದಿನ ವರ್ತನೆ ಅದೊಂದು ಮುಳುಗುವ ಹಡಗು ಎಂಬುದನ್ನು ಸಾಬೀತುಪಡಿಸಿದೆ ಏಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

  • 23 Dec 2021 05:37 PM (IST)

    ನಾನೂ ಆರ್​ಎಸ್​ಎಸ್​, ನರೇಂದ್ರ ಮೋದಿಯೂ ಆರ್​ಎಸ್​ಎಸ್​: ಯಡಿಯೂರಪ್ಪ

    ಬೆಳಗಾವಿ: ಮತಾಂತರ ನಿಷೇಧ ತಿದ್ದುಪಡಿ ವಿಧೇಯಕಕ್ಕೆ ಆರ್​ಎಸ್​ಎಸ್​ನವರ ಸಹಕಾರವೂ ಇದೆ. ವಿಧೇಯಕವನ್ನು ವಿರೋಧಿಸಿದವರಿಗೆ ಜನರು, ಸ್ವಾಮೀಜಿಗಳು ತಕ್ಕ ಪಾಠ ಕಲಿಸಬೇಕಿದೆ. ನಾವು ಒಗ್ಗಟ್ಟಾಗಿ ಮತಾಂತರ ನಿಷೇಧ ಬಿಲ್​ ಪಾಸ್ ಮಾಡಿದ್ದೇವೆ. ನಾನೂ ಆರ್​ಎಸ್​ಎಸ್​, ಪ್ರಧಾನಿ ನರೇಂದ್ರ ಮೋದಿಯೂ ಆರ್​ಎಸ್​ಎ. ಆರ್​ಎಸ್​ಎಸ್​ನಿಂದ ಬಂದವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಆರೆಸ್ಸೆಸ್​ ಸಹಕಾರವಿದೆ. ಇದರಲ್ಲಿ ಮುಚ್ಚುಮರೆಯಿಲ್ಲ ಎಂದು  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

  • 23 Dec 2021 05:31 PM (IST)

    ಮತಾಂತರ ನಿಷೇಧ ವಿರೋಧಿಸಿದವರಿಗೆ ಪಾಠ ಕಲಿಸಿ: ಯಡಿಯೂರಪ್ಪ

    ಬೆಳಗಾವಿ: ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ವಿಧೇಯಕ ಅಂಗೀಕಾರದ ನಂತರ ಸುವರ್ಣಸೌಧದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧೇಯಕವನ್ನು ವಿರೋಧಿಸಿದವರಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದರು.

    BS Yediyurappa BJP

    ಬಿಎಸ್ ಯಡಿಯೂರಪ್ಪ

  • 23 Dec 2021 05:11 PM (IST)

    ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

    ಬೆಳಗಾವಿ: ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

  • 23 Dec 2021 05:10 PM (IST)

    ಕಾಂಗ್ರೆಸ್ ವರ್ತನೆಗೆ ಯಡಿಯೂರಪ್ಪ ಗರಂ

    ಬೆಳಗಾವಿ: ಚರ್ಚೆ ಮಾಡಲು ಇನ್ನೇನೂ ಉಳಿದಿಲ್ಲ. ಮುಖ್ಯಮಂತ್ರಿ ಉತ್ತರ ಕೇಳಿ, ವಿಧೇಯಕ ಪಾಸ್​ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಟ್ಟಿನಿಂದ ಮಾತನಾಡಿದರು. ‘ಪ್ರತಿಪಕ್ಷಗಳು ಸಭಾತ್ಯಾಗ ಮಾಡಲೆಂದೇ ಬಾವಿಗೆ ಇಳಿದಿದ್ದಾರೆ. ನೀವು ಯಾಕೆ ಅವರ ಬಗ್ಗೆ ತಲೆ ಕೆಡಿಸಿಕೊಳ್ತೀರಾ ಎಂದು ಯಡಿಯೂರಪ್ಪ ಹೇಳಿದರು.

  • 23 Dec 2021 05:06 PM (IST)

    ನಮ್ಮ ಸುದ್ದಿಗೆ ಬಂದರೆ ಚಿಂದಿಚಿಂದಿ: ಆಕ್ರೋಶ ಹುಟ್ಟುಹಾಕಿದ ಈಶ್ವರಪ್ಪ ಮಾತು

    ಬೆಳಗಾವಿ: ‘ನಮ್ಮ ಸುದ್ದಿಗೆ ಬಂದರೆ ಚಿಂದಿಚಿಂದಿ’ ಎಂಬ ಸಚಿವ ಈಶ್ವರಪ್ಪ ಮಾತನ್ನು ಕಾಂಗ್ರೆಸ್ ಸದಸ್ಯರು ತೀವ್ರವಾಗಿ ಖಂಡಿಸಿದರು. ಚರ್ಚೆಗೆ ಉತ್ತರ ಕೊಡುವಂತೆ ಗೃಹಸಚಿವರಿಗೆ ಸ್ಪೀಕರ್ ಸೂಚಿಸಿದರು. ಸದನದಲ್ಲಿ ಭಾರತ್ ಮಾತಾ ಕೀ ಜೈ, ಜೈ ಶ್ರೀ ರಾಂ ಘೋಷಣೆಗಳನ್ನು ಬಿಜೆಪಿ ಸದಸ್ಯರು ಮೊಳಗಿಸಿದರು.

    KS Eshwarappa

    ಕೆಎಸ್ ಈಶ್ವರಪ್ಪ

  • 23 Dec 2021 05:03 PM (IST)

    ನಾವೆಲ್ಲರೂ ಆರ್​ಎಸ್​ಎಸ್​ ಎಂದ ಈಶ್ವರಪ್ಪ, ಕಾಂಗ್ರೆಸ್ ಧರಣಿ

    ಬೆಳಗಾವಿ: ಮತಾಂತರ ನಿಷೇಧ ವಿಧೇಯಕ ಬಗ್ಗೆ ವಿಧಾನಸಭೆಯಲ್ಲಿ ಗದ್ದಲ ಮುಂದುವರಿದಿದೆ. ಸಿದ್ದರಾಮಯ್ಯ ಮಾತು ವಿರೋಧಿಸಿದ ಈಶ್ವರಪ್ಪ ‘ನಾವೆಲ್ಲರೂ ಆರ್​ಎಸ್​ಎಸ್, ದೇಶಭಕ್ತಿಯ ಸಂಸ್ಕಾರ ಪಡೆದವರು​’ ಎಂದು ಘೋಷಿಸಿದರು. ಈಶ್ವರಪ್ಪ ಅವರ ಮಾತಿಗೆ ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಗದ್ದಲದ ಮಧ್ಯೆಯೂ ಈಶ್ವರಪ್ಪ ಆರ್ಭಟ ಮುಂದುವರಿಸಿದರು. ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ಎದುರು ನಿಂತು ಆಕ್ರೋಶ ವ್ಯಕ್ತಪಡಿಸಿದರು.

  • 23 Dec 2021 04:47 PM (IST)

    ಮತಾಂತರ ಕಾಯ್ದೆ ನಮ್ಮ ಕಾಲದ್ದಲ್ಲ: ಸಿದ್ದರಾಮಯ್ಯ

    ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ನಮ್ಮ ಸರ್ಕಾರ ಮುಂದಾಗಿತ್ತು ಎಂದು ಕೆಲವರು ಹೇಳ್ತಿದ್ದಾರೆ. ಇದು ತಪ್ಪು ಕಲ್ಪನೆ. ಅದು ನಮ್ಮ ಕಾಲದಲ್ಲಿ ಆಗಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

    ನವೆಂಬರ್ 5, 2009ರಲ್ಲಿ ಆರ್​ಎಸ್​ಎಸ್​ ಪರ ಒಲವು ಇದ್ದ ಚಿದಾನಂದ ಮೂರ್ತಿ, ನರಹರಿ, ಬಿ.ಎನ್ ಮೂರ್ತಿ, ಜಯದೇವ್, ಆರ್ ಲೀಲಾ ಲಾ ಕಮಿಷನ್​ನ ಜಸ್ಟಿಸ್ ಮಳಿಮಠಗೆ ವರದಿ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 29, 2013ರಲ್ಲಿ ವರದಿ ಕೊಟ್ಟಿದ್ದರು. ಆದರೆ ಸಂಪುಟದಲ್ಲಿ ಚರ್ಚೆಗೆ ಬಂದಿರಲಿಲ್ಲ. ಇದನ್ನು ಎಷ್ಟೋ ಬಾರಿ ತಿರಸ್ಕಾರ ಮಾಡಲಾಗಿದೆ. ಮಹಿಳೆಯರು, ದಲಿತರನ್ನ ಮತಾಂತರ ಮಾಡಿದ್ರೆ, ಶಿಕ್ಷೆ ಪ್ರಮಾಣ ಹೆಚ್ಚು ಮಾಡಿದ್ದಾರೆ‌. ಇದು ಆರ್​ಎಸ್​ಎಸ್​ ಕೈವಾಡದಿಂದ ಬಂದಿರುವ ವಿಧೇಯಕ ಎಂದು ಸಿದ್ದರಾಮಯ್ಯ ತಿಳಿಸಿದರು.

    ಸಿದ್ದರಾಮಯ್ಯ ಬಿಡುಗಡೆ ಮಾಡಿರುವ ದಾಖಲೆ

  • 23 Dec 2021 04:31 PM (IST)

    ಇದು ಆರ್​ಎಸ್​ಎಸ್​ ಕೂಸು: ಮತಾಂತರ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ಟೀಕೆ

    ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಕುರಿತು ಮಾತನಾಡಿದ ಸಿದ್ದರಾಮಯ್ಯ ಜೆಡಿಎಸ್​ನವರು ಏನು ಮಾಡುತ್ತಾರೆ ನಮಗೆ ಗೊತ್ತಿಲ್ಲ. ಕಾಯ್ದೆಯ ಪ್ರಸ್ತಾಪಕ್ಕೆನೇ ವಿರೋಧ ಮಾಡಿದ್ದೇವೆ. ಯಾವ ಉದ್ದೇಶಕ್ಕೆ ಈ ಬಿಲ್​ ತರುತ್ತಾರೆ ನಮಗೆ ಗೊತ್ತಾಗ್ತಿಲ್ಲ. ರಾಜ್ಯದಲ್ಲಿ ಜ್ವಲಂತ ಸಮಸ್ಯೆ ಸಾಕಷ್ಟಿವೆ, ಅದರ ಬಗ್ಗೆ ಚರ್ಚಿಸಲಿ. ಈ ಕಾಯ್ದೆ ಆರ್​ಎಸ್​ಎಸ್​​ನವರ ಕೂಸು. ಜನರ ಮನಸ್ಸು ಕೆಡಿಸಲು ತಂದಿರುವಂತಹ ಕಾಯ್ದೆ ಇದು. ಕಾಯ್ದೆ ಜಾರಿ ಮಾಡಿದ್ರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ. 2023ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬಂದು ಕಾಯ್ದೆ ತೆಗೆದುಹಾಕ್ತೇವೆ ಎಂದರು.

    Siddaramaiah Congress

    ಸಿದ್ದರಾಮಯ್ಯ

  • 23 Dec 2021 04:23 PM (IST)

    ನಾವು ಮುಸ್ಲಿಂ, ಕ್ರಿಶ್ಚಿಯನ್ ವಿರೋಧಿಗಳಲ್ಲ: ಯಡಿಯೂರಪ್ಪ

    BS Yediyurappa BJP

    ಬಿಎಸ್ ಯಡಿಯೂರಪ್ಪ

    ವಿಧಾನಸಭೆಯಲ್ಲಿ ಮತಾಂತರ ನಿಷೇಧ ಬಿಲ್ ಮೇಲೆ ಚರ್ಚೆ ಮೇಲೆ ಮತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಲವಂತದ ಮತಾಂತರ ಆಗಬಾರದೆಂಬುದಷ್ಟೇ ಬಿಲ್ ಉದ್ದೇಶ ಎಂದು ಸ್ಪಷ್ಟಪಡಿಸಿದರು. ನಾವು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರ ವಿರೋಧಿಗಳಲ್ಲ. ಕೆಲವು ಕಡೆ ಆಗುತ್ತಿರುವ ಬಲವಂತದ ಮತಾಂತರ ತಡೆಯಬೇಕು ಎಂಬುದಷ್ಟೇ ಈ ಬಿಲ್​ನ ಉದ್ದೇಶ. ಈ ವಿಧೇಯಕವನ್ನು ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ಡಿ.ಕೆ.ಶಿವಕುಮಾರ್ ವಿಧೇಯಕದ ಪ್ರತಿ ಹರಿದು ಹಾಕಿದ್ದಾರೆ. ಪ್ರತಿ ಹರಿದು ಹಾಕಿರೋದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

  • 23 Dec 2021 04:12 PM (IST)

    ಎದ್ದುಕಂಡ ಎಚ್​ಡಿಕೆ, ಡಿಕೆಶಿ ಅನುಪಸ್ಥಿತಿ

    ಬೆಳಗಾವಿ: ಸದನವು ಭೋಜನವಿರಾಮ ನಂತರ ಸಭೆ ಸೇರಿತು. ಮಹತ್ವದ ಮತಾಂತರ ನಿಷೇಧ ವಿಧೇಯಕದ ಮೇಲಿನ ಚರ್ಚೆ ವೇಳೆ ಸದನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನುಪಸ್ಥಿತಿ ಎದ್ದು ಕಂಡಿತು.

  • 23 Dec 2021 03:53 PM (IST)

    ಮತಾಂತರದ ಕುರಿತು ಕಾವೇರಿದ ಚರ್ಚೆ; ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಜೆಡಿಎಸ್

    ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಚರ್ಚೆಯಲ್ಲಿ ಜೆಡಿಎಸ್‌ನ ಬಂಡೆಪ್ಪ ಕಾಶಂಪುರ ಮಾತನಾಡಿದ್ದಾರೆ. ‘‘ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆ ತರುವ ತರಾತುರಿಯಲ್ಲಿದ್ದಾರೆ. ಎಲ್ಲಿ ಸಮಾಧಾನ ಸಿಗುತ್ತೋ ಅಲ್ಲಿ ಹೋಗಿ ಪ್ರಾರ್ಥಿಸುತ್ತೇವೆ. ಅದನ್ನೆಲ್ಲ ಮತಾಂತರ ಎಂದು ಹೇಳಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆಗ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ವಿಧೇಯಕದಲ್ಲಿ ನಾವು ಕ್ರಿಶ್ಚಿಯನ್ ಧರ್ಮದ ಬಗ್ಗೆ ಹೇಳಿಯೇ ಇಲ್ಲ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ ಇಂದಿನವರೆಗೆ ಎಷ್ಟು ಮತಾಂತರ ಪ್ರಕ್ರಿಯೆ ಆಗಿದೆ, ಎಷ್ಟು ಜನರಿಗೆ ಸಮಸ್ಯೆ ಆಗಿದೆ ಎಂದು ಗೃಹ ಸಚಿವರು ಉತ್ತರಿಸಲಿ. ಈ ಕಾಯ್ದೆ ದುರುಪಯೋಗವಾಗುವ ಆತಂಕವಿದೆ ಎಂದು ಶಾಸಕ ಕಾಶೆಂಪುರ ಹೇಳಿದ್ದಾರೆ. ಕ್ರಿಶ್ಚಿಯನ್ ಶಾಲೆಗಳನ್ನು ಪ್ರಸ್ತಾಪಿಸಿದ ಕಾಶೆಂಪುರ, ಕ್ರಿಶ್ಚಿಯನ್ ಶಾಲೆಗಳಿಗೆ ಮಕ್ಕಳು ಹೋಗ್ತಿದ್ದಾರೆ, ಮತಾಂತರ ಆದ್ರಾ? ಕ್ರಿಶ್ಚಿಯನ್ ಆಸ್ಪತ್ರೆಗಳಿಗೆ ಹೋಗ್ತಾರೆ, ಮತಾಂತರ ಆಗಿದ್ದರಾ? ಹಳೆಯ ಕಾನೂನಿನಲ್ಲಿ ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲ. ಹೀಗಿರುವಾಗ ಹೊಸ ವಿಧೇಯಕ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.

    ಬೆಳಗ್ಗೆ ದಾಖಲೆ ಪರಿಶೀಲನೆಗೆ ಸ್ಪೀಕರ್ ಕಚೇರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಸದಸ್ಯರು ತೆರಳಿದ್ದನ್ನು ಪ್ರಸ್ತಾಪಿಸಿದ ಕಾಶೆಂಪುರ, ‘‘ಕಾಂಗ್ರೆಸ್, ಬಿಜೆಪಿಯವರು ಹೋಗಿ ಚರ್ಚಿಸಿಕೊಂಡು ಬಂದರು. ಬಿಜೆಪಿಯ ನಿಜವಾದ ಬಿ ಟೀಂ ಯಾವುದೆಂದು ಹೇಳಲಿ’’ ಎಂದು ಕುಟುಕಿದ್ದಾರೆ.

    ಆಗ ಮಧ್ಯಪ್ರವೇಶಿಸಿದ ಹೆಚ್.ಡಿ ರೇವಣ್ಣ, ‘‘ದಿನ ಬೆಳಗಾದರೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎನ್ನುತ್ತಾರೆ. 2016ರಲ್ಲೇ ಈ ವಿಧೇಯಕವನ್ನು ಕಾಂಗ್ರೆಸ್‌ನವರು ತಂದಿದ್ದೇಕೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕೊಲೆ ಮಾಡಲು ಹೋಗಬೇಡಿ’’ ಎಂದು ಖಾರವಾಘಿ ಪ್ರತಿಕ್ರಿಯಿಸಿದ್ದಾರೆ.

    ವಿಧೇಯಕದ ಮೇಲೆ ಬಂಡೆಪ್ಪ ಕಾಶೆಂಪುರ್ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಶಾಸಕ ಶರಣು ಸಲಗರ ತಿರುಗೇಟು ನೀಡಿದ್ದಾರೆ. ‘‘ಬಂಡೆಪ್ಪ ಕಾಶೆಂಪುರ್ ಕ್ಷೇತ್ರ ಬೀದರ್ ದಕ್ಷಿಣದಲ್ಲೇ ಹೆಚ್ಚು ಮತಾಂತರವಾಗಿದೆ‌’’ ಎಂದು ಸಲಗರ ಹೇಳಿದ್ದಾರೆ.

    ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ‘‘ನಮ್ಮ ತಾಯಿ ಒಬ್ಬರೇ ಅಲ್ಲ ಅಥವಾ ದಲಿತರಷ್ಟೇ ಮತಾಂತರವಾಗುತ್ತಿಲ್ಲ. ಲಿಂಗಾಯತ ಸಮುದಾಯದವರು, ಕುರುಬ ಸಮುದಾಯದವರನ್ನು ಮತಾಂತರ ಮಾಡಲಾಗುತ್ತಿದೆ. ಕಾಯಿಲೆಗೆ ಔಷಧಿ ಕೊಡುವ ನೆಪದಲ್ಲಿ ಮತಾಂತರ ನಡೆಯುತ್ತಿದೆ. ಅಲ್ಲಿಗೆ ಹೋದರೆ ಕಾಯಿಲೆ ಕಡಿಮೆಯಾಗುತ್ತಂತೆ, ಅದು ಹೇಗೆ?’’ ಎಂದು ಪ್ರಶ್ನಿಸಿದ್ದಾರೆ.

    ಆಗ ಕುಡಚಿ ಶಾಸಕ ರಾಜೀವ್ ಮಾತನಾಡಿ, ‘‘ಕುರುಬರು, ಲಿಂಗಾಯತರು ಅಷ್ಟೇ ಅಲ್ಲ, ತೀರ್ಥಹಳ್ಳಿಯಲ್ಲಿ ಶ್ರೀಮಂತ ಒಕ್ಕಲಿಗರು ಮತಾಂತರವಾದ ಮಾಹಿತಿ ಇದೆ’’ ಎಂದಿದ್ದಾರೆ.

  • 23 Dec 2021 03:25 PM (IST)

    ಇಂದು ಸಂಜೆ 5ಕ್ಕೆ ಮತಾಂತರ ನಿಷೇಧ ವಿಧೇಯಕ ಪಾಸ್ ಆಘಲಿದೆ: ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ

    ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಮತಾಂತರ ನಿಷೇಧ ಬಿಲ್ ತರಲು ಮುಂದಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ‘‘ಮತಾಂತರ ನಿಷೇಧ ವಿಧೇಯಕ ಆಗಲೇ ತರಲು ಮುಂದಾಗಿದ್ದರು. ವಾಸ್ತವಿಕವಾಗಿ ಎಲ್ಲರೂ ಒಪ್ಪಿದ್ದಾರೆ, ಒಂದೇ ಅಭಿಪ್ರಾಯವಿದೆ. ಒಣಪ್ರತಿಷ್ಠೆಗೆ ಬಿದ್ದು ವಿಧೇಯಕಕ್ಕೆ ವಿರೋಧ ಮಾಡ್ತಿದ್ದಾರೆ ಅಷ್ಟೇ. ಈ ವಿಧೇಯಕ ಯಾವುದೇ ಸಮುದಾಯದ ವಿರುದ್ಧವಲ್ಲ. ಸಂಜೆ 5 ಗಂಟೆಗೆ ಮತಾಂತರ ನಿಷೇಧ ವಿಧೇಯಕ ಪಾಸ್​ ಆಗಲಿದೆ. ಪರಿಷತ್​​ನಲ್ಲಿ ಇವತ್ತು ಆಗದಿದ್ದರೆ ಮುಂದೆ ಮಾಡಿದರೆ ಆಯ್ತು’’ ಎಂದು ಬಿಎಸ್​​ವೈ ಹೇಳಿದ್ದಾರೆ.

  • 23 Dec 2021 03:21 PM (IST)

    ವಿಧಾನಸಭೆಯ ಬೆಳಿಗ್ಗೆ ಕಲಾಪದ ಸಂಪೂರ್ಣ ವಿಡಿಯೋ ಇಲ್ಲಿದೆ

  • 23 Dec 2021 03:16 PM (IST)

    ಜನರ ಗಮನ ಬೇರೆಡೆ ಸೆಳೆಯಲು ಮತಾಂತರ ವಿರೋಧಿ ಕಾನೂನು ತಂದಿದ್ದಾರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

    ಬೆಳಗಾವಿ ಅಧಿವೇಶನದ ಧ್ಯೇಯೋದ್ದೇಶವನ್ನು ಮರೆತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನುಡಿದಿದ್ದಾರೆ. ಉತ್ತರ ಕರ್ನಾಟಕದ   ಸಮಸ್ಯೆಗಳಿದ್ದವು. ಬೆಳೆ ಪರಿಹಾರ, ಕೊರೊನಾ ಪರಿಹಾರದ ಬಗ್ಗೆ ಚರ್ಚೆಯಾಗಬೇಕಿತ್ತು. ಕಲ್ಯಾಣ ಕರ್ನಾಟಕದ ಬಗ್ಗೆಯೂ ಕಾಳಜಿ ಇಲ್ಲ. ಇವತ್ತು ಧಾರ್ಮಿಕ ಸ್ವಾತಂತ್ರ್ಯ ವಿಧೇಯಕವನ್ನು ಮಂಡನೆ ಮಾಡಿ ಜನರ ಭಾವನೆಗಳನ್ನ ಕೆರಳಿಸಿದ್ದಾರೆ. ಜನರ ಗಮನವನ್ನ ಬೇರೆಕಡೆ ಸೆಳೆಯಲು ಮತಾಂತರ ನಿಷೇಧ ಕಾಯ್ದೆ ತಂದಿದ್ದಾರೆ. ಇವತ್ತು ಬಲವಂತದಿಂದ ಮತಾಂತರ ಮಾಡಬಾರದಂತ ಸಂವಿಧಾನದಲ್ಲೇ ಇದೆ. ಆದರೆ ಇದನ್ನು ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜನ ವಿರೋಧಿ ಸರ್ಕಾರಕ್ಕೆ ಜನ ತಕ್ಕಪಾಠ ಕಲಿಸುತ್ತಾರೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

  • 23 Dec 2021 03:04 PM (IST)

    ನಿನ್ನೆ ಬಿಲ್ ಹರಿದಿದ್ದ ಡಿಕೆ ಶಿವಕುಮಾರ್ ಇಂದು ಪತ್ತೆಯಿಲ್ಲ: ಕಾಂಗ್ರೆಸ್​ ಪಕ್ಷವನ್ನು ಕುಟುಕಿದ ಬಿಎಸ್​ವೈ

    ಮತಾಂತರ ನಿಷೇಧ ಬಿಲ್‌ ಅನ್ನು ಕಾಂಗ್ರೆಸ್ ಪಕ್ಷ ವಿರೋಧಿಸುವುದು ಸರಿಯಲ್ಲ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ನಿನ್ನೆ ಬಿಲ್ ಪ್ರತಿ ಹರಿದಿದ್ದ ಡಿಕೆಶಿ ಇಂದು ಪತ್ತೆಯಿಲ್ಲ ಎಂದು ಕುಟುಕಿದ ಅವರು, ಇದು ಕಾಂಗ್ರೆಸ್ ನಡೆ ಏನು ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

  • 23 Dec 2021 01:51 PM (IST)

    ಸಮಸ್ಯೆಗಳನ್ನು ಮರೆಮಾಚಲು ಈ ಕಾನೂನು ತರಲಾಗಿದೆ: ಸಿದ್ದರಾಮಯ್ಯ

    ಸದನದಲ್ಲಿ ಮತಾಂತರದ ಬಗ್ಗೆ ವಿವೇಕಾನಂದ, ಗಾಂಧೀಜಿ ಹೇಳಿದ್ದರು ಎಂಬುದನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘‘ಸಂವಿಧಾನದಲ್ಲಿ ಈಗಾಗಲೇ ಈ ಕಾನೂನು ಇದೆ. ಗುಜರಾತ್ ಸರ್ಕಾರ ತಂದ ಬಿಲ್​ಗೆ ಹೈಕೋರ್ಟ್ ತಡೆ ನೀಡಿದೆ. ಅದೇ ರೀತಿ ರಾಜ್ಯದಲ್ಲಿ ತಂದಿರುವ ವಿಧೇಯಕ ಸಹ ನಿಲ್ಲಲ್ಲ. ಬಲವಂತವಾಗಿ ಮತಾಂತರ ಮಾಡಿದರೆ ಶಿಕ್ಷೆ ಕೊಡಲಿ’’ ಎಂದಿದ್ದಾರೆ.

    ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ‘‘ರಾಜ್ಯದಲ್ಲಿ ಸಮಸ್ಯೆಗಳು ಕಿತ್ತು ತಿನ್ನುತ್ತಿದ್ದರೂ ಏನೂ ಮಾಡಲಿಲ್ಲ. ವಿಷಯವನ್ನು ಡೈವರ್ಟ್ ಮಾಡಲು ಇಂತಹ ಕಾನೂನು ತಂದಿದ್ದಾರೆ. ಇದು ಜನವಿರೋಧಿ, ಮನುಷ್ಯ ವಿರೋಧಿ, ಸಂವಿಧಾನವಿರೋಧಿ ಕಾನೂನು. ಈ ಕಾನೂನನ್ನು ಕಾಂಗ್ರೆಸ್ ಪಕ್ಷ ಬಲವಾಗಿ ವಿರೋಧಿಸುತ್ತದೆ’’ ಎಂದು ಹೇಳಿದ್ದಾರೆ.

    ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮುಂದೂಡಿದ್ದಾರೆ.

  • 23 Dec 2021 01:41 PM (IST)

    ಮತಾಂತರ ನಿಷೇಧ ಕಾಯ್ದೆ ಧರ್ಮದ ಬಗ್ಗೆ, ಜಾತಿಯ ಬಗ್ಗೆ ಅಲ್ಲ; ಸಚಿವ ಮಾಧುಸ್ವಾಮಿ ಸ್ಪಷ್ಟನೆ

    ಇವತ್ತಿಗೂ ಮದುವೆಯಾಗಿ ಮತಾಂತರ ಆಗುವುದು ಇದೆ ಎಂದು ಸಿದ್ದರಾಮಯ್ಯ ಚರ್ಚೆಯ ನಡುವೆ ಹೇಳಿದರು. ಆಗ ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಬಿಲ್‌ನಲ್ಲಿ ಧರ್ಮದ ಬಗ್ಗೆ ಉಲ್ಲೇಖಿಸಿದ್ದೇವೆ, ಜಾತಿ ಬಗ್ಗೆ ಅಲ್ಲ ಎಂದು ಪ್ರತಿಕ್ರಿಯಿಸಿದರು. ಆಗ ಸಿದ್ದರಾಮಯ್ಯ ಮಾತನಾಡಿ, ಅವಮಾನ ಸಹಿಸಿಕೊಂಡು ಒಂದು ಧರ್ಮದಲ್ಲಿ ಇರಬಾರದು. ಹೊರಗೆ ಬರಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ ಎಂದು ನುಡಿದರು.

  • 23 Dec 2021 01:29 PM (IST)

    ಈಶ್ವರಪ್ಪ- ಸಿದ್ದರಾಮಯ್ಯ ಈರ್ವರಲ್ಲೂ ಎಂತಹ ಸ್ನೇಹ?; ಸದನದಲ್ಲಿ ಕುತೂಹಲಕರ ಚರ್ಚೆ

    ಮತಾಂತರ ನಿಷೇಧ ಕಾಯ್ದೆಯ ಗಂಭೀರ ಚರ್ಚೆಯ ನಡುವೆಯೂ ಸದನದಲ್ಲಿ ಹಾಸ್ಯಚಟಾಕಿ ಆಗಾಗ ಬರುತ್ತಲೇ ಇದೆ. ಮಾತಿನ ವೇಳೆ ಈಶ್ವರಪ್ಪ ಅವರ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ, ಸ್ಪೀಕರ್ ಮಧ್ಯಪ್ರವೇಸಿ ನಿಮ್ಮದು ಅವರದ್ದು ಎಂತಹ ಸ್ನೇಹ ಎಂದು ತಮಾಷೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘‘ನಮ್ಮದು ಲವ್ ಆ್ಯಂಡ್ ಹೇಟ್ ರಿಲೇಷನ್‌ಶಿಪ್’’ ಎಂದು ನಕ್ಕರು. ನಮ್ಮ ಸಂಬಂಧದ ಕುರಿತು ಬಿಡುವಿನ ವೇಳೆಯಲ್ಲಿ ಸಿಕ್ಕಿದಾಗ ಉತ್ತರಿಸುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

  • 23 Dec 2021 01:26 PM (IST)

    ಎಲ್ಲಾ ಧರ್ಮದಲ್ಲಿ ಅಸ್ಪೃಶ್ಯತೆ ಇದೆ: ಶಾಸಕ ಅರವಿಂದ್ ಬೆಲ್ಲದ್

    ಅಸ್ಪೃಶ್ಯತೆ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಇಲ್ಲ. ಎಲ್ಲಾ ಧರ್ಮದಲ್ಲಿಯೂ ಅಸ್ಪೃಶ್ಯತೆ ಇದೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಚರ್ಚೆಯ ವೇಳೆ ನುಡಿದಿದ್ದಾರೆ.

  • 23 Dec 2021 01:24 PM (IST)

    ಬೌದ್ಧ ಧರ್ಮಕ್ಕೆ ಹೋಗುವುದು ಮತಾಂತರವೇ?; ಸದನದಲ್ಲಿ ಕುತೂಹಲಕರ ಚರ್ಚೆ

    ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ಚರ್ಚೆಯ ವೇಳೆ ಅಂಬೇಡ್ಕರ್, ಬೌದ್ಧ ಧರ್ಮ ಹಾಗೂ ಹಿಂದೂ ಧರ್ಮದ ಕುರಿತು ಕುತೂಹಲಕರ ಚರ್ಚೆ ನಡೆದಿದೆ. ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ‘‘ಹಿಂದೂ ಧರ್ಮದಲ್ಲಿ ಅನೇಕ ಲೋಪಗಳಿವೆ. ಅದನ್ನು ಸರಿಪಡಿಸಿಕೊಳ್ಳದಿದ್ದರೆ ಮತಾಂತರವಾಗುತ್ತೇನೆ ಎಂದು 1936ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಆಗ ಹಲವರು ಮತಾಂತರವಾಗಲು ರೆಡ್ ಕಾರ್ಪೆಟ್ ಹಾಕಿದ್ದರು. ರೆಡ್ ಕಾರ್ಪೆಟ್ ಹಾಕಿದರೂ ಅವರು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ರಾಷ್ಟ್ರಾಂತರವಾಗುತ್ತದೆ ಎಂದಿದ್ದರು. 20 ವರ್ಷದ ಬಳಿಕ ಅವರು ಬೌದ್ಧ ಧರ್ಮಕ್ಕೆ ಮತಾಂತರವಾದರು’’ ಎಂದು ಹೇಳಿದ್ದಾರೆ.

    ಡಾ.ಸುಧಾಕರ್ ಮಾತನಾಡಿ, ‘‘ನನಗೆ ಅಧಿಕಾರ ಇದ್ದಿದ್ದರೆ ಮತಾಂತರ ಬ್ಯಾನ್ ಮಾಡುತ್ತಿದ್ದೆ ಎಂದು ಮಹಾತ್ಮ ಗಾಂಧೀಜಿಯವರೇ ಹೇಳಿದ್ದಾರೆ. ಗಾಂಧೀಜಿ ಆದರ್ಶ ಪಾಲನೆ ಮಾಡುವವರು ಇದನ್ನೂ ಪಾಲಿಸಲಿ’’ ಎಂದಿದ್ದಾರೆ.

    ಶಾಸಕ ಎನ್.ಮಹೇಶ್ ಮಾತನಾಡಿ, ‘‘1956ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಒಂದು ಮಾತು ಹೇಳಿದ್ದರು. ನಿಜವಾಗಿ ಹೇಳುವುದಾದರೆ ನಾನು ಆರಿಸಿಕೊಂಡ ಧರ್ಮ ಹೊಸದಲ್ಲ. ಇದು ಹೊರಗಿನಿಂದ ಬಂದಿರುವ ಧರ್ಮವೂ ಅಲ್ಲ. ಬೌದ್ಧ ಧರ್ಮ ಈ ನೆಲದ್ದಾಗಿದೆ. ಹೀಗಾಗಿ ಇದು ಮತಾಂತರ ಅಲ್ಲವೆಂದು ಹೇಳಿದ್ದರು. ತಾನು ನನ್ನ ಮೂಲ ಧರ್ಮಕ್ಕೆ ಹೋಗುತ್ತೇನೆಂದು ಅವರು ಹೇಳಿದ್ದರು’’ ಎಂದು ಅಂಬೇಡ್ಕರ್ ಮಾತನ್ನು ಮಹೇಶ್ ಉಲ್ಲೇಖಿಸಿದ್ದಾರೆ.

    ಕಾನೂನು ಸಚಿವ ಮಾಧುಸ್ವಾಮಿ ಕೂಡ ಮಾತನಾಡಿ, ಬೌದ್ಧಧರ್ಮಕ್ಕೆ ಹೋಗುವುದು ಮತಾಂತರವಲ್ಲ ಎಂದಿದ್ದಾರೆ. ‘‘ಬೌದ್ಧ ಧರ್ಮಕ್ಕೆ ಹೋಗುವುದು ಮತಾಂತರವಲ್ಲ. ‘ಬೌದ್ಧ ಧರ್ಮವೂ ಹಿಂದೂ ಧರ್ಮದ ಭಾಗವಾಗಿದೆ’’ ಎಂದು ಹೇಳಿದ್ದಾರೆ.

    ನಂತರ ಮಾತನಾಡಿದ ಸಿದ್ದರಾಮಯ್ಯ, ಅಂಬೇಡ್ಕರ್ ಅವರ ಮತ್ತೊಂದು ಮಾತನ್ನು ಉಲ್ಲೇಖಿಸಿದರು. ‘‘ಅಂಬೇಡ್ಕರ್ ಅವರು, ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುವುದಿಲ್ಲ. ಹಿಂದೂ ಧರ್ಮ ಸುಧಾರಣೆಗೆ ನಾನು ಪ್ರಯತ್ನ ಮಾಡಿದ್ದೇನೆ. ಆದರೆ ನನ್ನಿಂದ ಅದು ಸಾಧ್ಯವಾಗಲೇ ಇಲ್ಲ. ಯಾರಿಗೆ ನೋವಾಗಿದ್ದರೆ ಅವರು ಮತಾಂತರವಾಗಿ’’ ಎಂದಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

  • 23 Dec 2021 01:13 PM (IST)

    ಸಿದ್ದರಾಮಯ್ಯ- ಅರವಿಂದ ಲಿಂಬಾವಳಿ ಆರೋಪ- ಪ್ರತ್ಯಾರೋಪ; ಮಧ್ಯಪ್ರವೇಶಿಸಿದ ಸ್ಪೀಕರ್

    ಕಾನೂನು ಎಲ್ಲರಿಗೂ ಒಂದೇ ಎಂದು ಸಂವಿಧಾನ ಹೇಳುತ್ತದೆ, ಅದನ್ನೇ ನಾನು ಈಗ ಹೇಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಮಾತಿಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸೆಕ್ಷನ್ 5ರ ಬಗ್ಗೆ ಉಲ್ಲೇಖ ಮಾಡಿದ ಸಿದ್ದರಾಮಯ್ಯ, ತಾರತಮ್ಯ ಮಾಡಿರುವುದು ಏಕೆಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಅರವಿಂದ ಲಿಂಬಾವಳಿ, ‘‘ಮತಾಂತರ ಆದರೂ ಕೆಲವರು ಹಿಂದೂ ಧರ್ಮದಲ್ಲೇ ಇದ್ದಾರೆ. ಬಿಲ್ ತಂದರೆ ಸರಿಯಾದ ಅಂಕಿ-ಸಂಖ್ಯೆ ಸಿಗುತ್ತದೆ’’ ಎಂದಿದ್ದಾರೆ. ಈ ಹೇಳಿಕೆಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಇದು ಕಾರಣವಾಯಿತು.

    ಸಿದ್ದರಾಮಯ್ಯ ಪ್ರತಿಕ್ರಿಯೆಗೆ ಸ್ಪೀಕರ್ ಕಾಗೇರಿ ಪ್ರತಿಕ್ರಿಯಿಸಿ, ನಿಮ್ಮ ಹಿರಿತನಕ್ಕೆ ತಕ್ಕ ಮಾತುಗಳಲ್ಲ ಎಂದರು. ‘‘ನಾನು ಹೇಳಿದ್ದು ಅಸಾಂವಿಧಾನಿಕ ಅಂತಾದರೆ ಪದ ತೆಗೆದುಹಾಕಿ’’ ಎಂದು ಸಿದ್ದರಾಮಯ್ಯ ನುಡಿದರು.

  • 23 Dec 2021 12:54 PM (IST)

    ಎಸ್​ಸಿ, ಎಸ್​ಟಿ ವರ್ಗದವರಿಗೆ ಹೆಚ್ಚು ರಕ್ಷಣೆ ಕೊಟ್ಟರೆ ಸಿದ್ದರಾಮಯ್ಯನವರಿಗೆ ಸಮಸ್ಯೆ ಇದೆಯೇ?; ಸಿಎಂ ಬೊಮ್ಮಾಯಿ ಪ್ರಶ್ನೆ

    SC, STಯವರಿಗೆ ಹೆಚ್ಚು ರಕ್ಷಣೆ ಕೊಟ್ಟರೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಮಸ್ಯೆ ಇದೆಯಾ? ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ದುರ್ಲಾಭ ಪಡೆದು ಮತಾಂತರ ಮಾಡುವುದನ್ನು ತಡೆಯಲು ಬಿಲ್ ರೂಪಿಸಲಾಗಿದೆ. ಅದನ್ನು ಮಾಡುವುದು ತಪ್ಪಾ?’’ ಎಂದು ಬೊಮ್ಮಾಯಿ ಮರುಪ್ರಶ್ನಿಸಿದ್ದಾರೆ.

    ಮನಸ್ಮೃತಿ ಕಾಲದಿಂದ ಹೊರಗೆ ಬನ್ನಿ ಎಂದು ಶಾಸಕ ರಮೇಶ್ ಕುಮಾರ್ ಹೇಳಿಕೆಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. SC, ST ವರ್ಗಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಇನ್ನೂ ಮುಂದೆ ಬರಬೇಕು. ಹೀಗಾಗಿ ಸರ್ಕಾರದಿಂದ ಹಲವು ಯೋಜನೆಗಳನ್ನು ನೀಡುತ್ತಿದ್ದೇವೆ. ವಿಶೇಷ ರಕ್ಷಣೆ ನೀಡುವ ಉದ್ದೇಶದಿಂದ ಬಿಲ್ ತರುತ್ತಿದ್ದೇವೆ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

  • 23 Dec 2021 12:51 PM (IST)

    ವಿವಿಧ ಮಾನದಂಡಗಳಲ್ಲಿ ಶಿಕ್ಷೆಯ ಪ್ರಮಾಣ ಬದಲು; ಸರ್ಕಾರದ ನಿರ್ಧಾರ ಪ್ರಶ್ನಿಸಿದ ಸಿದ್ದರಾಮಯ್ಯ

    ‘‘ಮತಾಂತರ ನಿಷೇಧ ಬಿಲ್ ಜಾರಿಯ ಕುರಿತು ಸರ್ಕಾರದ ಉದ್ದೇಶ ಸರಿಯಿಲ್ಲ. ಮಹಿಳೆಯರು, ಮಕ್ಕಳು, ಬುದ್ಧಿಹೀನರು, SC, STಯವರನ್ನು ಮತಾಂತರ ಮಾಡಿದರೆ ಶಿಕ್ಷೆ ಹೆಚ್ಚು ಎಂದು ಹೇಳಲಾಗಿದೆ. ಇದು ಯಾವ ಕಾನೂನಿನಲ್ಲಿ ಇದೆಯಪ್ಪಾ? ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಇದೆ. ಆದರೆ ಏಕೆ ನೀವು ಶಿಕ್ಷೆ ಪ್ರಮಾಣದಲ್ಲಿ ಬದಲಾವಣೆ ಮಾಡಿದ್ದೀರಿ?’’ ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

  • 23 Dec 2021 12:48 PM (IST)

    ರಾಜ್ಯದ ಧರ್ಮವಾರು ಜನಸಂಖ್ಯೆಯ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ ಅಂಕಿಅಂಶ ಇಲ್ಲಿದೆ

    ರಾಜ್ಯವಾರು ಜನಸಂಖ್ಯೆಯ ಅಂಕಿಅಂಶವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಈ ರೀತಿ ಪ್ರಸ್ತಾಪಿಸಿದ್ದಾರೆ.

    ಹಿಂದು 4,43,21279 (2001) 5,13,17,472(2011)

    ಇಸ್ಲಾಂ 64,63,127(2001) 78,93,065(2011)

    ಕ್ರಿಶ್ಚಿಯನ್ 10,09,164(2001) 11,42,647(2011)

    ಬೌದ್ಧರು 3,93,300(2001) 95,710(2011)

  • 23 Dec 2021 12:41 PM (IST)

    ತಾವು ಹೇಳಿದ್ದು ರಾಜ್ಯದ ಅಂಕಿಅಂಶ: ಧರ್ಮವಾರು ಜನಸಂಖ್ಯೆ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ

    ತಾವು ಹೇಳಿದ್ದು ರಾಜ್ಯದ ಗಣತಿ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ವಿಧಾನಸಭೆಗೆ ತಿಳಿಸಿದ ಅವರು, 2001ರಲ್ಲಿ ಹಿಂದೂಗಳು ಸಂಖ್ಯೆ 4,43,21,279ರಷ್ಟಿತ್ತು. 2011ರಲ್ಲಿ ಹಿಂದೂಗಳ ಸಂಖ್ಯೆ 5,13,17,472ರಷ್ಟಾಗಿದೆ’’ ಎಂದಿದ್ದಾರೆ. ಶಾಂತಿ ಕಾಪಾಡಲು ಮಸೂದೆ ತಂದಿದ್ದೇವೆ ಎನ್ನುತ್ತಾರೆ. ಬೆಂಗಳೂರಿನ ಆರ್ಚ್ ಬಿಷಪ್ ಒಂದು ಮಾತು ಹೇಳಿದ್ದಾರೆ. ಕ್ರೈಸ್ತರು ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿ ಹಲವು ಹಿಂದೂ ಮಕ್ಕಳು ಕೂಡ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಅವರನ್ನೆಲ್ಲಾ ಬಲವಂತವಾಗಿ ಮತಾಂತರ ಮಾಡುತ್ತಿದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಆರ್.ಅಶೋಕ್ ಶಾಲೆಗೆ ಹೋಗುತ್ತಿರುವ ಮಕ್ಕಳ ಮತಾಂತರ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅದನ್ನು ಉಲ್ಲೇಖಿಸಿದ್ದಾರೆ. ಅದಕ್ಕೆ ಚಾರ್ಜ್‌ಶೀಟ್ ಹಾಕಿ, ಅಪರಾಧಿಗಳಿಗೆ ಶಿಕ್ಷೆ ಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

    ಇದಕ್ಕಾಗಿಯೇ ಬಿಲ್ ತರುತ್ತಿರುವುದು ಎಂದ ಆರ್.ಅಶೋಕ್ ತಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಕಾನೂನು ಇದೆಯಲ್ಲಾ ಎಂದ ಸಿದ್ದರಾಮಯ್ಯ ಮರುನುಡಿದಿದ್ದಕ್ಕೆ ‘‘ಈ ಹಿಂದೆ ಶಿಕ್ಷೆ ಪ್ರಮಾಣ ಕಡಿಮೆ ಇದೆ’’ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಶಿಕ್ಷೆಯ ಪ್ರಮಾಣ ಹೆಚ್ಚಿಸುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

  • 23 Dec 2021 12:39 PM (IST)

    ಸಿದ್ದರಾಮಯ್ಯ ನೀಡಿದ ಅಂಕಿಅಂಶ ತಪ್ಪು ಎಂದು ಸರ್ಕಾರದ ವರದಿ ತಿಳಿಸಿದ ಬಿಜೆಪಿ ಶಾಸಕ ಪಿ.ರಾಜೀವ್

    ಧರ್ಮಾಧಾರಿತ ಜನಸಂಖ್ಯೆಯನ್ನು ಸದನದಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಇದಕ್ಕೆ ಆಧಾರ ಯಾವುದು ಎಂದು ಆಡಳಿತ ಪಕ್ಷದವರು ಆಕ್ಷೇಪ ಎತ್ತಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಸೆನ್ಸೆಕ್ಸ್ ವರದಿಯನ್ನು ಆಧರಿಸಿ ಮಾಹಿತಿ ನೀಡಿದ್ದೇನೆ. ಸಾಮಾಜಿಕ ಜಾಲತಾಣದ ಮಾಹಿತಿ ಆಧರಿಸಿ ಹೇಳಿದ್ದೇನೆ. ಸೆನ್ಸೆಕ್ಸ್ ವರದಿಯನ್ನು ನಾನು ಓದಿಲ್ಲ ಎಂದಿದ್ದಾರೆ. ಇದಕ್ಕೆ ಆಡಳಿತ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದು, ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಿದ್ದರಾಮಯ್ಯಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಪಿ.ರಾಜೀವ್, ಹಿಂದೂಗಳು 2001ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.83.86ರಷ್ಟಿದ್ದರು. 2011ರಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 79.80ರಷ್ಟು ಆಗಿದೆ ಎಂದು ಸರ್ಕಾರದ ದಾಖಲೆಯನ್ನು ಉಲ್ಲೇಖಿಸಿದ್ದಾರೆ.

  • 23 Dec 2021 12:31 PM (IST)

    ಜನಸಂಖ್ಯೆಯ ಅಂಕಿಅಂಶ ನೀಡಿ ವಾದ ಮಂಡಿಸಿದ ಸಿದ್ದರಾಮಯ್ಯ

    ತಮ್ಮ ವಾದ ಮಂಡಿಸಿದ ಸಿದ್ದರಾಮಯ್ಯ, ‘‘ಪಂಪ ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಿ. ನಂತರ ಜೈನ್‌ಗೆ ಮತಾಂತರವಾದರು. ರನ್ನ ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಿ, ಜೈನ್‌ಗೆ ಮತಾಂತರವಾದರು. ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಮತಕ್ಕೆ ಸೇರಿದರು. ರಾಜ ಮಹಾರಾಜರು ಮತಾಂತರವಾಗಿದ್ದಾರೆ. ದೇಶದಲ್ಲಿ ದಲಿತರಾಗಲಿ, ಶೂದ್ರರಾಗಲಿ ಮತಾಂತರವಾಗಿಲ್ಲ. ಅಧಿಕಾರಕ್ಕಾಗಿ ಯಾರೂ ಮತಾಂತರವಾಗಿಲ್ಲ. ಮತಾಂತರದಿಂದ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿಯೇ ನಾನು ಸದನಕ್ಕೆ ಕೆಲ ಅಂಕಿ-ಅಂಶ ನೀಡುತ್ತೇನೆ’’ ಎಂದು ಅವರು ಅಂಕಿಅಂಶ ನೀಡಿದ್ದಾರೆ.

    ಹಿಂದೂಗಳು 2001ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.83.86ರಷ್ಟಿದ್ದರು. 2011ರಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 84ರಷ್ಟು ಆಗಿದೆ. ಹಿಂದೂಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮುಸ್ಲಿಮರು 2001ರಲ್ಲಿ ಶೇಕಡಾ 12.23ರಷ್ಟು ಇದ್ದರು. 2011ರಲ್ಲಿ ಶೇಕಡಾ 12.92ರಷ್ಟು ಆಗಿದ್ದರು, ಅವರು ಹೆಚ್ಚಾಗಿದ್ದಾರೆ. 2001ರಲ್ಲಿ ಕ್ರೈಸ್ತರು ಒಟ್ಟು ಜನಸಂಖ್ಯೆಯಲ್ಲಿ 1.91ರಷ್ಟು ಇದ್ದರು. 2011ರಲ್ಲಿ ಕ್ರೈಸ್ತರು ಒಟ್ಟು ಜನಸಂಖ್ಯೆಯಲ್ಲಿ 1.87ರಷ್ಟು ಆಗಿದ್ದಾರೆ. ಕ್ರೈಸ್ತರ ಸಂಖ್ಯೆ ಎಲ್ಲಿ ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರ ಬಗ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಂಯ್ಯ, ‘‘ತಮ್ಮ ತಾಯಿಯನ್ನು ಮತಾಂತರ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ಎಲ್ಲಾದರೂ ಪ್ರಕರಣ ದಾಖಲಾಗಿದೆಯಾ?’’ ಎಂದು ಕೇಳಿದ್ದಾರೆ.

  • 23 Dec 2021 12:26 PM (IST)

    ಗುಜರಾತ್ ಹಾಗೂ ಕರ್ನಾಟಕದ ವಿದೇಯಕಗಳಲ್ಲಿ ಒಂದೇ ಪದಗಳಿವೆ; ಇದರ ಹಿಂದೆ ಯಾರೋ ಇದ್ದಾರೆ: ಸಿದ್ದರಾಮಯ್ಯ

    ಪ್ರೀತಿಸಿ ಮದುವೆಯಾದವರನ್ನು ಪ್ರಶ್ನಿಸಲು ನೀವ್ಯಾರು ಎಂದು ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ ಎಂದು ಸಿದ್ದರಾಮಯ್ಯ ಚರ್ಚೆಯಲ್ಲಿ ಪ್ರಸ್ತಾಪಿಸಿದ್ದಾರೆ. ಮದುವೆಯಾಗುವುದು ಅವರವರ ಹಕ್ಕು. ಹೀಗಾಗಿ ಗುಜರಾತ್‌ನಲ್ಲಿ ಆ ಬಿಲ್‌ಗೆ ಸ್ಟೇ ತಂದಿದ್ದಾರೆ. ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಈ 4 ರಾಜ್ಯದಲ್ಲಿ ಒಂದು ಬಿಲ್ ತಂದಿದ್ದಾರೆ. ನಾಲ್ಕೂ ಕಡೆಯೂ ಕಟ್ ಆ್ಯಂಡ್ ಪೇಸ್ಟ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

    ಗುಜರಾತ್ ಸರ್ಕಾರಕ್ಕೆ ಕರಡು ಪ್ರತಿ ರಚಿಸಿಕೊಟ್ಟವರು, ರಾಜ್ಯಕ್ಕೆ ಕರಡು ಪ್ರತಿ ರಚಿಸಿಕೊಟ್ಟವರು ಒಂದೇ ಅನಿಸುತ್ತಿದೆ. ಅಲ್ಲೂ, ಇಲ್ಲೂ ಒಂದೇ ರೀತಿಯ ಪದಗಳು ಇವೆ. ಸೆಕ್ಷನ್ 3, 5, 12ನಲ್ಲಿ ಒಂದೇ ರೀತಿಯ ಪದಗಳು ಇವೆ, ಯಾರು ಈ ಕರಡು ಪ್ರತಿ ರಚಿಸಿದವರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಈ ಕರಡು ಹಿಂದೆ ಬೇರೆ ಯಾರೋ ಇದ್ದಾರೆ ಅನಿಸುತ್ತಿದೆ. ಯಾರೋ ಡಿಕ್ಟೇಟ್ ಮಾಡಿದಂತೆ ಕರಡು ರಚನೆ ಮಾಡಿದಂತಿದೆ. ಬಲವಂತ, ಮೋಸ, ಆಮಿಷದ ಮತಾಂತರ ಕಾನೂನು ವಿರೋಧಿ. ಸಂವಿಧಾನದಲ್ಲಿಯೇ ಈ ಬಗ್ಗೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • 23 Dec 2021 12:21 PM (IST)

    ಕಾವೇರಿದ ಚರ್ಚೆಯ ನಡುವೆಯೂ ಸದನದಲ್ಲಿ ಮದುವೆಯ ಕುರಿತು ಹಾಸ್ಯಚಟಾಕಿ

    ವಿಧೇಯಕದ ಕುರಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸೆಕ್ಷನ್ 12ರಲ್ಲಿ ಮತಾಂತರವಾದವರ ಮೇಲೆ ಬರ್ಡನ್ ಇದೆ. ಇದು ಸಹಜ ನ್ಯಾಯವಲ್ಲ. ಈ ಹಿಂದೆ ಆರೋಪಿ ಮೇಲೆ ಬರ್ಡನ್ ಇತ್ತು. ಜತೆಗೆ ಈ ಹಿಂದೆ ಮತಾಂತರ ಅನ್ನೋದು ಮದುವೆಗೆ ಅನ್ವಯವಾಗಿರಲಿಲ್ಲ ಎಂದಿದ್ದಾರೆ.

    ಈ ವೇಳೆ ಸಿದ್ದರಾಮಯ್ಯ ಹಾಸ್ಯಚಟಾಕಿ ಹಾರಿಸಿದ್ದಾರೆ. ಪ್ರೀತಿಗೆ ವಯಸು ಇದೆಯಾ ಎಂಬ ಕಾಗೇರಿ ಪ್ರಶ್ನೆಗೆ, ಪ್ರೀತಿ ಬೇರೆ, ಮದುವೆ ಬೇರೆ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯ ನಿಮಗೆ ವಯಸಾಗಿದೆ ಎಂದು ಅನಿಸಿದ್ಯಾ ಎಂದು ಪ್ರಸ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ವಿಪಕ್ಷ ನಾಯಕ, ‘‘ಹೌದು ನನಗೆ ವಯಸಾಗಿದೆ’’ ಎಂದಿದ್ದಾರೆ.

  • 23 Dec 2021 12:13 PM (IST)

    2016ರಲ್ಲಿ ಕಡತಕ್ಕೆ ಸಹಿ ಹಾಕಿದ್ದಕ್ಕೆ ಸ್ಪಷ್ಟನೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

    ಕಲಾಪ ಮತ್ತೆ ಆರಂಭವಾಗಿದ್ದು, ಸಿದ್ದರಾಮಯ್ಯ 2016ರ ಕಡತಕ್ಕೆ ಸಹಿ ಹಾಕಿದ್ದರ ಕುರಿತಂತೆ ಸದನಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘‘ನಮ್ಮ ಕಾಲದಲ್ಲಿ ವಿಧೇಯಕ ಆಗಿತ್ತು ಅಂತಾ ಗೃಹ ಸಚಿವರು ಪ್ರಸ್ತಾಪ ಮಾಡಿದ್ದಾರೆ. ನಮಗೆ ಕ್ಯಾಬಿನೆಟ್, ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಅಂದರೆ ಏನು ಅಂತಾ ಗೊತ್ತಿದೆ. 2016ರಲ್ಲಿ ಮತಾಂತರ ನಿಷೇಧ ಬಿಲ್ ಜಾರಿಗೆ ಮುಂದಾಗಿದ್ದರು, ಅದನ್ನು ಸ್ವಲ್ಪ ಸೇರ್ಪಡೆ ಮಾಡಿ ವಿಧೇಯಕ ಮಂಡಿಸಲಾಗಿದೆ ಎಂಬ ಕಾನೂನು ಸಚಿವರ ಮಾತನ್ನು ಒಪ್ಪುತ್ತೇನೆ. ನಾನು ಕೂಡ 2014ರಿಂದ ನಾನು ಕೂಡ ಸಚಿವನಾಗಿದ್ದೇನೆ. ಕ್ಯಾಬಿನೆಟ್ ಅಂದರೆ ಏನು ಎಲ್ಲ ವಿಚಾರಗಳು ನನಗೂ ಗೊತ್ತಿದೆ. ಸಿಎಂ ಅಂದರೆ ಡಿಕ್ಟೇಟರ್ ಅಲ್ಲ. ಕಾನೂನು ಆಯೋಗದ ದಾಖಲೆ ಸಚಿವ ಸಂಪುಟಕ್ಕೆ ಬಂದಿಲ್ಲ. ಸಚಿವ ಸಂಪುಟದಲ್ಲಿ ಚರ್ಚೆಯೇ ಆಗಿಲ್ಲ, ಒಪ್ಪಿಗೆಯೂ ಆಗಿಲ್ಲ’’ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

    ನಾವು ಒಪ್ಪಿಗೆ ಪಡೆದು, ಶಾಸಕಾಂಗ ಪಕ್ಷದಲ್ಲಿ ಒಪ್ಪಿದ ಬಳಿಕ ವಿಧೇಯಕ ಮಂಡಿಸುತ್ತೇವೆ. ಆದರೆ ನನ್ನ ಅವಧಿಯಲ್ಲಿ ಇಂತಹ ಯಾವ ಪ್ರಕ್ರಿಯೆ ನಡೆದಿಲ್ಲ. ನಮಗೆ ಆ ಬಿಲ್ ತರುವ ಉದ್ದೇಶ ಇರಲಿಲ್ಲ. ಆ ಬಿಲ್ ತರುವ ಉದ್ದೇಶವಿದ್ದಿದ್ದರೆ ಮತ್ತೆ ಪ್ರಸ್ತಾಪವಾಗುತ್ತಿತ್ತು. ನಂತರ ನಾವು ಎರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದೆವು. ಆದರೆ ನಮಗೆ ಆ ಉದ್ದೇಶ ಇರಲಿಲ್ಲ. ನಾವು ಮಾಡಿದ ಬಿಲ್‌ಗೂ, ಈ ಬಿಲ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಮದುವೆ ವಿಚಾರ ಪ್ರಸ್ತಾಪ ಮಾಡಿಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಸಮಾಜ ಕಲ್ಯಾಣ ಇಲಾಖೆಗೆ ರಾಜ್ಯ ಕಾನೂನು ಆಯೋಗ ಕರಡು ಶಿಫಾರಸು ಮಾಡಿತ್ತು. ಸಮಾಜ ಕಲ್ಯಾಣ ಇಲಾಖೆ ಕಾನೂನು ಇಲಾಖೆಗೆ ಕಡತ ಮಂಡಿಸಿತ್ತು. ಕಾನೂನು ಇಲಾಖೆ ಅಂದಿನ ಸಿಎಂ ಸಿದ್ದರಾಮಯ್ಯಗೆ ಕಡತ ಮಂಡಿಸಿತ್ತು. ಸಿದ್ದರಾಮಯ್ಯ ಸಂಪುಟ ಸಭೆಗೆ ಕಳುಹಿಸಿದ್ದರು. ಅದರೆ ಸಭೆಯಲ್ಲಿ ವಿಷಯ ಕೈಗೆತ್ತಿಕೊಂಡಿಲ್ಲ ಹಾಗೂ ಚರ್ಚೆಯೇ ಆಗಿಲ್ಲ. ವಿಷಯವನ್ನೇ ಮೊಟಕುಗೊಳಿಸಲಾಗಿದೆ. ಕಡತ ವಾಪಸ್ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಇಂತಹ ಕಾನೂನು ಅವಶ್ಯಕತೆ ಇಲ್ಲ ಎಂದು ಕಡತಕ್ಕೆ ಅಂತಿಮ ಶರಾ ಬರೆದಿದೆ ಎಂದು ಕಾಂಗ್ರೆಸ್ ತಿಳಿಸಿದೆ.

  • 23 Dec 2021 12:06 PM (IST)

    ಸ್ಪೀಕರ್ ಕಚೇರಿ ಸಭೆ ಮುಕ್ತಾಯ

    ಸ್ಪೀಕರ್ ಕಚೇರಿಯಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರ ಸಭೆ ಅಂತ್ಯವಾಗಿದೆ. 2016ರ ದಾಖಲೆಗಳನ್ನು ಪರಿಶೀಲಿಸಲು ನಾಯಕರು ತೆರಳಿದ್ದರು. ಕಾನೂನು ಆಯೋಗದ ಶಿಫಾರಸ್ಸು ಗಳ ಅನ್ವಯ ಕಡತ ಸಿದ್ಧವಾಗಿತ್ತು. ಅಂದು ಸಚಿವ ಸಂಪುಟಗೆ ಕಡತ ಮಂಡಿಸಲು ಸಿದ್ದರಾಮಯ್ಯ ಸೂಚಿಸಿದ್ದರು. ಆದರೆ ಸಂಪುಟ ಸಭೆಯಲ್ಲಿ ವಿಷಯವನ್ನು ಮೊಟಕು (ಡೆಫರ್) ಮಾಡಲು ತೀರ್ಮಾನಿಸಲಾಗಿತ್ತು ಎಂದು ಸ್ಪೀಕರ್ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಮಾಹಿತಿ ನೀಡಿದ್ದಾರೆ.

  • 23 Dec 2021 11:54 AM (IST)

    ‘ಪಾಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಒಳ್ಳೆಯ ಮನುಷ್ಯ. ಜಯಚಂದ್ರ ಮಾಡಿದ ಕೆಲಸಕ್ಕೆ ಅವರು ಸಿಕ್ಕಿಹಾಕಿಕೊಂಡವರೆ’

    ತಮಾಷೆಯಿಂದ ಗೊಣಗುತ್ತಾ ಹೊರಬಂದ ಶಾಸಕ ಹೆಚ್.ಡಿ ರೇವಣ್ಣ

    ‘‘ಪಾಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಒಳ್ಳೆಯ ಮನುಷ್ಯ. ಮಾಜಿ ಸಚಿವ ಜಯಚಂದ್ರ ಮಾಡಿದ ಕೆಲಸಕ್ಕೆ ಅವರು ಸಿಕ್ಕಿಹಾಕಿಕೊಂಡವರೆ’’ ಎಂದು ತಮಾಷೆಯಿಂದ ಗೊಣಗುತ್ತಾ ಶಾಸಕ ಹೆಚ್.ಡಿ.ರೇವಣ್ಣ ಸದನದಿಂದ ಹೊರಬಂದಿದ್ದಾರೆ.

  • 23 Dec 2021 11:45 AM (IST)

    ವಿಧೇಯಕ ಒಪ್ಪಿ ಸಹಿ ಮಾಡಿದ್ದಲ್ಲ, ಮಂಡನೆ ಮಾಡಲಷ್ಟೇ ಸಹಿ: ಸಿದ್ದರಾಮಯ್ಯ

    ಸ್ಪೀಕರ್ ಕಚೇರಿ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿ ಆದವರಿಗೆ ಕಡತ ಬರುವುದು ಸಹಜ. ಫೈಲ್ ಬಂದಿದ್ದರೆ ಮಂಡನೆ ಮಾಡಿ ಎಂದಷ್ಟೇ ಶರಾ ಬರೆದಿರುತ್ತೇವೆ. ಅದರ ಅರ್ಥ ವಿಧೇಯಕವನ್ನೇ ಒಪ್ಪಿದೆ ಎಂದಲ್ಲ. ಕ್ಯಾಬಿನೆಟ್​ನಲ್ಲಿ ಇಟ್ಟು ಚರ್ಚೆಯಾಗಿ ಒಪ್ಪಿದ್ದರೆ ಬೇರೆ. ಕ್ಯಾಬಿನೆಟ್ ಸಭೆಗೆ ಕಡತ ಮಂಡನೆ ಮಾಡಿ ಎಂದು ಸಹಿ ಹಾಕಿದರೆ ಅದು ವಿಧೇಯಕ ಒಪ್ಪಿದ್ದೇವೆ ಎಂದು ಅರ್ಥವಲ್ಲ ಎಂದು ಸಿದ್ದರಾಮಯ್ಯ ತಮ್ಮ ವಾದ ಮಂಡಿಸಿದ್ದಾರೆ.

  • 23 Dec 2021 11:44 AM (IST)

    ಕಡತ ವಿಚಾರದಿಂದ ಸದನದಲ್ಲಿ ಕಾಂಗ್ರೆಸ್ ವಾದಕ್ಕೆ ತಾತ್ಕಾಲಿಕ ಹಿನ್ನಡೆ

    ಕ್ಷಣಕ್ಷಣಕ್ಕೂ ಗಂಭಿರತೆ ಪಡೆದುಕೊಳ್ಳುತ್ತಿರುವ ಸ್ಪೀಕರ್ ಕಚೇರಿ ಸಭೆಗೆ ಶಾಸಕ ರಮೇಶ್ ಕುಮಾರ್​ಗೆ ಬುಲಾವ್ ನೀಡಲಾಗಿದೆ. ಕಡತ ವಿಚಾರದಿಂದ ಸದನದ ಚರ್ಚೆಯಲ್ಲಿ ಕಾಂಗ್ರೆಸ್ ತಾತ್ಕಾಲಿಕ ಹಿನ್ನಡೆ ಅನುಭವಿಸಿದೆ. ಸಿದ್ದರಾಮಯ್ಯ ಸಹಿ ವಿಚಾರವನ್ನೇ ಸರ್ಕಾರ ಪಟ್ಟಾಗಿ ಹಿಡಿದಿದೆ. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕ ರಮೇಶ್ ಕುಮಾರ್ ಹಾಗೂ ಡಾ.ಜಿ.ಪರಮೇಶ್ವರ್ ಸಲಹೆ ಮೊರೆ ಹೋಗಿದ್ದಾರೆ. ಪ್ರಸ್ತುತ ಹಿಂದಿನ ಸರ್ಕಾರಿ ನಡಾವಳಿಗಳ ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿವರಣೆ ನೀಡುತ್ತಿದ್ದಾರೆ.

  • 23 Dec 2021 11:36 AM (IST)

    ಸ್ಪೀಕರ್ ಕಚೇರಿಯಲ್ಲಿ 2016ರಲ್ಲಿ ಕಾನೂನು ಆಯೋಗ ಸಿದ್ಧಪಡಿಸಿದ್ದ ದಾಖಲೆಗಳ ಪರಿಶೀಲನೆ

    ಇಂದಿನ ಚರ್ಚೆಯಲ್ಲಿ 2016ರಲ್ಲಿ ಕಾನೂನು ಆಯೋಗ ಸಿದ್ದಪಡಿಸಿದ್ದ ಮತಾಂತರ ನಿಷೇಧ ವಿಧೇಯಕದ ಕರಡು ಪ್ರತಿಗೆ ಅಂದಿನ ಕಾನೂನು ಸಚಿವ ಟಿ ಬಿ ಜಯಚಂದ್ರ ಒಪ್ಪಿಗೆ ನೀಡಿದ್ದನ್ನು ಬಿಜೆಪಿ ಪ್ರದರ್ಶಿಸಿದೆ. ಅದಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಡು ಪ್ರತಿ ಒಪ್ಪಿ ಕ್ಯಾಬಿನೆಟ್ ಗೆ ಕಡತ ಮಂಡಿಸುವಂತೆ ಸಹಿ ಮಾಡಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಪ್ರಸ್ತುತ ಸ್ಪೀಕರ್ ಕಚೇರಿಯಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರ ಸಭೆ ನಡೆಯುತ್ತಿದ್ದು ಸ್ಪೀಕರ್ ಕಾಗೇರಿ, ಕಾನೂನು ಸಚಿವ ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರು, ಕಾಂಗ್ರೆಸ್ ಶಾಸಕರಾದ ಆರ್.ವಿ.ದೇಶಪಾಂಡೆ, ಜಾರ್ಜ್ ಭಾಗಿಯಾಗಿದ್ದಾರೆ. ಈ ವೇಳೆ 2016ರಲ್ಲಿ ಕಾನೂನು ಆಯೋಗ ಸಿದ್ಧಪಡಿಸಿದ್ದ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

  • 23 Dec 2021 11:27 AM (IST)

    10 ನಿಮಿಷ ಕಲಾಪ ಮುಂದೂಡಿದ ಸ್ಪೀಕರ್ ಕಾಗೇರಿ; ದಾಖಲೆ ಪರಿಶೀಲನೆಗೆ ತೆರಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ

    ಕಲಾಪವನ್ನು 10 ನಿಮಿಷಗಳ ಕಾಲ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದೂಡಿದ್ದಾರೆ. ಮತಾಂತರ ನಿಷೇಧ ವಿಧೇಯಕ ಸಂಬಂಧ 2016ರ ದಾಖಲೆಗಳನ್ನು ಪರಿಶೀಲಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ, ಸ್ಪೀಕರ್ ಕಾಗೇರಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತೆರಳಿದರು.

  • 23 Dec 2021 11:24 AM (IST)

    ಸಿದ್ದರಮಾಯ್ಯ ಬಿಲ್ ಪರಿಶೀಲನೆಗೆ ಕೊಟ್ಟಿರಬಹುದು, ಆದರೆ ಅದು ಸಂಪುಟದ ಮುಂದೆ ಬಂದೇ ಇಲ್ಲ: ರಮೇಶ್​ ಕುಮಾರ್

    ದಾಖಲೆಗಳ ಬಗ್ಗೆ ನಾನು ಏನೂ ಮಾತನಾಡಲು ಹೋಗುವುದಿಲ್ಲ. ದಾಖಲೆ ಬಗ್ಗೆ ನಿಮ್ಮ ಕಚೇರಿಗೆ ಸಿದ್ದರಾಮಯ್ಯ ಬಂದು ನೋಡ್ತಾರೆ ಎಂದು ವಿಧಾನಸಭೆಯಲ್ಲಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿಕೆ ನೀಡಿದ್ದಾರೆ. K.R.ರಮೇಶ್ ಕುಮಾರ್ ಆಂತರಿಕ ವಿಚಾರಗಳನ್ನು ಹೇಳುತ್ತಿದ್ದಾರೆ. ನಿಮ್ಮ ಪುರಾಣ ಈಗ ಹೇಳುವುದಕ್ಕೆ ಬರಬೇಡಿ ಎಂದು ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ಹೊರಹಾಕಿದರು. ಆಗ ‘‘ಜೋರಾಗಿ ಕೂಗುವವರಿಗೇ ವಿಧಾನಸಭೆ ಬಿಟ್ಟುಬಿಡಿ’’ ಎಂದು ರಮೇಶ್ ಕುಮಾರ್ ಹೇಳಿದರು.

    ‘‘ಸಿದ್ದರಾಮಯ್ಯ ಬಿಲ್​ಅನ್ನು ಪರಿಶೀಲನೆಗೆ ಕೊಟ್ಟಿರಬಹುದು ಆ ಬಗ್ಗೆ ಚರ್ಚಿಸಲ್ಲ. ಆದರೆ ಅದು ಸಚಿವ ಸಂಪುಟದ ಮುಂದೆ ಬಂದೇ ಇಲ್ಲ. ಶಾಸಕಾಂಗ ಪಕ್ಷದ ಸಭೆಯ ಮುಂದೆಯೂ ಬಂದಿಲ್ಲ. ಅವರು ಪರಿಶೀಲನೆಗೆ ಕಳಿಸಿದ ಮಾತ್ರಕ್ಕೆ ನಾವು ಒಪ್ಪಿದಂತೆ ಅಲ್ಲ. ಅದನ್ನು ನಾನು ಈಗಲೂ ಕೂಡ ವಿರೋಧ ಮಾಡಬಹುದು. ಒಬ್ಬ ಸದಸ್ಯನಾಗಿ ನನಗೆ ಆ ಅಧಿಕಾರ ಇದೆ’’ ಎಂದು ರಮೇಶ್‌ಕುಮಾರ್ ನುಡಿದರು.

  • 23 Dec 2021 11:19 AM (IST)

    2016ರಲ್ಲೇ ಬಿಲ್ ಸಿದ್ಧಪಡಿಸಲಾಗಿತ್ತು ಎಂಬುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು?

    ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ‘‘ಕಾನೂನು ಆಯೋಗ ಶಿಫಾರಸು ಮಾಡಿತ್ತು ಎಂದು ಹೇಳಿದ್ದಾರೆ. ಸ್ಕ್ರುಟಿನಿ ಕಮಿಟಿಯಲ್ಲಿ ಪರಿಶೀಲನೆ ಆಗಿತ್ತು, ನಾನು ಸಿಎಂ ಆಗಿದ್ದಾಗ ಇದೆಲ್ಲಾ ನಡೆದಿತ್ತು ಎಂದು ಹೇಳಿದ್ದಾರೆ. ನಾನು ಸಿಎಂ ಆಗಿದ್ದಾಗ ಜಯಚಂದ್ರ ಕಾನೂನು ಸಚಿವರಾಗಿದ್ದರು. ಹೀಗಾಗಿ ನಾನು ಅವರಿಗೆ ಕರೆ ಮಾಡಿ ಈ ಬಗ್ಗೆ ಚರ್ಚಿಸಿದ್ದೆ. ತಾವು ಯಾವುದೇ ಪ್ರಸ್ತಾವನೆ ಕೊಟ್ಟಿಲ್ಲ’’ ಎಂದು ಸ್ಪಷ್ಟನೆ ನೀಡಿದ್ದಾರೆ.

    ಸಿದ್ದರಾಮಯ್ಯ ಮಾತಿನ ಮಧ್ಯೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ, ದಾಖಲೆ ಬಗ್ಗೆ ಓದಿ ಹೇಳಿದರು. ಆಗ ಆಡಳಿತ ಪಕ್ಷದವರು ಟೇಬಲ್ ಕುಟ್ಟಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ, ಏನು ನೀವು ದೊಡ್ಡ ಸಾಧನೆ ಮಾಡಿದ್ದೀರಿ ಎಂದು ಕುಟ್ಟುತ್ತಿದ್ದೀರಾ? ಎಂದು ಕೇಳಿದರು.

    ಈ ವೇಳೆ ಮತ್ತೊಮ್ಮೆ ದಾಖಲೆಯಲ್ಲಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕದ ಬಗ್ಗೆ ದಾಖಲೆಯ ಅಂಶವನ್ನು ಸ್ಪೀಕರ್ ಓದಿದರು. ಆಗ ಸಿದ್ದರಾಮಯ್ಯನವರು, ‘‘ಆಯ್ತು ಆ ದಾಖಲೆಗೆ ನಾನು ಸಹಿ ಹಾಕಿದ್ದೀನಾ?’’ ಎಂದು ಪ್ರಶ್ನಿಸಿದರು.

    ಸಂವಿಧಾನ ವಿರೋಧಿ ಬಿಲ್ ಒಪ್ಪಿಕೊಳ್ಳುವುದಕ್ಕೆ ನಾನು ಸಿದ್ಧನಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ‘‘ಯಡಿಯೂರಪ್ಪ ಹೇಳಿದ ಮಾತ್ರಕ್ಕೆ ನಾನು ಒಪ್ಪಿಕೊಳ್ಳುವುದಿಲ್ಲ’’ ಎಂದು ನುಡಿದರು.

  • 23 Dec 2021 11:04 AM (IST)

    2016ರಲ್ಲೇ ಬಿಲ್ ಸಿದ್ಧಪಡಿಸಲಾಗಿತ್ತು: ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ

    ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾತನಾಡಿ, ‘‘ನಾವು ಯಾವ ಧರ್ಮದ ವಿರುದ್ಧವೂ ಇಲ್ಲ. ವಿಧೇಯಕದಲ್ಲಿ ಧರ್ಮಗಳನ್ನು ಟಾರ್ಗೆಟ್ ಮಾಡಿಲ್ಲ. ಬಲವಂತವಾಗಿ ಮದುವೆಯಾಗುವುದಕ್ಕೆ ಆಕ್ಷೇಪವಿದೆ’’ ಎಂದಿದ್ದಾರೆ. ವಿಧೇಯಕದ ಕುರಿತು ಮತ್ತಷ್ಟು ಮಾಹಿತಿ ನೀಡಿದ ಅವರು, ‘‘2016ರಲ್ಲೇ ಈ ಬಿಲ್ ಸಿದ್ಧಪಡಿಸಲಾಗಿತ್ತು. ಆದರೆ ಆಕಸ್ಮಿಕವಾಗಿ ಕ್ಯಾಬಿನೆಟ್ ಮುಂದೆ ಬರಲೇ ಇಲ್ಲ. ಅದೇ ಬಿಲ್ ಈಗ ನಾವು ವಿಧಾನಸಭೆಯಲ್ಲಿ ಮಂಡಿಸಿದ್ದೇವೆ. ವಿಧೇಯಕದಲ್ಲಿ ಸ್ವಇಚ್ಛೆಯಿಂದ ಮತಾಂತರ ಆದರೆ ಯಾವ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿದೆ. ಬಲವಂತದ ಮತಾಂತರಕ್ಕೆ ಮಾತ್ರ ಶಿಕ್ಷೆ ಜತೆಗೆ ದಂಡವಿದೆ. ಅದನ್ನು ನಾವು ಈ ಹೊಸ ಬಿಲ್‌ನಲ್ಲಿ ಜಾರಿ ಮಾಡುತ್ತಿದ್ದೇವೆ’’ ಎಂದಿದ್ದಾರೆ.

    ‘‘ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲೇ ಬಿಲ್‌ಗೆ ಸೂಚಿಸಿ, ಬಿಲ್ ಮಾಡಿ ತರುವಂತೆ ಕಾನೂನು ಆಯೋಗಕ್ಕೆ ಅವರೇ ಹೇಳಿದ್ದರು’’ ಎಂದು ಮಾಧುಸ್ವಾಮಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಶೀಲನೆಗೆ ಸೂಚಿಸಿರುವ ದಾಖಲೆ ತೋರಿಸುವಂತೆ ಪಟ್ಟು ಹಿಡಿದರು. ಇದು ಆಡಳಿತ, ವಿಪಕ್ಷ ಸದಸ್ಯರ ಮಧ್ಯೆ ಪರಸ್ಪರ ಮಾತಿನ ಚಕಮಕಿಗೆ ಕಾರಣವಾಯಿತು.

  • 23 Dec 2021 10:57 AM (IST)

    ಬಿಲ್ ಸಂಪೂರ್ಣವಾಗಿ ವಿರೋಧಿಸಲು ನಿರ್ಧರಿಸಿದ ಜೆಡಿಎಸ್

    ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಬಿಲ್ ಸಂಪೂರ್ಣವಾಗಿ ವಿರೋಧಿಸಲು ಜೆಡಿಎಸ್ ನಿರ್ಧರಿಸಿದೆ. ಎರಡೂ ಸದನಗಳಲ್ಲಿ ವಿರೋಧಿಸಲು ನಿನ್ನೆ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಎಲ್ಲ ಶಾಸಕರು ಸದನದಲ್ಲಿ ಕಡ್ಡಾಯ ಹಾಜರಿಗೆ ವಿಪ್ ಜಾರಿ ಮಾಡಲಾಗಿದೆ.

  • 23 Dec 2021 10:49 AM (IST)

    ಮತಾಂತರ ನಿಷೇಧ ವಿಧೇಯಕದ ಬಗ್ಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

    ವಿಧಾನಸಭೆ ಕಲಾಪ ಆರಂಭವಾಗಿದ್ದು, ಮತಾಂತರ ನಿಷೇಧ ವಿಧೇಯಕದ ಬಗ್ಗೆ ಗೃಹ ಸಚಿವ ‌ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ. ವಿಧೇಯಕ ತಂದಿರುವುದು ಯಾವುದೇ ಧರ್ಮದ ವಿರುದ್ದವಲ್ಲ ಅಥವಾ ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸಲು ಅಲ್ಲ. ಈಗಾಗಲೇ ಎಂಟು ರಾಜ್ಯಗಳು ಈ ವಿಧೇಯಕ ತಂದಿವೆ. ಕರ್ನಾಟಕ ಒಂಬತ್ತನೇ ರಾಜ್ಯವಾಗಲಿದೆ. ಇತ್ತೀಚೆಗೆ ಮತಾಂತರ ದೊಡ್ಡ ಪಿಡುಗಾಗಿದೆ. ಇದೇ ಸದನದಲ್ಲಿ ಶಾಸಕರ ತಾಯಿ ಮತಾಂತರ ಆಗಿದ್ದನ್ನು ನೋಡಿದ್ದೇವೆ. ಮತಾಂತರ ಯಾವ ರೀತಿ ಆಗುತ್ತಿದೆ ಎಂದು ನಮ್ಮೆಲ್ಲರ ಗಮನಕ್ಕೆ ಇದೆ. ಉಡುಪಿಯಲ್ಲಿ ಒಂದು ಆತ್ಮಹತ್ಯೆ ಆಯ್ತು, ಮಂಗಳೂರಿನಲ್ಲಿ ಒಂದೇ ಕುಟುಂಬದ 4 ಜನ ಆತ್ಮಹತ್ಯೆ ಮಾಡಿಕೊಂಡರು’’ ಎಂದು ಗೃಹ ಸಚಿವರು ಹೇಳಿದ್ದಾರೆ.

    ಇತ್ತೀಚೆಗೆ ಮತಾಂತರ ನಿಷೇಧ ಮಾಡಲು ಹಲವರು ಒತ್ತಾಯಿಸಿದ್ದಾರೆ. ಹೀಗಾಗಿಯೇ ಮತಾಂತರ ನಿಷೇಧ ಕಾಯ್ದೆಯನ್ನು ತರುತ್ತಿದ್ದೇವೆ. ಬಲವಂತದ ಮತಾಂತರಕ್ಕೆ ಮಾತ್ರ ಶಿಕ್ಷೆಯ ಜೊತೆಗೆ ದಂಡವಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಈಗಾಗಲೇ ಕಾಯ್ದೆ ಜಾರಿಯಾಘಿದೆ. ತಮಿಳುನಾಡಿನಲ್ಲೂ ಕಾಯ್ದೆ ತರಬೇಕಾಗಿತ್ತು ಆದರೆ ಆಗಲಿಲ್ಲ. ಈ ಕಾಯ್ದೆ ಹಿಂದಿನ ಸರ್ಕಾರದ ಶಿಶು, ನಮ್ಮದಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ‘‘ಮತಾಂತರ ನಿಷೇಧ ವಿಧೇಯಕ ಅನೇಕ ರೀತಿಯಲ್ಲಿ ಪ್ರಚಾರ ಪಡೆದುಕೊಂಡಿದೆ. ಪರ ವಿರೋಧ ಚರ್ಚೆ ನಡೆಯುತ್ತಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಬದ್ಧತೆ. ಮತಾಂತರ ಆಗುವುದನ್ನು ತಡೆಯುವುದಿಲ್ಲ. ಅನೇಕ ಮಠಾಧೀಶರು, ಸಾಮಾಜಿಕ ಹೋರಾಟಗಾರರು ಈ ಪಿಡುಗನ್ನು ತಡೆಗಟ್ಟಿ ಎಂದು ಹೇಳುತ್ತಿದ್ದಾರೆ. ಆಮಿಷ ಹಾಗೂ ಬಲವಂತದ ಮತಾಂತರ ತಡೆಗಟ್ಟಿ ಶಿಕ್ಷೆ ನೀಡುವುದು ಇದರ ಉದ್ದೇಶ. ಮತಾಂತರವನ್ನೇ ಉದ್ಯೋಗ ಎಂದು ಯಾರು ಭಾವಿಸುತ್ತಾರೋ ಅವರು ಎಚ್ಚೆತ್ತುಕೊಳ್ಳಬೇಕು. ಬೇರೆ ಯಾರಿಗೂ ಇದರಿಂದ ಸಮಸ್ಯೆ ಇಲ್ಲ. ವಿದೇಶದಲ್ಲಿ ಹುಟ್ಟಿರುವ ಧರ್ಮಗಳು ಇಲ್ಲಿ ಶಾಂತಿಯಿಂದ ಇವೆ. ಕ್ಷೋಭೆ ಹಾಗೂ ವಿಘಟನೆ ಆಗಬಾರದು ಎಂದುದು ಈ ಬಿಲ್ ಉದ್ದೇಶ. ಈ ನಿಟ್ಟಿನಲ್ಲಿ ಕಾನೂನು ಜಾರಿಗೊಳಿಸುತ್ತಿದ್ದೇವೆ’’ ಎಂದು ಆರಗ ಜ್ಞಾನೇಂದ್ರ ನುಡಿದಿದ್ದಾರೆ.

    ಗೃಹ ಸಚಿವ ಆರಗ ಜ್ಞಾನೇಂದ್ರ ಕಾಯ್ದೆಯ ಕುರಿತು ಮಾತನಾಡಿ, ‘‘ಮತಾಂತರ ಆಗಲು ಇಚ್ಚೆ ಇರುವ ವ್ಯಕ್ತಿಗೆ ಸ್ವಾತಂತ್ರ್ಯ ಇದೆ. ಮೂವತ್ತು ದಿನಗಳ ಮುಂಚೆ ಜಿಲ್ಲಾಧಿಕಾರಿಗೆ ತಿಳಿಸಬೇಕು. 21 ದಿನಗಳ ಒಳಗೆ ಡಿಸಿ ಮುಂದೆ ಹಾಜರಾಗಿರಬೇಕು. ಅದನ್ನು ಜಿಲ್ಲಾಡಳಿತ ನೋಟಿಸ್ ಬೋರ್ಡ್‌ನಲ್ಲಿ‌ ಹಾಕಬೇಕು. ಬಲವಂತದ ಮತಾಂತರ ಮಾಡಿದರೆ ಯಾವ ಶಿಕ್ಷೆ ಅಂತ ಇರಲಿಲ್ಲ, ಈಗ ನಾವು ತರುತ್ತಾ ಇದ್ದೇವೆ. ಬಲವಂತದ ಮತಾಂತರ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಬಲವಂತದ ಮತಾಂತರ ಮಾಡಿದರೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ, 25,000ರೂ ದಂಡ, ಅಪ್ರಾಪ್ತರು- ಅನೂಸೂಚಿತ ಜಾತಿ ಪಂಗಡಕ್ಕೆ ಸೇರಿದ ಪ್ರಕರಣವಾದರೆ 3 ರಿಂದ 10 ವರ್ಷ ಜುಲ್ಮಾನೆ, 50 ಸಾವಿರ ದಂಡ, ಸಾಮೂಹಿಕ ಮತಾಂತರ ಉಲ್ಲಂಘನೆ 3 ರಿಂದ 10 ವರ್ಷ ಜುಲ್ಮಾನೆ 1 ಲಕ್ಷ‌ ದಂಡ, ಮತಾಂತರದಿಂದ ಬಲಿಯಾದರೆ ಆಪಾದಿತರಿಂದ 5 ಲಕ್ಷ ಮತ್ತು ನ್ಯಾಯಲಯದ ಶಿಕ್ಷೆಗೆ ಒಳಪಡಬೇಕು.

    ‘‘ಬಲವಂತದ,‌ ಮತಾಂತರದ ಉದ್ದೇಶದಿಂದ ಮದುವೆಯಾದರೆ ಅದು ಅಸಿಂಧುವಾಗುತ್ತದೆ ಮತ್ತು ಜಾಮೀನುರಹಿತ ಪ್ರಕರಣವಾಗಿರುತ್ತದೆ. ಮೂಲ ಮತದ ಎಲ್ಲ ಸೌಲಭ್ಯಗಳನ್ನು ವ್ಯಕ್ತಿ ಕಳೆದುಕೊಳ್ಳುತ್ತಾನೆ. ಮತಾಂತರದ ವ್ಯಕ್ತಿಯನ್ನು ಪುನರ್‌ವರ್ಗಿಕರಿಸಿ ದಾಖಲಾತಿಯಲ್ಲಿ ಬರೆಯಲಾಗುತ್ತದೆ. ಮತಾಂತರ ತಡೆಯುತ್ತಿಲ್ಲ. ಎಲ್ಲರನ್ನು ಒಪ್ಪಿಕೊಂಡು ಅಪ್ಪಿಕೊಂಡು ಬದುಕುತ್ತಿದ್ದೇವೆ. ಶ್ರೇಷ್ಠ ಸಂಸ್ಕೃತಿ ಒಡೆಯಬಾರದು’’ ಎಂದು ಗೃಹ ಸಚಿವರು ತಿಳಿಸಿದ್ದಾರೆ.

  • 23 Dec 2021 10:41 AM (IST)

    ಮತಾಂತರ ನಿಷೇಧ ವಿಧೇಯಕ ಎಲ್ಲರೂ ಒಪ್ಪಿ ಜಾರಿಗೊಳಿಸಲಿ: ಮಾಜಿ ಸಿಎಂ ಬಿಎಸ್​​ವೈ

    ಮತಾಂತರ ನಿಷೇಧ ವಿಧೇಯಕ ಎಲ್ಲರೂ ಒಪ್ಪಿ ಜಾರಿಗೊಳಿಸಲಿ ಎಂದು ಸುವರ್ಣಸೌಧದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ‘‘ಡಿಕೆಶಿ ವಿಧೇಯಕದ ಪ್ರತಿ ಹರಿದು ಅಪಮಾನ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕ್ಷಮೆಯಾಚಿಸಬೇಕು. ಕಾಂಗ್ರೆಸ್ ಎಲ್ಲ ಕಡೆ ಸೋತರೂ ಕೂಡ ಬುದ್ಧಿ ಬಂದಿಲ್ಲ. ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಹೋಗಬೇಡಿ’’ ಎಂದು ಬಿಎಸ್​​ವೈ ಹೇಳಿದ್ದಾರೆ.

  • 23 Dec 2021 10:20 AM (IST)

    2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ, ಆಗ ಮತಾಂತರ ನಿಷೇಧ ಕಾಯ್ದೆ ವಾಪಸ್: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ

    2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ನಮ್ಮ ಸರ್ಕಾರ ಬಂದ ಬಳಿಕ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದೇ ಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಿವಿ9ಗೆ ತಿಳಿಸಿದ್ದಾರೆ. ‘‘ಕಾಯ್ದೆ ವಾಪಸ್​ ಬಗ್ಗೆ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ. ಎರಡೂ ಕಾಯ್ದೆಗಳನ್ನು ನಾವು ವಾಪಸ್ ಪಡೆಯುವುದು ಖಚಿತ. ಸಂಖ್ಯಾ ಬಲ ಇದೆ ಎಂದು ಏನ್ ಬೇಕಾದ್ರು ಮಾಡಲು ಸಾಧ್ಯವಿಲ್ಲ. ಯಾರೇ ಆಗಲಿ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಡಿಕೆಶಿ ನುಡಿದಿದ್ದಾರೆ.

    ವಿಧೇಯಕವನ್ನ ಮತಕ್ಕೆ ಹಾಕಲು ಪ್ಲ್ಯಾನ್ ಮಾಡುತ್ತಿದ್ದೇವೆ. ವಿಧಾನಸಭೆಯಲ್ಲಿ ನಮಗೆ ಅಗತ್ಯ ಸಂಖ್ಯಾಬಲವಿಲ್ಲ. ಆದರೆ ವಿಧಾನಪರಿಷತ್‌ನಲ್ಲಿ ನಮಗೆ ಬಹುಮತವಿದೆ. ಹೀಗಾಗಿ ವಿಧಾನಪರಿಷತ್‌ನಲ್ಲಿ ವಿಧೇಯಕ ಸೋಲಿಸಲು ಪ್ಲ್ಯಾನ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಜೆಡಿಎಸ್​ಗೆ ಕುಟುಕಿದ ಅವರು, ವಿಧಾನಸಭೆಯಲ್ಲಿ ನಮಗೆ ಹೇಳುವುದೊಂದು ಮಾಡವುದೊಂದು. ವಿಧೇಯಕ ಮಂಡನೆ ಸಮಯದಲ್ಲಿ ವಿರೋಧ ಮಾಡುತ್ತಾರೆ. ಕೊನೆ ಹಂತದಲ್ಲಿ ಕೈ ಕೊಡುತ್ತಾರೆ. ಸಭಾತ್ಯಾಗ ಮಾಡುವುದು ಕೂಡ ಬಿಜೆಪಿಗೆ ಬೆಂಬಲ ಕೊಟ್ಟಂತೆ ಎಂದು ಹೇಳಿದ್ದಾರೆ.

  • 23 Dec 2021 10:13 AM (IST)

    ಮತಾಂತರ ನಿಷೇಧ ವಿಧೇಯಕದ ವಿಚಾರದಲ್ಲಿ ನಾವು ಒಗ್ಗಟ್ಟಾಗಿದ್ದೇವೆ; ಶಾಸಕ ಯತ್ನಾಳ್ ಹೇಳಿಕೆ

    ಆಮಿಷ, ಲವ್ ಜಿಹಾದ್‌ನಿಂದ ಮತಾಂತರ ತಡೆಯಬೇಕು ಎಂದು ಬೆಳಗಾವಿಯಲ್ಲಿ ಟಿವಿ9ಗೆ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ. ‘‘ಹಿಂದೂ ಧರ್ಮ ಉಳಿಯಬೇಕಾದರೇ ಇದೊಂದೇ ದಾರಿ. ಮತಾಂತರ ನಿಷೇಧ ಕಾಯ್ದೆ ಜಾರಿಯಾಗಲೇಬೇಕು. ವಿಧೇಯಕ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಈ ವಿಧೇಯಕ ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾಗಿದೆ. ಪರಿಷತ್​ನಲ್ಲಿ ಬಹುಮತಕ್ಕೆ ತಂತ್ರಗಾರಿಕೆ ಮಾಡಿದ್ದೇವೆ. ಕಾಂಗ್ರೆಸ್ ನಾಯಕರಿಗೆ ದೇಶ ಹಾಳಾದ್ರೂ ಪರವಾಗಿಲ್ಲ. ಕಾಂಗ್ರೆಸ್‌ಗೆ ಬೇಕಾಗಿರುವುದು ವೋಟ್ ಬ್ಯಾಂಕ್ ಮಾತ್ರ. ಡಿಕೆಶಿ ವಿಧೇಯಕ ಪ್ರತಿ ಹರಿದುಹಾಕಿ ನಾಟಕ ಮಾಡಿದರು. ವಿಧೇಯಕ ವಿಚಾರದಲ್ಲಿ ಕಾಂಗ್ರೆಸ್‌ನವರೇ ಬೆಂಬಲಿಸುತ್ತಾರೆ. ನಮಗೆ ಬೆನ್ನೆಲುಬಾಗಿ ಕಾಂಗ್ರೆಸ್ ಸದಸ್ಯರೇ ನಿಲ್ಲುತ್ತಾರೆ. ವಿಧಾನಸಭೆಯಲ್ಲಿ ಮತಾಂತರ ಬಿಲ್ ಪಾಸ್ ಮಾಡಲಿದ್ದೇವೆ’’ ಎಂದು ಯತ್ನಾಳ್ ನುಡಿದಿದ್ದಾರೆ.

  • 23 Dec 2021 10:07 AM (IST)

    ಮತಾಂತರ ನಿಷೇಧ ವಿಧೇಯಕ ಬಗ್ಗೆ ರಾಜ್ಯದ ಜನರಿಗೆ ಗೊತ್ತಾಗಬೇಕೆಂದರೆ ಚರ್ಚೆಯಾಗಬೇಕು; ಸಚಿವ ಈಶ್ವರಪ್ಪ

    ಮತಾಂತರ ನಿಷೇಧ ವಿಧೇಯಕ ಬಗ್ಗೆ ರಾಜ್ಯದ ಜನರಿಗೆ ಗೊತ್ತಾಗಬೇಕೆಂದರೆ ಚರ್ಚೆಯಾಗಬೇಕು. ಚರ್ಚೆ ನಂತರ ನಮಗೆ ಪೂರ್ಣ ಬಹುಮತವಿದೆ. ಗದ್ದಲ ಮಾಡದಂತೆ ಕಾಂಗ್ರೆಸ್​ಗೆ ಮನವಿ ಮಾಡುತ್ತೇನೆ. ವಿಧಾನ ಪರಿಷತ್​ನವರು ಕೂಡ ಚಿಂತನೆ ಮಾಡಲಿ ಎಂದು ಸಚಿವ ಈಶ್ವರಪ್ಪ ಬೆಳಗಾವಿಯಲ್ಲಿ ಟಿವಿ9ಗೆ ತಿಳಿಸಿದ್ದಾರೆ. ಅಲ್ಲದೇ, ಉತ್ತರ ಕರ್ನಾಟಕದ ಚರ್ಚೆ ಮುಂದುವರೆಯುತ್ತದೆ. ಅತೀ ಹೆಚ್ಚು ಸಮಯವನ್ನ ಉತ್ತರ ಕರ್ನಾಟಕ್ಕೆ ಕೊಟ್ಟಿದ್ದೀವಿ ಎಂದು ಅವರು ನುಡಿದಿದ್ದಾರೆ.

  • 23 Dec 2021 10:02 AM (IST)

    ಮತಾಂತರ ನಿಷೇಧ ಬದಲು ಪಕ್ಷಾಂತರ ನಿಷೇಧ ಕಾಯ್ದೆ ತನ್ನಿ; ಸಿಎಂ ಇಬ್ರಾಹಿಂ ಹೇಳಿಕೆ

    ಮತಾಂತರ ನಿಷೇಧ ಬದಲು ಪಕ್ಷಾಂತರ ನಿಷೇಧ ಮಸೂದೆ ತನ್ನಿ ಎಂದು ಬೆಳಗಾವಿಯಲ್ಲಿ ಟಿವಿ9ಗೆ ಎಂಎಲ್​ಸಿ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಮುಸಲ್ಮಾನರಾದರೂ ಅವರು ಭಾರತೀಯರಲ್ಲವೇ ಎಂದು ಪ್ರಶ್ನಿಸಿದ ಅವರು, ‘‘ಮುಸಲ್ಮಾನರಾದ ಮಾತ್ರಕ್ಕೆ ಪಾಕಿಸ್ತಾನಕ್ಕೆ ಹೋಗಬೇಕೆ? ನಮ್ಮ ಸರ್ಕಾರ ಬಂದರೆ ಸಾಕಷ್ಟು ಕಾಯ್ದೆ ವಾಪಸ್ ಪಡೆಯುತ್ತೇವೆ’’ ಎಂದು ಹೇಳಿದ್ದಾರೆ.

  • 23 Dec 2021 09:35 AM (IST)

    ಮತಾಂತರ ನಿಷೇಧ ಕಾಯ್ದೆಯಿಂದ ಯಾವುದೇ ಭಯವಿಲ್ಲ: ಮೈಸೂರಿನ ಕ್ರೈಸ್ತ ಧರ್ಮಾಧಿಕಾರಿ

    ಮತಾಂತರ ನಿಷೇಧ ಕಾಯ್ದೆಯಿಂದ ನಮಗೆ ಯಾವುದೇ ಭಯವಿಲ್ಲ. ಸಮಾಜ ಸೇವೆಯೇ ಕ್ರೈಸ್ತ ಧರ್ಮದ ಮೂಲ ಉದ್ದೇಶವಾಗಿದೆ. ನಾವು ಯಾರನ್ನೂ ಬಲವಂತವಾಗಿ ಮತಾಂತರ ಮಾಡುತ್ತಿಲ್ಲ. ಏನೂ ಇಲ್ಲದೆ ಅಪವಾದ, ತೊಂದರೆ ಕೊಡುವುದು ಸರಿಯಲ್ಲ. ಕರ್ನಾಟಕದಲ್ಲಿ ಮತಾಂತರ ನಿಷೇಧ ವಿಧೇಯಕದ ಅಗತ್ಯವಿರಲಿಲ್ಲ. ಉದ್ದೇಶಿತ ಕಾಯ್ದೆ ದುರ್ಬಳಕೆ ಮಾಡಿಕೊಂಡು ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಯಾವುದೇ ಕಾಯ್ದೆ ಒಂದು ಧರ್ಮಕ್ಕೆ ತೊಂದರೆ ಕೊಡಬಾರದು ಮತಾಂತರ ನಿಷೇಧ ಕಾಯ್ದೆ ಕೇವಲ ಕ್ರೈಸ್ತರಿಗೆ ಸಂಬಂಧಿಸಿದ್ದಲ್ಲ ಎಂದು ಮೈಸೂರಿನ ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ.ವಿಲಿಯಮ್ ಮತಾಂತರ ಕಾಯ್ದೆ ನಿಷೇಧದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

  • 23 Dec 2021 09:33 AM (IST)

    ಇಂದು ಚರ್ಚೆ ನಡೆಸುವುದಾಗಿ ತಿಳಿಸಿದ್ದ ಸ್ಪೀಕರ್ ಕಾಗೇರಿ

    ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿನ್ನೆಯ ಕಲಾಪದಲ್ಲಿ ಮತಾಂತರ ನಿಷೇಧ ಕಾಯ್ದೆಯ ಕುರಿತು ಇಂದು (ಗುರುವಾರ) ಚರ್ಚೆ ನಡೆಸೋಣ ಎಂದಿದ್ದಾರೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1.30ವರೆಗೆ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದ್ದರು.

  • Karnataka Anti Conversion Bill – Assembly Session Live: ವಿಧಾನಸಭೆಯಲ್ಲಿ ಗುರುವಾರ (ಡಿ.23) ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021’ (ಮತಾಂತರ ನಿಷೇಧ ಕಾಯ್ದೆ) ಅಂಗೀಕಾರ ದೊರೆಯಿತು.14 ಸೆಕ್ಷನ್​ಗಳನ್ನು ಒಳಗೊಂಡ ವಿಧೇಯಕವನ್ನು ಮತಾಂತರ ನಿಷೇಧ ಕಾಯಿದೆ ಎಂದೂ ಕರೆಯಲಾಗುತ್ತದೆ. ಈ ವಿಧೇಯಕದ ಅಡಿಯಲ್ಲಿ ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ, ಆಮಿಷಗಳು ಅಥವಾ ವಿವಾಹದ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಮತಾಂತರದ ಕುರಿತು ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬಂಧಿ ಅಥವಾ ದತ್ತು ಪಡೆದವರು ದೂರು ನೀಡಲು ಅರ್ಹರಾಗಿರುತ್ತಾರೆ. ಈ ವಿಧೇಯಕದ ಪ್ರಕಾರ ನಿಯಮ ಬಾಹಿರವಾಗಿ ಮತಾಂತರ ಮಾಡಿದ್ದು ಸಾಬೀತಾದರೆ 3 ರಿಂದ 5 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನ ನಿಯಮಬಾಹಿರವಾಗಿ ಮತಾಂತರ ಮಾಡಿದರೆ 3 ರಿಂದ 10 ವರ್ಷಗಳವರೆಗೆ ಶಿಕ್ಷೆ ಹಾಗೂ 35 ಸಾವಿರ ರೂ. ದಂಡವನ್ನು ವಿಧಿಸುವ ಪ್ರಸ್ತಾಪವನ್ನು ವಿಧೇಯಕವು ಒಳಗೊಂಡಿದೆ. ಈ ಕುರಿತು ಇಂದು ಚರ್ಚೆ ನಡೆಯುತ್ತಿದ್ದು, ಇದರ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಲಭ್ಯವಿದೆ.

    ಗೃಹ ಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಕಾಯ್ದೆಯ ಕುರಿತು ಮಾತನಾಡಿ, ‘‘ಮತಾಂತರ ಆಗಲು ಇಚ್ಚೆ ಇರುವ ವ್ಯಕ್ತಿಗೆ ಸ್ವಾತಂತ್ರ್ಯ ಇದೆ. ಮೂವತ್ತು ದಿನಗಳ ಮುಂಚೆ ಜಿಲ್ಲಾಧಿಕಾರಿಗೆ ತಿಳಿಸಬೇಕು. 21 ದಿನಗಳ ಒಳಗೆ ಡಿಸಿ ಮುಂದೆ ಹಾಜರಾಗಿರಬೇಕು. ಅದನ್ನು ಜಿಲ್ಲಾಡಳಿತ ನೋಟಿಸ್ ಬೋರ್ಡ್‌ನಲ್ಲಿ‌ ಹಾಕಬೇಕು. ಬಲವಂತದ ಮತಾಂತರ ಮಾಡಿದರೆ ಯಾವ ಶಿಕ್ಷೆ ಅಂತ ಇರಲಿಲ್ಲ, ಈಗ ನಾವು ತರುತ್ತಾ ಇದ್ದೇವೆ. ಬಲವಂತದ ಮತಾಂತರ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದು. ‘‘ಬಲವಂತದ,‌ ಮತಾಂತರದ ಉದ್ದೇಶದಿಂದ ಮದುವೆಯಾದರೆ ಅದು ಅಸಿಂಧುವಾಗುತ್ತದೆ ಮತ್ತು ಜಾಮೀನುರಹಿತ ಪ್ರಕರಣವಾಗಿರುತ್ತದೆ. ಮೂಲ ಮತದ ಎಲ್ಲ ಸೌಲಭ್ಯಗಳನ್ನು ವ್ಯಕ್ತಿ ಕಳೆದುಕೊಳ್ಳುತ್ತಾನೆ. ಮತಾಂತರದ ವ್ಯಕ್ತಿಯನ್ನು ಪುನರ್‌ವರ್ಗೀಕರಿಸಿ ದಾಖಲಾತಿಯಲ್ಲಿ ಬರೆಯಲಾಗುತ್ತದೆ. ಮತಾಂತರ ತಡೆಯುತ್ತಿಲ್ಲ. ಎಲ್ಲರನ್ನು ಒಪ್ಪಿಕೊಂಡು ಅಪ್ಪಿಕೊಂಡು ಬದುಕುತ್ತಿದ್ದೇವೆ. ಶ್ರೇಷ್ಠ ಸಂಸ್ಕೃತಿ ಒಡೆಯಬಾರದು’’ ಎಂದು ಗೃಹ ಸಚಿವರು ತಿಳಿಸಿದ್ದಾರೆ.

    ಇಂದಿನ ಚರ್ಚೆಯಲ್ಲಿ 2016ರಲ್ಲಿ ಕಾನೂನು ಆಯೋಗ ಸಿದ್ದಪಡಿಸಿದ್ದ ಮತಾಂತರ ನಿಷೇಧ ವಿಧೇಯಕದ ಕರಡು ಪ್ರತಿಗೆ ಅಂದಿನ ಕಾನೂನು ಸಚಿವ ಟಿ ಬಿ ಜಯಚಂದ್ರ ಒಪ್ಪಿಗೆ ನೀಡಿದ್ದನ್ನು ಬಿಜೆಪಿ ಪ್ರದರ್ಶಿಸಿದೆ. ಆ ಪ್ರತಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಡು ಪ್ರತಿ ಒಪ್ಪಿ ಕ್ಯಾಬಿನೆಟ್ ಗೆ ಕಡತ ಮಂಡಿಸುವಂತೆ ಸಹಿ ಮಾಡಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು ಮುಖ್ಯಮಂತ್ರಿಯಾದವರಿಗೆ ಹಲವು ಕಡತ ಬರುತ್ತವೆ. ಸಂಪುಟದ ಮುಂದೆ ಇಡಲು ಶರಾ ಬರೆದು ಸಹಿ ಹಾಕಿರುತ್ತೇವೆ, ಅದರ ಅರ್ಥ ವಿದೇಯಕ ಒಪ್ಪಿದ್ದೇವೆ ಎಂದಲ್ಲ ಎಂದು ನುಡಿದಿದ್ದಾರೆ.

    ಇದುವರೆಗೆ ಸದನವು ಬಹಳ ಕುತೂಹಲಕಾರಿ ಚರ್ಚೆಗೆ ಸಾಕ್ಷಿಯಾಯಿತು. ಬುದ್ಧ, ಅಂಬೇಡ್ಕರ್, ಬೌದ್ಧ ಧರ್ಮ ಮೊದಲಾದವುಗಳ ಕುರಿತು ಗಂಭೀರವಾಗಿ ಚರ್ಚೆ ನಡೆದವು. ಕೊನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ‘‘ಈ ಕಾಯ್ದೆಯು ರಾಜ್ಯದಲ್ಲಿನ ಸಮಸ್ಯೆಗಳನ್ನು ಮರೆಮಾಚಲು ತಂದಿರುವ ಕಾನೂನು. ಸಂವಿಧಾನ ವಿರೋಧಿಯಾದ ಇದನ್ನು ವಿರೋಧಿಸುತ್ತೇವೆ’’ ಎಂದಿದ್ದಾರೆ.

    Published On - Dec 23,2021 9:30 AM

    Follow us
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
    ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
    ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?